ಸೋಮವಾರ, ಅಕ್ಟೋಬರ್ 3, 2011

ಧಾಮದ ಹಂಗು...



ಬರುವಾಗಲೂ ಗೀಚಲಿಲ್ಲ ಕಾಗದ ಪತ್ರ
ತಂತಿ ಸಂದೇಶದ ರಗಳೆಗಳಿಲ್ಲ;
ಹೇಳಿ ಕೇಳಿ,
ಇದು ಖಂಡಾಂತರ ಹಾರು ಹಕ್ಕಿ...

ದಿಕ್ಕು ತಪ್ಪದ ತಲಮಾರು ಪಯಣ
ಪುಟ್ಟ ಮೆದುಳೆ ಅದರ ದಿಕ್ಸೂಚಿ
ಧಾಮಕ್ಕಿಳಿವ ಕರಾರುವಾಕು ಪ್ರಜ್ಞೆ,
ಅದಕೇಕೆ ಮರುಳುವಾಗಲೂ ಕೈ ಬೀಸೋ
ವಾಂಛೆ ಅಂಟು ಚಪಲ ಇನ್ನಿತರೇ?

ಯಾವ ರೆಡಾರು ತುಪಾಕಿಗೂ ಬೆದರ
ಗಡಿ ಭಾಷೆ ವೀಸಾ ಬೇಲಿ ಇವಕಿಲ್ಲ
ಇಳಿವ ಸುಂಕ, ಸ್ಥಳೀಯ ತೆರಿಗೆ ಸುಲಿಗೆ
ಮುಂಗಡ ಕಾಯ್ದಿರಿಸೋ ಪೊಗರು ತನದಲ್ಲ
ಯಾರ ಅನುಮತಿಗೂ ಕಾಯ,
ಹಾರುವುದಷ್ಟೇ ಕಾಯ...

ಪಕ್ಷಿಧಾಮದ ತುಂಬ ನೆಂಟರ ಕಲರವ
ಇಳಿದಲ್ಲೇ ಸಾರ್ವತ್ರಿಕ ಮಿಲನೋತ್ಸವ
ಸೂಲಗಿತ್ತಿಯು ನಾಸ್ತಿ
("ಸುಖಃ ಪ್ರಸವವೇ ಜಾಸ್ತಿ")
ಗೂಡು ಗೂಡಲ್ಲೂ ತತ್ತಿಯಿಂದ ಮರಿ...
ಗುಕ್ಕು ಕದಿಯುವರಿಲ್ಲ, ಅದರೂಟ ಇದಕೊಲ್ಲ
ಖುರ್ಚಿ ಎದ್ದೊಡೆ, ಕಾದು ಅಂಡೂರಲಿಲ್ಲ!

ಗುತ್ತಿಗೆ ಅವಧಿ ಮುಗಿದ ಕರಾರು...
ಮರಿ ಹಕ್ಕಿ ರೆಕ್ಕೆ ಬಲಿತರೆ
ಹಿಂಡು ವಾಪಸಾತಿಗೆ ತಯಾರು,
ಹೊರಡುವಾಗಲದು ತೀರಾ ನಮ್ಮಂತೆ
ತೆಗೆದಾವೇ ಮಾಲಿಕನ ಮುಂದೆ ತಕರಾರು?

ಅದೂ ನಿಜ ಬಿಡಿ,
ಹಕ್ಕಿಗೆಂಥಾ
ನೆಲದ ಹಂಗು?


(ಚಿತ್ರ ಕೃಪೆ : ಅಂತರ್ಜಾಲ)

17 ಕಾಮೆಂಟ್‌ಗಳು:

  1. ಹಕ್ಕಿಗಳ ವಲಸೆಯ ಸ೦ಪೂರ್ಣ ಚಿತ್ರಣವನ್ನು ಕೊಡುವ, ಅದಕ್ಕೆ ಮೀರಿದ ಮಾನವ ಕಟ್ಟುಪಾಡುಗಳು ಅವಕಿಲ್ಲದ ಪರಿಯ ತೆರೆದಿಡುವ ಅರ್ಥಪೂರ್ಣ ಸು೦ದರ ಕವನ ಬದರಿನಾಥ್ ಸರ್, ಅಭಿನ೦ದನೆಗಳು.

    ಪ್ರತ್ಯುತ್ತರಅಳಿಸಿ
  2. saar...
    vaav.................!!! annodu biTTu innenu bareyoke gottaagtilla......
    simply super......

    nimage idellaa hege hoLeyatte sir...

    ಪ್ರತ್ಯುತ್ತರಅಳಿಸಿ
  3. ಸ್ವಲ್ಪ ಅಪೂರ್ಣವೆನಿಸಿತು. ಕವನದ ಸಾಮಗ್ರಿ ಮತ್ತೆ ಶಬ್ಧಗಳು ಉತ್ತಮವಾಗಿದೆ ಪಲ್ಲವಳ್ಳಿ ಸರ್ :)

    ಅದೂ ನಿಜ ಬಿಡಿ,
    ಹಕ್ಕಿಗೆಂಥಾ
    ನೆಲದ ಹಂಗು?... :)

    ಪ್ರತ್ಯುತ್ತರಅಳಿಸಿ
  4. ಬದರಿ ಸರ್...

    ವಾಹ್ !!
    ಅದು ಹೇಗೆ ಬರೆಯುತ್ತೀರಿ? ಸುಂದರ ಕಲ್ಪನೆ...!

    ಎಂದಿನಂತೆ ನನಗಿಷ್ಟವಾಯಿತು...

    ನಿಮ್ಮದೊಂದು ಪುಸ್ತಕ ಬರಲಿ ಸರ್...

    ಪ್ರತ್ಯುತ್ತರಅಳಿಸಿ
  5. ಅದೆಷ್ಟು ಚೆನ್ನಾಗಿ ಕವನಿಸಿಕ್ಕೊಂಡು ಹೋಗಿದ್ದಿರ ಸರ್..?ಸೂಪರ್..

    ಪ್ರತ್ಯುತ್ತರಅಳಿಸಿ
  6. ಸುಂದರವಾದ ಕವನ.
    ಕೆಲವು ಚುರುಕು ಸಾಲುಗಳು ಮನಮುಟ್ಟಿತು:

    ಯಾರ ಅನುಮತಿಗೂ ಕಾಯ,
    ಹಾರುವುದಷ್ಟೇ ಕಾಯ...


    ಅದೂ ನಿಜ ಬಿಡಿ,
    ಹಕ್ಕಿಗೆಂಥಾ
    ನೆಲದ ಹಂಗು?

    ಸೊಗಸೇ ಸೊಗಸು... ಬರೆಯುತ್ತಿರಿ

    ಪ್ರತ್ಯುತ್ತರಅಳಿಸಿ
  7. ವಾವ್ ಸುಂದರ ಕವನ ಪಲವಲ್ಲಿ ಸರ್ , ರಂಗನ ತಿಟ್ಟಿನ ಪಕ್ಷಿ ಸಂಕುಲದ ಪರವಾಗಿ ನಿಮಗೊಂದು ಪ್ರೀತಿಯ ಸಲಾಂ. ನನಗೆ ಇಷ್ಟವಾದ ಸಾಲುಗಳು ಇಲ್ಲಿವೆ ..............ಯಾವ ರೆಡಾರು ತುಪಾಕಿಗೂ ಬೆದರ
    ಗಡಿ ಭಾಷೆ ವೀಸಾ ಬೇಲಿ ಇವಕಿಲ್ಲ
    ಇಳಿವ ಸುಂಕ, ಸ್ಥಳೀಯ ತೆರಿಗೆ ಸುಲಿಗೆ
    ಮುಂಗಡ ಕಾಯ್ದಿರಿಸೋ ಪೊಗರು ತನದಲ್ಲ
    ಯಾರ ಅನುಮತಿಗೂ ಕಾಯ,
    ಹಾರುವುದಷ್ಟೇ ಕಾಯ.............................................ನಿಮಗೆ ಜೈ ಹೋ ಸರ್.

    ಪ್ರತ್ಯುತ್ತರಅಳಿಸಿ
  8. ಇದೀಗ ತಾನೇ ರೆಕ್ಕೆ ಬಲಿತ ಹಕ್ಕಿಯ ಜಗತ್ತು. ಹಂಗಿನ ಬದುಕು ವಿಸ್ತಾರದಲ್ಲಿ ಹುದುಗಿಸಿಕೊಳ್ಳಲು ಹೆಣಗಿದ ಪದಗಳ ಪಂಜರ ಚೆನ್ನಾಗಿದೆ. ಹಕ್ಕಿಯ ಭಾಗ್ಯ ನನಗೆ ಬೇಕಿತ್ತು ಅಂತ ಹಲವು ಬಾರಿ ಆಲೋಚಿಸಿದ್ದೆ. ನಿದ್ದೆಯ ಲೋಕದಲ್ಲಿ ರೆಕ್ಕೆ ಬಂದು ಎಲ್ಲೆಂದರಲ್ಲಿ ಸುತ್ತಾಡಿದ ಸಂತಸದ ದಿನಗಳುಂಟು.ಹಕ್ಕಿಗೆಂಥ ಭಾಗ್ಯ ಆಗಸದಲ್ಲಿ ಹಕ್ಕುಂಟು,ನೆಲದಲ್ಲಿಯೂ ಹಕ್ಕುಂಟು.ಮನುಷ್ಯನ ಬದುಕು ತುಂಡು ಭೂಮಿಗಾಗಿ ರಕ್ತಸಂಬಂಧಿಗಳಲ್ಲೆ ಹೊಡೆದಾಡಿ ಮತ್ತೆ ಹೆಣಕ್ಕಾಗಿ ಹಿಡಿ ಮಣ್ಣಿನ ಋಣವನ್ನೂ ತೀರಿಸಲಾಗದ ನತದೃಷ್ಟ ಬದುಕು.
    ನಿಮ್ಮ ಕವಿತೆ ಚೆನ್ನಾಗಿದೆ ಬದ್ರಿನಾಥ್‍ ಸರ‍್.

    ಪ್ರತ್ಯುತ್ತರಅಳಿಸಿ
  9. ಆಹಾ ಅದ್ಭುತ ... ಪದಗಳು ಸಿಗುತ್ತಿಲ್ಲ ಬದರಿ ...
    ಜಿ.ವಿ. ಜಯಶ್ರೀ

    ಪ್ರತ್ಯುತ್ತರಅಳಿಸಿ
  10. ಬದರಿ;'ಹಾರುವ ಹಕ್ಕಿಗೆಂತಹ ನೆಲದ ಹಂಗು ಬಿಡಿ!'
    ಇಂತಹ ಪದಗಳು ಬದರಿಯಿಂದ ಮಾತ್ರ ಬರಲು ಸಾಧ್ಯ.ನಿಮ್ಮ ಕವಿತೆಗಳನ್ನು ತಲೆ ಮೇಲಿಟ್ಟುಕೊಂಡು ಖುಶಿಯಿಂದ್ ಒಂದು 'ಭಾಂಗ್ರ ಡ್ಯಾನ್ಸ್'ಮಾಡಬೇಕು.ಬೇಗ ಒಂದು ಸಂಕಲನ ಹೊರತನ್ನಿ.

    ಪ್ರತ್ಯುತ್ತರಅಳಿಸಿ
  11. ಒಳ್ಲೆಯ ಕಾನ್ಸೆಪ್ಟ್ ಅನ್ನು ಆಯ್ದು ಕೊ೦ಡಿದ್ದೀರಿ. ಶಬ್ದಪ್ರಯೋಗ ಕೂಡ ತು೦ಬಾ ಇಷ್ಟವಾಯಿತು, ನೈಜತೆಯ ಚಿತ್ರಣ ಕೂಡ ತು೦ಬಾ ಕಷ್ಟದ ಕೆಲಸವೇ.. ಅಭಿನ೦ದನೆಗಳು ಬದರೀ ಸರ್.

    ಅನ೦ತ್

    ಪ್ರತ್ಯುತ್ತರಅಳಿಸಿ
  12. ಕವನ ಸಮರ್ಥವಾಗಿದೆ ಬದರಿ ಸರ್. ಎಲ್ಲೋ ಮೊದಲು ಓದಿದಾಗ ಹಾಗನ್ನಿಸಿದ್ದಿರಬೇಕು . ಚೆನ್ನಾಗಿದೆ.

    ಪ್ರತ್ಯುತ್ತರಅಳಿಸಿ
  13. ಹಕ್ಕಿ ವಲಸೆಯ ಚಿತ್ರನದೊಡನೆ ಮಾನವನ ಕಟ್ಟುಪಾಡಿನ ಯಾಂತ್ರಿಕ ಜೀವನದೊಂದಿಗೆ ಸೋತುಲಿತ ಹೋಲಿಕೆ ಅದ್ಭುತ ಕಾವ್ಯದ ಜೀವಾಳ.

    ಪ್ರತ್ಯುತ್ತರಅಳಿಸಿ
  14. ಧಾಮದ ಹಂಗಿಲ್ಲದೆ ಬದುಕುವಂತಿದ್ದರೆ ನಾವುಗಳೂ...
    ಕೆಲವೇ ಕಾಲವಾದರೂ...
    ಚೆನ್ನಾಗಿದೆ...ಇಷ್ಟವಾಯಿತು...

    ಪ್ರತ್ಯುತ್ತರಅಳಿಸಿ