Friday, January 31, 2014

ಗುಣಿಯವಗುಣ...

ಇಷ್ಟೇ ಅಗಲಕೆ ಗಡಾರಿಯನಿಳಿಸಿ
ಮೊಳಕೈ ಆಳಕೆ ನೆಟ್ಟ ಬೊಂಬು ಕಂಬಕೆ
ಚಪ್ಪರ ಹೊರುವ ಸಂಭ್ರಮ,
ಆಳುದ್ದಗಲ ಅಗೆದು ಮತ್ತೆ ಮುಚ್ಚಿಡಲು
ಉಳಿದ ಹಸಿ ಮಣ್ಣಿಗೂ ಕಕ್ಕಲಾತಿ
ಶವವಾದ ದೇಹವ ಮರಳಿಸೋ ಬದ್ಧತೆ

ಕೊರೆವ ಬೋರಿಗೂ ಮೆಚ್ಚುಗೆ ಪ್ರಾಪ್ತಿ
ಸೀಳಿ ಭೂ ಪದರ ನೂರಾರು ಅಡಿಗಳ
ಬಂಡೆ ತಳದಿ ನೀರುಕ್ಕಿಸೋ ಜೀವಜಲ,
ಅದರಾಗಮನವನೇ ಕಾದ ಆ ಒಬ್ಬಂಟಿ
ಬೀಜಕೆ ಗದ್ದೆ ಸಾಲಲಿ ಚಿಗುರಿಕೊಂಡು
ರಾಶಿ ಕಾಳುಗಳಾಗುವ ನಿಸ್ವಾರ್ಥ ಹಂಬಲ

ಗಡಿ ರೇಖೆಯ ತಂತಿ ಬೇಲಿಗಳ ಗುಂಟ
ಅಹೋರಾತ್ರಿ ಕಾಯುತಿದೆ ಅಮ್ಮನಂತೆ
ಎದೆಯುಬ್ಬಿಸಿ ಪಟಪಟಿಸೋ ಬಾವುಟ,
ಆಳುವವರ ಮರ್ಜಿಗೆ ಕಾಯದದು
ದಿನವೆಲ್ಲ ಬಿಸಿಲನು ಮೆಂದು ರಾತ್ರಿಗೆ
ಬೆಳಕನೀವ ಹಳ್ಳಿಗಾಡ ಸೌರ್ಯ ಫಲಕ

ಪಾಯಕೂ ಗುಣಿ ಮೊದಲು ಅಪಾಯಕೂ
ಮುಚ್ಚಿಟ್ಟ ನೆಲಬಾಂಬು ತಾ ನರಹಂತಕ
ಚಿನ್ನವೆತ್ತಿದ ಗಣಿಯ ಸೈನೈಡು ಬೆಟ್ಟ!

ಪ್ರತಿ ಗುಣಿಗೂ ಅದರದದೇ
ಉದ್ಧಿಶ್ಯ ವ್ಯಾಪ್ತಿ ವಿಸ್ತಾರ,
ನೆಲಕೆ ಅಹಮಿಲ್ಲ ಅರೆಕ್ಷಣವೂ
ಅಗೆವುವವನ ಭಾವಕನುಗುಣ
ಪ್ರಾಪ್ತಿ ಫಲಾಫಲವೂ
...(ಚಿತ್ರಕೃಪೆ: ಅಂತರ್ಜಾಲ)

29 comments:

 1. ಭೂ ತಾಯವ್ವ ಯಾರಿಗೂ ಮೋಸ ಮಾಡೋದಿಲ್ಲ ತಗಳಿ. ಉತ್ತಮ ರಚನೆ :)

  ReplyDelete
 2. ಕೊರೆವ ಬೋರಿಗೂ ಮೆಚ್ಚುಗೆ ಪ್ರಾಪ್ತಿ
  ಸೀಳಿ ಭೂ ಪದರ ನೂರಾರು ಅಡಿಗಳ
  ಬಂಡೆ ತಳದಿ ನೀರುಕ್ಕಿಸೋ ಜೀವಜಲ,
  ಅದರಾಗಮನವನೇ ಕಾದ ಆ ಒಬ್ಬಂಟಿ
  ಬೀಜಕೆ ಗದ್ದೆ ಸಾಲಲಿ ಚಿಗುರಿಕೊಂಡು
  ರಾಶಿ ಕಾಳುಗಳಾಗುವ ನಿಸ್ವಾರ್ಥ ಹಂಬಲ....
  ;;;;
  ಕವನ ಇಷ್ಟವಾಯಿತು ಬದರಿ ಜೀ...

  ReplyDelete
 3. ನಿಮ್ಮ ಪ್ರತಿ ಪದಗಳ ಬಳಕೆಯಲ್ಲೂ ಅದರದೇ ಆದ ಅರ್ಥ, ಗೂಡಾರ್ಥಗಳ ಭಾವಸ್ಪೋಟ ನಿಜಕ್ಕೂ ನಮ್ಮನ್ನೆಲ್ಲಾ ಮಂತ್ರಮುಗ್ಧನಾಗಿಸುತ್ತವೆ.

  ReplyDelete
 4. ಈ ಕವನದಲ್ಲಿ ಗುಣವಿದೆ, ಅವಗುಣ ಎಳ್ಳಷ್ಟೂ ಇಲ್ಲ. ಬದರಿನಾಥರ ಕವನವೆಂದರೆ ಸದ್ಗುಣಸೌಂದರ್ಯದ ಗಣಿ!

  ReplyDelete
 5. Sooperb!... ಬಹಳ ಚೆನ್ನಾಗಿದೆ, ಕವನ.... ಮತ್ತೊಮ್ಮೆ ವಿಭಿನ್ನ ವಸ್ತು ವಿಷಯಗಳ ಹೂರಣ, ಬದರಿ ಕವನ :)

  ReplyDelete
 6. ಆಳ ಅಗಲ ವಿಸ್ತಾರಗಳ ಗಣಿತಕ್ಕೆ ಸಿಗದ ಗುಣಿಯನ್ನು ಹರವಿಟ್ಟಿದ್ದೀರಿ. ನಾವೂ ಬಿದ್ದು ಭೂಮಿತಾಯಿಗೆ ಉಘೇ ಎಂದೆವು.

  ReplyDelete
 7. ಪದಗಳು -ಭಾವುಕತೆ ಎಲ್ಲವು ಚಂದವಾಗಿದೆ
  Jayashree

  ReplyDelete
 8. ಬಂಡೆ ತಳದಿ ನೀರುಕ್ಕಿಸೋ ಜೀವಜಲ,
  ಅದರಾಗಮನವನೇ ಕಾದ ಆ ಒಬ್ಬಂಟಿ
  ಬೀಜಕೆ ಗದ್ದೆ ಸಾಲಲಿ ಚಿಗುರಿಕೊಂಡು
  ರಾಶಿ ಕಾಳುಗಳಾಗುವ ನಿಸ್ವಾರ್ಥ ಹಂಬಲ
  .........ಅದ್ಭುತವಾದ ಸಾಲುಗಳು ಬದರಿ. ಚೆನ್ನಾಗಿದೆ ಕವನ
  :-)
  ಮಾಲತಿ ಎಸ್

  ReplyDelete
 9. ಚಂದವಿದೆ ಬದರಿ ಸರ್..
  ನಿಮ್ಮಿಂದ ಕಲಿಯುವುದು ಬಹಳವಿದೆ. ಕವನಕ್ಕೆ ವಿಭಿನ್ನ ವಸ್ತುವಿನ ಆಯ್ಕೆ ಮತ್ತದರ ಪ್ರಸ್ತುತಿ.. ಇಷ್ಟವಾಯ್ತು ಸರ್..

  ReplyDelete
 10. ಬದರಿಯವರಂದ ಮತ್ತೊಂದು ಸಿಕ್ಸರ್ !!! :-)

  ReplyDelete
 11. ಇಷ್ಟೇ ಅಗಲಕೆ ಗಡಾರಿಯನಿಳಿಸಿ
  ಮೊಳಕೈ ಆಳಕೆ ನೆಟ್ಟ ಬೊಂಬು ಕಂಬಕೆ
  ಚಪ್ಪರ ಹೊರುವ ಸಂಭ್ರಮ,

  Emba modala saalugalalle kaviteya sambrama kaanabahudu. Bhoomiya padara seeluva gadaari, bore ivugalellavoo jeeva taledive. Pratiyondu gundigoo tannade aada kate ide. saarthakate ide endu vivarisuvudu.

  ReplyDelete
 12. ಸಣ್ಣ ಸಣ್ಣ ವಿಷಯಗಳನ್ನು ನಿರ್ಲಕ್ಷಿಸುವ ನಾವು , ಆ ವಿಷಯಗಳಲ್ಲೇ ಎಷ್ಟೋ ವಿಷಯ ಅಡಗಿರುತ್ತದೆ, ಅವುಗಳನ್ನು ಗಮನಿಸಿ ನಿಮ್ಮ ಕವನದಲ್ಲಿ ಹಿಡಿದಿಟ್ಟು, ಜನರಿಗೆ ಕವನದ ರೂಪದಲ್ಲಿ ಹಂಚುವ ನಿಮ್ಮ ಕಲೆ, ಎಲ್ಲರೂ ತಲೆದೂಗುವಂತಹದ್ದು. ಮತ್ತೊಮ್ಮೆ " ಜೈ ಹೊ "

  ReplyDelete
 13. ತುಂಬಾ ಇಷ್ಟ ಆಯ್ತು ಸರ್ ನಿಮ್ಮ ಕವನ...

  ReplyDelete
 14. ಕವನ ಅದ್ಭುತವಾಗಿದೆ. ಇಷ್ಟವಾಯಿತು...
  ... ಸಿದ್ಧಲಿಂಗಸ್ವಾಮಿ ಎಚ್ ಇ

  ReplyDelete
 15. ಪ್ರತಿ ಗುಣಿಗೂ ಅದರದದೇ
  ಉದ್ಧಿಶ್ಯ ವ್ಯಾಪ್ತಿ ವಿಸ್ತಾರ,
  ನೆಲಕೆ ಅಹಮಿಲ್ಲ ಅರೆಕ್ಷಣವೂ
  ಅಗೆವುವವನ ಭಾವಕನುಗುಣ
  ಪ್ರಾಪ್ತಿ ಫಲಾಫಲವೂ... ಸರ್, ಈ ಸಾಲುಗಳು ಚಿಂತನೆಗೆ ವಸ್ತು. ಚೆನ್ನಿದೆ ವಿಚಾರ ಕವಿತೆ.
  ಪ್ರಾಸದ್.

  ReplyDelete
 16. ಪ್ರತಿ ಗುಣಿಗೂ ಅದರದದೇ
  ಉದ್ಧಿಶ್ಯ ವ್ಯಾಪ್ತಿ ವಿಸ್ತಾರ,
  ನೆಲಕೆ ಅಹಮಿಲ್ಲ ಅರೆಕ್ಷಣವೂ
  ಅಗೆವುವವನ ಭಾವಕನುಗುಣ
  ಪ್ರಾಪ್ತಿ ಫಲಾಫಲವೂ...
  ಸರ್, ಈ ಸಾಲುಗಳು ಚಿಂತಂಗೆ ವಸ್ತು.
  ಚೆನ್ನಿದೆ ವಿಚಾರದ ಕವಿತೆ.
  ಪ್ರಸಾದ್.

  ReplyDelete
 17. ತುಂಬಾ ಅರ್ಥಪೂರ್ಣವಾದ ಕವನ ಸರ್

  ReplyDelete
 18. ತುಂಬಾ ಚೆನ್ನಾಗಿದೆ , ಗುಳಿ ಎನ್ನುವ ಪದದಲ್ಲೇ ಅನೇಕ ಅರ್ಥಗಳನ್ನ ಹೊರ ಹೊಮ್ಮಿಸಿರುವಿರಿ .

  ReplyDelete
 19. ಪ್ರತಿಯೊಂದು ಸಾಂದರ್ಬಿಕ ಚರಣಗಳು ಮಾರ್ಮಿಕವಾಗಿ ಸತ್ಯವನ್ನು ಹೊರಗೆಡವುತ್ತಿದೆ.
  ನಿಮ್ಮ ಈ ಸಾರಾಂಶ ನನಗೆ ತುಂಬಾ ಹಿಡಿಸಿತು. ವಾಹ್ ! ಅದ್ಭುತ

  ಪ್ರತಿ ಗುಣಿಗೂ ಅದರದದೇ ಉದ್ಧಿಶ್ಯ ವ್ಯಾಪ್ತಿ ವಿಸ್ತಾರ,
  ನೆಲಕೆ ಅಹಮಿಲ್ಲ ಅರೆಕ್ಷಣವೂ, ಅಗೆವುವವನ ಭಾವಕನುಗುಣ
  ಪ್ರಾಪ್ತಿ ಫಲಾಫಲವೂ...

  ReplyDelete
 20. ನೆಲಕೆ ಅಹಮಿಲ್ಲ ಅರೆಕ್ಷಣವೂ.......
  ಅದಕ್ಕೆ ಅಕೆಯನ್ನು ಭೂಮಿತಾಯಿ ಎನ್ನುತ್ತೇವೆ.......
  ಅರ್ಥಪೂರ್ಣವದ ಕವನ ಸಾರ್....

  ReplyDelete
 21. ಕವನ ಓದುಗನನ್ನು ಯೋಚಿಸುವಂತೆ ಮಾಡುತ್ತದೆ.. ಬಹಳ ಚೆನ್ನಾಗಿದೆ ಸಾಲುಗಳು. :)

  ReplyDelete
 22. ಇಷ್ಟ ಆಯ್ತು.

  ReplyDelete
 23. ಪ್ರತಿ ಗುಣಿಗೂ ಅದರದದೇ
  ಉದ್ಧಿಶ್ಯ ವ್ಯಾಪ್ತಿ ವಿಸ್ತಾರ,
  ನೆಲಕೆ ಅಹಮಿಲ್ಲ ಅರೆಕ್ಷಣವೂ
  ಅಗೆವುವವನ ಭಾವಕನುಗುಣ
  ಪ್ರಾಪ್ತಿ ಫಲಾಫಲವೂ...

  ಈ ಸಾಲುಗಳು ತುಂಬಾ ಸೊಗಸಾಗಿ ಮೂಡಿ ಬಂದಿವೆ..

  ReplyDelete
 24. ತುಂಬಾ ಚನ್ನಾಗಿದೆ....ಸಖತ್ ಇಷ್ಟ ಆಯ್ತು ಸರ್... :)

  ReplyDelete
 25. ಅಗೆಯುವಾಗ ಸಣ್ಣದಾಗಿದ್ದರೆ ತೂತು .. ಆಮೇಲೆ ಗುಂಡಿ , ದೊಡ್ಡದಾಗುತ್ತಾ ಹಳ್ಳ, ಕೆರೆ ನದಿ ಸರೋವರ ಸಾಗರ ... ಸೃಷ್ಟಿಯ ಅತ್ಯದ್ಭುತ ಮಾನವನ ಅವಶ್ಯಕತೆಗಳಿಗೆ ತಕ್ಕಂತೆ ಹಾಗೂ ಉಳ್ಳವರು ಬಲ್ಲವರು ಗುರುತಿಸಿಕೊಂಡಂತೆ .. ಹುಟ್ಟುವಲ್ಲಿ ಶಿಲೆಯ ಪ್ರತಿಮೆಯು ಕಳೆದುಕೊಳ್ಳುವುದು ಕಲ್ಲುಬಂಡೆ ತನ್ನ ನೈಜ ರೂಪವನ್ನು .. !!

  ಸೌಂದರ್ಯ ಹಾಗೂ ಅಶ್ಚರ್ಯ ಎರಡನ್ನೂ ಕಾಣಿಸಿಕೊಟ್ಟ ಕವನ ಅತೀ ಸೊಗಸಾಗಿದೆ ಸರ್ .. :)

  ReplyDelete
 26. ಸಣ್ಣದೊ೦ದು ವಸ್ತುವನ್ನಿಟ್ಟುಕೊ೦ಡು, ಇಷ್ಟೆಲ್ಲಾ ಭಾವವೈವಿಧ್ಯತೆ ಹೊಮ್ಮಿಸಬಹುದೆ ?

  ಬ೦ಡೆಯಡಿಯ ಜೀವಜಲವ ಚಿಮ್ಮಿಸುವ ಬೋರ್ವೆಲ್ಲು
  ಚಪ್ಪರವ ಹೊರುವ ಸ೦ಭ್ರಮದಲ್ಲಿ ಬಿದಿರ ಬೊ೦ಬು
  ಗಡಿಯಲ್ಲಿ ಅವಿರತ ಅಮ್ಮನ೦ತೆ ಕಾಯುವ ಬಾವುಟ

  'ಗುಳಿ'ಯೊಡೆದು ಮು೦ದುವರೆಯುವ ಅಗಣಿತ
  ಕಾರ್ಯಗಳನ್ನೆಲ್ಲಾ ಸವಿವರ ಬರೆದಿದ್ದೀರಿ.

  ಸು೦ದರವಾಗಿದೆ ಸರ್.

  ReplyDelete
 27. ಮನದ ಆಳದಲ್ಲಿ ಹೂತಿಡಲು ತೆಗೆಯುವ ಗುಣಿಗಳು ಕೂಡ ಹಾಗೆಯೇ.. ಯಾರದೋ, ಅಥವಾ ಯಾವುದಕ್ಕೋ ಬೇಡವಾದ ಸಂಗತಿಗಳನ್ನು ಹೂತು ಹಾಕಲು ಇಂತಹಹ ನಿಸ್ವಾರ್ಥ ಗುನಿಗಳು ಬೇಕಾಗುತ್ತವೆ..

  ನಿಮ್ಮ ಯೋಚನಾ ಲಹರಿ ಕನ್ಯಾಕುಮಾರಿಯಿಂದ ಎವರೆಸ್ಟ್ ತನಕ ಹರಿಯುವ ಪರಿ ನಮ್ಮನ್ನು ಅಚ್ಚರಿ ಲೋಕಕ್ಕೆ ದೂಡುತ್ತದೆ.. ಎಲ್ಲಿಂದ ಶುರುಮಾಡುವ ಯೋಚನೆಗಳು ಎಲ್ಲಿಗೆ ಮುತ್ತುತ್ತವೆ ಮತ್ತು ಎಲ್ಲಿಗೆ ಮುಟ್ಟುತ್ತವೆ..


  ಸೂಪರ್ ಬದರಿ ಸರ್

  ReplyDelete