Sunday, July 28, 2013

ಗುರುತ್ವಾಕರ್ಷಣೆ

ನಿಮ್ಮ ತಾಕಿದೀ ತಾಕು
ತಲುಪಿಸಿ ಬಿಡಿ ನನ್ನ ಗುರುವು ತನಕ;
ಏಕೆಂದರೀಗೀಗ ನನ್ನ ಕೂಗಿಗೂ
ನಿಲುಕದೆತ್ತರ ಅವರ ರೂಪು...

ದನಿ ಚಹರೆ ಬರವಣಿಗೆ; ನನ್ನೆಡೆಗೆ
ಅಕ್ಷರದ ಅಚ್ಚರಿಯ ಗುರುತ್ವಾಕರ್ಷಣೆ,
ತಿಳಿಸಿ ಬಿಡಿ ಇನ್ನೂ ಈ ತುದಿಯಲುಳಿದಿದೆ
ಮಿಡಿವುದದೇ ಹಚ್ಚ ಹಳೇ ಪ್ರೀತಿ

ತಲುಪಿಸಿ ಬಿಡಿ ಇನ್ನೂ ಉಸಿರಾಡೋ
ಈ ಭಕ್ತನಲ್ಲಿರೋ ಅಮಾಯಕ ಭಾವ,
ತಳ್ಳಿದಷ್ಟೂ ಮತ್ತೂ ಹತ್ತಿರವಾಗೋ
ಹುಚ್ಚುತನ ಕಾವಲು ಸ್ವಭಾವ!

ಅಂದೆಲ್ಲ ಗುಡಿಗೇರೋ
ಮೆಟ್ಟಿಲಷ್ಟೇ ದೂರ ಗರ್ಭ ಗುಡಿ
ಒಳಗಣ ದೇವರೂ ಉಸಿರಂತರ...
ಇಂದದೇ ಹಿಮಗಿರಿಗೂ
ಮೇಲು ಶಿಖರಾಗ್ರ ಅದರ ತುದಿ
ಸೂಜಿ ಮೊನೆ, ನಿಲ್ಲ ಬಲ್ಲಿನೇ ಹೇಳಿ?

ಗುರುವಿನ ಒಡನಾಡಿ ನೀವು!
ಸಿಕ್ಕಾಗಲೊಮ್ಮೆ ಹೇಳಿ ನೋಡಿ;
ಮರೆವು ಮೀರಿದ ಗುರುವು
ಮುನಿಯಬಾರದು ಹೀಗೆಲ್ಲ ಅಂತ...

ಬೆಳಕ ಕೊಡುವವರೇ ಬೆನ್ನ ತಿರುವಿದರೇ
ಶಾಪಗ್ರಸ್ತ ಸೂರ್ಯ ಪಾನರು ನಾವು,
ಏನು ಮಾಡಬೇಕು?


(ಕಿತ್ರ ಕೃಪೆ: ಅಂತರ್ಜಾಲ)

26 comments:

 1. ಸೊಗಸಾಗಿದೆ ಸಾ.

  ReplyDelete
 2. ಗುರುವಿನ ಗುಲಾಮನಾಗುವ ತನಕ ಮುಕ್ತಿ ದೊರಕದಣ್ಣ.ಗುರುವಿಲ್ಲದ ವಿದ್ಯೆ, ನೈವೇದ್ಯೆ ಇಲ್ಲದ ಪೂಜೆ ಎಂದಿಗೂ ಪೂರ್ಣವಾಗದು.ಗುರುವಿನ ಬಗ್ಗೆ ನಿಮ್ಮದೇ ಮಾತುಗಳಿಂದ ಕವನವ ಮತ್ತಷ್ಟೂ ಚಂದವಾಗಿಸಿದ್ದಿರಿ.

  ReplyDelete
 3. ಚೆನ್ನಾಗಿದೆ ಸರ್

  ReplyDelete
 4. ಬೆಳಕ ಕೊಡುವವರೇ ಬೆನ್ನ ತಿರುವಿದರೆ ; ಬೇಲಿಯೇ ಹೊಲ ಮೀಯ್ದಂತೆ ಸಾಲು ನೆನಪೈತು :) ಅದ್ಬುತವಾಗಿದೆ

  ReplyDelete
 5. Sir nimma kavana channagide.

  ReplyDelete
 6. ಗುರುವಿನ ಧ್ಯಾನದಲ್ಲಿ ಬೆಳೆದು ನಿಲ್ಲುವ ಕವನ. ಭಕ್ತಿ ಮತ್ತು ಅಭಿಮಾನಗಳ ಮೂರ್ತರೂಪದಂತೆ ಭಾಸವಾಗುತ್ತದೆ. ಗುರುವಿನೊಲುಮೆ, ದೇವನೊಲುಮೆ ಮತ್ತು ಭಕ್ತಿಗಳು ಒಂದೇ ಸಮತಲದಲ್ಲಿ ಸಾಗುತ್ತವೆ.

  ಗುರುವಿನ ಒಡನಾಡಿ ನೀವು!
  ಸಿಕ್ಕಾಗಲೊಮ್ಮೆ ಹೇಳಿ ನೋಡಿ;
  ಮರೆವು ಮೀರಿದ ಗುರುವು
  ಮುನಿಯಬಾರದು ಹೀಗೆಲ್ಲ ಅಂತ...

  ಬೆಳಕ ಕೊಡುವವರೇ ಬೆನ್ನ ತಿರುವಿದರೇ
  ಶಾಪಗ್ರಸ್ತ ಸೂರ್ಯ ಪಾನರು ನಾವು,
  ಏನು ಮಾಡಬೇಕು?

  ಈ ಸಾಲುಗಳಲ್ಲಿ ದೈನ್ಯತೆಯೂ, ಪ್ರಾರ್ಥನೆಯೂ ಇರುವುದನ್ನು ಗಮನಿಸಬಹುದು.

  - ಪ್ರಸಾದ್.ಡಿ.ವಿ.

  ReplyDelete
 7. ಅಂದೆಂದೋ ಆಕರ್ಷಿಸಿದ್ದ, ಪ್ರೀತಿಗೆ ಪಾತ್ರವಾಗಿದ್ದ ಗುರುಸಮಾನ ವ್ಯಕ್ತಿತ್ವವೊಂದು ಇಂದು ನಿಲುಕದ ಎತ್ತರಕ್ಕೆಬೆಳೆದು ನಿಂತಿದೆ.. ಅದೇ ಹಳೆಯ ಪ್ರೀತಿಯನ್ನು, ಆಕರ್ಷಣೆಯನ್ನು ಕಾದಿಟ್ಟುಕೊಂಡ ಜೀವವೊಂದು ಅದೇ ಹಳೇ ತಾಕಿಗಾಗಿ, ಪ್ರೀತಿ ಬೆರೆತ talkiಗಾಗಿ ಹಂಬಲಿಸುತ್ತಿದೆ.. ತುಂಬಾ ಚೆನ್ನಾಗಿದೆ ಕವಿತೆ..

  ReplyDelete
 8. ಸಾಲು ಸಾಲುಗಳೂ ಓದಿಸಿಕೊಂಡು ಹೋಗುವ ಕವಿತೆ. ಕಡೆಗೆ ಮನಸ್ಸಿನ ಗರ್ಭದೊಳಗೆ ಗುರುವಿನ ರೂಪ ಮೈದಳೆಯುತ್ತದೆ. ಗುರು ಎಂಬ ಪರಿಕಲ್ಪನೆಯೇ ಶ್ರೇಷ್ಠವಾದದ್ದು. ಶೀರ್ಷಿಕೆ ಆಕರ್ಷಣಿಯವಾಗಿದೆ. ಬರೆಯುತ್ತಿರಿ ಸರ್. ಶುಭವಾಗಲಿ.

  ReplyDelete
 9. ಗುರುವಿನ ಬಗೆಗಿರುವ ಹಂಬಲವು ‘ಗುರು’ತ್ವಾಕರ್ಷಣೆಯಲ್ಲಿ ಮೂರ್ತರೂಪವಾಗಿದೆ. ಶಿಷ್ಯ ಮರೆತರೂ ಗುರು ಮರೆಯಲಾರ! ಧೈರ್ಯವಾಗಿರಿ!

  ReplyDelete
 10. ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ... ಗುರುವಿದ್ದರೇ ಗುರುತು...ಚನ್ನಾಗಿವೆ ಬದರಿ ಸಾಲುಗಳು...
  ಅಂದೆಲ್ಲ ಗುಡಿಗೇರೋ
  ಮೆಟ್ಟಿಲಷ್ಟೇ ದೂರ ಗರ್ಭ ಗುಡಿ
  ಒಳಗಣ ದೇವರೂ ಉಸಿರಂತರ...
  ಇಂದದೇ ಹಿಮಗಿರಿಗೂ
  ಮೇಲು ಶಿಖರಾಗ್ರ ಅದರ ತುದಿ
  ಸೂಜಿ ಮೊನೆ, ನಿಲ್ಲ ಬಲ್ಲಿನೇ ಹೇಳಿ?
  ...........ಸೂಜಿ ಮೊನೆಯ ಮೇಲೆ ನಿಲ್ಲುವಂತಹುದು ಸಾಧಕರ ಸಾಧನೆ.. ಸಾಧಕರೆಂದುಕೊಳ್ಳುವವರು ನಿಜಕ್ಕೂ ಅಲ್ಲ...ಅವರಿಗೆ ನಿಲ್ಲ ಬಲ್ಲ ಸಾಮರ್ಥ್ಯ ಇರದು.

  ReplyDelete
 11. ಆಚಾರ್ಯ ದೇವೋ ಭವ , ಗುರು ದೇವರ ಸಮಾನ , ಪ್ರತಿಯೊಬ್ಬನು ಒಳ್ಳೆಯ ವಿದ್ಯಾಭಾಸ ಪಡೆದು ಒಳ್ಳೆಯ ಹಾದಿಯಲಿ ಸಾಗಲು ಗುರುಗಳ ಮಾರ್ಗ ದರ್ಶನ ಅವಶ್ಯಕ.ಅದರಿ ಪರಿ ಬಣ್ಣಿಸಿದ ರೀತಿ ಚೆನ್ನಾಗಿದೆ. ಅಭಿನಂದನೆಗಳು ಬದ್ರಿ ಸರ್ :)

  ReplyDelete
 12. ಕವನ ತುಂಬಾ ಹಿಡಿಸಿತು.... ಶೀರ್ಷಿಕೆ ಮೆಚ್ಚಿಕೆಯಾಯಿತು....!!!

  ReplyDelete
 13. ಬೆಳಕ ಕೊಡುವವರೇ ಬೆನ್ನ ತಿರುವಿದರೇ
  ಶಾಪಗ್ರಸ್ತ ಸೂರ್ಯ ಪಾನರು ನಾವು,
  ಏನು ಮಾಡಬೇಕು?

  ಇಷ್ಟವಾದ ಸಾಲುಗಳು ...,
  ತುಂಬಾ ಚೆನ್ನಾಗಿದೆ ಸರ್ ಕವನ ..

  ReplyDelete
 14. ಅಳಿಯುವತನಕ ಗುರುವಿರುವ ತನಕ ಎನ್ನುವಂತೆ ಗುರುತ್ವಾಕರ್ಷಣೆ ಎಲ್ಲವನ್ನು ಮೆಟ್ಟಿ ನಿಲ್ಲುತ್ತದೆ. ಸುಂದರ ವ್ಯಕ್ತಿತ್ವಕ್ಕೆ ಅಡಿಪಾಯ ಕೊಡುವ ಗುರುಗಳು.. ಮನೆಯ ಸೂರಿಗೆ ಕಾವಲಾಗಿ ನಿಲ್ಲುವ ಗಳುಗಳು ಎರಡು ನಮ್ಮನ್ನು ಕಾಡುತ್ತವೆ, ಕಾಪಾಡುತ್ತವೆ. ಅಂಥಹ ಗುರುವಿನ ಆಕರ್ಷಣೆಗೆ ಮೀಸಲಾದ ಪದಗಳಿಗೆ ನಮ್ಮ ನಮನಗಳು. ಸೂಪರ್ ಬದರಿ ಸರ್

  ReplyDelete
 15. ಒಂದು ಒಳ್ಳೆಯ ಕವಿತೆಯ ಕೊಡುಗೆ ಈ ಭಾನುವಾರಕ್ಕೆ ಸಿಕ್ಕಿತು, ಒಳ್ಳೆಯ ಗುರುವಿನ ಲಕ್ಷಣಗಳೇ ಹಾಗೆ ಆಯಸ್ಕಾಂತದಂತೆ ಶಿಷ್ಯರನ್ನು ಸೆಳೆಯುತ್ತಲೇ ಇರುತ್ತದೆ, ಗುರುವಿನ ಬಗ್ಗೆ ನಾನು ಓದಿರುವ ಕವಿತೆಗಳಲ್ಲಿ ನಿಮ್ಮ ಕವಿತೆ ಒಂದು ಕಲಶವೇ ಸರಿ , ಹೊಗಳಲು ಮಾತುಗಳು ನನ್ನಲ್ಲಿ ಇಲ್ಲ ಒಂದು ಪ್ರೀತಿಯ ಥ್ಯಾಂಕ್ಸ್ ಹೇಳಷತೆ ನನ್ನಿಂದ ಸಾಧ್ಯ.

  ReplyDelete
 16. ಗುರುಎಲ್ಲಿಯಾದರೂ ಶಿಷ್ಯರನ್ನು ಮರೆತಾನೆಯೇ ? ಹಾಗನಿಸಿದ ಒಂದು ಘಳಿಗೆ ಇಂಥಹ ಒಂದು ಕವನದ ಉದಯ.
  ಶಿಷ್ಯನ ಭಕ್ತಿಗಿಂತ ಗುರುವಿನ ವಾತ್ಸಲ್ಯ ದೊಡ್ಡದು ಬಿಡಿ
  ನಿಮ್ಮ ಆಗ್ರಹ ಚೆನ್ನಾಗಿ ಮೂಡಿ ಬಂದಿದೆ

  ReplyDelete
 17. Maamuli guru shishyavannu heluvudakkinta bhinna prayatna anisitu.....

  ReplyDelete
 18. ಗುರು ಬ್ರಹ್ಮ ಗುರು ವಿಷ್ಣು ಗುರು ದೇವೋ ಮಹೇಶ್ವರ
  ಗುರು ಸಾಕ್ಷಾತ್ ಪರಬ್ರಹ್ಮ ತಸ್ಮೈ ಶ್ರೀ ಗುರುವೆ ನಮಹಃ

  ಗುರುವಿನ ಬಗೆಗಿರುವ ನಿಮ್ಮ ಪ್ರೇಮ ದೈನ್ಯತಾ ಭಾವ ಎದ್ದು ತೋರುತಿದೆ ನಿಮ್ಮ ಕವನದ ಕೋರಿಕೆಯಲ್ಲಿ..
  ಧನ್ಯವಾದಗಳು ಸರ್

  ReplyDelete
 19. ಸೂಪರ್ ಆಗಿದೆ ಸರ್ .. ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ ಅಂತ ದೊಡ್ಡವರು ಹಾಡಿಲ್ವೆ ?

  ReplyDelete
 20. ಕವನದೊಳಗೊಂದು ಶೋಕ ಕಂಡ ಹಾಗಿದೆ ಬದರೀ ಸಾರ್.. ಗುರುವಿನ ಕೃಪೆಗೆ ಅಪಾತ್ರನಾದವನ ಅಳಲಿನಂತಿದೆ ಕವನದ ಆಶಯ.. ಗುರು ಕಟಾಕ್ಷ ಶೀಘ್ರವೇ ಸಿಗಲಿ ಆ ಅಪಾತ್ರನಿಗೆ..

  ಚೆಂದದ ಕವನ.. :)

  ReplyDelete
 21. ಎಂಥಾ ಸೊಗಸು ಬದರಿ ಸರ್ ನಿಮ್ಮ ಕವನಗಳು ... ವಾವ್ಹ್...

  ReplyDelete
 22. ಒಂದು ಬಗೆಯ ವಿಭಿನ್ನ ಆಕರ್ಷಣೆ ಓದುತ್ತಾ ಅದೇಕೋ ರಾಜಕೀಯದತ್ತ ಸೆಳೆಯಿತು .. ಅರ್ಥ ಗಂಭೀರ ಕವಿತೆ ಸುಂದರ .. :)

  ReplyDelete