Friday, November 2, 2012

ಸಾಹಿತಿ ಮತ್ತು ಸಹೃದಯತೆ...

Gulf Kannadiga
Week : 5
ಚಿತ್ರ ಕೃಪೆ : ಗಲ್ಫ್ ಕನ್ನಡಿಗ

ಮರಣೋತ್ತರ ಪ್ರಶಸ್ತಿ
ಅಮೃತ ಶಿಲೆ ಗೋರಿ,
ಬದುಕಿದ್ದಾಗ ತುಂಬೀತೆ
ಖಾಲೀ ಹೊಟ್ಟೆ?


ನಮಸ್ಕಾರ, ನಿಮ್ಮೆಲ್ಲರಿಗೂ ಕನ್ನಡ ರಾಜ್ಯೋತ್ಸವದ ಸುಭಾಶಯಗಳು. ಏಕೀಕೃತ ಕರ್ನಾಟಕದಲ್ಲಿ ಈಗ ಸಾಹಿತಿ ಎದುರಿಸುತ್ತಿರುವ ಸಮಸ್ಯೆಗಳ ಕಿರು ಪರಿಚಯ ಈ ಬರಹ.ಡಾ|| ಕರೀಂ ಖಾನ್
ಇದು ಅತಿಶೋಯುಕ್ತಿ ಅನಿಸಿದರೂ ಸಹ ನಾವು ಭಾರತೀಯರು ಸಾಹಿತ್ಯ ಪೋಷಕರಲ್ಲವೇನೋ ಎನ್ನುವ ಅನುಮಾನ ಕಾಡುತ್ತದೆ. ಹಿಂದೆಲ್ಲ ರಾಜಾಶ್ರಯ ಸಿಕ್ಕ ಕವಿ ಮಹೋದಯರು ನೆಲೆ ಕಂಡುಕೊಂಡರೆ, ಆಗಿನ ಕಾಲದಲ್ಲೂ ಬೆಳಕಿಗೆ ಬಾರದ ಅದೆಷ್ಟೋ ಮೇರು ಸಾಹಿತಿಗಳು ಇದ್ದಲ್ಲೇ ಸೊರಟಿ ಹೋಗಿರಬಹುದು.

ಅಂತೆಯೇ ಇಂದಿನ ಕಾಲಮಾನದಲ್ಲೂ ಬೆರಳೆಣಿಕೆಯಷ್ಟು ಸಾಹಿತಿಗಳು ಪ್ರಕಾಶಮಾನವಾಗಿ ಕಂಡರೂ, ಇತರರ ಬರಹಗಳು ಈಗಲೂ ಅಲಭ್ಯವೇ. ರಾಜಧಾನಿಯಲ್ಲಿ ನೆಲೆಸಿರುವ ಸಾಹಿತಿಗಳು ಹೆಚ್ಚು ಜನಜನಿತವಾದರೆ, ಗ್ರಾಮೀಣ ಸಾಹಿತಿಗಳು ಎಲೆ ಮರೆಯಲ್ಲೇ ಉಳಿದು ಬಿಡುತ್ತಾರೆ.

ಬರೆಯಲು ಆರಂಭಿಸಿರುವ ನನ್ನಂತಹ ಹಲವರಿಗೆ ಬರಹಗಳನ್ನು ಪತ್ರಿಕೆಗಳಿಗೆ ಕಳುಹಿಸಿ, ಅವು ಪ್ರಕಟವಾಗದೆ ನೊಂದುಕೊಳ್ಳುವುದು ಒಂದು ಮಾತಾದರೆ, ಮುಖ್ಯವಾಗಿ ಕಾಡುವುದು ಪ್ರಕಾಶಕರ ಕೊರತೆ.
 

ಪ್ರಕಾಶಕ ಬಂಧುಗಳು ಹೊಸಬರ ಸಾಹಿತ್ಯವನ್ನೂ ಗಂಭೀರವಾಗಿ ಪರಿಣಮಿಸಿ, ಕಾಳುಗಳನ್ನು ಆಯ್ದು ಜೊಳ್ಳುಗಳನ್ನು ಗಾಳಿಗೆ ತೂರಿ ಪುಸ್ತಕ ರೂಪದಲ್ಲಿ ಪ್ರಕಟಿಸಬೇಕು. ಪ್ರಕಟಿತ ಪುಸ್ತಕಗಳು ಗ್ರಂಥಾಲಯಗಳಲ್ಲೂ ಮತ್ತು ಚಿಕ್ಕ ಊರುಗಳ ಪುಸ್ತಕದ ಅಂಗಡಿಗಳಲ್ಲೂ ಸಿಗುವಂತೆ ನೋಡಿಕೊಳ್ಳಬೇಕು. 

ಈಗಾಗಲೇ ಸರ್ಕಾರ, ವಿಶ್ವವಿದ್ಯಾಲಯಗಳು ಮತ್ತು ಪುಸ್ತಕ ಪ್ರಾಧಿಕಾರ ವರ್ಷಕ್ಕೆ ಇಂತಿಷ್ಟು ಎನ್ನುವಂತೆ ಕನ್ನಡ ಪುಸ್ತಕಗಳನ್ನು ಅಗ್ಗದ ಬೆಲೆಗೆ ಪ್ರಕಟ ಮಾಡುತ್ತಿದೆ. ಹೊಸ ಬರಹಗಾರರಿಗೂ ಇಲ್ಲಿ ಅವಕಾಶವಿದ್ದರೆ ಅವರೂ ಜನಜನಿತರಾಗುತ್ತಾರೆ.

ಈಗಾಗಲೇ ಜನ ಮಾನಸದಲ್ಲಿರುವ ಕೃತಿಗಳನ್ನು ಅಗ್ಗದ ಧರದಲ್ಲಿ ಸರ್ಕಾರವೇ ಜನರ ಬಳಿ ತಂದರೆ, ನಿಜವಾದ ಸಾಹಿತ್ಯ ಸೇವೆಯಾಗುತ್ತದೆ. ಗ್ರಂಥಾಲಯಗಳು ಉತ್ತಮ ಸಾಹಿತ್ಯದ ಆಗರಗಳಾಗಬೇಕು.

ಸಾಹಿತಿಯು ಬದುಕಿದ್ದಾಗಲೇ ಆತನ ಕೃತಿಗಳು ಪ್ರಕಟವಾಗಿ, ಮಾರಾಟವಾಗಿ ಅದರಿಂದ ಬರುವ ಲಾಭವು ಅವನಿಗೆ ದೊರಕುವಂತಾಗಬೇಕು. ಬಡತನದಲ್ಲಿರುವ ಸಾಹಿತಿಗಳಿಗೆ ಸರ್ಕಾರವು ಮತ್ತು ಸಂಸ್ಥೆಗಳು ಅರ್ಥಿಕ ಸಹಾಯ ನೀಡಬೇಕು.


ಕನ್ನಡ ಸಾಹಿತ್ಯ ಪರಿಷತ್ತು ಅಂತರ್ಜಾಲವನ್ನು ಗಂಭೀರವಾಗಿ ಪರಿಗಣಿಸಬೇಕಿದೆ. ಇಲ್ಲಿನ ಮತ್ತು ಹೊರನಾಡಿನ ಕನ್ನಡಿಗರು ಬ್ಲಾಗ್ ಮುಂತಾದ ಅಂತರ್ಜಾಲ ಮಾಧ್ಯಮವನ್ನು ಬಳಸಿಕೊಂಡು, ಅತ್ಯುತ್ತಮವಾಗಿ ಸಾಹಿತ್ಯ ಸೇವೆ ಮಾಡುತ್ತಿದ್ದಾರೆ. ಮುಂದಿನ ದಿನಗಳು ಅಂತರ್ಜಾಲದ ದಿನಗಳು ಎಂಬುದನ್ನು ಅವರು ಮನಗಾಣಬೇಕು.

ಕನ್ನಡದ ಏಕರೀತಿಯ ಫಾಂಟ್, ತಂತ್ರಾಂಶ ಮತ್ತು ಕೀಲಿ ಮಣೆ ಪ್ರಚಾರಕ್ಕೆ ಬರಬೇಕು. ಗಣಕ ಯಂತ್ರವಲ್ಲದೆ ಎಲ್ಲ ರೀತಿಯ ಮೊಬೈಲ್ ಪರಿಕರಗಳಲ್ಲೂ ಕನ್ನಡ ಓದಲು ಮತ್ತು ಬೆರಳಚ್ಚು ಮಾಡಲು ಅನುಕೂಲವಾಗುವಂತೆ ತಂತ್ರಾಂಶ ದೊರಕಬೇಕು.

ಮಾಸ್ತಿಯವರ ಗಾಂಧಿ ಬಜಾರಿನ ಮನೆ
ಕಡೆಯದಾಗಿ, ನಮ್ಮ ಮೇರು ಸಾಹಿತಿಗಳು ಇದ್ದ ಮನೆಗಳು ಪೂಜನೀಯ ಸ್ಥಳವಾಗಬೇಕಿತ್ತು, ಆದರೆ ಅವು ನಾಮಾವಶೇಷವೂ ಇಲ್ಲದೆ ಅವಸಾನ ಹೊಂದಿವೆ. ರಾಜಧಾನಿ ಬೆಂಗಳೂರಿನಲ್ಲಿಯ ಮಾಸ್ತಿ, ಕೈಲಾಸಂ ಅವರ ಮನೆಗಳು ಎಲ್ಲಿದ್ದವೆಂದರೆ ಮುಂದಿನ ತಲೆಮಾರಿಗೆ ತೋರಿಸುವುದಾದರೂ ಹೇಗೆ? ಅವುಗಳನ್ನು ಇನ್ನಾದರೂ ಕಾಪಾಡುವತ್ತ ಗಮನ ಹರಿಸಬೇಕು.(ಚಿತ್ರ ಕೃಪೆ : ಅಂತರ್ಜಾಲ)
ಗಲ್ಫ ಕನ್ನಡಿಗ ಈ ಪತ್ರಿಕೆಯಲ್ಲಿ ಪ್ರಕಟಿತ.

02.11.2012

http://gulfkannadiga.com/news/culture/14166.html

7 comments:

 1. ಚೆನ್ನಾಗಿದೆ.
  ಸಮಯದ ಅವಕಾಶವಿದ್ದರೆ ಈ ಲೇಖನವನ್ನು ಇನ್ನೂ ವಿಸ್ತಾರಗೊಳಿಸಿ ಬದರಿ ಸರ್.

  ReplyDelete
 2. ಚೆನ್ನಾಗಿದೆ. ಹೌದು, ಪುತಿನ ಅವರ 'ಹಣತೆಯ ಹಾಡು' ಕೂಡ ಹೀಗೆ ಇದೆ.
  ಸ್ವರ್ಣಾ

  ReplyDelete
 3. ಲೇಖನ ಅತ್ಯಂತ ಸಕಾಲಿಕವಾಗಿದ್ದು ಹೇಳಬೇಕಿರುವುದನ್ನು ಚನ್ನಾಗಿ ವಿಷಧೀಕರಿಸಿದೆ.ಕನ್ನಡದ ಏಕ ರೀತಿಯ ತತ್ರಾಂಶಗಳಿರಬೇಕೆಂಬ ಕಾಳಜಿ ಅನನ್ಯವಾದುದು.ರಾಜ್ಯೋತ್ಸವ ಭಾಷಣದಲ್ಲಿ ಡಾ|| ಕಂಬಾರಜೀರವರ ಕೋರಿಕೆಗೆ ಮುಖ್ಯ ಮಂತ್ರಿಗಳು ಸ್ಪಂದಿಸಿ ಈ ಕುರಿತು ಅಗತ್ಯ ಕ್ರಮ ಜರುಗಿಸುವ ಭರವಸೆ ನೀಡಿದ್ದಾರೆ.ನಿಮ್ಮ ಕನಸು ಸಾಕಾರಗೊಳ್ಳುವ ದಿನಗಳು ಹತ್ತಿರವಾಗುತ್ತಿವೆ ಎನಿಸುತ್ತದೆ.ಆ ದಿನ ಬೇಗನೇ ಬರಲಿ.

  ReplyDelete
 4. ಬದರಿನಾಥರೆ,
  ಇದೊಂದು ಉತ್ತಮ ವೈಚಾರಿಕ ಲೇಖನವಾಗಿದೆ. ನೀವು ತೋರಿಸಿದ ಸಮಸ್ಯೆಗಳಿಗೆ ಪರಿಹಾರ ಕಂಡು ಹಿಡಿಯುವ ಪ್ರಯತ್ನವಾಗಬೇಕು.

  ReplyDelete
 5. ನಾ ಗಮನಿಸಿದ್ದು ಇದು ಎಲ್ಲರಿಗೂ ಗೊತ್ತಿರೋದೆ ನಮ್ಮ ಅಭಿಮಾನಶೂನ್ಯತೆ..
  ತಮ್ಮ ನೆಚ್ಚಿನ ಹಿರೋವಿನ ಸಿನೇಮಕ್ಕೆ ಸ್ಟಾರ್,ಬ್ಲಾಕ್ ಹೀಗೆ ಖರ್ಚುಮಾಡುವ ನಮ್ಮ ಕನ್ನಡದವ್ರು..
  ಪುಸ್ತಕಕ್ಕೆ ಎಂದೂ ದುಡ್ಡು ಕೊಡುವುವುರಲ್ಲ..ಅದೇ ಮರಾಠಿಯಲ್ಲಿ ಹಿರೋನ ಹುಟ್ಟುಹಬ್ಬ ನಗಣ್ಯ..
  ಅದೇ ಕವಿಯ ಜನ್ಮದಿನ ವೈಭವದಿಂದ ಆಚರಿಸುತ್ತಾರೆ... ಇನ್ನು ಓದದೇ ಇದ್ರೆ ಪ್ರಕಾಶಕರ ಪಾಡು
  ಹೇಳುವುದೇ ಬೇಡ. ಇದು ಒಂದು ದೊಡ್ಡ ವಿಷವ್ಯೂಹ..ತಗ್ಗಿದ್ದಲ್ಲಿ ನೀರು ಹರಿಯುತ್ತದೆ..ಹೀಗಾಗಿ ಚಲಾವಣೆಯಲ್ಲಿಲ್ಲದ
  ಅಥವಾ ಹೊಸ ಲೇಖಕ ಅವನ ರಚನೆ ಅದೆಷ್ಟೆ ಪಕ್ವವಾಗಿರಲಿ ಕವಡೆಯ ಕಿಮ್ಮತ್ತೂ ಸಿಗೋದಿಲ್ಲ..
  ನೀವು ಎತ್ತಿದ ವಿಷಯಗಳು ಸಕಾಲಿಕ ಆಗಿವೆ ಬದ್ರಿ..

  ReplyDelete
 6. ಮನಸ್ಸಿಗೆ ಕಷ್ಟವೆನಿಸುವ ಲೇಖನ.
  ಮರಣೋತ್ತರ ಪ್ರಶಸ್ತಿ
  ಅಮೃತ ಶಿಲೆ ಗೋರಿ,
  ಬದುಕಿದ್ದಾಗ ತುಂಬೀತೆ
  ಖಾಲೀ ಹೊಟ್ಟೆ?
  ಈ ಪುಟ್ಟ ಮುಕುಟ ಲೇಖನದ ಗಂಭೀರತೆಯನ್ನು ಬಿಂಬಿಸುತ್ತದೆ. ತಾಲೂಕು ಗ್ರಂಥಾಲಯಗಳಿರಲಿ, ನಮ್ಮ ಮೈಸೂರು ಗ್ರಂಥಾಲಯದಲ್ಲೇ ಸಾಕಷ್ಟು ಪ್ರಸಿದ್ಧ ಸಾಹಿತಿಗಳ ಪುಸ್ತಕಗಳೂ ಸಿಗುವುದಿಲ್ಲ. ಮತ್ತು ನಿಮ್ಮ ಮಾತುಗಳಂತೆ ಸಾಹಿತಿಗಳ ಜೀವನ ದುಸ್ತರವಾಗಿದ್ದರೂ ಸದಾ ಕೆಸರೆರಚಾಟಗಳಲ್ಲಿ ತೊಡಗಿರುವ ಸರ್ಕಾರಗಳಿ ಸಾಹಿತಿಗಳ ಖಾಲೀ ಹೊಟ್ಟೆಗಳು ಕಾಣುತ್ತಲೇ ಇಲ್ಲ. ಎಲ್ಲ ಸಮಸ್ಯೆಗಳಿಗೂ ಪರಿಹಾರ ಒದಗಿಸಬಲ್ಲ ಸರ್ಕಾರ ಯಾವಾಗ ಸಾಹಿತಿಗಳ ಬಗ್ಗೆ ತಿರುಗಿ ನೋಡುವುದೋ ಕಾದು ನೋಡಬೇಕು.

  ReplyDelete
 7. This comment has been removed by the author.

  ReplyDelete