ಮಂಗಳವಾರ, ಜುಲೈ 24, 2012

ಅವನಿಲ್ಲದ ಕಾಡು...


ಭೀಮನ ಅಮಾವಾಸ್ಯೆಯ ಮರುದಿನ
ಸುಪ್ರಭಾತಕೆ ತಲ್ಲಣಿಸಿತಲ್ಲ ನಾಡು,
ಹುಂಬನು ಹೊತ್ತೊಯ್ದ ಮೇರು ನಟರೂ
ನೂರೆಂಟು ದಿನ ವನವಾಸ ಪಾಡು...

ಅಸಲವನ ಕಾಡೇ ಅಭೇದ್ಯ
ಒಮ್ಮೆ ಕುರುಚಲು ಬೀಡು
ಮುಗಿಲೆತ್ತರಕೆ ಆನೆ ಹುಲ್ಲು
ನಿಬಿಡ ಮರಗಿಡ ಸಂಪತ್ತು
ಮತ್ತೆ ಬಟಾ ಬಯಲು...

ಈಗಲ್ಲಿ ನೆಲ ಬಾಂಬು ಸಿಡಿಯುವುದಿಲ್ಲ
ತುಪಾಕಿ ಮೊರೆಯುವುದಿಲ್ಲ
ಸುಳ್ಳು ಸಂಧಾನಕಾರರಿಲ್ಲ
"ಹರಹರ ಮಹಾದೇವ್" ಉದ್ಘೋಷವಿಲ್ಲ
ನಿರಮ್ಮಳವಾಗಿದೆ ಕಾಡು ಮೇಡು

ಮಡಿದ ಪೊಲೀಸರ ನಿಟ್ಟುಸಿರ
ಹೊತ್ತು ಹರಿಯುತ್ತೆ ಅದೇ ಪಾಲಾರ್,
ಘೀಳಿಟ್ಟು ಅತ್ತ ಆನೆಗಳೇ ಮುದಿಬಿದ್ದು
ಮರೆತಿವೆ ಕಳಕೊಂಡ ತಮ್ಮ ದಂತ,
ಚಿಗುರೊಡೆದು ನಳನಳಿಸಿದೆ ಶ್ರೀಗಂಧ...

ತಲೆ ಕತ್ತರಿಸಿ ಕೊಂದ ಶ್ರೀನಿವಾಸನ್
ಕಾಹು ಕೊಂದಿಟ್ಟ ಶಕೀಲ್ ಅಹಮದ್
ತಾ ಕೊಂದಿಲ್ಲವೆಂದಿದ್ದ ನಾಗಪ್ಪನಂತವರೂ
ಬದುಕಿ ಬಂದಾರೇ ನಿರ್ಧಯೀ ಹೇಳು?
ಉತ್ತರಿಸುವವನೇ ಜೀವಂತವಿಲ್ಲ...

ಕಾಡುಗಳ್ಳನವನು ಬಲು ಗುನ್ನೆಗಾರ
ಅಪಹರಣ ಅಟ್ಟಹಾಸ ಮರಸು ಬೇಟೆಯೇ
ನರ ಹಂತಕ ವೀರಪ್ಪನ್ ಜಮಾನ!
ಕಾಲಧರ್ಮಕೆ ಸಿಕ್ಕು ಅವನೇ ಸತ್ತರೂ
ಕಳ್ಳ ಗಂಟಿನ ಕುಂಭ ಬಯಲಾಗಲೊಲ್ಲ!

ಪಾಪ ಉಸಿರಾಡುತಿದೆ ಈಗೀಗ
ಆವನಿಲ್ಲದ ಕಾಡು...


(ಚಿತ್ರ ಕೃಪೆ : ಅಂತರ್ಜಾಲ)

(ಅವಧಿ ಡಾಟ್ ಕಾಂನಲ್ಲಿ ದಿನಾಂಕ: 25.07.2011 ಪ್ರಕಟಿತ) 
http://avadhimag.com/?p=58684

34 ಕಾಮೆಂಟ್‌ಗಳು:

  1. ಅವನಿದ್ದಾಗ ಅವನೊಬ್ಬನೇ ಕಳ್ಳ.
    ಅವನಿಲ್ಲದಾ ಕಾಡಲ್ಲಿ ಹೆಜ್ಜೆ ಹೆಜ್ಜೆಗೂ ಹಳ್ಳ.
    ಹೊಂಚು ಹಾಕುತಿಹರು ರಾ. ಕೀ ನಾಯಕರು
    ಎತ್ತಲಿಂದ ಲಗ್ಗೆ ಹಾಕಬೇಕೆಂದು.

    ಅಂದು ಅವನಿದ್ದನೆಂದು ಭಯವಿತ್ತು
    ಅವನಿಲ್ಲದಾ ಕಾಡು ಎಷ್ಟು ದಿನ ಉಳಿದೀತು.

    ಪ್ರತ್ಯುತ್ತರಅಳಿಸಿ
  2. ಏನ್ ಸರ್ ವೀರಪ್ಪನ್ನ ಮಿಸ್ ಮಾಡ್ತಾ ಇದಿರಾ ? :)
    ನಿಮ್ಮ ವಿಷಯಗಳ ಆಯ್ಕೆ ತುಂಬಾ ಚೆನ್ನಾಗಿದೆ.

    ಪ್ರತ್ಯುತ್ತರಅಳಿಸಿ
  3. ಉಸಿರಾಡುತಿದೆ ಈಗೀಗ
    ಆವನಿಲ್ಲದ ಕಾಡು... ಹಾಗೇ ನಾಡೂಕೂಡ ನಿಟ್ಟುಸಿರು ಬಿಡುತ್ತಿದೆ.

    ಪ್ರತ್ಯುತ್ತರಅಳಿಸಿ
  4. ಕಾಡಿನಲಿ ಬೀಡು ಬಿಟ್ಟ ಅಸುರ ಕಾಣದಾದ, ನಾಡಿನಲಿ.. ನೂರಾರು ಸಾವಿರಾರು ಸುರರ ವೇಷದಿ ಅಸುರರು ಮೆರೆಯುತಿರುವರು... ಉತ್ತಮ ಕವನಕ್ಕೆ ಅಭಿನ೦ದನೆಗಳು ಬದ್ರೀ ಸರ್.

    ಅನ೦ತ್

    ಪ್ರತ್ಯುತ್ತರಅಳಿಸಿ
  5. ಮೊನ್ನೆ ತಮಿಳಿನ ಕ್ಯಾಪ್ಟನ್ ಪ್ರಭಾಕರನ್ ಫಿಲಂ ನೋಡಿದೆ..ಆ ಚಿತ್ರದಲ್ಲಿನ ವೀರಭದ್ರ, ವೀರಪ್ಪನ್ ಎಂದು ಗೆಳೆಯ ಹೇಳಿದ.. ನಿಮ್ಮ ಕವಿತೆ ಓದಿದೆ..ಕಾಡಿನ ಚಿತ್ರಗಳೆಲ್ಲಾ ಕಣ್ಮುಂದೆ ಬಂದಿತು. ಧನ್ಯವಾದಗಳು ಹಂಚಿಕೊಂಡಿದ್ದಕ್ಕಾಗಿ.

    ಪ್ರತ್ಯುತ್ತರಅಳಿಸಿ
  6. ಉಸಿರಾಡುತಿದೆ ಅವನಿಲ್ಲದಾ ಕಾಡು ,ದಟ್ಟ ಮೀಸೆಯಿಲ್ಲದ ಕಳ್ಳರಿಂದ ಉಸಿರುಗಟ್ಟುತ್ತಿದೆ ನಾಡು ..:)
    ಅಭಿನಂದನೆಗಳು .

    ಪ್ರತ್ಯುತ್ತರಅಳಿಸಿ
  7. ಉತ್ತಮ ಕವನಗಳನ್ನ ಎದುರು ನೋಡುತ್ತಿದ್ದೇವೆ ಗುರುಗಳೇ.

    ಪ್ರತ್ಯುತ್ತರಅಳಿಸಿ
  8. ವೀರಪ್ಪನ್ ನೆನಪೇ ಇರಲಿಲ್ಲ...ಒಳ್ಳೆಯ ಕವನದ ಮೂಲಕ ಪುನಹ ನೆನಪಿಸಿದಕ್ಕೆ ಧನ್ಯವಾದಗಳು.....

    ಪ್ರತ್ಯುತ್ತರಅಳಿಸಿ
  9. ತಾವು ಕೊಟ್ಟ ವಿಚಾರಗಳಂತೆ ಒಂದು ಒಳ್ಳೆಯ ಡಾಕ್ಯುಮೆಂಟರಿ. ಸ್ಪಷ್ಟ ನೋಟಕರಿಗೆ ಮಾತ್ರ ಅರ್ಥವಾದೀತು, ಅಥವಾ ವೀರಪ್ಪನ್ ದಿನಗಳನ್ನ ಅನುಭವಿಸಿದವರಿಗೆ.

    ಕವನ ಒಂದು ಇತಿಹಾಸಕ್ಕೆ ಬೇಕಾದ ಸಾಮಗ್ರಿಗಳನ್ನ ಸೂಚ್ಯವಾಗಿಟ್ಟುಕೊಂಡಿದೆ.

    ಪ್ರತ್ಯುತ್ತರಅಳಿಸಿ
  10. ನಿಮ್ಮ ಕವನದ ಮೂಲಕ ಮತ್ತೆ ಮನಃ ಪಟಲದ ಮುಂದೆ ಕುಣಿದನೋ ಆ ದಟ್ಟ ಮೀಸೆಯ ವೀರಪ್ಪನ್...
    ತುಂಬಾ ಚೆನ್ನಗಿದೆ ಬದ್ರಿ ಜಿ ನಿಮ್ಮ ಕವನ.

    ಪ್ರತ್ಯುತ್ತರಅಳಿಸಿ
  11. ನಿಮ್ಮ ಕವನದ ಮೂಲಕ ಮತ್ತೆ ಮನಃ ಪಟಲದ ಮುಂದೆ ಕುಣಿದನೋ ಆ ದಟ್ಟ ಮೀಸೆಯ ವೀರಪ್ಪನ್...
    ತುಂಬಾ ಚೆನ್ನಗಿದೆ ಬದ್ರಿ ಜಿ ನಿಮ್ಮ ಕವನ.

    ಪ್ರತ್ಯುತ್ತರಅಳಿಸಿ
  12. ಕಾಲಧರ್ಮಕೆ ಸಿಕ್ಕು ಅವನೇ ಸತ್ತರೂ
    ಕಳ್ಳ ಗಂಟಿನ ಕುಂಭ ಬಯಲಾಗಲೊಲ್ಲ!

    ಸರಿಯಾಗಿ ಹೇಳಿದ್ದೀರಿ, ಅನೇಕ ರಹಸ್ಯಗಳು ವೀರಪ್ಪನ್ ಜೊತೆಗೆ ಭೂಗತವಾಗಿ ಹೋದವು! - Triveni

    ಪ್ರತ್ಯುತ್ತರಅಳಿಸಿ
  13. ನಾರಿಯ ಸೀರೆ ಕದ್ದ...
    ವೀರಪ್ಪನ್ ನನ್ನ ಕದ್ದ...
    ಇದು ನನ್ನಪ್ಪ..ರಾಜ್ ಕುಮಾರನ ಅಪಹರಿಸಿದಾಗ ಹೇಳುತಿದ್ದ ಹಾಡು...

    ಒಬ್ಬ ನರಹಂತಕ ಕಾಡಿನಿಂದ ಮರೆಯಾದ...ಅವನ ಮರೆಯಲಿದ್ದ ಇನ್ನೆಷ್ಟೋ ವೀರಪ್ಪನ್ಗಳು ಓಡಾಡುತಿದ್ದಾರೆ...
    ಸೊಗಸಾದ ಕವನ...ಆ ದಿನದ ಕರಾಳ ನೆನಪುಗಳನ್ನ ಬಿಚ್ಚಿಡುತ್ತದೆ...

    ಪ್ರತ್ಯುತ್ತರಅಳಿಸಿ
  14. ಅವನಿದ್ದ ಕಾಡು
    ಕರಿಯಿಲ್ಲದ ಕಾಡು
    ಅವನಿರದ ಕಾಡು
    ಕರಿಯಿರುವ ಕಾಡು
    ಇದುವೇ ಕನ್ನಡನಾಡು

    ಪ್ರತ್ಯುತ್ತರಅಳಿಸಿ
  15. ಅವನಿಲ್ಲದ ಕಾಡು
    ಬೆಂದಿಲ್ಲದ ಬಾಡು
    ಇವ ಸಪ್ಪಳಗೈದರೆ
    ಮೃಗಖಗಗಳು ದೌಡು
    ಹಂತಕತನವೇ ಈತನ
    ಹೊಟ್ಟೆಪಾಡು
    'ಮುತ್ತಿಟ್ಟ ಲಕ್ಷ್ಮೀ'ಯನು
    ಬಿಟ್ಟಗಲಿ ಹೋದಾಗ
    ನಿಟ್ಟುಸಿರಿಟ್ಟಿತು ನಾಡು.!!

    ಬದ್ರಿ ಪದ್ಯಂ ಗದ್ಯಂ..!
    ಕವನಂ ನಿರಂತರಂ......!!
    ಅಂದರೆ ರಂ ನಂತೆ ಕಿಕ್ ಕೊಡುತ್ತಾವೆ ..!
    ರಮ್ಯಾಳಂತೆ ಚೆಂದವಾಗಿದರ್ತವೆ.!!! ನಿಮ್ಮ ಬರಹಗಳು.!!

    ಪ್ರತ್ಯುತ್ತರಅಳಿಸಿ
  16. ಚೆನ್ನಾಗಿದೆ . ಒಂದು ಆವೇಶವು,ಕಕ್ಕುಲಾತಿ,ನಿರ್ಜನ ಮೌನ ಪ್ರೇರಣೆ ಇಲ್ಲಿದೆ . ಕಠಿಣ ಪದಗಳಲ್ಲಿ ಗದ್ಯ ಪದ್ಯದ೦ತೆ ಅನ್ನಿಸಿರಬಹುದು. ಎಲ್ಲಕ್ಕಿಂತ ಹೆಚ್ಚಾಗಿ ಪ್ರತಿಮೆಯ ಅನಾವರಣ ಮೈ ನವಿರೇಳಿಸುತ್ತದೆ.ಅವಧಿಯಲ್ಲಿ ಪ್ರಕಟವಾಗಿದ್ದಕ್ಕೆ ಅಭಿನಂದನೆಗಳು.

    ಪ್ರತ್ಯುತ್ತರಅಳಿಸಿ
  17. ಪಾಪ ಉಸಿರಾಡುತಿದೆ ಈಗೀಗ
    ಆವನಿಲ್ಲದ ಕಾಡು...

    ತುಂಬಾ ಚೆನ್ನಾಗಿ ಬರೆದಿದ್ದೀರಾ, ಈ ಸಾಲು ತುಂಬಾ ಹಿಡಿಸಿತು. ವೀರಪ್ಪನ್ ಮಾಡಿದ ಅನ್ಯಾಯಗಳ ಮೆಲುಕು ಹಾಕಿದಂತಾಯಿತು.

    ಪ್ರತ್ಯುತ್ತರಅಳಿಸಿ
  18. ಅರೆರೆರೆ...ಎನ್ನಡಾ ಇದು ಕನ್ನಡತ್ತಿಲೆ ಒರು ಅಳ್ಗಾನ ಪುಯ್ಯೆಂ ಎಳೆದಿರ್ಕಿರಾಂ ನಮ್ಮ ಬದ್ರಿಯಪ್ಪಾ.... ಅಡಾ ಅಡಾ ಅಡಾ..ಅಂಡವನೇ...
    ..ಇದು ವೀರಪ್ಪನ್ ಮೇಲಿಂದ (ಗೊತ್ತಿಲ್ಲ ಕೆಳಗಿಂದ ಇದ್ರೂ ಇರಬೌದು) ಹೇಳೋ ಮಾತುಗಳು ನಿಮ್ಮ ಕವನ ನೋಡಿ...

    ಪ್ರತ್ಯುತ್ತರಅಳಿಸಿ
  19. fantastic..... tumbaa ishtavaaytu kavanada vastu haagu hiDiti.... badariavare abhinandanegaLu :-)

    ಪ್ರತ್ಯುತ್ತರಅಳಿಸಿ
  20. ಬದರೀ ಸರ್,

    ವೀರಪ್ಪನ್ ಎಂಬಾತ ಒಬ್ಬ ಇದ್ದಿದ್ದ ಎಂಬುದನ್ನು ಮರೆತಿದ್ದೆ...ನೀವು ನೆನಪಿಸಿದಿರಿ....ಹೊಸ ಹೊಸ ವಿಷಯಗಳನ್ನು ಹುಡುಕಿ ಸುಂದರ ಕವನಗಳನ್ನು ಬರೆಯುವ ನಿಮ್ಮ ಪ್ರಯತ್ನ ಶ್ಲಾಘನೀಯ. ಮತ್ತೊಂದು ಸುಂದರ ಕವನ ಸರ್....ಧನ್ಯವಾದಗಳು...

    ಪ್ರತ್ಯುತ್ತರಅಳಿಸಿ
  21. ಅವನಿಲ್ಲದ ಕಾಡಿನಲ್ಲಿ ಅಲೆದಾಡಿದ್ದೇನೆ. ಅವನನ್ನು ಸೆರೆ ಇಟ್ಟಿದ್ದ ಜಾಗದಲ್ಲಿ ಓಡಾಡಿದ್ದೇನೆ, ಅವನು ಅಪಹರಿಸಿದ್ದ ಜನರೊಡನೆ ಮಾತಾಡಿದ್ದೇನೆ.ಆದರೆ ಇವೆಲ್ಲವನ್ನೂ ಮತ್ತೊಮ್ಮೆ ನೆನಪಿಗೆ ತಂದಿತು ನಿಮ್ಮ ಕವಿತೆ.ಕಾಡಿನ ವರ್ಣನೆ, ಅವನ ಕ್ರೂರತೆ, ಪೋಲಿಸ್ ಅಧಿಕಾರಿಗಳ ಮಾರಣ ಹೋಮ,ಎಲ್ಲವೂ ಸೇರಿ ಪೂರ್ಣ ವೀರಪ್ಪನ್ ಚಿತ್ರಣವನ್ನು ಕವಿತೆ ಯಲ್ಲಿ ಕಟ್ಟಿ ಕೊಟ್ಟಿದ್ದೀರ . .......ಆದರೂ ಅವನು ಇದ್ದಿದ್ದರೆ ......???? ಅರಣ್ಯ ......ಯಾಗಬಹುದಿತ್ತೇನೋ.!!!!.

    ಪ್ರತ್ಯುತ್ತರಅಳಿಸಿ
  22. ಲೇಖಕರು ಈ ಕಾಮೆಂಟ್‌ ಅನ್ನು ತೆಗೆದು ಹಾಕಿದ್ದಾರೆ.

    ಪ್ರತ್ಯುತ್ತರಅಳಿಸಿ
  23. ಲೇಖಕರು ಈ ಕಾಮೆಂಟ್‌ ಅನ್ನು ತೆಗೆದು ಹಾಕಿದ್ದಾರೆ.

    ಪ್ರತ್ಯುತ್ತರಅಳಿಸಿ
  24. 'ಘೀಳಿಟ್ಟು ಅತ್ತ ಆನೆಗಳೇ ಮುದಿಬಿದ್ದು
    ಮರೆತಿವೆ ಕಳಕೊಂಡ ತಮ್ಮ ದಂತ,
    ಚಿಗುರೊಡೆದು ನಳನಳಿಸಿದೆ ಶ್ರೀಗಂಧ...'
    'Public memory is short' ಅನ್ನೊದನ್ನ ಈ ಸಾಲುಗಳು ಸಾರುತ್ತಿವೆ ಬದರಿ ಸರ್. ನಿಮ್ಮ ಕವನಗಳಲ್ಲಿನ ಕೆಲವು ಸಾಲುಗಳು ಮನಸ್ಸಿನ ಮೇಲೆ ತುಂಬಾ ಪ್ರಭಾವ ಬೀರುತ್ತವೆ.

    ಪ್ರತ್ಯುತ್ತರಅಳಿಸಿ
  25. ನರಹಂತಕನ ಅಟ್ಟಹಾಸದಿಂದ ಬೆಂದ ಕಾಡಿನ ಚಿತ್ರಣ.
    ಕೊನೆಯಲ್ಲಿ ಒಂದು ನಿಟ್ಟುಸಿರು
    "ಪಾಪ ಉಸಿರಾಡುತಿದೆ ಈಗೀಗ
    ಆವನಿಲ್ಲದ ಕಾಡು..."

    ಚೆನ್ನಾಗಿದೆ ಗುರುಗಳೇ...

    ಪ್ರತ್ಯುತ್ತರಅಳಿಸಿ
  26. ''ಪಾಪ '' ....
    "ಉಸಿರಾಡುತಿದೆ
    ಈಗೀಗ
    ಅವನಿಲ್ಲದ ಕಾಡು ..
    ಮತ್ತೊಮ್ಮೆ .... ವೀರಪ್ಪನ್ ನನ್ನು ಸಮಗ್ರವಾಗಿ ತಿಳ ಕೊಂಡನ್ತಾಯಿತು ..
    ಕಣ್ಣ ಮುಂದೆ ತುಂಬಾ
    ಗಿರಿಜಾ ಮೀಸೆ
    ಆನೆ ದಂತ
    ನಕ್ಕೀರನ್
    ಪೋಲೀಸ್ ಹತ್ಯೆ......
    ಅವನೇ ಅಲ್ಲವೇ ವೀರಪ್ಪನ್ ....
    ಆದ್ರೆ ... ಒಬ್ಬ ಸುಳ್ಳು ಸುಳ್ಳೇ ವೀರಪ್ಪನ್ ಮರಣಿಸಿದ್ದಾನೆ ...
    ಆದ್ರೆ ಎಷ್ಟೋ ನಿಜ್ಜಾನೆ ನಿಜ ವೀರಪ್ಪನ್ ಗಳು ನಮ್ಮನ್ನು ಆಳುತ್ತಿದ್ದ್ದಾರೆ ಮತ್ತು ಅಳಿಸುತ್ತಿದ್ದಾರೆ
    ಅಷ್ಟೇ ಯಾ
    ಒಂದು ಉತ್ತಮ ವಸ್ತುವುಳ್ಳ ಪ್ರಚಲಿತತೆಗೆ ಸಮೀಪವಿರುವ ಕವನ ಓದಿಸಿದ್ದಕ್ಕೆ ಧನ್ಯವಾದಗಳು ಸರ್ .."

    ಪ್ರತ್ಯುತ್ತರಅಳಿಸಿ
  27. ನೀವು ಕೈಗೊಳ್ಳುವ ಪ್ರತಿಮೆಗಳ ಅನಾವರಣ ಅರ್ಥೈಸಿಕೊಳ್ಳುವುದು ಸಾಮಾನ್ಯ ಓದುಗನಾದ ನನಗೆ ಬಹಳ ಕಷ್ಟ.

    ಈ ರಚನೆಯೊಳಗೆ ಕೊನೆಯ ಸಾಲಿನ ನಿಟ್ಟುಸಿರು ಬಹು ಸೂಕ್ತವೆನಿಸಿತು.

    ಬಹುಷಃ ಒಂದು ಭೀಕರತೆಯನ್ನು ಎದುರಿಸಿ ನಿಂತ ನಾವುಗಳು ಆ ಭಯಾನಕ ಸರಣಿಯೊಳಗಿನ ಊಹಾಪೋಹಗಳನ್ನು ದಂತಕತೆಯಾಗಿ ಇಂದಿಗೂ ನೆನಪಿಸಿಕೊಳ್ಳಬೇಕೇ ವಿನಹ ಅದರ ಸತ್ಯಾಸತ್ಯತೆ ಕಾಡಿನೊಳಗಿನ ಜೀವಸಂಕುಲಗಳಷ್ಟೇ ಅಭೇದ್ಯವೆನಿಸಿತು. ಸತ್ಯ ಎಲ್ಲೋ ಪೊದೆಯೊಳಗೆ ಅವಿತುಕೊಂಡಂತೆ ಭಾಸ. ಕಾಡುವವು ಅವನಿಲ್ಲದ ಕಾಡಿನೊಳಗಿನ ದಂತ ಕಳೆದುಕೊಂಡ ಆನೆಗಳ ನೋವಿನಂತೆ!

    ಉತ್ತಮ ರಚನೆ ಬದರಿ ಸರ್

    ಪ್ರತ್ಯುತ್ತರಅಳಿಸಿ
  28. ಬದರಿನಾಥರೆ,
    ಒಬ್ಬ ವಿಲನ್ ಸಹ ಒಂದು ಸುಂದರ ಕಾವ್ಯಕ್ಕೆ ಕಾರಣನಾಗಬಲ್ಲ ಎನ್ನುವುದನ್ನು ಈ ಕವನ ಬಿಂಬಿಸುತ್ತದೆ. ‘ಆತ’ ಭೌತಿಕ ಕಾಡಿನಿಂದ ಮರೆಯಾದರೂ ಸಹ ನಮ್ಮ ಮನದ ಕಾಡಿನಲ್ಲಿ ಉಳಿದೇ ಬಿಟ್ಟಿದ್ದಾನೆ,ಅಲ್ಲವೆ?

    ಪ್ರತ್ಯುತ್ತರಅಳಿಸಿ
  29. ವೀರಪ್ಪನ್ ಅಂದ್ರೆ , ನಾವು ಚಿಕ್ಕ ವಯಸ್ಸಲ್ಲಿ , ಕಳ್ಳ ಪೋಲೀಸ್ ಆಡುವಾಗ , ಒಂದು ಮಾತ್ರ ಮಾಡುತ್ತಿದ್ದೆವು .. ಅದರಲ್ಲಿ ಚೀಟಿ ಹಾಕಿ , ಕಳ್ಳರ ಹೆಸರು ಬರೆದು , ಪೋಲೀಸ್ ಹೆಸರು ಬರೆದು , ಆಮೇಲೆ ಯಾರು ಯಾರಿಗೆ ಹಿಡಿಯಬೇಕು ಅನ್ನೋ ನಿರ್ಧಾರ ಮಾಡ್ತಾ ಇದ್ವಿ.. ಆ ಹಳೆಯ ಕಥೆಯಲ್ಲಾ ನೆನಪಾಯಿತು ಸರ್.. ನಿಮ್ಮ ಈ ಕವಿತೆಯ ಓದುತ್ತ ನೆನಪುಗಳ ಪುಟಗಳು ತೆರೆದುಕೊಳ್ಳುತ್ತಿವೆ .. :)

    ಪ್ರತ್ಯುತ್ತರಅಳಿಸಿ
  30. ಅವನಿರದ ಕಾಡು ವನ್ಯಜೀವಿಗಳು ನಿರಾಯಾಸವಾಗಿ ಬದುಕುವ ಹಾಡು..... ಹೀಗೆ ಇದ್ದಿದನ್ನು ಹಾಗೆ ಮನಃಪಟಲದಕ್ಕೆ ತೆರೆದಿಟ್ಟ ನಿಮ್ಮ ಕವನಕ್ಕೆ ಶರಣು.... ತುಂಬಾ ಚನ್ನಾಗಿ ತೆರೆದಿಟ್ಟ ಇತಿಹಾಸದ ಪುಟ. 👌👍👌👍

    ಪ್ರತ್ಯುತ್ತರಅಳಿಸಿ
  31. ಬದರಿ ನಿಜಕ್ಕೂ ಬ್ಲಾಗ್ ವನದಲ್ಲಿರುವ ವೀರಪ್ಪನಪ್ಪನಂಥರನ್ನು ಹೇಗೆ ಬಗ್ಗು ಬಡಿಯಬೇಕೋ ತಿಳಿಯುತ್ತಿಲ್ಲ...ಸೃಜನ ಸಾಮರ್ಥ್ಯ ಕೇವಲ ಅವರಿವರ ಪೋಸ್ಟ್ಗಳಿಗೆ ಉತ್ತರಿಸುವ T-20 ಆಗಿದೆ.

    ಪ್ರತ್ಯುತ್ತರಅಳಿಸಿ