Friday, October 19, 2012

ಮತ್ತೆ ಹಸಿರು ಹೊದ್ದೀತೇ?

19.10.2012
 ವಾರ : 3
 ತಾರಸಿ ಏರಿ ನಿಂತಾಗಲೆಲ್ಲ ಕಣ್ಣಿಗೆ ತಂಪು ಮಾಡುತ್ತಿದ್ದದ್ದು ಆ ದಟ್ಟ ಹಸಿರಿನ ಹೊದಿಕೆ. ಬೇಸಿಗೆಯಲ್ಲೂ ತಂಪು ನೀಡುತ್ತಿದ್ದ ಆ ಅನನ್ಯ ಸಸ್ಯ ಸಂಪತ್ತು. ರಸ್ತೆ ಇಕ್ಕೆಲಗಳಗಳಲ್ಲೂ ದಾರಿ ಹೋಕರಿಗೆ ನೆರಳು ನೀಡುತ್ತಿದ್ದ ಸಾಲು ಮರಗಳು. ಇವೆಲ್ಲ ಕನಸಿನ ಚಿತ್ರಗಳಂತೆ ಕರಗಿ ಹೋದಾಗ ವ್ಯಥೆಯಾಗುತ್ತದೆ.

ತಮ್ಮ ಪ್ರೇಮ ಮಣ್ಣಾದರೂ ಹೆಸರಾದರೂ ಅಮರವಾಗಲಿ ಎಂದು ಬೃಹದ್ ಕಾಂಡಗಳ ಮೇಲೆ ಕೆತ್ತಿಟ್ಟ ಆ ಪ್ರೇಮ ಚಿಹ್ನೆಗಳೆಲ್ಲ ಎಲ್ಲಿ ಉರುವಲಾದವೋ?

ನನಗೆ ಬೆಂಗಳೂರೆಂದರೆ ಮನಸ್ಸಿನಲ್ಲಿ ಮೂಡುವ ಚಿತ್ರವೇ ವನ ಸಿರಿಯ ಪ್ರಶಾಂತ ನಗರ. ಮುಂಚಿನ ನಗರದ ಗಲ್ಲಿ ಗಲ್ಲಿಯೂ ಕಬ್ಬನ್ ಪಾರ್ಕೋ ಅಥವಾ ಲಾಲ್ ಬಾಗೋ ಅನಿಸುತ್ತಿದ್ದ ಕಾಲ ಈಗ ಗತ ನೆನಪು. ಕಲ್ಪವೃಕ್ಷಗಳಿಂದ ತುಂಬಿ ಮೆರೆಯುತ್ತಿದ್ದ ಮಲ್ಲೇಶ್ವರಂನ ತೆಂಗಿನ ಮರದ ರಸ್ತೆ ಕೂಡ ಈಗ ಬರೀ ಹೆಸರಷ್ಟೇ. 

ಎಂ.ಜಿ. ರಸ್ತೆಯಲ್ಲಿ ಮೆಟ್ರೋ ಕಾಮಗಾರಿಗಾಗಿ ತೆರವು ಮಾಡಿದ ಒಂದೆರಡು ಮರಗಳನ್ನು ಕಂಠೀರವ ಸ್ಟುಡಿಯೋದಲ್ಲಿ ನೆಟ್ಟರು ಅಂತ ಕೇಳಿದ್ದೆ. ಅಪ್ಪಿಕೋ ಚಳುವಳಿ ಮಾಡಿದರೂ ಸಹ ಸ್ಯಾಂಕೀ ಕೆರೆ ಬಳಿಯ ಹಲವು ಮರಗಳನ್ನು ಉಳಿಸಲಾಗಲೇ ಇಲ್ಲ! ದೊಡ್ಡ ದೊಡ್ಡ ಮರಗಳನ್ನು ಹೊತ್ತೊಯ್ದು ಎಲ್ಲೋ ನೆಡಲು ಅಪಾರ ಖರ್ಚು ವೆಚ್ಚ ಮತ್ತು ಸಾಗಾಣಿಕೆಯ ಸಮಸ್ಯೆಯನ್ನು ಸರ್ಕಾರ ಮುಂದಿಡಬಹುದು. ಬೇಡದ ಬಾಬ್ತುಗಳಿಗೆಲ್ಲ ಕೋಟ್ಯಾಂತರ ತೆರಿಗೆ ಹಣ ವ್ಯಯಿಸುವ ಸರ್ಕಾರಗಳಿಗೆ ನಗರದ ಸ್ವಾಸ್ಥ್ಯ ಕಾಪಾಡುವ ಮರಗಳನ್ನು ನಗರದ ಸುತ್ತ ಹಸಿರು ಪಟ್ಟಿ ಮಾಡಿ, ಅಲ್ಲಿ ಹೋಗಿ ನೆಡಲು ಅದರ ಖಜಾನೆ ಬರಿದಾಗುವುದಿಲ್ಲ. ಲಕ್ಷಾಂತರ ಸುರಿದು ಬಸ್ ಶೆಲ್ಟರುಗಳನ್ನು ನಿರ್ಮಿಸುವಾಗ ಇಕ್ಕೆಲಗಳಲ್ಲಿ ಮರಗಳನ್ನು ನೆಡಬಹುದು. ನಗರದ ಹಲವು ಬಸ್ ಸ್ಟಾಪುಗಳು ಈವಾಗಲೂ ಆಲದ ಮರ, ಹುಣಿಸೇ ಮರ ಎಂದೇ ಗುರುತಿಸುತ್ತೇವೆ. ಅದು ಮನುಷ್ಯ ಮತ್ತು ಮರದ ನಡುವಿನ ಅವಿನಾಭಾವ ಸಂಬಂಧ.

ಇಂದಿನ ಹವಾ ಮಾಲಿನ್ಯವನ್ನು ಶುದ್ಧೀಕರಿಸುವ, ಮಳೆಯನ್ನು ಸೆಳೆಯುವ ಮತ್ತು ಆಮ್ಲಜನಕವನ್ನು ನೀಡುವ ಮರಗಳನ್ನು ಉಳಿಸುವ ಕೆಲಸ ಅದರ ಆದ್ಯತಾ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿ ಇರಬೇಕಿತ್ತು. ನನ್ನ ಮುತ್ತಜ್ಜನ ಕಾಲದ ಮರಗಳೆಲ್ಲ ಅಭಿವೃದ್ಧಿ ಹೆಸರಲ್ಲಿ ಬುಡ ಮೇಲಾಗುವಾಗ ಕರುಳು ಕಿವುಚುತ್ತದೆ. ಹೊಸ ತಂತ್ರಙ್ಞಾನವೋ  ಮಣ್ಣು ಮಸಿಯೋ ಬಳಸಿ, ಬೇರು ಸಮೇತ ಮರಗಳನ್ನು ಜತನವಾಗಿ ಹೊತ್ತೊಯ್ದು ಹೊರ ವಲಯದ ಬಯಲುಗಳಲಿ ಮರು ನೆಡಬಾರದೆ? ಎನಿಸುತ್ತದೆ.

ಬಲು ಬೇಗ ಎತ್ತರಕ್ಕೆ ಬೆಳೆಯುವ ಆದರೆ ಮಳೆ ಗಾಳಿಗೆ ನೆಳಕ್ಕೆ ಉರುಳುವ ಟೊಳ್ಳು ಕಾಂಡದ, ಬೇರಿಳಿಸದ ಮರಗಳನ್ನು ಬೆಳೆಸುವ ಬದಲು. ವೈಜ್ಞಾನಿಕವಾಗಿ ನಮ್ಮ ನೆಲಕ್ಕೆ ಒಗ್ಗುವ ಹಲವು ಉಪಯೋಗಗಳಿಗೆ ಆಗುವ ಮರಗಳನ್ನು ಕನಿಷ್ಟ ಪಕ್ಷ ಹೊಸ ಬಡಾವಣೆಗಳಲ್ಲಾದರೂ ನೆಟ್ಟು ಕಾಪಾಡುವ ಕ್ರಿಯಾ ಯೋಜನೆಗಳನ್ನು ನಗರಾಡಳಿತ, ನಗರಾಭಿವೃದ್ಧಿ ಪ್ರಾಧಿಕಾರ, ಸಾಮಾಜಿಕ ಅರಣ್ಯ ಇಲಾಖೆ ಮತ್ತು ಸರ್ಕಾರ ಕೂಡಲೇ ಕೈಗೊಳ್ಳಬೇಕಿದೆ. ಈಗಾಗಲೇ ಪೋಷಣೆ ಇಲ್ಲದೆ ಸೊರಗಿದ ಹಳೇ ಮರಗಳಿಗೂ ಕಾಯಕಲ್ಪ ಮಾಡಬೇಕಿದೆ.

ಜೊತೆಗೆ ತೋಟಗಾರಿಕೆ ಇಲಾಖೆಯೂ ಹಳೆಯ ಬಡಾವಣೆಗಳಲ್ಲಿ ಖಾಲಿ ಜಾಗವನ್ನು ಗುರ್ತಿಸಿ ಉದ್ಯಾನವನ ನಿರ್ಮಿಸಬೇಕು. ರಸ್ತೆಗಳನ್ನು ಹೂ ಗಿಡಗಳಿಂದ ಸಿಂಗರಿಸಬೇಕು. ಮನೆಗೊಂದು ಮರ ನೆಡಿ ಮತ್ತದ್ದನ್ನು ನಿಮ್ಮ ಮನೆ ಮಕ್ಕಳಂತೆ ನೋಡಿಕೊಳ್ಳಿ ಎಂಬ ಅರಿವೂ ಜನರಲ್ಲೂ ಮೂಡಿಸಬೇಕಿದೆ.

ಪಕ್ಕದ ರಾಯಲ ಸೀಮೆಯ ತಿರುಪತಿಯಂತೂ ಕುರುಚಲು ಗಿಡಗಳಷ್ಟೇ ಬೆಳೆಯುವ ನೆಲ. ತಿರುಮಲೈ ಬೆಟ್ಟವನ್ನು ಹಲವು ವರ್ಷಗಳ ತಪಸ್ಸಿನಂತೆ ಇಂದು ಹಸಿರಿನಿಂದ ನಳನಳಿಸುವಂತೆ ಮಾಡಿದ್ದು ನಮಗೆ ಉದಾಹರಣೆಯಾಗಲಿ.

 ದುಖದ ಸಂಗತಿ ಎಂದರೆ, ಮೇಕ್ರೀ ಸರ್ಕಲ್ಲಿನ ಮೇಲೆ ನಕಲಿ ಮರವನ್ನು ರೂಪಿಸಿ, ಜಾಗೃತಿ ಮೂಡಿಸಿದ್ದೇವೆ ಎಂದು ಬೀಗುವವರು ಅಲ್ಲಿ ನಿಜವಾದ ಮರವನ್ನೇ ನೆಟ್ಟು ಪೋಷಿಸಿದ್ದರೆ, ನಿಜವಾಗಿ ಖುಷಿ ಪಡುತ್ತಿದ್ದೆವು. ನನ್ನ ನಗರ ಮಾತ್ರವಲ್ಲ ಇಡೀ ಭೂಮಿ ಹಸಿರು ಮಯವಾಗಿರಲಿ, ಕಾಡುಗಳು ನೆಲಗಳ್ಳರ ಪಾಲಾಗದಿರಲಿ ಎಂದು ಆಶಿಸುತ್ತೇನೆ.


(ಚಿತ್ರ ಕೃಪೆ : ಅಂತರ್ಜಾಲ)


ಗಲ್ಫ ಕನ್ನಡಿಗ ಈ ಪತ್ರಿಕೆಯಲ್ಲಿ ಪ್ರಕಟಿತ.


http://gulfkannadiga.com/news/culture/10520.html

9 comments:

 1. ಸುಂದರ ಮತ್ತು ಸಮಯೋಚಿತ ಲೇಖನ.

  ReplyDelete
 2. ಸುಂದರ ಮತ್ತು ಸಮಯೋಚಿತ ಲೇಖನ.

  ReplyDelete
 3. ನನ್ನ ಮಟ್ಟಿಗೆ ಬೆಂಗಳೂರು ಕಾಂಕ್ರಿಟ್ ಕಾಡೇ ..!
  ವನಸಿರಿಯ ಮದ್ಯದಿಂದ ಎದ್ದು ಬಂದವರಿಗೆ ಇಲ್ಲಿ ಬೋಳು ಬೋಳು ಅನಿಸಿಬಿಡುತ್ತದೆ...
  ನಗರ ಜೀವನದ ಬೀಳುಗಳಲ್ಲಿ ಸಸ್ಯಸಂಪತ್ತಿನ ನಾಶ ಮೊದಲಿಗೆ ಎದ್ದು ತೋರುತ್ತದೆ...
  ಜೊತೆಗೆ ಪರ್ಯಾಯ ಮಾರ್ಗಗಳನ್ನು ಸೂಚಿಸಿದ್ದು ಖುಷಿಯಾಯಿತು...
  ಒಳ್ಳೆಯ ಲೇಖನ ಬದರಿ ಸರ್... :)

  ReplyDelete
 4. ಸರ್ ನಾವು ಇಲ್ಲಿ ಕೇವಲ ಅಧಿಕಾರಿಗಳನ್ನು ದೂಷಿಸಿದರೆ ಸಾಲದು... ತೋಟಗಾರಿಕೆ ಇಲಾಖೆ ಅವರು ಪ್ರತಿ ವರ್ಷ ಇಂತಿಷ್ಟು ಸಸಿಗಳನ್ನು ನೆಡುತ್ತಲೇ ಬಂದಿದ್ದಾರೆ....ಇತ್ತೀಚಿಗೆ ಬಹಳಷ್ಟು ಕಾರ್ಯಕ್ರಮಗಳನ್ನು ಕೂಡ ಹಾಕಿಕೊಂಡಿದ್ದಾರೆ... ಇದನ್ನು ಸಾಮಾನ್ಯರಾದ ನಾವು ನಮ್ಮ ಸಾಮಾನ್ಯ ಜ್ಞಾನ ಉಪಯೋಗಿಸಬೇಕು ಅಷ್ಟೇ... ಮನೆ ಕಟ್ಟಲೋ ಅಥವಾ ಇನ್ನ್ಯವುದಕಾದರು ಮರ ಕಡಿದರೆ ಪರ್ಯಾಯವಾಗಿ ಒಂದಷ್ಟು ಸಸಿಗಳನ್ನು ನೆಟ್ಟರೆ ಎಷ್ಟು ಒಳ್ಳೆಯದು ಅಲ್ಲವೇ... ಈ ಒಂದು ಕಾರ್ಯ ನಮ್ಮಿಂದ ಕೂಡ ಆಗಬೇಕಿದೆ...ಇದರಲ್ಲಿ ನಮ್ಮ ಪಾತ್ರವೂ ಇದೆ ಅನ್ನುವುದನ್ನು ನಾವು ಮನಗಾಣಬೇಕು ಅಲ್ಲವೇ?

  ಒಟ್ಟಿನಲ್ಲಿ ಸಮಯೋಚಿತ ಲೇಖನ...

  ReplyDelete
 5. ಸುಂದರ ಮತ್ತು ಸಮಯೋಚಿತ ಲೇಖನ.

  ReplyDelete
 6. ಬದರಿನಾಥರೆ,
  ಬೆಂಗಳೂರು ಈಗ ಬೆಂಗಾಡೂರು ಆಗುತ್ತಿದೆ. ನಿಮ್ಮ ಕಳಕಳಿಗೆ ನನ್ನದೂ ಬೆಂಬಲ ಇದೆ. ಜನ ಹಾಗು ಸರಕಾರ ಎಚ್ಚೆತ್ತುಕೊಳ್ಳಬೇಕಷ್ಟೆ!

  ReplyDelete
 7. ನಿಜವಾದ ಮಾತು ಬದರಿ ಸರ್...ಚಿಕ್ಕದಾಗಿ ಮನಮುಟ್ಟುವಂತಿದೆ..ಸರ್ಕಾರದ ಕಥೆ ಬದಿಗಿಡಿ,ನಾವು ಜನಸಾಮಾನ್ಯರು ಈ ನಿಟ್ಟಿನಲ್ಲಿ ಏನೇನು ಮಾಡಬಹುದು ಎಂಬುವುದರೊಂದಿಗೆ ಈ ಬರಹವನ್ನು ಮುಗಿಸಿದ್ದರೆ ಇನ್ನಷ್ಟು ಚೆನ್ನಾಗಿರಬಹುದೇನೋ ಎಂಬುದು ನನ್ನ ಅನಿಸಿಕೆ..

  ನಿಮ್ಮ ಅಂಕಣಕ್ಕೆ ಮತ್ತೊಮ್ಮೆ ಶುಭ ಹಾರೈಕೆಗಳು....

  ನಮಸ್ತೆ.

  ReplyDelete
 8. ಸಮಯೋಚಿತ ಲೇಖನ
  we support the cause

  ReplyDelete
 9. ಕಾ೦ಕ್ರೀಟ್ ಕಾಡಿನ೦ತೆ ನಿಮ್ಮ ಬರಹವೂ ಕಾ೦ಕ್ರೀಟ್ನಷ್ಟು ಗಟ್ತಿಯಾದ ವಸ್ತುವಿನಿ೦ದ ಕೂಡಿದೆ. ಪದ್ಯ-ಗದ್ಯಗಳೆರಡನ್ನೂ ಹೃದ್ಯವಾಗಿಸುವ ಕಲೆಯಲ್ಲಿ ಪರಿಣಿತಿ ಹೊ೦ದುತ್ತಿದ್ದೀರಿ. ಅಭಿನ೦ದನೆಗಳು ಬದರೀ ಸರ್.

  ReplyDelete