Tuesday, July 31, 2012

ಗುಬ್ಬಚ್ಚಿಯ ಗೂಡು -1


ನಾನು ಮದುವೆಗೆ ಮುಂಚೆ ಮಲ್ಲೇಶ್ವರಂ ಸರ್ಕಲ್ ಹತ್ತಿರ, ನನ್ನ ನೆಚ್ಚಿನ ನಟಿ ಸುಧಾರಾಣಿಯವರ ಮನೆ ಪಕ್ಕದಲ್ಲಿ ಚಿಕ್ಕ ರೂಮಿನಲ್ಲಿದ್ದೆ.

ಅದಕ್ಕೆ ನಾನು ಇಟ್ಟ ಹೆಸರು "ಗುಬ್ಬಚ್ಚಿಯ ಗೂಡು" ಅಂತ.

ಇದೇ ಗುಬ್ಬಚ್ಚಿ ಗೂಡಿನಲ್ಲಿ ರಾಮ ಸೀತೆ ಅಂತ ಎರಡು ಗಿಣಿಗಳೂ, ಚಿನ್ನಿ ಅಂತ ಒಂದು ಮುದ್ದಾದ ಪಾಮೋರಿಯನ್ ನಾಯಿ ಹಾಗೂ ಹೆಸರು ಗೊತ್ತಿರದ ಜಿರಲೆ ಪರಳೆಗಳನ್ನೂ ಸಾಕಿದ್ದೆ. ಮೊನಲಿಸಾ ಮತ್ತು ಬರ್ಮಾ ಬಜಾರಿನ ಹಲವು ಮಾಲುಗಳು ನನ್ನ ರೂಮಿನಲ್ಲಿ ತುಂಬಿ ಹೋಗಿದ್ದವು.

ಅದು ೧೨ ರೂಮುಗಳಿದ್ದ ಮಹಡಿ, ಕೆಳಗೆ ಮನೆಯ ಓನರ್ ನಾಗಪ್ಪನವರ ಕುಟುಂಬದ ವಾಸ. ನಾಗಪ್ಪನವರು ಇಸ್ಪೀಟ್ ಹುಚ್ಚಿನ ವಯೋವೃದ್ಧ. ಆಗ ಅವರದೇ ವಯೋಮಾನದ ಮುದುಕರ ಪಡೆಯೊಂದು ಅವರ ಜೊತೆ ರಮ್ಮಿ ಆಡಲು ಬರುತ್ತಿತ್ತು.

ನೀರು ಬಿಡುವವ ಜೊತೆ ಸರಿಯಾಗಿ ವ್ಯವಹಾರ ಕುದುರಿಸದ ಮನೆ ಮಾಲಿಕನಿಂದಾಗಿ, ವಾರಕ್ಕೊಂದು ಬಾರಿ ಬೆಳಗಿನ ಜಾವಕ್ಕೆ ಸಣ್ಣದಾಗಿ ಬರುತ್ತಿದ್ದ ನೀರನ್ನೇ ಹಿಡಿದಿಟ್ಟುಕೊಳ್ಳುತ್ತಿದ್ದೆ. ಮಿಕ್ಕದಿನ ರಸ್ತೆ ಮೂಲೆಯ ಕೈ ಪಂಪೇ ಗತಿ!

ಇಲ್ಲಿದ್ದಾಗಲೇ ನನಗೂ ಮದುವೆಯಾಗಿ, ನನ್ನ ಮಡದಿಯನ್ನೂ ಮನೆ ತುಂಬಿಸಿಕೊಳ್ಳ ಬೇಕಾಯಿತು. ಆ ಪುಟ್ಟ ಜಾಗದಲ್ಲೇ ಪಂಪ್ ಸ್ಟೌವ್ ಇಟ್ಟುಕೊಂಡು ಸುಮಾರು ಇಪ್ಪತ್ತು ದಿನ ನನ್ನ ಮೇಲೆ ಹಲ ರೀತಿಯ ಉಪ್ಪಿಟ್ಟುಗಳನ್ನು ನನ್ನವಳು ಪ್ರಯೋಗಿಸಿದಳು! ಬರೀ ಹೋಟೆಲುಗಳಲ್ಲೇ ತಿನ್ನುತ್ತಿದ್ದ ನನಗೆ ತರೇವಾರಿ ಉಪ್ಪಿಟ್ಟುಗಳೇ ಗತಿಯಾಯಿತು.

ಒಮ್ಮೆ ನನ್ನವಳು ಜಪಾತಿ ಮಾಡಿದ್ದಳು, ಅದನ್ನು ನಾವು ಆನಂತರ ಕುಕ್ಕರಿನಲ್ಲಿ ಬೇಯಿಸಿಯೇ ತಿನ್ನಬೇಕಾಯಿತು. ಈಗ ಬಿಡಿ ನನ್ನಾಕೆ ಪಾಕ ಪ್ರವೀಣೆ. ನನ್ನ ಭೀಮಾಕಾರದ ಹೊಟ್ಟೆ ನೋಡಿದರೆ ನಿಮಗೆ ಅರ್ಥವಾದೀತು ಅಲ್ವೇ?

ಮದುವೆಗೂ ಮುಂಚೆ ಗೋಡೆಯನ್ನು ಅಲಂಕರಿಸಿದ್ದ ಸಮಂತಾಫಾಕ್ಸ್, ರಾಣಿ ಮುಖರ್ಜಿ ಮರೆಯಾಗಿ, ರಾಘವೇಂದ್ರ ಸ್ವಾಮಿ ಮತ್ತು ತಿರುಪತಿ ವೆಂಕಟೇಶ್ವರ ರಾರಾಜಿಸತೊಡಗಿದರು. ಸಿಗರೇಟ್ ಹೊಗೆಯ ಜಾಗದಲ್ಲಿ ಘಮಘಮ ಊದು ಬತ್ತಿ.

ನಮಗೇ ಜಾಗವಿರದ ಆ ಪುಟ್ಟ ಕೊಠಡಿಯಲ್ಲಿ ಪ್ರೀತಿಯು ಮಾತ್ರ ಬೆಟ್ಟದಷ್ಟಿತ್ತು. ಯಾಕೋ ನನ್ನ ಬದುಕಿನ ಈ ಪುಟ ಈವತ್ತು ತೀವ್ರವಾಗಿ ಕಾಡಿತು.
ಗಲ್ಫ್ ಕನ್ನಡಿಗದಲ್ಲಿ ಪ್ರಕಟಿತ.
http://gulfkannadiga.com/news/culture/4487.html

14 comments:

 1. ಚೆನ್ನಾಗಿದೆ ಬರಹ. ಅಕ್ಕನ ಅಡುಗೆಯ ತಾಕತ್ತು ನಿಮ್ಮ ಹೊಟ್ಟೆ ನೋಡಿದಾಗ ಗೊತ್ತಾಯಿತು. :)

  ReplyDelete
 2. ನಿಮ್ಮಲ್ಲಿ ಸುಂದರ ನೆನಪುಗಳ ಆಗರವಿದೆ ಎನಿಸುತ್ತಿದೆ. ಕವಿತೆಗಳಿಗೆ ಒಂಚೂರು ಅರ್ಧ ವಿರಾಮವಿಟ್ಟು ನೆನಪುಗಳ ಸುರುಳಿಗಳನ್ನು ಹೀಗೆಯೇ ತೆರೆದಿಡಿ.. ಶುಭವಾಗಲಿ..

  ReplyDelete
 3. ಗುಬ್ಬಚ್ಚಿ ಗೂಡಲ್ಲಿ ಸಿಕ್ಕುವ ಪ್ರೀತಿ ಬಹಳ ಹಿತಕರ...
  ನಿಮ್ಮ ಮೇಲೆ ಪ್ರಯೋಗ ಆಗಿಯೂ ಕೂಡ ನೀವು ಇನ್ನು ಸುಂದರವಾಗಿರುವುದು ಚೆನ್ನು...
  ಸದಾ ಇರುವು ಕಾಡು ಮಲ್ಲೇಶ್ವರನ ಕೃಪೆ..
  ಮಡದಿಯ ಮಮಕಾರ
  ಬೆಚ್ಚನೆಯಾ ಗುಬ್ಬಚ್ಚಿ ಗೂಡು..ಇನ್ನೇನು ಬೇಕು...ಸಂತಸ ಜೀವನ...ಬದರಿ ಸರ್..
  ನಿಮ್ಮ ಲೇಖನ ಪ್ರೀತಿಯ ಉಲ್ಲೇಖ ಬಹಳ ಚೆನ್ನಾಗಿಯೇ ಮಾಡುತ್ತದೆ..

  ReplyDelete
 4. ಉತ್ತಮ ಬರಹವಿದು. ಬರಹ ಯಾವತ್ತಿಗೂ ಬಿಚ್ಚು ಮನಸ್ಸಿನಿಂದ ಸಂಪೂರ್ಣವಾಗಿ ತೆರೆದಂತೆ ಇರಬೇಕು ಅಂತ ಇಲ್ಲಿಂದ ಹೆಕ್ಕಿ ತೆಗೆಯುತ್ತೇನೆ. ಮನಸ್ಸು ಇನ್ನೊಂದು ಮಾತು ಮತ್ತೊಂದು ಇರದಂತಹ ಉತ್ತಮ ಸಾಲಿನಲ್ಲಿ ಸೇರುವ ಬರಹ.ಇಡಿ ಕಥೆ, ಅಥವ ಕಾದಂಬರಿ ಹೀಗೆ ಓದಿಸಿಕೊಂಡು ಹೋಗಬೇಕು. ಸಾದಾರಣವಾಗಿ ಎಷ್ಟೇ ಪ್ರಸಿದ್ದ ಬರಹಗಾರರ ಲೇಖನ ನನ್ನಲ್ಲಿ " ಓಘ" ಹಿಡಿದಿಡುವುದೇ ಇಲ್ಲ. ಕಾರಣ ಏನಾದರು ಒಂದು ಅಡ್ಡಾದಿಡ್ಡಿ ಅಲ್ಲಿ ಕಾಣುತ್ತೇನೆ.. ಆದರೆ ಇಲ್ಲಿರುವ " ಗುಬ್ಬಚ್ಚಿ ಗೂಡು" ಬೆಳಿಗ್ಗೆ ಕಚೇರಿಗೆ ಬಂದಾಕ್ಷಣ ಬೇರೆಲ್ಲಾ ಕೆಲಸವನ್ನು ಮರೆತು ಹಿಡಿದು ಕುಳ್ಳಿರಿಸಿತು. ಅದು ಶ್ರಮ, ತೆರೆದ ಮನಸ್ಸಿನ ನಿರೂಪಣಾ ತಂತ್ರ, ಅದಕ್ಕೆ ಎರಕ ಒಯ್ಯುವ ಬದುಕಿನ ಅನುಭವಗಳ ತೆರೆದ ಮಾತು. ಅಭಿನಂದನೆಗಳು ಬದರಿ ಸಾರ್.

  ReplyDelete
 5. ಬದರಿನಾಥರೆ,
  ಇದು ಮನಸ್ಸನ್ನು ಮುಟ್ಟುವ ವೃತ್ತಾಂತ. ಅಭಿನಂದನೆಗಳು.

  ReplyDelete
 6. ಚೆನ್ನಾಗಿದೆ ಸರ್.
  ಇನ್ನಷ್ಟು ಬರೀರಿ ಮಲ್ಲೇಶ್ವರದ ಬಗ್ಗೆ
  ಸುಧಾರಾಣಿ ಬಗ್ಗೆನೂ )
  ಸ್ವರ್ಣಾ

  ReplyDelete
 7. ಬದರಿ;ಬರಹ ಸುಂದರವಾಗಿದೆ.ಇನ್ನಷ್ಟು ನೆನಪುಗಳನ್ನು ನಮ್ಮೊಂದಿಗೆ ಹಂಚಿಕೊಳ್ಳಿ.

  ReplyDelete
 8. ನಾನು ಬಡವ ನೀನು ಬಡವಿ
  ಒಲವೇ ನಮ್ಮ ಬದುಕು

  ವಾಃ.. ಸುಂದರ ಅನುಭೂತಿಯ ಲೇಖನ.. :)

  ReplyDelete
 9. ಓದಿಸಿಕೊಂಡು ಹೋಯ್ತು
  ಅರ್ಧದಲ್ಲಿ ನಿಲ್ಲಿಸಿದಂತಾಯ್ತು!

  ReplyDelete
 10. ಹೀಗೇ ಪುಟ್ಟ ಪುಟ್ಟ , ನೆನಪಿನ ತುತ್ತನ್ನಾ ನಮಗೆ ತಿನ್ನಿಸ್ತಾ ಇರಿ ಸರ್ :-)):-))

  ReplyDelete
 11. ನೀವು ನಿಮ್ಮ ಅನುಭವಗಳ ನೆನಪಿನ ಗಂಟನ್ನು ತೆರೆದಿಟ್ಟಾಗ , ಇಲ್ಲಿ ಮತ್ತಷ್ಟು ಕೊತೂಹಲಗಳ ಸೃಷ್ಟಿಯಾಗಿದೆ .. ವಿಭಿನ್ನ ದೃಷ್ಟಿಕೋನಗಳಲ್ಲಿ ಚಿಂತನೆ ಮಾಡಿದಾಗ ಅದು ಅತೀ ಸುಲಭವಾಗಿ ಗೋಚರಿಸುತ್ತದೆ ... ಕಥೆಯ ನಿರೂಪಣಾ ಶಕ್ತಿಯ ಅದ್ಭುತವು ನಿಮ್ಮ ಬ್ಲಾಗಿನಲ್ಲಿ ಅಯಸ್ಕಾಂತವಾಗಿದೆ ಸರ್.. :)

  ReplyDelete