ಬುಧವಾರ, ಜುಲೈ 31, 2013

ನಾನು ಕೆಡವಿಕೊಂಡಿದ್ದೆ...

ಮೂರನೇ ಪೆಗ್ಗಿಗೆ ಸತ್ಯ ಹೊರ ಬರುತ್ತದಂತೆ!

ನನಗೂ ಅದೇ ಬೇಕಿತ್ತು, ಅವನನ್ನು ಆ ೩ ನಕ್ಷತ್ರಗಳ ಬಾರಿನಲ್ಲಿ ಕೂರಿಸಿ ಸುಖಾ ಸುಮ್ಮನೆ ಅವನು ಕೇಳಿದ ಬ್ರಾಂಡಿನ ಡ್ರಿಂಕ್ಸ್ ಅನ್ನು ಮತ್ತು ಗರಿ ಗರಿ ಗೋಡಂಬಿ ಜೊತೆ ನೊರೆ ಉಕ್ಕಿಸುವ ತಣ್ಣನೆ ಸೋಡವನ್ನು ನನ್ನ ಜೇಬಿಗೆ ತೂತು ಕೊರೆದುಕೊಂಡು, ಕುಳ್ಳರಿಸಿ ಮತ್ತೆ ಕುಡಿಸುತ್ತಿರಲಿಲ್ಲ.

ಜಾನಕಿ ಮೊನ್ನೆ ನಿದ್ರೆ ಮಾತ್ರೆಗಳನ್ನು ನುಂಗಿ, ಸಾವಿನಿಂದ ಆಸ್ಪತ್ರೆ ವಾರ್ಡಿನಲ್ಲಿ ಎದ್ದು ಬಂದ ಗಳಿಗೆಯಿಂದ ಇವನ ಹಿಂದೆ ಬಿದ್ದಿದ್ದೆ. ನನಗೆ ಸತ್ಯ ಬೇಕಿತ್ತು.

ಅವಳು ದೂರದ ಮಲೆನಾಡ ಹುಡುಗಿ, ಬೆಂಗಳೂರಿಗೆ ಬಂದದ್ದೇ ಹೊಟ್ಟೆ ಪಾಡಿಗೆ. ಯಾವುದೋ ಪೀಜಿಯಲಿ ಇದ್ದುಕೊಂಡು ಸಣ್ಣ ಕಂಪನಿಯಲ್ಲಿ ಲೆಕ್ಕ ಬರೆಯಲು ಹೋಗುತ್ತಿದ್ದಳು. ಅಂತ ದೊಡ್ಡ ಸಂಬಳವೇನಲ್ಲ, ಆದರೂ ಊರಿಗಿಷ್ಟು ತನಗಿಷ್ಟು ಎನ್ನುವ ಮಟ್ಟಿಗೆ ಸಾಕಾಗುತ್ತಿತ್ತು.

ಚಿಕ್ಕ ವಯಸ್ಸಿನಲಿ ಹಿತ್ತಲ ಬಚ್ಚಲ ಮನೆಯ ಹಂಡೆಗೆ ಬೆಂಕಿ ಒಟ್ಟುವಾಗ, ಅಚಾನಕ್ಕಾಗಿ ಬೆಂಕಿ ತಾಕಿ ಅವಳ ಮುಖ ಸುಟ್ಟು ಹೋಗಿತ್ತು.

ಆಕೆ ಕೆಲಸ ಮಾಡುವ ಕಂಪನಿಯ ಜೆರಾಕ್ಸ್ ಮಿಷನನ್ನು ನಾನು ಸರ್ವೀಸ್ ಮಾಡಿಕೊಡುತ್ತೇನೆ. ಹಾಗೆ ಪರಿಚಯವಾದ ಹುಡುಗಿ, ನನಗೆ ತಂಗಿಯೇ ಆಗಿ ಹೋದಳು. ಬಹುಶಃ ಆಕೆ ನನ್ನಿಂದ ಮುಚ್ಚಿಟ್ಟಿದ್ದ ಸಂಗತಿಗಳು ಏನೂ ಇರಲಿಲ್ಲ. ಆದರೂ ಮೊನ್ನೆ ಪೀಜಿಯಿಂದ ಅವಳ ಸ್ನೇಹಿತೆ ಫೋನ್ ಮಾಡಿದಾಗ ಅವಕ್ಕಾಗಿದ್ದೆ. ಹುಡುಗಿ ನಿದ್ರೆ ಮಾತ್ರೆ ತೆಗೆದುಕೊಂಡು ಆತ್ಮ ಹತ್ಯೆಗೆ ಯತ್ನಿಸಿದ್ದಳು. ಪೊಲೀಸ್ ಸಹವಾಸ ಬೇಡವೆನಿಸಿ ಪರಿಚಿತ ನರ್ಸಿಂಗ್ ಹೋಮಿನಲ್ಲಿ ಸೇರಿಸಿದ್ದೆ.

ಚೇತರಿಸಿಕೊಂಡ ಮೇಲೆ ನಾನು ಅವಳನ್ನು ಕೇಳಲಿಲ್ಲ. ಅವಳು ಉತ್ತರಿಸಲು ಹೋಗಲಿಲ್ಲ.

ಆ ಗಳಿಗೆಯಿಂದ ನಾನು ಇವನ ಹಿಂದೆ ಬಿದ್ದಿದ್ದೆ. ಇವನು ಅವಳ ಕಂಪನಿಯ ಮಾಲಿಕನ ಮಗ. ನನಗೆ ಯಾಕೋ ಜಾನಕಿಯ ಆತ್ಮಹತ್ಯಾ ಪ್ರಯತ್ನದ ಹಿಂದೆ ಇವನ ಕೈವಾಡದ ಶಂಕೆ! ಇವನು ಬಲೇ ಶೋಕಿ ಮನುಷ್ಯ. ಸುಮ್ಮನೆ ಗಾಳಿ ಪಟದಂತೆ ಅಲೆಮಾರಿ.

ಮೂರನೇ ಪೆಗ್ಗಿನ ಅಮಲಿನಲ್ಲಿ ಸುಮ್ಮನೆ ಕೆಣಕಿದೆ ಜಾನಕಿ ಹೇಗೆ ಅಂತ? ಆಗ ಬಾಯಿ ಬಿಟ್ಟ

’ಬೆಂಕಿ ಬೆಂಕಿ ಸಾರ್’
’ನನ್ನ ಅಪ್ಪನ ಕಂಪನಿ ನಾನು ದುಡ್ಡು ಕದ್ದರೆ ಇವಳ ಗಂಟೇನು ಹೋಗುತ್ತೇ ಅಂತೀನಿ?’
’ಸೀದಾ ಹೋಗಿ ನಮ್ಮಪ್ಪನಿಗೆ ಹೇಳ್ತೀನಿ ಅಂದಳು’
’ವರ್ಷದ ಕೊನೆಯಲ್ವಾ, ರಾತ್ರಿ ತುಂಬಾ ಹೊತ್ತು ಲೆಕ್ಕ ಬರೆಯುತ್ತಿದ್ದಳು. ನಾನು ಅವಳನ್ನು ಕೆಡವಿಕೊಂಡೆ’
’ನಿಶೆಯಲಿದ್ದೆ ನೋಡಿ, ಅವಳ ಆಟನನ್ನ ಮುಂದೆ ಸಾಗಲೇ ಇಲ್ಲ’

ಗಹಗಹಿಸಿ ನಕ್ಕ.

ಒಂದು ನಿಟ್ಟುಸಿರು ಬಿಟ್ಟೆ, ನನ್ನ ಲೆಕ್ಕಾಚಾರ ತಪ್ಪಿರಲಿಲ್ಲ, ಈಗಲೂ,

ಮಾತನಾಡುತ್ತಿದ್ದವನು ಹೊಟ್ಟೆ ಹಿಡಿದುಕೊಂಡು ನೋವು ಎಂದ, ನಾನು ಅಲ್ಲಿಂದ ಎದ್ದೆ.

ನಮ್ಮ ಹಳ್ಳಿಯ ನಾಟಿ ವೈದ್ಯನಿಂದ ತಂದ ಬೇರು ಕೆಲಸ ಮಾಡಿತ್ತು. ಅವನು ಇನ್ನು ಬದುಕೆಲ್ಲ ವಿಲವಿಲ ಒದ್ದಾಡುತ್ತಲೇ ಇರಬೇಕು. ಎಂತಹ ಖ್ಯಾತ ಆಸ್ಪತ್ರೆಯು ಅವನ ನೋವಿಗೆ ಮೂಲ ಹುಡುಕಲಾರದು. ಜಾನಕಿಗೆ ಇದು ಪುಟ್ಟ ಸಮಾಧಾನ ತರಲಿ.

ನಾನೂ ಕೆಡವಿಕೊಂಡಿದ್ದೆ!  



(ಚಿತ್ರ ಕೃಪೆ: ಅಂತರ್ಜಾಲ)

34 ಕಾಮೆಂಟ್‌ಗಳು:

  1. ಒಂದಿಷ್ಟೇ ಸಾಲುಗಳೊಳಗೆ ಒಂದದ್ಭುತ ಕಥೆ ಬದರೀ ಸಾರ್.. ಕಥೆಯ ಫಾರ್ಮಾಟ್ ತುಂಬಾ ಇಷ್ಟ ಆಯ್ತು. ಅದರೊಳಗಿನ ವಸ್ತು ವಿಚಾರ ಕೂಡಾ.. ದಂಡಿಸೋದಕ್ಕೆ ಏನೆಲ್ಲಾ ವಿಧಗಳು..!! ಕಥೆ ಮುಗಿದ ಒಂದು ಕ್ಷಣ ನಾನೂ ಕೊಡವಿಕೊಂಡೆ ಸಣ್ಣಗೊಮ್ಮೆ ತಲೆಯ.. :)

    ಪ್ರತ್ಯುತ್ತರಅಳಿಸಿ
  2. ಸಣ್ಣ ಕಥೆ ವಿಶಾಲವಾದ ವಿಚಾರ ತಿಳಿಸಿದೆ . ಬದರಿ ಕವಿಯಷ್ಟೇ ಅಲ್ಲಾ, ಕಥೆಗಾರ ಕೂಡ

    ಪ್ರತ್ಯುತ್ತರಅಳಿಸಿ
  3. ಹೃದಯಕ್ಕೆ ಮುಟ್ಟುವಂತಿದೆ ಬದರಿ :-).. ತುಂಬಾ ಚೆನ್ನಾಗಿದೆ.

    ಪ್ರತ್ಯುತ್ತರಅಳಿಸಿ
  4. ಹಾ..!! ಪುಟ್ಟ ಸಾಲುಗಳಲ್ಲೇ ಮನಸ್ಸು ಕಲಕಿತು... ಜನ ಪ್ರಾಮಾಣಿಕವಾಗಿದ್ದರೂ ಕಷ್ಟ..

    ಪ್ರತ್ಯುತ್ತರಅಳಿಸಿ
  5. ಮಿತ್ರ ಬದರೀನಾಥ್

    ಅಮಾಯಕ ಹುಡುಗಿಯ ವ್ಯಥೆಯನ್ನು ತುಂಬ ಮಾರ್ಮಿಕವಾಗಿ ಚುಟುಕಾಗಿ ವಿವರಿಸುತ್ತಾ ಕೆಡವಿಕೊಂಡಿದ್ದೀರಿ
    ಅಭಿನಂದನೆಗಳು....
    ನಿಶೆಯಲಿದ್ದೆ ನೋಡಿ, ಅವಳ ಆತ (ಆಟ) ನನ್ನ ಮುಂದೆ ಸಾಗಲೇ ಇಲ್ಲ’....

    ಪ್ರತ್ಯುತ್ತರಅಳಿಸಿ
  6. ಕತೆಯ ಕೊನೆಯಲ್ಲಿ ಪುಟ್ಟ ಸಮಾಧಾನ ಸಿಗುತ್ತದೆಯಲ್ಲ, ಅಷ್ಟೇ ಸಾಕು!

    ಪ್ರತ್ಯುತ್ತರಅಳಿಸಿ
  7. kathe kushi kottithu :) kettadu madidavanige dandisidaga siguva khushiye bere ...chennagide :)

    ಪ್ರತ್ಯುತ್ತರಅಳಿಸಿ
  8. ಇಷ್ಟೆ ಇಷ್ಟು ಪದಗಳಲ್ಲಿ ಎಷ್ಟು ದೊಡ್ಡ ಕಥೆ.... ಬಹಳ ಚೆನ್ನಾಗಿ ಬರೆದಿದ್ದೀರಿ. ಕಥೆಯ ಅಂತ್ಯ ಬಹಳ ಇಷ್ಟವಾಯಿತು.. :)

    ಪ್ರತ್ಯುತ್ತರಅಳಿಸಿ
  9. ಅಂತ್ರು ಸತ್ಯ ಹೊರ ಬೀಳಿಸಿ ಬಿಟ್ರಲ್ಲಾ..ಭಾರಿ ಅದ ನೀವು ಬರೆದ ಕಥಿ.

    ಪ್ರತ್ಯುತ್ತರಅಳಿಸಿ
  10. ಬದ್ರಿ ಸರ್, ನಿಮ್ಮ ಕತೆಯಲ್ಲಿ ಪಾತ್ರಗಳು ನಮ್ಮ ಎದುರಿಗೆ ಬಂದು ತಮ್ಮ ಪಾತ್ರಗಳನ್ನು ನಿರ್ವಹಿಸಿದಂತೆ ಕತೆಯನ್ನು ಬರೆದಿದ್ದೀರಿ ಇದು ನಮ್ಮ ಸುತ್ತಮುತ್ತಲಿನ ನಿಜ ಕತೆಯಂತೆ ತೋರುತ್ತಿದೆ..... ತುಂಬಾ ಚೆನ್ನಾಗಿದೆ....

    ಪ್ರತ್ಯುತ್ತರಅಳಿಸಿ
  11. ಅಪರೂಪಕ್ಕೆ ಬರೆದ ಕತೆ ತುಂಬಾನೇ ಚೆನ್ನಾಗಿದೆ...!!!

    ಪ್ರತ್ಯುತ್ತರಅಳಿಸಿ
  12. ನಡೆಯೋನು ಬೀಳಲೇ ಬೇಕು. ಕಾಫಿ ಕಪ್ಪಿನಲ್ಲಿ ಅಲೆಗಳನ್ನು ಎಬ್ಬಿಸುವ ಕಥೆ ಇದು. ಕವಿತೆಗಳಲ್ಲಿ ಶರಧಿಯ ತಳವನ್ನು ಶೋಧಿಸುತಿದ್ದ ನೀವು ಶರಾಭಿನಲ್ಲಿ ನಮ್ಮನ್ನು ಮುಳುಗಿಸಿದ್ದೀರಿ. ಸೂಪರ್ ಸರ್ ನೀವು ಕಥೆಗೂ ಸೈ ಕವಿತೆಗೂ ಸೈ... ಅದಕ್ಕಿಂತ ಮಿಗಿಲಾಗಿ ಸ್ನೇಹಕ್ಕು ಸೈ[. ಸೂಪರ್ ಬದರಿ ಸರ್

    ಪ್ರತ್ಯುತ್ತರಅಳಿಸಿ
  13. ಬದರಿ ಅಣ್ಣ, ಮನ ಮುಟ್ಟಿತು. ತುಂಬಾ ಮಾರ್ಮಿಕವಾಗಿ ಬರೆದಿದ್ದೀರ.

    ಪ್ರತ್ಯುತ್ತರಅಳಿಸಿ
  14. B.P. ಅವ್ರೆ,
    ಒಳ್ಳೊ treatment ಕೊಟ್ಟು ಬ೦ದ್ರಿ....
    ಕಥೆ ಚಿಕ್ಕದಾಗಿ - ಚೊಕ್ಕದಾಗಿ ಎಲ್ಲವನ್ನೂ ಹೇಳಿ ಹೋಯಿತು.
    ಇಷ್ಟವಾಯ್ತು.........
    ಇನ್ನಷ್ಟು ಕಥೆಗಳು ನಿಮ್ಮಿ೦ದ ಹೊರಬರಲಿ.......

    ಪ್ರತ್ಯುತ್ತರಅಳಿಸಿ
  15. ತುಂಬಾ ಚೆನ್ನಾಗಿದೆ ಸರ್ .....happy dt u r venturing into ds zone....AL D VERY BEST.

    ಪ್ರತ್ಯುತ್ತರಅಳಿಸಿ
  16. ತುಳಿದವರನ್ನು ಮತ್ತೊಬ್ಬರು ತುಳಿಯದಿದ್ದರೆ ಅವರಿಗೆ ಅವರು ಮಾಡಿದ ಕೆಲಸ ತಪ್ಪು ಅರ್ಥವಾಗುವುದಿಲ್ಲ ... ತುಳಿಯುವುದೊಂದೇ ಅಲ್ಲ ಮರೆಯದಂತೆ ಥಳಿಸಬೇಕು ... ಮುಟ್ಟಿ ನೋಡ್ಕೋಬೇಕು ಅಂತಾರಲ್ಲ ಹಾಗೆ ! good narration .. good narration good ending..

    ಪ್ರತ್ಯುತ್ತರಅಳಿಸಿ
  17. ಮುಯ್ಯಿಗೆ ಮುಯ್ಯಿ...
    ಪಾಪದ ಹೆಣ್ಣು ಮಕ್ಕಳ ಮೇಲೆ ತಮ್ಮ ದರ್ಪ ತೋರಿಸುವ ಪುರುಷ ದರ್ಪಕ್ಕೆ ಇಂತಹದೊಂದು ಶಿಕ್ಷೆ ಆಗಲೇ ಬೇಕು... ಮತ್ತೊಂದಿಷ್ಟು ಹೆಣ್ಣು ಮಕ್ಕಳಾದರೂ ನೆಮ್ಮದಿಯಿಂದ ಇರಬೇಕು...

    ಮಸ್ತಾಗಿದೆ ಬದರಿ ಸರ್

    ಪ್ರತ್ಯುತ್ತರಅಳಿಸಿ
  18. ಎಲ್ಲಿಯೊ ಒಂದು ತಣ್ಣನೆಯ ಕ್ರೌರ್ಯ ಇಣುಕುತ್ತಿದೆಯಲ್ಲ !
    ಆದರು ಒಂದು ಅನುಮಾನ
    ಆ ವ್ಯಕ್ತಿ ಅಪರಾದಿ ! ಅವನಿಗೆ ಶಿಕ್ಷೆ ಆಗುತ್ತಿರುವುದು ಸರಿಯೆ !
    ಒಮ್ಮೆ ಆ ವ್ಯಕ್ತಿ ಅಪರಾದಿಯಲ್ಲ ಎಂದು ಪೆಗ್ಗಿನ ಕಡೆಯಲ್ಲಿ ನಿಮಗೆ ಗೊತ್ತಾಗಿದ್ದರೆ ಆಗ ಔಷದಿ ಅವನ ಮೇಲೆ ಪರಿಣಾಮ ಮಾಡುವದನ್ನು ತಡೆಯಲು ಆಗುತ್ತಿತ್ತ ? ಅನ್ನುವ ಸಣ್ಣ ಪ್ರಶ್ನೆ !
    -ಪಾರ್ಥಸಾರಥಿ

    ಪ್ರತ್ಯುತ್ತರಅಳಿಸಿ
  19. ಹೇ ಬದ್ರಿ ಭಾಯ್ ಛಲೋ ಅನಿಸಿತು ಕತೆ..ಈ ಸೇಡು, ಪ್ರತೀಕಾರ
    ಸೂಕ್ಷ್ಮಮನದ ಕವಿಹೃದಯದ ಬದ್ರಿಗೆ ತರವಲ್ಲ..!!

    ಪ್ರತ್ಯುತ್ತರಅಳಿಸಿ
  20. ಅಂತ್ಯದ ಸಾಲುಗಳು ಕಥೆಯ ಆಳವನ್ನು ಹೇಳುತ್ತಿದೆ .. ದೀರ್ಘಾಲೋಚನೆ ಮತ್ತು ಶಾಂತ ಮನಸ್ಸು .. :)

    ಪ್ರತ್ಯುತ್ತರಅಳಿಸಿ
  21. ಬಹಳ ಮಾರ್ಮಿಕವಾದ ಅರ್ಥಪೂರ್ಣ ಕಥನ ...ತುಂಬಾ ಇಷ್ಟ ಆಯಿತು ಬದರಿ ಸರ್ :)

    ಪ್ರತ್ಯುತ್ತರಅಳಿಸಿ