Monday, March 11, 2013

ವಿಪರ್ಯಾಸ...

(ಇದು ನಾನು ಬರೆದ ಮೊದಲನೆಯ ಸಣ್ಣ ಕಥೆ. ಇದನ್ನು ಈ ವಾರದ ನಮ್ಮ ಪಂಜು ವಾರಪತ್ರಿಕೆಯಲ್ಲಿ ಪ್ರಕಟಿಸಿದ ನಟರಾಜು ಸೀಗೇಕೋಟೆ ಮರಿಯಪ್ಪ ಅವರಿಗೆ ಅನಂತ ಧನ್ಯವಾದಗಳು.)

ಬೆಳಿಗ್ಗೆ ಎದ್ದಾಗಲಿಂದಲೂ ಏಕೋ ಸಣ್ಣಗೆ ತಲೆಯ ನೋವು. ಸ್ವಲ್ಪ ಕಾಫಿ ಕಾಯಿಸಿಕೊಳ್ಳೋಣ ಎಂದು ಮೂರು ಗಂಟೆಯಿಂದ ಯೋಚಿಸಿದ್ದೇ ಬಂತು. ಯಾಕೋ ಅದಕ್ಕೂ ಬೇಸರ.

ಯಜಮಾನರು ತೀರಿಕೊಂಡ ಮೇಲೆ ನಾನು ತೀರಾ ಅಂತರ್ಮುಖಿಯಾಗುತ್ತಿದ್ದೇನೆ ಅನಿಸುತ್ತದೆ. ಮೂರು ಕೋಣೆಗಳ ಈ ವಿಶಾಲವಾದ ಫ್ಲಾಟಿನಲ್ಲಿ ಈಗ ನಾನು ಒಬ್ಬಂಟಿ. ತುಂಬಾ ಮನೆಗಳಿರುವ ವಿಶಾಲವಾದ ಸೊಸೈಟಿ ಇದು. ಪಕ್ಕದ ಮನೆಯವರು ಯಾರೆಂದು ನನಗೂ ಇಲ್ಲಿಯವರೆಗೂ ಗೊತ್ತಿಲ್ಲ.

ಕೆಲಸದವಳು ಬೆಳಿಗ್ಗೆ ಬಂದು ಮನೆ ಕೆಲಸಗಳನ್ನು ಮುಗಿಸಿ ಹೊರಟಳೆಂದರೆ ಇಡೀ ದಿನ ನಾನು ಮತ್ತು ಟೀವಿ ಎರಡೇ.

ಇರುವ ಇಬ್ಬರು ಮಕ್ಕಳು ಅಮೇರಿಕಾದಲ್ಲಿ ನೆಲೆ ನಿಂತ ಮೇಲೆ, ಈ ಬೆಂಗಳೂರಿನ ಮನೆಯಲ್ಲಿ ನಮ್ಮವರು ನಾನು ಮಾತ್ರ ಉಳಿದಿದ್ದೆವು. ನಮ್ಮವರು ಮೂರು ವರ್ಷಗಳ ಹಿಂದೆ ತೀರಿಕೊಂಡ ಮೇಲೆ, ನನ್ನ ಇಬ್ಬರು ಗಂಡು ಮಕ್ಕಳನ್ನು ನಾನು ಅವರ ಜೊತೆಯೇ ಇದ್ದು ಬಿಡುತ್ತೇನೆ, ಒಬ್ಬಳಿಗೆ ಬೇಸರ ಎಂದು ಹಲವು ಬಾರಿ ಅಲವತ್ತುಕೊಂಡಿದ್ದೇನೆ. ನನ್ನ ಅಮೇರಿಕಾ ಜನ್ಯ ಸೊಸೆಯರಿಗೆ ನಾನು ಹಳೆಯ ಕಾಲದವಳಂತೆ! ಅದಕ್ಕಾಗಿ ನಾನು ಇಲ್ಲೇ ಈ ಫ್ಲಾಟಿನಲ್ಲೇ ಕಾಲ ದೂಕುತ್ತಿದ್ದೇನೆ.

ಬೆಳಿಗ್ಗೆ ಬರುವ ಕೆಲಸದವಳೇ ಮೂರು ಹೊತ್ತಿಗೂ ಬೇಯಿಸಿ, ಒಪ್ಪ ಮಾಡಿಟ್ಟು ಹೋಗುತ್ತಾಳೆ. ತುಂಬಾ ಒಳ್ಳೆಯ ಹೆಣ್ಣು ಮಗಳವಳು. ಇಷ್ಟು ವರ್ಷಗಳಲ್ಲಿ ಒಮ್ಮೆಯೂ ಸಿಡುಕಿದ್ದು, ರಜೆ ಹಾಕಿದ್ದು ನನಗೆ ಗೊತ್ತೇ ಇಲ್ಲ. ಆಕೆ ತಣ್ಣಗಿರಲಿ.

ಸಂಜೆಯವರೆಗೂ ಹೇಗೋ ಕಾಲ ದೂಡಿದವಳು, ಪಕ್ಕದ ಗಣಪತಿ ಗುಡಿಗಾದರೂ ಹೋಗಿ ಬರೋಣವೆಂದು ಮನೆ ಇಂದ ಹೊರಗೆ ಬಂದೆ. ಲಿಫ್ಟ್ ಸಮೀಪಿಸುತ್ತಿದ್ದಾಗ ದಡೂತಿ ಉತ್ತರ ಭಾರತದ ಮಹಿಳೆಯೊಬ್ಬಳು ಅಲ್ಲಿ ನಿಂತಿರುವುದು ಕಂಡಿತು.

ಆಕೆಯನ್ನು ಆಗೊಮ್ಮೆ ಈಗೊಮ್ಮೆ ನೋಡುತ್ತೇನಾದರೂ, ಮುಖ ಪರಿಚಯ ಮುಗುಳ್ನಗೆಗಳ ಹೊರತಾಗಿ ಅಂತಹ ಆತ್ಮೀಯತೆ ಯಾಕೋ ಇನ್ನೂ ಮೂಡಿರಲಿಲ್ಲ. ನನ್ನ ಜೊತೆಯೇ ಆಕೆಯೂ ಲಿಫ್ಟ್ ಒಳಗೆ ಬಂದು ನಾನು ನೆಲ ಮಹಡಿ ಬಟನ್ ಒತ್ತುವುದನ್ನು ನೋಡಿ, ತಾನು ಅಲ್ಲಿಗೆ ಹೋಗ ಬೇಕಿತ್ತೇನೋ ಸುಮ್ಮನಾದಳು.

ಲಿಫ್ಟ್ ಹತ್ತನೇ ಮಹಡಿಯಿಂದ ಇಳಿಯಲು ಆರಂಭಿಸಿದ ಕೂಡಲೇ ಆಕೆ ಎದೆ ಹಿಡಿದುಕೊಂಡು, ಗೋಡೆಗೆ ಜಾರಲು ಆರಂಭಿಸಿದಳು. ನಾನು ಗಾಬರಿಯಾದೆ, ಆಕೆ ಸಳ ಸಳನೆ ಬೆವರುತ್ತಿದ್ದಳು. ಈಕೆಗೆ ಖಂಡಿತ ಹೃದಯಾಘಾತವೇ ಆಗಿದೆ ಎಂದು ನನಗನಿಸಿದ್ದೇ ತಡ, ಲಿಫ್ಟಿನ ಅಲಾರಮ್ ಒತ್ತಿದೆ. ಲಿಫ್ಟ್ ಅಲಾರಾಮ್ ಹೊಡೆದುಕೊಳ್ಳುತ್ತಲೇ ನೆಲ ಮಹಡಿ ತಲುಪಿತು.

ಕೆಳಗೆ ಆಗಲೇ ಸುಮಾರು ಜನ ಸೇರಿದ್ದರು. ಕೂಡಲೇ ಅಲ್ಲೇ ಇದ್ದ ಯಾರೋ ಆಂಬುಲೆನ್ಸಿಗೂ ಫೋನ್ ಮಾಡಿದರು. ನಾನು ನನ್ನ ಬಳಿ ಇದ್ದ ಇನ್ನೂರನ್ನು ಅವರಿಗೆ ಕೊಟ್ಟೆ. ಆಕೆಯನ್ನು ಆಸ್ಪತ್ರೆಗೂ ಸಾಗಿಸಲಾಯಿತು. ನಾನು ನಿಧಾನವಾಗಿ ಕಾಲೆಳೆಯುತ್ತಾ ದೇವಸ್ಥಾನಕ್ಕೆ ಹೊರಟೆ.


ಮರು ದಿನ ತಡೆಯಲಾರದೆ ಕೆಳಗೆ ಇಳಿದು ಬಂದು ಸೆಕ್ಯುರಿಟಿ ಬಳಿ ನಿನ್ನೆಯ ಆ ಹೆಂಗಸಿನ ಸ್ಥಿತಿ ವಿಚಾರಿಸಿದೆ. ಅವನು ಆಕೆ ಈಗ ಸಾಕಷ್ಟು ಸುಧಾರಿಸಿದ್ದಾಳೆಂದು, ಅವರ ಮಗ ನಿಮ್ಮನ್ನು ಭೇಟಿಯಾಗಬೇಕೆಂದು ಕೇಳುತ್ತಿದ್ದರು ಎಂದು ಹೇಳಿದ.

ಆಕೆಯ ಮಗ ಆಗಲೇ ಅಲ್ಲಿ ಬಂದವನು ನನಗೆ ವಂದನೆ ತಿಳಿಸಿದ. ಸಕಾಲಕ್ಕೆ ಅಲಾರಮ್ ಒತ್ತಿ ತಾಯಿಯನ್ನು ಕಾಪಾಡಿದ್ದಕ್ಕೆ ವಂದನೆ ಹೇಳಿದ. ನನಗೂ ನೆಮ್ಮದಿಯಾಯ್ತು. ಆದರೆ, ಅವನು ತಲೆ ಕೆರೆದುಕೊಳ್ಳುತ್ತಾ ನಿಂತ.

"ಅಮ್ಮ ಈಗ ಸುಧಾರಿಸುತ್ತಿದ್ದಾರೆ ಅಜ್ಜೀ, ಆಕೆಯ ಮಾಂಗಲ್ಯದ ಸರ ನೀವು ತೆಗೆದರಾ? ಎತ್ತಿಟ್ಟುಕೊಂಡರೆ ಕೊಡ್ತೀರಾ" ಅಂತ ಕೇಳಿದ.

ನನಗೆ ನಿಂತ ನೆಲವೇ ಕುಸಿಯುವಂತಾಯಿತು. ಎದೆ ಕಿವುಚಿಕೊಂಡು ಹಾಗೆಯೇ ನೆಲಕ್ಕೊರಗಿದೆ. ಯಾರೋ ಆಂಬುಲೆನ್ಸಿಗೆ ಕರೆ ಮಾಡುತ್ತಿದ್ದ ದನಿ ಕೇಳಿಸಿತು
.


ಪಂಜು ವಾರಪತ್ರಿಕೆ
ಕಥಾ ಲೋಕ
11.03.2013
http://www.panjumagazine.com/?p=1348

39 comments:

 1. ಕತೆ ಚಿಕ್ಕದಾಗಿ ಚೊಕ್ಕವಾಗಿದೆ. ಹೇಳಬೇಕೆಂದುದ್ದನ್ನು ಸಮರ್ಪಕವಾಗಿ ಹೇಳಿದ್ದೀರಿ.

  ಶುಭಾಶಯಗಳು.

  ReplyDelete
  Replies
  1. ಅನಂತ ಧನ್ಯವಾದಗಳು ಸಾರ್.

   Delete
 2. ಏನೆಂದು ನಾ ಹೇಳಲಿ! ಮಾನವನಾಸೆಗೆ ಕೊನೆಯೆಲ್ಲಿ ಗಿರಿಕನ್ಯೆ ಚಿತ್ರದ ಅಣ್ಣಾವ್ರ ಹಾಡು ನೆನಪಿಗೆ ಬಂತು. ಕಥೆ ಅಥವಾ ಅನುಭವ ಕಥಾನಕ ತುಂಬಾ ಸೊಗಸಾಗಿದೆ. ಅನುಕಂಪ, ಸುಲಿಗೆ, ಏನನ್ನು ಎಲ್ಲಿ ಕೇಳಬೇಕು ಎನ್ನುವ ಪ್ರಜ್ಞೆಯನ್ನು ಮೂಡಿಸುವ ಲೇಖನ. ಪಂಜುವಿನಲ್ಲಿ ಹೆಜ್ಜೆ ಮೂಡಿರುವುದು ಸಂತಸದ ಸಂಗತಿ ಅಭಿನಂದನೆಗಳು

  ReplyDelete
  Replies
  1. ನಿಮ್ಮ ಪ್ರೋತ್ಸಾಹವು ಹೀಗೇ ಇರಲಿ ಶ್ರೀಮಾನ್. ಐ ಪ್ರಕಾರವೂ ನನಗೆ ಒಗ್ಗಲಿ. ವಿಪರ್ಯಾಸವೆಂದರೆ ಇದೇ ಎಲ್ಲವೇ ಪಾಪ..

   Delete
 3. ಅಯ್ಯೋ ಪಾಪ ಅಂದ್ರೆ ...ಅನ್ನೋ ಗಾದೆ ನೆನಪಾಯಿತು. ಪರಿಣಾಮಕಾರಿಯಾಗಿ ಹೇಳಿದ್ದಿರಿ . ಚೆನ್ನಾಗಿದೆ

  ReplyDelete
  Replies
  1. ಧನ್ಯವಾದಗಳು ಸ್ವರ್ಣಾಜೀ, ನಿಮ್ಮ ಅಕ್ಕರೆ ಮುಂದುವರೆಯಲಿ ಸದಾ...

   Delete
 4. ಚಿಕ್ಕ ಕಥೆಯಲ್ಲಿ ಎಂತಹ ಸನ್ನಿವೇಶ, ನೈಜ ಘಟನೆ ಅನ್ನಿಸುವಂತಹ ಬರಹ. ವಾಹ್ ವಾಹ್ ಬದರಿ ಸರ್ ಶುಭವಾಗಲಿ. ಇದೆ ಜಾಡಿನಲ್ಲಿ ಮುಂದಿನ ಸನ್ನಿವೇಶ ಮೂಡಿಬರಲಿ.

  ReplyDelete
  Replies
  1. ಬಾಲೂ ಸಾರ್, ಪಂಜು ಪತ್ರಿಕೆ ಆರಂಭವಾದಾಗ ನಟರಾಜ್ ಅವರು ಬರಹಗಳನ್ನು ಕಳುಹಿಸಲು ಸೂಚಿಸಿದರು. ಕವನ ಮತ್ತು ಲೇಖನಗಳ ಹೊರತಾಗಿ ಒಂದು ಸಿಕ್ಕ ಕಥೆ ಪ್ರಯತ್ನಿಸೋಣ ಎಂದು ಈ ಕಥೆ ಬರೆದೆ. ಇದು ನನ್ನ ಬದುಕಿಲ್ಲೇ ನಾನು ಬರೆದ ಮೊದಲ ಸಣ್ಣ ಕಥೆ. ನೀವು ಮೆಚ್ಚಿದ್ದು ಮತ್ತಷ್ಟು ಬರೆಯಲು ಪ್ರೇರಕವಾಯಿತು. ಧನ್ಯವಾದಗಳು.

   Delete
 5. Eee kaalakke oppuva kathe.That's why many people shun getting involved in other's affairs trying to help.Chikkadaagi chokkavaagide kathe.Congrats Badari.
  - Veer Ramakrishna

  ReplyDelete
  Replies
  1. ಆನಂತ ಧನ್ಯವಾದಗಳು, ಈ ಕಾಲದಲ್ಲಿ ಯಾರಿಗಾದರೂ ಉಪಕಾರ ಮಾಡುವಾಗಲೂ ಅದರಿಂದ ಎದುರಿಸಬೇಕಾದ ಆಪಾಯಗಳ ಬಗೆಯೂ ಯೋಚಿಸಿ ಮುನ್ನಡೆಯಬೇಕೇನೋ ಎನಿಸಿದಾಗ ಬರೆದ ಸಿಕ್ಕ ಕಥೆ ಇದು. ನಿಮ್ಮ ಆಶೀರ್ವಾದವಿರಲಿ ಸದಾ...

   Delete
 6. ಉಪಕಾರ ಮಾಡಲು ಹೋಗಿ ಆರೋಪ ಎದುರಿಸುವ ಪರಿ ಸುಂದರವಾಗಿ ಚಿತ್ರಿತವಾಗಿದೆ.
  ನಿರೂಪಣೆ ಸಕತ್ !

  ಇನ್ನಷ್ಟು ಕಥೆಗಳು ಬರಲಿ ಬದರಿ ಭಾಯ್ !!

  ReplyDelete
  Replies
  1. ಎಲ್ಲವೂ ನಿಮ್ಮಂತಹ ನವಿರು ನಿರೂಪಣೆಯ ಕತೆಗಾರನ ಸ್ಪೂರ್ತಿ ಪ್ರಕಾಶಣ್ಣ. ನಿಮ್ಮ ಪ್ರೋತ್ಸಾಹವು ಇರಲಿ ಅನವರತ...

   Delete
 7. ನಂಬಿಕೆ , ಮಾನವೀಯತೆ, ಸಂಸ್ಕಾರಗಳು ಒಂದಕ್ಕೊಂದು ಅಂಟಿದ್ದರೂ, ನವಪೀಳಿಗೆಯಲ್ಲಿ ಅಂಟಿನ 'ಗಮ್ಮ' ತ್ತು ಕಳೆದು ಹೋಗಿದೆ. ಇಂತಹದೇ ಹಲವಾರು ಪ್ರಸಂಗಗಳ ನಾನು ಎದುರಿಸಿದ್ದೇನೆ. ಒಳಸ್ಪೋಟದ ಸದ್ದುಗಳು ರಾಕ್ ಸಂಗೀತದ ಅಡಿಯಲ್ಲಿ ಅಡಗುತ್ತವೆ. ಸುಂದರ ಚಿತ್ರಣ. ಅಭಿನಂದನೆಗಳು...

  ReplyDelete
  Replies
  1. ನಿಜವಾದ ಮಾತು, ನಿಮ್ಮ ಒಲುಮೆಯೂ ಸದಾ ಹೀಗೇ ಇರಲಿ. ನನ್ನ ಹೂರಣ ನಿಮಗೆ ಅರ್ಥವಾದದ್ದು ಖುಷಿಕೊಟ್ಟಿತು.

   Delete
 8. ....
  ಪ್ರಾಣಾಪಾಯದಿಂದ ಉಳಿದಿರುವ ಅಮ್ಮ ಪ್ರಾಣಕ್ಕಿಂತ...
  ಕಳೆದು ಹೋಗಿರುವ ಮಾಂಗಲ್ಯದ ಕೊರಗು....

  ಪ್ರಸ್ತುತ ಸಮಾಜದಲ್ಲಿ ಕುಸಿಯುತ್ತಿರುವ ನಮ್ಮ ಮಾನವೀಯ ಮೌಲ್ಯಗಳು, ಕಳಚಿಕೊಳ್ಳುತ್ತಿರುವ ಸಂಬಂಧದ ಕೊಂಡಿಗಳನ್ನು ಕಥೆಯು ಚುಟುಕಾಗಿ ಹೇಳುತ್ತ ಮನಸಿಗೆ ಕುಟುಕುತ್ತದೆ.....

  Badarinath Palavalli...

  ಕಥೆಯಲ್ಲಿ ನಮ್ಮ ಭಾರತೀಯ ಸಂಸ್ಕೃತಿ & ಸಾಮಾಜಿಕ ಪರಿಕಲ್ಪನೆಯ ುಲ್ಲೇಖಿತಗೊಂಡಿರುವದರಿಂದ ಒಂದು ಸಣ್ಣ ಬದಲಾವಣೆಯನ್ನು ಸೂಚಿಸುತ್ತೇನೆ, ದಯವಿಟ್ಟು ಅನ್ಯಥಾ ಭಾವಿಸಬೇಡಿ....

  ಮಾಂಗಲ್ಯದ ಬದಲಾಗಿ, ಕಾಸಿನ ಸರ, ಚಿನ್ನ, ವಜ್ರದಂತಹ ಬಹುಮೂಲ್ಯದ ಸರ ಅಥವಾ ಒಡವೆ ಅಂತ ಬದಲಾಯಿಸಿದರೆ ಒಳ್ಳೆಯದು...
  (ಕಥಾನಾಯಕಿ ಭಾರತೀಯ ಸಂಪ್ರದಾಯದವಳು ಆಗಿರುವುದರಿಂದ, ಪತಿಯ ಮರಣಾನಂತರ ಮಾಂಗಲ್ಯ ಧರಿಸುವದಿಲ್ಲ ಅಲ್ವಾ.....)

  ReplyDelete
  Replies
  1. ಸಾರ್, ಕಥಾ ನಾಯಕಿಯ ಪತಿ ತೀರಿಕೊಂಡಿದ್ದಾರೆ, ಆದ್ದರಿಂದ ಆಕೆ ಮಂಗಳ ಸೂತ್ರ ಧರಿಸುವುದಿಲ್ಲ. ಆದರೆ ಲಿಫ್ಟಿನಲ್ಲಿ ಜೊತೆಗೆ ಬಂದ ದಡೂತಿ ಹೆಣ್ಣುಮಗಳಿಗೆ ಹೃದಯಾಘಾತವಾದದ್ದು ಆಕೆಯು ಧರಿಸಿದ್ದ ಮಾಂಗಲ್ಯ ಸರವು ಕಳೆದಿದೆ ಎಂದೆ ಆಕೆಯ ಮಗ ಮರುದಿನ ಕಥಾನಾಯಕಿಯನ್ನು ಕೇಳಿದ್ದು.

   ಮುಖ್ಯವಾಗಿ ನೀವು ನನ್ನ ಕಥೆ ಓದಿದಿರಿ, ಅದೇ ನನಗೆ ಖುಷಿ.

   Delete
  2. ಓ.ಹೋ......
   ಪ್ರಮಾದವಾಯ್ತು ದಯವಿಟ್ಟು ಕ್ಷಮಿಸಿ

   Delete
  3. ಸಾರ್, ನೀವು ಹಾಗೆಲ್ಲಾ ಮಾತನಾಡಲೇ ಬಾರದು. ನಿಮ್ಮಂತ ಹಿರಿಯರ ಆಶೀರ್ವಾದ ನನ್ನ ಮೇಲೆ ಯಾವತ್ತೂ ಇರಬೇಕು.

   Delete
 9. ದೇವಾ...!! ಜನ ಬಾಗಿಲಲ್ಲಿ ಹೋಗುವುದನ್ನು ಬಿಟ್ಟುಬಿಡುತ್ತಾರೆ ಕಿಟಕಿಯಲ್ಲಿ ಹೋಗುವುದನ್ನ ಹಿಡಿದುಕೊಳ್ಳುತ್ತಾರೆ. ಈ ಕಥೆಯಂತೆಯೇ ನನ್ನ ಅನುಭವ ಒಂದು ಇದೇ ಸರ್ ಬೆಂಗಳೂರಿನ ವಿಜಯನಗರದ ಬಸ್ ಸ್ಟಾಪಿನಲ್ಲಿ ನಿಂತಿದ್ದಾಗ ಯಾರೋ ಹೆಂಗಸು ಹಾಗೇ ಕುಸಿದು ಬಿದ್ದಳು. ನಾನು ಅವಳನ್ನ ಆಸ್ಪತ್ರೆ ಸಾಗಿಸಿದ್ದು ಎಲ್ಲಾ ಆಗಿತ್ತು ಅವಳು ಚೆನ್ನಾಗಿದ್ದಾಳ ಎಂದು ನೆಕ್ಸ್ಟ್ ಡೆ ಆಸ್ಪತ್ರೆಗೆ ನೋಡೋಕ್ಕೆ ಹೋದಾಗ, ನನ್ನ ಪರ್ಸ್ ನೋಡಿದ್ರಾ ಅವತ್ತು ನೀವು ನನ್ನ ಜೊತೆ ಇದ್ರಲ್ಲಾ ನೀವೇನಾದ್ರು ತಗೊಂಡಿದ್ರೆ ಕೊಡಿ ಎಂದಳು... ಆಮೇಲೆ ಇಲ್ಲ ಎಂದು ಹೇಳಿ ಬಂದುಬಿಟ್ಟಿದ್ದೆ. ಎರಡು ದಿನಗಳ ನಂತರ ಮನೆಗೆ ಪೋನ್ ಬಂತು ಕ್ಷಮಿಸಿ. ನನ್ನ ಪರ್ಸ್ ನಾ ನರ್ಸ್ ಜೋಪಾನಿಸಿದ್ದರು. ನೀವು ನಮ್ಮ ಮನೆಗೆ ಬನ್ನಿ ನಿಮಗೆ ಒಂದು ದಿನ ಒಳ್ಳೆಯ ಅಡಿಗೆ ಮಾಡಿ ಊಟಕ್ಕಿಡಬೇಕು ಎಂಬ ಆಸೆ ಎಂದರು. ಕ್ಷಮಿಸಿ ಪರೀಕ್ಷೆ ಇದೆ ಆಗುವುದಿಲ್ಲ ಬರಲು ಎಂದು ಸುಮ್ಮನಾದೆ.
  ಮನಸಲ್ಲಿ ಸಹಾಯ ಮಾಡುವುದೂ ತಪ್ಪೇ? ಎಂದೆನಿಸಿತು.

  ReplyDelete
  Replies
  1. ನಿಮ್ಮ ಅನುಭವ ಕೇಳಿ ನನಗೆ ನಿಮಗಂಡು ಆದ ಮುಜುಗರವು ಕಣ್ಣಮುಂದೆ ಬಂದಿತು. ಸಹಾಯ ಮಾಡಲು ಹೋಗಿ ಅಪವಾದ ಹೊರಿಸಿಕೊಂಡ ನಿಮಗೆ ಅಂದು ಪಾಪ ಹೇಗಾಗಿಗಿರಬೇಡ ಮೇಡಂ? ತಪ್ಪಿನ ಅರಿವಾದ ಮೇಲೆ ಅವರು ಎಷ್ಟು ಗೌರವಿಸಿ ಮನೆಗೆ ಆಹ್ವಾನಿಸಿದರೇನು? ಮೊದಲು ಆದ ಅವಮಾನಕ್ಕೆ ಪರಿಹಾರವಿದೆಯೇ?

   Delete
 10. ಇದು ಕೇವಲ ಕಥೆಯಲ್ಲ. ಕೆಲವರ ಅನುಭವ ಕೂಡ. ನನಗೆ ಬೇರೆ ರೀತಿಯ ಅನುಭವ ಆಗಿತ್ತು. ಸುಮಾರು ೫೫ ವರ್ಷ ವಯಸುಳ್ಳ ವ್ಯಕ್ತಿಯೊಬ್ಬರು ನನ್ನ ಮನೆಗೆ ಬಂದರು. ನೋಡಿದರೆ ಗೌರವ ಮೂಡುವಂತೆ ಇದ್ದರು. ಬಂದವರೇ ನಮ್ಮ ತಂದೆಯವರ ಬಗ್ಗೆ ಕೇಳಿದರು ನಮ್ಮ ಊರಿನ ಬಗ್ಗೆ ಹೇಳಿದರು. ನಮ್ಮ ಬಗ್ಗೆ ಕೆಲವಿಚಾರಗಳನ್ನು ತಿಳಿದವರಂತೆಯೇ ಹೇಳಿದರು. ಆಮೇಲೆ ತನ್ನ ಸೊಸೆಯನ್ನು ರೈಲ್ವೆ ಸ್ಟೇಶನ್ ಬಳಿ ಇರುವ ಆಸ್ಪತ್ರೆಗೆ ಸೇರಿಸಿದ್ದೇನೆ. ಸುಮಾರು ೮೦೦ ರೂಗಳು ಔಷಧಿಗೆ ಕೊರತೆ ಬಿದ್ದಿದೆ. ಬೇರೆಯವರ ಬಳಿ ಕೇಳುವುದಕ್ಕೆ ಸಂಕೋಚ. ಅದಕ್ಕೆ ನಿಮ್ಮ ತಂದೆಯವರು ನನಗೆ ತುಂಬಾ ಪರಿಚಯ ಆ ಕಾರಣದಿಂದ ಇಲ್ಲಿಗೆ ಬಂದೆ. ನಾಳೆ ಬೆಳಿಗ್ಗೆ ನನ್ನ ಮಗ ತಂದು ಕೊಡುತ್ತಾನೆ ಇದ್ದರೆ ಕೊಡಿ ಎಂದರು. ಅವರ ಮಾತುಗಳನ್ನು ಕೇಳಿ ಇಲ್ಲವೆನ್ನಲಾಗಲಿಲ್ಲ ಹಣ ಕೊಟ್ಟು ನಿಧಾನಕ್ಕೆ ಕೊಡಿ ಪರವಾಗಿಲ್ಲ ಎಂದು ಹೇಳಿ ಕಳುಹಿಸಿದೆ. ಸಂಜೆ ಪೇಟೆಯ ಕಡೆ ಹೊರಟೆ ಹೇಗೂ ಇಷ್ಟು ದೂರ ಬಂದಿದ್ದೇನೆ ಪಾಪ ಆಸ್ಪತ್ರೆಯಲ್ಲಿರುವ ಆ ವ್ಯಕ್ತಿಯ ಸೊಸೆಯ ಆರೋಗ್ಯವನ್ನಾದರು ವಿಚಾರಿಸುವ ಎಂದು ಅಲ್ಲಿಗೆ ಹೋದೆ. ಆದರೆ ಬೆಳಿಗ್ಗೆಯಿಂದ ಆ ರೀತಿಯ ಯಾವುದೇ ವ್ಯಕ್ತಿಗಳು ಇಲ್ಲಿ ಬಂದು ದಾಖಲಾಗಲಿಲ್ಲ ಎಂದು ತಿಳಿಸಿದರು. ಬೇರೆ ಆಸ್ಪತ್ರೆಗಳು ಆ ಸರಹದ್ದಿನಲ್ಲಿ ಇರಲಿಲ್ಲ. ಬೇಸರದಿಂದ ಮನೆಗೆ ಬಂದೆ. ಆಮೇಲೆ ಗೊತ್ತಾಯ್ತು. ಆ ಅಪರಿಚತ ನನ್ನ ಪಕ್ಕದ ಮನೆಗೆ ಹೋಗಿ ನಮ್ಮ ಮನೆ ಮಂದಿಯ ಹೆಸರು, ಮೂಲ ಊರು ಹಾಗು ಇನ್ನಿತರ ವಿಚಾರಗಳನ್ನು ಕೇಳಿ ತಿಳಿದುಕೊಂಡು ನನ್ನಲ್ಲಿಗೆ ಬಂದು ದುಡ್ಡು ಕಿತ್ತಿದ್ದ.

  ReplyDelete
  Replies
  1. ಸಹಾಯ ಕೇಳುವ ಕೆಲವು ಅತಿಬುದ್ಧಿವಂತರ ಉದಾಹರಣೆ ಚೆನ್ನಾಗಿ ಕೊಟ್ಟಿದ್ದೀರಾ. ನಮ್ಮ ಒಳ್ಳೆಯ ತನವನ್ನು ಈ ರೀತಿಯಲ್ಲೂ ದುರುಪಯೋಗ ಮಾಡಿಕೊಳ್ಳುವ ಅಪಾಯ ನಿಜವಾಗಲೂ ಇದೆ. ನನ್ನ ಬ್ಲಾಗಿಗೆ ಬಂದು ನನ್ನ ಕಥೆ ಓದಿದ್ದಕ್ಕೆ ಅನಂತ ಧನ್ಯವಾದಗಳು.

   Delete
 11. Short story with beautiful message:)

  ReplyDelete
  Replies
  1. Thanks a lot Madam, thanks for visiting my blog. :)

   Delete
 12. ಕವನದಂತೆ ಕತೆಯನ್ನೂ ಚೆನ್ನಾಗಿ ಬರೆಯಬಲ್ಲಿರಿ ಎನ್ನುವುದನ್ನು ಸಾಬೀತು ಮಾಡಿರುವಿರಿ. ಅಭಿನಂದನೆಗಳು.

  ReplyDelete
  Replies
  1. ಸದಾ ನನ್ನ ಬೆನ್ನು ತಟ್ಟುವ ನಿಮ್ಮ ಒಲುಮೆಯೇ ನನಗೂ ಇಂಧನ ಸಾರ್.

   Delete
 13. ಚೆಂದದ ಕತೆ ಬದ್ರಿ.ಅಭಿನಂದನೆಗಳು.

  ReplyDelete
  Replies
  1. ತುಂಬಾ ಧನ್ಯವಾದಗಳು ಡಾಕ್ಟರೇ :)

   Delete
 14. ಓಹ್ ಕ್ಷಮಿಸಿ ಬದರಿ ಸರ್...
  ಒಳ್ಳೆಯ ಕಥೆಯನ್ನು ತಪ್ಪಿಸಿಕೊಂಡಿದ್ದೆ....
  ಧನ್ಯವಾದ ಮತ್ತೊಮ್ಮೆ ನೆನಪಿಸಿದ್ದಕ್ಕೆ...ಒಂದೊಳ್ಳೆ ಕಥೆಯನ್ನು ಓದಿಸಿದ್ದಕ್ಕೆ...
  ನಿಜ,ಕೆಲವೊಂದು ಬಾರಿ ಉಪಕಾರ ಮಾಡುವುದೇ ತಪ್ಪೇನೋ ಅನ್ನಿಸಿಬಿಡುತ್ತದೆ...
  ಸುಂದರವಾದ ನಿರೂಪಣೆ...
  ಹಮ್...ಅಲ್ಲಿ ಮಾಂಗಲ್ಯದ ಸರದ ಬಳಕೆ ಬೇಕಿತ್ತಾ ಅಥವಾ ಇನ್ನಾದರೂ ಚಿನ್ನದ ಸರ ಇದ್ದರೆ ಸಾಕಿತ್ತಾ ಅನ್ನೋದೊಂದು ತಿಳಿತಾ ಇಲ್ಲ ನಂಗೆ...
  ಸಾಮಾನ್ಯವಾಗಿ ಅಷ್ಟು ವಯಸ್ಸಾದವರು ಅಂದರೆ ಶಾಸ್ತ್ರ,ನಿಯಮಗಳಲ್ಲಿ ಭಕ್ತಿ ಜಾಸ್ತಿ..ಅಂಥವರಿಗೆ ಮಾಂಗಲ್ಯ ಕದ್ದ ಆರೋಪ!!!!
  ಗೊತ್ತಿಲ್ಲ ಬಹುಷಃ ಆ ಪ್ರಶ್ನೆಯನ್ನು ಕೇಳಿದ ಮನುಷ್ಯನ ಕಾಠಿಣ್ಯವನ್ನು ಹೇಳಲು ಬಳಸಿದ್ದಿದ್ದರೂ ಇರಬಹುದು...ಗೊತ್ತಿಲ್ಲ...ಅದೇ ಹೃದಯಾಘಾತಕ್ಕೆ ಕಾರಣವಾಯಿತೇ ಅಂತ...
  ಇದು ನನ್ನ ಅನಿಸಿಕೆ ಅಷ್ಟೇ....
  ಬರೆಯುತ್ತಿರಿ...
  ನಮಸ್ತೆ ...

  ReplyDelete
  Replies
  1. ಗೆಳೆಯ, ಮಾಂಗಲ್ಯ ಕಳೆದು ಕೊಂಡದ್ದು ಆ ದಡೂತಿ ಹೆಣ್ಣು ಮಗಳು. ಅವರ ಮಗ ಮಾಂಗಲ್ಯ ಕದ್ದಿದ್ದೀರಾ ಅಂತ ಕೇಳಿದ್ದು ಕಥಾ ನಾಯಕಿಯನ್ನು. ಸಹಾಯ ಮಾಡಿದ್ದಾಕೆ ಮೇಲೆ ಅಪವಾದ ಬಂದಾಗ ಆಕೆ ತಡೆದುಕೊಳ್ಳಲಿಲ್ಲ.

   ನಿಮ್ಮ ಸಲಹೆ ಸಹಕಾರ ಹೀಗೇ ಇರಲಿ.

   Delete
 15. ಮೊದಲ ಕಥೆಯೇ ಹೀಗಿದೆ. ಮುಂದಿನ ಕಥೆಗಳು??? ಹೃತ್ಪೂರ್ವಕ ಅಭಿನಂದನೆಗಳು.

  ReplyDelete
  Replies
  1. ನಮಸ್ಕಾರ ಸಾರ್, ನನ್ನ ಬ್ಲಾಗಿಗೆ ಬಂದು ನನ್ನ ಮೊದಲ ಸಣ್ಣ ಕಥೆಯನ್ನು ಓದಿ ಪ್ರೋತ್ಸಾಹಿಸಿದ ನಿಮ್ಮ ಸಹೃದಯತೆಗೆ ನನ್ನ ಶರಣು.

   Delete
 16. ಓದಿಸಿಕೊಂಡು ಹೋಗುತ್ತೆ ಕಥೆ! ಚೆನ್ನಾಗಿದೆ.

  ReplyDelete
 17. ತುಂಬಾ ಚೆನ್ನಾಗಿದೆ ಸರ್. ಕೊನೆಯಲ್ಲಿ ನೋವಾಯಿತು. ಹೀಗೂ ಉಂಟೆ ಅಂತ

  ReplyDelete
 18. ಚಿಕ್ಕದಾದರೂ ಚೊಕ್ಕ ನಿರೂಪಣೆ ತುಂಬಾ ಚೆನ್ನಾಗಿದೆ.

  ReplyDelete