ಭಾನುವಾರ, ಜನವರಿ 5, 2014

ಕರಗಿ ನೀರಾದಾಗ...

ಅಳುವಾಗ ಅತ್ತು ಬಿಡು
ನಗುವಾಗ ನಕ್ಕು ಬಿಡು 
ಎನ್ನುವುದು ಕವಿ ವಾಣಿ. 

ನಾವು ನಮ್ಮ ವಯಸ್ಸು, ಹುದ್ದೆ, ಸಾಮಾಜಿಕ ಸ್ಥಾನಮಾನ, ಬಿಗುಮಾನ, ಸ್ಥಳ ಮಹಿಮೆ ಹೀಗೆ ಹಲವು ಕಾರಣಗಳನ್ನೊಡ್ಡಿ ನಮ್ಮ ನಿಜ ಭಾವನೆಗಳನ್ನು ಪೊಳ್ಳು ಮುಖವಾಡವ ಹೊದ್ದು ಸಾಗಿಹಾಕಿಬಿಡುತ್ತೇವೆ.

ಹೀಗಾಗಿ ಭಾವನೆಗಳನ್ನು ಹುದುಗಿಸಿ ಹುದುಗಿಸಿ ನಾವು ನಮ್ಮದಲ್ಲದ ಬದುಕನ್ನು ಬದುಕುತ್ತಲೇ ಇರುತ್ತೇವೆ.

ಯಾವುದೋ ಸಿನಿಮಾದ ಸನ್ನಿವೇಶ ಅಥವಾ ಪುಸ್ತಕದ ಇನ್ಯಾವುದೋ ಸಾಲು ನಮ್ಮದೇ ಗತದ ಯಾವುದೋ ಅವ್ಯಕ್ತ ಸನ್ನಿವೇಶಕ್ಕೆ ತಳುಕಿ ಹಾಕಿದಂತಾಗಿ, ಮೂಲೆಯಲಿ ಎಂದೋ ಮರೆವಿನ ಹೊದಿಕೆ ಹೊದಿಸಿ ಮರೆತ ಮನೋ ವೀಣೆಯ ಕೈಗೆಟುಕದ ಆ ತಂತಿಯನು ಮೀಟಿದಂತಾಗಿ, ನಮ್ಮ ಅರಿವಿಗೂ ಮೀರಿ ಕಣ್ಣುಗಳು ಹನಿಗೂಡುತ್ತವೆ. ಅರೆರೆ... ಯಾಕೋ ಕಣ್ಣು ಮಂಜಾಯಿತಲ್ಲ ಎಂದು ಹೊಸಕಿಕೊಳ್ಳಲು ಹೋದರೆ ನೀರ ಪಸೆ!
ಹಿಂದೊಮ್ಮೆ ಮಕ್ಕಳ ಡ್ಯಾನ್ಸ್ ರಿಯಾಲಿಟಿ ಷೋ ಚಿತ್ರೀಕರಣ ಮಾಡುತ್ತಿದ್ದೆವು. ಕಾರ್ಯಕ್ರಮದ ನಿರೂಪಣೆ ಚಿತ್ರ ನಟ ನವೀನ್ ಕೃಷ್ಣ ಮತ್ತು ನಟಿ ಪ್ರಿಯಾಂಕ. ಆವತ್ತಿನ ಎಪಿಸೋಡಿಗೆ ನವೀನ್ ಕೃಷ್ಣ ಜೋಕರ್ ವೇಶ ಧರಿಸಿದ್ದರು. ಸಂಭಾಷಣೆ ಹೇಳುವುದರಲ್ಲಿ ಮತ್ತು ಕಾರ್ಯಕ್ರಮವನ್ನು ಸರಿ ತೂಗಿಸಿಕೊಂಡು ಹೋಗುವುದರಲ್ಲಿ ಅವರು ಎತ್ತಿದ ಕೈ.

ಕಾರ್ಯಕ್ರಮದ ಕಡೆಯಲ್ಲಿ ನಿರೂಪಕ ಯಾವುದಾದರೂ ಜನಪ್ರಿಯ ಗೀತೆಗೆ ನೃತ್ಯ ಮಾಡುವುದು ಆ ಷೋನ ಪದ್ದತಿ. ಅಂತೆಯೇ ಅವರು ಆದಿನ ನೃತ್ಯ ಮಾಡಿದ್ದು, ರಾಜ್ ಕಪೂರ್ ನಟಿಸಿದ ಜೋಕರ್ ಚಿತ್ರದ ’ಜೀನಾ ಯಹಾ ಮರನಾ ಯಹಾ’ ಹಾಡಿಗೆ.  ಯಾಕೋ ಕ್ಯಾಮರಾದ ಮೂಲಕ ಹಾಡು ಚಿತ್ರಿಸಿಕೊಳ್ಳುತ್ತಿದ್ದವನಿಗೆ out of focus ಎನಿಸುವಂತಾಯಿತು. ನೋಡಿದರೆ ನಾನೂ ಕಣ್ಣೀರಾಗಿದ್ದೆ. 


ಕಂಗಳೇ ಕರಗಿ ನೀರಾದಾಗ, ಕಾಣುವುದುಂಟೇನು
ತಿಂಗಳ ಬೆಳಕೆ ಬಿಸಿಲಾದಾಗ, ನೈದಿಲೆ ಗತಿಯೇನು

- ಚಿ. ಉದಯಶಂಕರ್

ಇಂದಿಗೂ ಟೀವಿಯಲ್ಲಾಗಲಿ, ನನ್ನ ಮೊಬೈಲಿನಲ್ಲಾಗಲಿ ತೆಲುಗು ಚಿತ್ರ ಅನ್ನಮಯ್ಯದ ಕಡೆಯ ಗೀತೆ ’ಅಂತರ್ಯಾಮಿ ಅಲಚಿತಿ’ ಅಥವಾ  ರಾಮದಾಸು ಚಿತ್ರದ ’ನನು ಬ್ರೋವಮನಿ ಚೆಪ್ಪವೇ’ ಎಂದು ಕೇಳಿದಾಗಲೆಲ್ಲ ಮನಸು ನೀರಾಗಿ ಹೋಗುತ್ತದೆ. ಗಾಯಕ ಎಸ್.ಪಿ.ಬಿ ಕಂಠ ಬಹುಶಃ ದೇವರಿಗೆ ನಿವೇದನೆ ಮಾಡಿಕೊಳ್ಳುವ ಗೀತೆಗಳಲ್ಲಿ ಹೆಚ್ಚು ಮೃದುವಾಗುತ್ತದೆ, ನಮ್ಮ ಮನಸ್ಸನ್ನೂ ಮೃದು ಮಾಡಿ ಹಾಕುತ್ತದೆ. ಆರ್ದ್ರತೆ ತುಂಬಿದ ಗೀತೆಗಳೆಂದರೆ ನನಗೆ ಮೊದಲಿಂದಲೂ ಮಹಾನ್ ಒಲವು.  ನನ್ನ ನೋವುಗಳನ್ನು ಭಗವಂತನಾದರೂ ಕೇಳಿಸಿಕೊಳ್ಳಲಿ ಎನ್ನುವುದು ನನ್ನ ಬಯಕೆ.

15 ಕಾಮೆಂಟ್‌ಗಳು:

  1. ಕೆಲವೊಂದು ಸನ್ನಿವೇಶಗಳು, ಪಾತ್ರಗಳು ನಮ್ಮೊಳಗಿನ ಅಂತಃಕರಣವ ಕರಗಿಸಿ; ನಾವೇ ಅನುಭವಿಸಿದ ರೀತಿ ಅನುಭೂತಿಯ ಸೃಷ್ಟಿಸಿ ಕಣ್ಮನ ಹನಿಗೂಡಿಸುತ್ತವೆ.

    ಪ್ರತ್ಯುತ್ತರಅಳಿಸಿ
  2. ಕೆಲವು ಸನ್ನಿವೇಶಗಳಲ್ಲಿ ನಮಗೇ ತಿಳಿಯದೆ ಭಾವುಕರಾಗುವುದು ಸಹಜ.....ನಿಮ್ಮ ನಿರೂಪಣೆ ಚೆನ್ನಾಗಿದೆ.

    ಪ್ರತ್ಯುತ್ತರಅಳಿಸಿ
  3. ಇಂದು ನಾವು ನಮ್ಮ ಭಾವನೆಗಳನ್ನು ನಮ್ಮ ಮನಸ್ಸ್ಲಲ್ಲಿ ಇಟ್ಟು ಕೊಳ್ಳಲು ಆಗದೇ ತೋರ್ಪಡಿಸಲು ಆಗದೇ ನಮ್ಮ ಮನದ ಮೂಲೆಯಲ್ಲಿ ಹುದುಗಿಟ್ಟು ಕೊಳ್ಳುತ್ತಿದ್ದೇವೆ ಎನ್ನುವುದು ನಿಜವಾದ ಮಾತು.

    ಪ್ರತ್ಯುತ್ತರಅಳಿಸಿ
  4. ನಿಜ ನೀವು ಹೇಳಿದಂತೆ ಕೆಲವೊಮ್ಮೆ ಭಾವುಕರಾಗುತ್ತೇವೆ. ನಾನು ಅಳುವ ಸೀನ್ ಬಂದರೆ ಅಳುವುದರಲ್ಲಿ ಎತ್ತಿದ ಕೈ... ನನ್ನ ನೋಡಿ ಹಾಸ್ಯಮಾಡುವವರಿಗೇನು ಕಮ್ಮಿ ಇಲ್ಲ ಹಹಹ. ನೀವು ಹೇಳಿದ ತೆಲುಗು ಹಾಡುಗಳು ನಿಜಕ್ಕೂ ಕಣ್ಣೀರುತರಿಸುತ್ತದೆ ನನಗೂ ಅನುಭವವಾಗಿದೆ

    ಪ್ರತ್ಯುತ್ತರಅಳಿಸಿ
  5. ಯಾವುದೋ ಸಿನಿಮಾದ ಸನ್ನಿವೇಶ ಅಥವಾ ಪುಸ್ತಕದ ಇನ್ಯಾವುದೋ ಸಾಲು ನಮ್ಮದೇ ಗತದ ಯಾವುದೋ ಅವ್ಯಕ್ತ ಸನ್ನಿವೇಶಕ್ಕೆ ತಳುಕಿ ಹಾಕಿದಂತಾಗಿ, ಮೂಲೆಯಲಿ ಎಂದೋ ಮರೆವಿನ ಹೊದಿಕೆ ಹೊದಿಸಿ ಮರೆತ ಮನೋ ವೀಣೆಯ ಕೈಗೆಟುಕದ ಆ ತಂತಿಯನು ಮೀಟಿದಂತಾಗಿ........

    ಮನಸು ವಿಲಿವಿಲಿ ಒದ್ದಾಡಿ ನೋವಿನ ಸ್ವರ ಮಾತ್ರ ಹೊರ ಬರತ್ತೆ ಸರ್,
    ಎಸ್ಟೋ ಸಾರಿ ನಾನು ಬೇಕಂತಲೇ ಕೆಲವೊಂದು ಹಾಡುಗಳನ್ನು ಕೇಳಿ ನನ್ನ ಮನಸಿನ ನೋವನ್ನ ಮತ್ತೆ ಹೊರ ತೆಗೆದು ಗಟ್ಟಿಯಾಗುವದು. ಅದೇ ಮತ್ತೆ ಕೆಲವು ಸಾರಿ ಕಿವಿ ಮುಚ್ಚಿಕೊಳ್ಳುತ್ತೇನೆ ಆ ನೋವು ತಾಳಲಾರದೆ,
    ತುಂಬಾ ಚೆನ್ನಾಗಿ ನಮ್ಮೆಲ್ಲರ ಭಾವನೆಗಳನ್ನು ವ್ಯಕ್ತ ಪಡಿಸಿದ್ದಿರ ನಿಮ್ಮದೇ ಸ್ಟೈಲ್ನಲ್ಲಿ
    ಧನ್ಯವಾದಗಳು

    ಪ್ರತ್ಯುತ್ತರಅಳಿಸಿ
  6. ನಿಜ... "ಮೂಲೆಯಲಿ ಎಂದೋ ಮರೆವಿನ ಹೊದಿಕೆ ಹೊದಿಸಿ ಮರೆತ ಮನೋ ವೀಣೆಯ ಕೈಗೆಟುಕದ ಆ ತಂತಿಯನು ಮೀಟಿದಂತಾಗಿ" ಎಂಬ ಮಾತು ನಿಜಕ್ಕೂ ನನ್ನೊಳಗಿನ ವೀಣೆಯ ತಂತಿಯನ್ನೂ ಮೀಟಿತು! ಕೆಲವು ಚಿತ್ರಗೀತೆಗಳು ಕವನಗಳು ಸನ್ನಿವೇಷಗಳು ಸಂಭಾಷಣೆಗಳು ಮರೆತ ಕೆಲವು ಘಳಿಗೆಗಳನ್ನು ನೆನಪಿಸುತ್ತವೆ... ಕಣ್ಣು ಮಂಜಾಗುತ್ತವೆ.. ಅದಕ್ಕೆ ಕಾರಣವಾದ ಹಿಂದಿನ ಘಟನೆಗಳು ಯಾರಿಗೂ ಅರಿವಾಗುವುದಿಲ್ಲ. ಅದು ನನ್ನ ಮತ್ತು ನನ್ನ ದಿನಚರಿ ಪುಸ್ತಕಕ್ಕಷ್ಟೇ ಗೊತ್ತಿರುವ ಗುಟ್ಟು! :)

    ಪ್ರತ್ಯುತ್ತರಅಳಿಸಿ
  7. ಬಹುಶಃ ಜೀವನ ಮಾಗಿದಂತೆಲ್ಲಾ ಭಾವನಾತ್ಕ ಆಗ್ತೇವೆ ಅನ್ಸುತ್ತೆ . ನಾನೂ ಕೂಡಾ ಹೆಚ್ಚು ಭಾವನಾತ್ಮಕನಾಗ್ತಿದೇನೆ. ತೀರಾ ಅನ್ನೋಷ್ಟು.

    ಪ್ರತ್ಯುತ್ತರಅಳಿಸಿ
  8. ಹೌದು ನೀವು ಹೇಳಿದ ಎರಡೂ ಹಾಡುಗಳು ಕಣ್ಣೀರು ತರಿಸುತ್ತವೆ.
    ಅಂತಹುದೇ ಇನ್ನೊಂದು ಶ್ರೀನಿವಾಸ ಕಲ್ಯಾಣ ಚಿತ್ರದ ‘ಪವಡಿಸು ಪರಮಾತ್ಮ ‘

    ಪ್ರತ್ಯುತ್ತರಅಳಿಸಿ
  9. ಪಿ.ಬಿ.ಶ್ರೀನಿವಾಸರು ಒಬ್ಬ ಮಧುರ ಹಾಗು ಶ್ರೇಷ್ಠ ಗಾಯಕರು. ನೀವು ಬರೆದ ಸನ್ನಿವೇಶವು ನನ್ನ ಮನಸ್ಸನ್ನು ತಟ್ಟಿತು.
    ಕಿರಿಯ ಗೆಳೆಯರೆ,
    ನಿಮಗೆ ಬರುವ ಕಣ್ಣೀರು ಸುಖದ ಕಣ್ಣೀರಾಗಿರಲಿ ಎಂದು ಪ್ರಾರ್ಥಿಸುತ್ತೇನೆ.

    ಪ್ರತ್ಯುತ್ತರಅಳಿಸಿ
  10. "ಒಲುಮೆಯ ಹೂವೆ" ಹಾಡು ಕೇಳಿದಾಗ ನನ್ನ ಸ್ನೇಹಿತ ನೆನಪಾಗಿ ಕಣ್ಣಿನಲ್ಲಿ ನೀರಿನ ಪಸೆ !!!

    ಪ್ರತ್ಯುತ್ತರಅಳಿಸಿ
  11. ನಿಜ ಬದರೀ ಸರ್ ಭಾವುಕತೆ ನಮಗಂಟಿದ ಶಾಪ …….. ನೋಡುವ ದೃಶ್ಯಗಳನ್ನೆಲ್ಲ ನಮ್ಮ ಬದುಕಿನ ಭಾಗಗಳನ್ನು ಕಾಣುವ ನಮ್ಮ ಮನಸಿಗೆ ಏನೆಂದು ಹೇಳುವುದು?

    ಒಂದೇಗುರಿ ಚಿತ್ರದ "ಈ ಭಾವಗೀತೆ ನಿನಗಾಗಿ ಹಾಡಿದೆ....." ಈ ಹಾಡನ್ನು ಕೇಳುತ್ತಾ ಕೇಳುತ್ತಾ ನನ್ನ ಬಾಲ್ಯದ ಗೆಳಯ ಬಾಲುವನ್ನು ನೆನೆದು ಕಣ್ಣೀರಾಕುವ ಮನ ………

    ಪ್ರತ್ಯುತ್ತರಅಳಿಸಿ
  12. ಯಾಕೋ ಗೊತ್ತಿಲ್ಲ, ಹಿಂದಿ ಹಳೆ ಚಿತ್ರಗೀತೆ ನೆನಪಾಯ್ತು.. ಕಣ್ಣು ಒದ್ದೆ ಕೂಡ..
    Lag jaa gale ke phir ye hasi raat ho naa ho..
    shaayad is janam me mulaakaat ho naa ho..!!

    ಪ್ರತ್ಯುತ್ತರಅಳಿಸಿ
  13. ’ಜೀನಾ ಯಹಾ ಮರನಾ ಯಹಾ’
    ಇಸ್ಕೇ ಸಿವಾ ಜಾನಾ ಕಹಾ.............. !!!

    ನಮ್ಮ ಕಣ್ಣಲ್ಲೂ ಈಗ ಅದೇ ಸಾಲುಗಳು ಹನಿಯಾಗಿವೆ...

    ಪ್ರತ್ಯುತ್ತರಅಳಿಸಿ
  14. ಕೆಲವೊಮ್ಮೆ ಮುಖವಾಡದ ಬದುಕು ಸಾಕೆನಿಸುತ್ತದೆ.. ಕೆಲವೊಮ್ಮೆ ಬೇಕೆನಿಸುತ್ತದೆ.. ಎಲ್ಲಿ ಮುಖವಾಡ ಬೇಕು ಎಲ್ಲಿ ಬೇಡ ಎಂದು ನಿರ್ಧರಿಸುವ ಮನಸ್ಥಿತಿ ನಮಗಿರಬೇಕು ಅಷ್ಟೇ..

    ಸುಂದರ ಲೇಖನ ಬದರಿ ಸರ್.. ಭಾವಗಳನ್ನು ಬಳಿದು ಪದಗಳನ್ನು ಮಾಡುವ ನಿಮ್ಮ ಕಲಾ ಕುಸುರಿ ಸೂಪರ್

    ಪ್ರತ್ಯುತ್ತರಅಳಿಸಿ