ಭಾನುವಾರ, ಜುಲೈ 18, 2021

ಬಿನ್ನಹ ಕುಸುಮ...

 


ಪೂರ್ಣ ವಿರಾಮಕೂ ಮುನ್ನ
ಲೇಖನ ಚಿನ್ಹೆಗಳನಿಟ್ಟೆ ಪ್ರಭುವೇ!
ಇಹದ ಗುಡಾರ ಮುಷ್ಟಿ ಗುಂಡಿಗೆ,
ಒಟ್ಟುವೆ ಅಚ್ಚರಿಯ ಪ್ರಶ್ನೆಗಳೆನಿತು
ಕಂಸದೊಳಗಣ ಕಣ ಬದುಕಿಗೆ

ಗೆರೆಯ ಆಚೆಗೇ ನಿಲ್ಲಿಸಿ ನಿಲ್ಲಿಸಿ
ಗೆಲುವ ರುಚಿಯನೂ ತೋರದಿರೆ,
ಸಹಸ್ರ ಈಜುಗಾರರನೆಲ್ಲ ಹಿಂದಿಕ್ಕಿ
ಯಾರಪ್ಪಾ ಗೆಲ್ಲಿಸಿದ್ದು ಈ ಶುಕ್ರ
ಅಜ್ಞಾತನನು ಅಂದು ಮುನ್ನುಗ್ಗಿಸಿ

ತಿಳುವಳಿಕೆ ಅರೆಬರೆ ಬತ್ತಳಿಕೆ
ಅಹಮು ಬುರುಗಿನಗಾಧ ಗೋಳ
ಸೀಳ ಬಲ್ಲದು ಮೊಂಡು ಕೊಂಬು,
ಕೊಟ್ಟು ನೋಡು ಸಾಣೆಯ ಪ್ರಜ್ಞೆ
ಚೂಪಾಗಲಿ ಮಗಂದು ಮಸ್ತಿಷ್ಕ

ಅರ್ಧ ಅಲ್ಪ ಅಪ್ರಬುದ್ಧ ವ್ಯುತ್ಪತ್ತಿ
ಪದಪದಗಳ ನಡುವೆ ಮಡಗಿದೆ
ಉದ್ಧಾರದ ಕೀಲಿಗಳೇ ಮಣೆಯಲಿ,
ಕೂಡಿಸು ಸಂಧಿ ಸಮಾಸದಿ ಏಕವಾಗಲಿ
ಲೋಪಾಗಮಾದೇಶ ಚಲಾಯಿಸಿ...

"ಪ್ರತಿ ಸಾಲಿಗೂ ಬೇಕೆ ಪ್ರಾಸದಂತ್ಯ
ಪ್ರಸವಗಳೆಲ್ಲ ಸುಲಲಿತವೇ ಓದುಗರೆ?
ಸುಲಭ ಓದಿಗೆ ಜೀರ್ಣವಾಗು ಕವಿತೆ
ಸುಲಿದ ಬಾಳೆಯ ಹಣ್ಣ ತೆರದಿಯೆ ಖ್ಯಾತಿ,
ಹಲಸೇ ಇಷ್ಟ ಕವಿಗೆ, ಬಿಡಿಸಿರಿ ತಾವೇ"

(ಚಿತ್ರ ಕೃಪೆ: ಗೂಗಲ್)