ಭಾನುವಾರ, ಫೆಬ್ರವರಿ 16, 2014

ಬೇಡದ ಉಸಾಬರಿ...

ವನು ಸುಮ್ಮನೆ ಇದ್ದರೂ ಆಗುತ್ತಿತ್ತು, ತೀರಾ ಹಾದಿಯಲ್ಲಿ ತನ್ನ ಪಾಡಿಗೆ ತಾನು ಹೊರಟಿದ್ದ ಮಾರಿಯನ್ನು ಮನೆಯೊಳಗೆ ಎಳೆದುಕೊಂಡ ಪರಿಸ್ಥಿತಿ ಅವನದು. 

ನಗರಗಳಲ್ಲಿ ನೆರೆ ಮನೆಯವರ ಪರಿಚಯವೇ ಇಲ್ಲದೆ ವರ್ಷಾನುಗಟ್ಟಲೆ ಬದುಕಿ ಬಿಡುವ ಬಹುಪಾಲು ಜನರಿದ್ದಾರೆ. ಕಾಲ ಪಕ್ಕದಲ್ಲೇ ರಣಘೋರ ಯುದ್ಧಗಳೇ ನಡೆದರೂ ಅತ್ತಕಡೆ ಎಡ ಕಣ್ಣೂ ಬೀರದೆ ನಡೆದು ಬಿಡುವ ಭೂಪರಿದ್ದಾರೆ. ಮನೆಯಲ್ಲಿ ಹೆತ್ತವರು ರೋಗಗ್ರಸ್ತರಾಗಿ ಮಂಚ ಹಿಡಿದು ಮಲಗಿ ಬಿಟ್ಟಿದ್ದರೂ ಸಂಬಂಧವೇ ಇಲ್ಲವೇನೋ ಎನ್ನುವಂತೆ ಹೊಟ್ಟೆ ತುಂಬ ಉಂಡು ಚಾದರ ಹೊದ್ದು ಮಲಗಿಬಿಡುವ ಅಭಿನವ ಶ್ರವಣಕುಮಾರರಿದ್ದಾರೆ ಕೋಟಿ ಕೋಟಿ ಮಂದಿ.

ಬುದ್ಧಿವಂತನಾದವನು ಮೊದಲು ಬದುಕಲು ಕಲಿಯ ಬೇಕು, ಅಂದರೆ ನೈಸಾಗಿ ಬದುಕಲು. ಬಾಯಿ ಮಾತಿನಲ್ಲೇ ಎವರೆಸ್ಟನ್ನು ತೋರಿಸಿ ಅದರ ಮೇಲೆ ಬಾವುಟವನ್ನೂ ನೆಡುವ ಜಾಣ್ಮೆ ಇರಬೇಕು ಎನ್ನುವ ಇಂದಿನ ಸರಳ ಸೂತ್ರವನ್ನೂ ಅರ್ಥಮಾಡಿಕೊಳ್ಳದೆ ಪಜೀತಿಗಳನ್ನು ಮೈಮೇಲೆ ಎಳೆದುಕೊಳ್ಳುವ ಪೆದ್ದುತನ ಬಹುಶಃ ನಮ್ಮ ಕಥಾ ನಾಯಕನಲ್ಲದೆ ಬೇರಾರೂ ಮಾಡಲಾರರೇನೋ?

ಅರೆ, ರಸ್ತೆ ಇರುವುದೇ ಅಪಘಾತಗಳಾಗಲು, ಸರ್ಕಾರಗಳು ಅವುಗಳನ್ನು ಮಾಡಿರೋದೇ ಅದಕ್ಕಾಗಿ, ಸತ್ತವರು ಸಾಯುತ್ತಾರೆ. ನತದೃಷ್ಟರು ಕೈಕಾಲು ಮುರಿದುಕೊಂಡು ಮನೆ ಸೇರುತ್ತಾರೆ. ಗುದ್ದಿದವನು ಚಾಕಚಕ್ಯತೆಯಿಂದ ಗಾಡಿ ಬಿಟ್ಟುಕೊಂಡು ಊರು ದಾಟುತ್ತಾನೆ, ಆದರೆ ಇವನಂತವರು ಒಂದು ಆಟೋ ಬೇರೆ ಗೊತ್ತು ಮಾಡಿಕೊಂಡು ಸರ್ಕಾರಿ ಆಸ್ಪತ್ರೆಗೆ ಸಾಗಿಸುತ್ತಾರೆ. 


ಲ್ಲಿಂದಲೇ ಕಥೆ ಮೊದಲು ಮಾಡೋಣವೆಂದರೆ ಸರಿಯಾಗಿ ಮನದಟ್ಟಾಗಲಾರದು ಅಮಾಯಕ ಓದುಗನಿಗೂ ಎಂದು ಇಷ್ಟೆಲ್ಲ ಪೀಠಿಕೆ ಒದರಬೇಕಾಯಿತು ಕಥೆಗಾರನೂ! 


***

ನಿರಂಜನ ಆ ಬೈಕು ಸವರಾರನ್ನು ಗಮನಿಸುವ ಹೊತ್ತಿಗೆ ಅದಾಗಲೇ ಯಾವುದೋ ದೊಡ್ಡ ವಾಹನ ಗುದ್ದಿ ಪರಾರಿಯಾಗಿತ್ತು. 


ನೆಲಕ್ಕೆ ಬಿದ್ದ ಸವಾರನ ದೇಹದಿಂದ ರಕ್ತವು ಹರೆದು ರಸ್ತೆಯಲ್ಲಿ ಮಡಗಟ್ಟಿತ್ತು. ಪುಣ್ಯಕ್ಕೆ ಇನ್ನೂ ಜೀವ ಹೋದಂತಿರಲಿಲ್ಲ. 

ಕೂಡಲೆ ಒಂದು ಆಟೋ ಗೊತ್ತು ಮಾಡಿಕೊಂಡು ಸರ್ಕಾರಿ ಆಸ್ಪತ್ರೆಗೆ ತಲುಪಿಕೊಂಡರು.  ದಾರಿ ಉದ್ದಕ್ಕೂ ಆಟೋ ಪೂರ ರಕ್ತ ಸೋರಿ ಹೋಗಿತ್ತು. 

ಸದ್ಯ ಆಸ್ಪತ್ರೆಯವರು ಹೆಚ್ಚಿನ ಪುರಾಣವನ್ನು ಕೇಳದೆ ಸವಾರನ್ನು ದಾಖಲು ಮಾಡಿಕೊಂಡರು ಅದೊಂದೇ ಪುಣ್ಯ. 

ನಿರಂಜನನ ಬಟ್ಟೆ ರಕ್ತಮಯವಾಗಿತ್ತು. ಅದರ ಪರಿವೆಯೂ ಅವನಿಗಿರಲಿಲ್ಲ. ಮೊದಲು ಸವಾರನ ಜೀವ ಉಳಿಯಲಿ ಎನ್ನುವ ಮಾನವೀಯತೆ ಆತನದು. ಸುಮಾರು ಹೊತ್ತಾದರೂ ಬೆಂಚಿನ ಮೇಲೆ ಕುಳಿತಿದ್ದ ಅವನಿಗೆ ಒಳಗೆ ಏನು ನಡೆಯುತ್ತಿದೆ ಎನ್ನುವುದೇ ಗೊತ್ತಾಗುತ್ತಿರಲಿಲ್ಲ. 

ಅವನು ಕುಳಿತಿದ್ದಂತೆಯೇ ಅವನ ಮುಂದೆಯೇ ಐದಾರು ಜನ ಪೊಲೀಸರು ಎಮರ್ಜೆನ್ಸೀ ವಾರ್ಡಿನ ಒಳಗೆ ಹೋದರು. ಅದರಲ್ಲೊಬ್ಬ ಹೊರಬಂದು "ನೀವೇ ಏನ್ರೀ ಕರ್ಕೊಂಡ್ಬಂದಿದ್ದು?" ಎಂದಷ್ಟೇ ಕೇಳಿ ಅಲ್ಲೇ ಕುಳಿತಿರಲು ಸೂಚಿಸಿ ಮತ್ತೆ ಒಳಗೆ ಹೋದ. 

ಸ್ವಲ್ಪ ಹೊತ್ತಿನ ನಂತರ, ಏಕಾ ಏಕಿ ಅಷ್ಟೂ ಜನ ಪೊಲೀಸರು ಹೊರಬಂದವರೇ ನಿರಂಜನನನ್ನು ಬಲವಂತವಾಗಿ ದಬ್ಬಿಕೊಂಡು ಠಾಣೆಗೆ ಎಳೆದೊಯ್ದರು. 

***

ಉಪ ಸಂಹಾರ: 

ದಿನೈದು ದಿನಗಳ ನಂತರ ಅದೇ ಆಸ್ಪತ್ರೆಯ ಅದೇ ಬಾಗಿಲಿನಿಂದ ಹೊರಬರುತ್ತಿದ್ದ ನಿರಂಜನ ಸಿಕ್ಕಿದ. ಕೈ ಕಾಲು ಮುಖಗಳು ಬಾತು ಹೋಗಿದ್ದವು. ಕೇಳುವ ಮೊದಲೇ ಅವನೇ ಹೇಳಿಕೊಂಡ. 

ಆ ಬೈಕು ಸವಾರ ಕೆಲ ಹೊತ್ತಿನ ಮುಂಚೆಯಷ್ಟೇ ಬಡಾವಣೆಯ ಯಾವುದೋ ರಸ್ತೆಯಲ್ಲಿ ವಾಯುವಿಹಾರಕ್ಕೆ ಹೊರಟಿದ್ದ ಮಹಿಳೆಯೊಬ್ಬರ ಮಾಂಗಲ್ಯ ಕಸಿದು ಪರಾರಿಯಾಗಿದ್ದ. ಅತೀ ವೇಗದಿಂದ ಓಡಿಹೋಗುತ್ತಿದ್ದ ಅವನ ಬೈಕಿಗೆ  ಲಾರಿಯೊಂದು ಗುದ್ದಿ ಬೀಳಿಸಿತ್ತು. 

ಈ ಸರಗಳ್ಳ ಇಡೀ ನಗರಕ್ಕೇ ಕುಖ್ಯಾತ. ಹತ್ತಾರು ಠಾಣೆಗಳ ಪೊಲೀಸರೂ ಇವನನ್ನು ಹುಡುಕುತ್ತಿದ್ದರಂತೆ. ಆವತ್ತು ಎಮರ್ಜೆನ್ಸೀ ವಾರ್ಡಿಗೆ ಬಂದ ಪೊಲೀಸರು ಬೈಕ್ ಸವಾರನ ದೇಹವೆಲ್ಲ ಜಾಲಾಡಿದರೂ, ಅವನು ಕೆಲ ಹೊತ್ತಿನ ಮುಂಚೆಯಷ್ಟೇ ಕದ್ದ ಸರ ಕಣ್ಣಿಗೆ ಬಿದ್ದಿರಲಿಲ್ಲ. 

ಆಸ್ಪತ್ರೆಗೆ ಸಾಗಿಸಿದ ನಿರಂಜನನೂ ಸರಗಳ್ಳನ ಪಾರ್ಟನರ್ ಇರಬಹುದೆಂದೂ, ಇವನನ್ನು ರುಬ್ಬಿದರೆ ಸದರೀ ಸರ ಮತ್ತು ಹಳೆ ಕದ್ದ ಮಾಲೂ ರಿಕವರ್ ಆಗಬಹುದೆಂದು ಗುಮಾನಿಯಿಂದ,  ಮರುದಿನ ಬೆಳಗಿನವರೆಗೂ ಪೊಲೀಸರು ಸರಿಯಾಗಿ ಲಾಠೀ ಬೀಸಿದ್ದಾರೆ.  ಎಷ್ಟೇ ಹೊಡೆದರೂ, ಹಣ್ಣುಗಾಯಿ ನೀರುಗಾಯಿ ಮಾಡಿದರೂ ತನಗೇನೂ ಗೊತ್ತಿಲ್ಲ ಎನ್ನುತ್ತಿದ್ದ ಕಥಾ ನಾಯಕನ್ನು ಕಡೆಗೆ ವಿಳಾಸ ಬರೆಸಿಕೊಂಡು ಮೊಬೈಲಿನಲ್ಲಿ ಫೋಟೋ ಕ್ಲಿಕ್ಕಿಸಿಕೊಂಡು ಬಿಟ್ಟು ಕಳುಹಿಸಿದ್ದಾರೆ. 



***
 
(ಅಂದಹಾಗೆ, ನಿರಂಜನನ ಕೈಲಿ ಫೋನಾಯಿಸಿ ಅವನ ಅಣ್ಣನನ್ನು ಠಾಣೆಗೆ ಕರೆಸಿಕೊಂಡ ಮೇಲೆಯೇ ಪೊಲೀಸರು ಅವನನ್ನು ಬಿಟ್ಟು ಕಳುಹಿಸಿದ್ದಾರೆ ಎಂಬುದಾಗಲೀ. ಈ ನಡುವೆ ನಿರಂಜನನ ಅಣ್ಣ ತನ್ನ ಹೆಂಡತಿಯ 60 ಗ್ರಾಮಿನ ಮಾಂಗಲ್ಯವನ್ನು ಪೇಟೇ ಬೀದಿಯ ಗಿರವೀ ಅಂಗಡಿಯಲ್ಲಿ ಗಿರವೀ ಇಡುತ್ತಿದ್ದದ್ದರೂ ಎನ್ನುವುದಾಗಲಿ ಅಂತಹ ಮುಖ್ಯ ಸಂಗತಿಗಳಲ್ಲ ಬಿಡಿ!) 


(ಚಿತ್ರಕೃಪೆ: ಅಂತರ್ಜಾಲ)

http://badari7.blog.com/?p=5

22 ಕಾಮೆಂಟ್‌ಗಳು:

  1. ನಗರದಲ್ಲಿ ಯಾರು ಒಳ್ಳೆಯವರು ಯಾರು ಕೆಟ್ಟವರು ಎನ್ನುವುದು ತಿಳಿಯುವುದಿಲ್ಲ...

    ಪ್ರತ್ಯುತ್ತರಅಳಿಸಿ
  2. ಹೀಗೂ.... ಉಂಟೇ.....? ಪರೋಪಕಾರ ಮಾಡಲು ಹೋಗಿ ನಿರಂಜನ ಅಂತವರು ಆರಕ್ಷಕರ ಅನುಮಾನಕ್ಕೆ ಗುರಿಯಾಗಿದ್ದು ಎಂತಹ ಧಾರುಣ....!!!

    ಪ್ರತ್ಯುತ್ತರಅಳಿಸಿ
  3. ಪಾಪ ನಿರಂಜನ... ಈಗಿನ ಕಾಲದಲ್ಲಿ ಯಾರಿಗೆ ಸಹಾಯ ಮಾಡಲೌ ಭಯವಾಗುತ್ತದೆ. ನಂಗಂತೂ ಇಂತಾ ಸಂದರ್ಭದಲ್ಲಿ ಸುಮ್ಮನಿದ್ದು ಬಿಡಲು ಒಂಥರ ಸಂಕಟ ಆಗುತ್ತದೆ. ನೈಜ ಕಥೆ .

    ಪ್ರತ್ಯುತ್ತರಅಳಿಸಿ
  4. ನಾವು ಅಪಘಾತವಾದ ಜಾಗದಲ್ಲಿ ಜನರು ಗುಂಪು ಕಟ್ಟಿ ನೋಡಿವುದನ್ನು ನೋಡಿ ಬೈಯುತ್ತೇವೆ, ಆದರೆ ಜನರಿಗೆ ಇಂತಹ ಸಮಸ್ಯೆ ಬರಬಹುದು ಅನ್ನುವುದು ತಿಳಿದೇ ದೂರವಿರುತ್ತಾರೆ ಅನ್ನುವುದು ತಿಳಿದು ಬರುತ್ತದೆ. ಏನೇ ಅಂದರು ಈಗಿನ ಕಾಲದಲ್ಲಿ ಒಳ್ಳೆಯದನ್ನು ಮಾಡಲು ಹೋದರೂ ಕಷ್ಟ , ಹೋಗಲಿಲ್ಲ ಅಂದರೆ ಮಾನವರಾಗಿ ಹುಟ್ಟಿ ಲಾಭವೇನು ಅನ್ನುವ ಮಾನವೀಯತೆಯ ಪ್ರಶ್ನೇ ? ಏನು ಮಾಡುವುದು ಏನು ಬಿಡುವುದು ಅನ್ನುವದೇ ಗೊಂದಲದ ವಿಷಯ. :(

    ಪ್ರತ್ಯುತ್ತರಅಳಿಸಿ
  5. ಬದರಿ ಅಣ್ಣ. ಮಾನವೀಯತೆ ಮೆರೆದು ಸಹಾಯ ಮಾಡುವುದೂ ಈ ಕಾಲಕ್ಕೆ ಪಾಪವೇ. ನಮ್ಮ ಕುತ್ತಿಗೆಗೆ ಬಂದುಬಿಡುತ್ತದೆ. ಇಂತಹ ಘಟನೆ ನನ್ನ ಸ್ನೆಹಿತನಿಗೂ ಆಗಿದೆ.

    ಪ್ರತ್ಯುತ್ತರಅಳಿಸಿ
  6. feeling sorry for Niranjan!
    ಒಳ್ಳೆಯದು ಮಾಡ್ಲಿಕ್ಕೆ ಹೋದವರ ಕಥೆಯಿದು....

    ಪ್ರತ್ಯುತ್ತರಅಳಿಸಿ
  7. ಸುಮ್ಮನಿರಲಾರದೆ ಇರುವೆ ಬಿಟ್ಟುಕೊಂಡಂತೆ ಆಯಿತು.... ಇದನ್ನು ಓದಿದಾಗ ನಮ್ಮಷ್ಟಕ್ಕೆ ನಾವು ಸುಮ್ಮನಿರುವುದೇ ಒಳ್ಳೆಯದೇನೋ ಎನಿಸುತ್ತದೆ......!!

    ಪ್ರತ್ಯುತ್ತರಅಳಿಸಿ
  8. ಕೊನೆಗೆ ಬ್ರಾಕೆಟ್ ನಲ್ಲಿ ಹೇಳಿದ್ದೀರಲ್ಲ (ಅಂದಹಾಗೆ, ... ), ಅದು ನೀವು ವಿವರಿಸಿರುವ ವಾಸ್ತವಕ್ಕಿಂತ ಸತ್ಯ. ಇಲ್ಲಿ ಪೋಲಿಸ್ ಲೋಕದ ದೃಶ್ಯವನ್ನು ಅಳವಡಿಸಿದ್ದೀರಿ ಅಷ್ಟೇ. ಯಾವುದೇ ಸಹಾಯಕ್ಕೆಂದು ನಿಲುವವರ ಹಿಂದೆಯೂ (ನಿರಂಜನ್ ಅಣ್ಣರಂತೆ) ಕಷ್ಟ ಅಟ್ಟಿಸಿಕೊಂಡು ಬರುತ್ತದೆ ಎಂದು ಕಥೆಯಲ್ಲಿ ಚೆನ್ನಾಗಿ ಹೇಳಿದ್ದೀರಿ.

    ಪ್ರತ್ಯುತ್ತರಅಳಿಸಿ
  9. ವಹ್ ಎಂಥ ಥ್ರಿಲ್ಲಿಂಗ್ ಕಥೆ ಬದರಿ ಅಣ್ಣ. ಬೆಂಗ್ಳೂರಂಥ ಊರುಗ್ಳಲ್ಲಿ ಈ ಸ್ಟೋರಿ ಪಕ್ಕ ಹೊಂದುತ್ತೆ ಬಿಡಿ :)

    ಪ್ರತ್ಯುತ್ತರಅಳಿಸಿ
  10. ಅಯ್ಯೋ ಪಾಪ ಕಥಾನಾಯಕ..... :(
    ಚೆನ್ನಾಗಿ ಬರೆದಿದ್ದೀರ ಸರ್ .....

    ಪ್ರತ್ಯುತ್ತರಅಳಿಸಿ
  11. :( ಏನು ಹೇಳೋದು ಸರ್ ...ಯಾರಿಗೋ ಒಳ್ಳೇದು ಮಾಡಕ್ಕೆ ಹೋಗಿ ಹೀಗೆಲ್ಲಾ ಆದ್ರೆ ಒಳ್ಳೆತನದ ಮೇಲಿನ ನಂಬಿಕೆ ಹೊರತು ಹೋಗತ್ತೆ.

    ಪ್ರತ್ಯುತ್ತರಅಳಿಸಿ
  12. ಮಾನವ ಯಾಕೆ ಯಾಂತ್ರಿಕ ನಾಗುತ್ತಿದ್ದಾನೆ ಎನ್ನುವ ಗೊಂದಲ ಹಲವರದ್ದು.. ನಮ್ಮ ಕಾನೂನುಗಳು ಏನೇ ಸೊಗಸಾಗಿ.. ಇದ್ದರೂ.. ಈ ಅಧಿಕಾರಶಾಹಿ ಅಧಿಕಾರಿಗಳು ಬಡವರನ್ನು.. ಅಸಾಹಯಕರನ್ನು.. ಸಾಮಾಜಿಕ ಕಾಳಜಿ ಉಳ್ಳವರನ್ನು ಗೋಳು ಹುಯ್ದುಕೊಳ್ಳುವ ಪರಿ.. ಇತರರನ್ನು ಇದರಿಂದ ಮುಖ ತಿರುಗಿಸಿಕೊಳ್ಳುವ ಹಾಗೆ ಮಾಡಿದೆ.

    ಮನಕ್ಕೆ ಘಾಸಿ ಮಾಡುವ ಲೇಖನ.. ಆದರೆ ಇಂದಿನ ಪರಿಸ್ಥಿತಿ ಹಾಗೆಯೇ ಇದೆ..

    ಪ್ರತ್ಯುತ್ತರಅಳಿಸಿ