Wednesday, February 6, 2013

ನಮ್ಮೂರು - 2

(ಈ ಚಿತ್ರವು ಸುಮ್ಮನೆ ಗೂಗಲ್ ಹುಡುಕಿದಾಗ ಸಿಕ್ಕ ನಮ್ಮೂರ ಚಿತ್ರ)
ಫೇಸ್ ಬುಕ್ - ನಮ್ ಕನ್ನಡ ಗುಂಪಿನಲ್ಲಿ ನಿಮ್ಮೊಳಗೊಬ್ಬ ಬಾಲು ಅವರು ಪ್ರಕಟಿಸಿದ ನಮ್ಮೂರ ಚಿತ್ರಣ.
ಭಾಗ - 2


ನಮ್ಮೂರಿನ ಪಕ್ಕದಲ್ಲೇ ಒಂದು ಬೆಟ್ಟವಿದೆ, ಅದರ ತುಟ್ಟ ತುದಿಗೆ ಮಾವಿನ ಕಾಯಿಯ ವಾಟೆಯ ಆಕಾರದ ಬೃಹದ್ ಬಂಡೆ ಇದೆ. ಅದ್ಕಾಗಿಯೇ ನಮ್ಮ ಊರಿಗೆ ವಾಟದಹೊಸಹಳ್ಳಿ ಎಂಬ ಹೆಸರು ಬಂತು. ಅದೇ ತೆಲುಗು ಭಾಷಿಗರ ಬಾಯಲ್ಲಿ ವಾಟಂಕೊತ್ತಪಲ್ಲಿ.

ನೀವು ಗೌರೀಬಿದನೂರಿನಿಂದ ವಿಧುರಾಶ್ವತ್ತದ ಕಡೇ ಹೊರಟರೆ ಮೊದಲು ಸಿಗುವುದೇ ಆರ್.ಟೀ.ವೋ ಚೆಕ್ ಪೋಸ್ಟ್ ಅದಕ್ಕೆ ಬಲಕ್ಕೆ ಹೊರಳಿದರೆ ಗುಡಿಬಂಡೆ ರಸ್ತೆ ಸಿಗುತ್ತದೆ, ಅದೇ ನಮಗೆ ರಾಷ್ಟ್ರೀಯ ಹೆದ್ದಾರಿ! 

ಈಗ ತುಸು ಚಿತ್ರಣ ಬದಲಾದರೂ ಸಹ, ಸುತ್ತಲ ಹತ್ತಾರು ಹಳ್ಳಿಗಳಿಗೆ ನಮ್ಮದು ಕೇಂದ್ರ ಸ್ಥಾನವಾದ ದೊಡ್ಡ ಹಳ್ಳಿ. ಹಾಗಿದ್ದರೂ ನಮ್ಮ ತಾಯಿಯ ಹುಟ್ಟೂರು ನಗರಗೆರೆ ಗ್ರಾಮವು ನಮಗೆ ಹೋಬಳಿ.

ನಾವು ಗೌರೀಬಿದನೂರು ತಾಲ್ಲೂಕಿನವರಾದರೂ ಸಹ. ಇತ್ತ ತಾಲ್ಲೂಕು ಕೇಂದ್ರವು ಅತ್ತ ಆಂಧ್ರದ ಹಿಂದುಪುರವೂ ಸಮಾನ ದೂರದಲ್ಲಿದ್ದರು, ನಮ್ಮ ಹಳ್ಳಿಗರಿಗೆ ವ್ಯಾಪಾರ ವಹಿವಾಟಿಗೆ ಹಿಂದುಪುರವೇ ಆಗಬೇಕಿತ್ತು.

ಮೊದಲೆಲ್ಲ ಅಲ್ಲಿಗೆ ಎತ್ತಿನ ಗಾಡಿಗಳಲ್ಲಿ ಹೋಗಿ ಸಾಮಾನು ಸರಂಜಾಮುಗಳನ್ನು ತುಂಬಿಕೊಂಡು ರಾತ್ರಿಗೆ ಹೊರಡುತ್ತಿದ್ದರಂತೆ. ಗಾಡಿಗೆ ಎತ್ತುಗಳನ್ನು ಕಟ್ಟಿ ಕೆಳಗೊಂದು ಸೀಮೆ ಎಣ್ಣೆ ಬುಡ್ಡಿ ದೀಪ ಜೋತು ಬೀಳಿಸಿ ಸಾಲಾಗಿ ಬಂಡಿಗಳು ಹೊರಡುತ್ತಿತ್ತಂತೆ. ಗಾಡಿ ಹೊಡೆಯುವವನು ಮಲಗಿದರೂ ಸಹಿತ ಗಾಡಿಗಳು ಬೆಳಗಿನ ಜಾವಕ್ಕೆ ಸರಿಯಾಗಿ ಹಳ್ಳಿಯನ್ನು ತಲುಪುತ್ತಿದ್ದವು ಎಂದು ಹಳಬರು ಈಗಲೂ ನೆನೆಯುತ್ತಾರೆ.

ಈಗ ಬಿಡಿ ಅಲ್ಲಿಂದ ನಮ್ಮ ಊರಿನ ಮೂಲಕ ಗೌರೀಬಿದನೂರಿಗೆ ದಿನಕ್ಕೆ ಮೂರು ಬಾರಿ ಎಸ್.ಎಲ್.ವಿ. ಬಸ್ಸು ಓಡಾಡುತ್ತಿರುತ್ತದೆ. ನನ್ನ ಅಣ್ಣ ಮಾತಿನ ಲಹರಿಯಲ್ಲಿದ್ದಾಗ, ಈ ಬಸ್ಸು ೪೫ - ೫೦ ವರ್ಷಗಳ ಹಿಂದೆ ಪ್ರಾರಂಭವಾದಾಗ ಕಲ್ಲಿದ್ದಲ ಬಸ್ಸಾಗಿತ್ತೆಂದು. ಉಗಿಯ ಇಂಜಿನ್ ಹೊಂದಿತ್ತೆಂದು, ಅದರ ಆಗಮನವು ಮೈಲುಗಳ ಆಚೆಯೇ ಘೋಷಿಸಿ ಬಿಡುತ್ತಿತ್ತೆಂದು ಹೇಳುತ್ತಿರುತ್ತಾನೆ!

(ಸಶೇಷ)


http://www.facebook.com/photo.php?fbid=525721420805645&set=o.109902029135307&type=1&theater

4 comments:

 1. ವಾಟದ ಹೊಸಹಳ್ಳಿ ಬದರಿಗಳಿಗೆ ಒಂದು ವಾಟದ ಓಟದ ನಮನ....ನಿಮ್ಮ ಹಳ್ಳಿಗೆ ನೀವು ಕೊಟ್ಟ ಪರಿಚಯ ಎರಡು ಸಂಸ್ಕೃತಿಗಳ (ತೆಲುಗು ಕನ್ನಡ) ಪ್ರಭಾವ ನಿಮ್ಮ ಕನ್ನಡ ಪಕ್ವತೆಗೆ ಒರೆಗಲ್ಲು...ಬೆಳಗಲಿ ಇನ್ನೂ ನಿಮ್ಮ ಕನ್ನಡ ಸೃಜನ ದೀವಿಗೆ.

  ReplyDelete
 2. ನಮ್ಮೂರು ಮೈಸೂರು...ನಿಮ್ಮೂರು ಯಾವೂರು" ಎನ್ನುವ ಹಾಡು ಬಾಲ್ಯದಲ್ಲಿ ಬಾರಿ ಜನಪ್ರಿಯ ಮತ್ತು ಊರನ್ನು ಕೇಳಲು ಕೂಡ ಈ ಹಾಡು ಬಳಸುತ್ತಿದ್ದೆವು. ಹಾಗೆ ಬಾಲೂ ಸರ್ ಅವರು ಶುರು ಹಚ್ಚಿದ ಈ ಲೇಖನ ಮಾಲೆ ಎಲ್ಲರ ಊರ ಬಗ್ಗೆಯೂ ತಿಳಿಯಲು ಸಹಾಯ ಮಾಡುತ್ತಿದೆ. ಹೆಸರಲ್ಲೇ ಒಂದು ಕಥೆ ಅಡಗಿಸಿಕೊಂಡಿರುವ ಊರಿನ ಬಗ್ಗೆ, ಅದರ ಬೆಳವಣಿಗೆಯ ಬಗ್ಗೆ ಹೇಳಿರುವ ರೀತಿ ಸುಂದರವಾಗಿದೆ. ಆಧುನಿಕತೆ ಏನೇ ಬದಲಾವಣೆ ತಂದರೂ..ನಮ್ಮೂರಿನ ಹೆಸರು, ಚಿತ್ರಗಳು ಎಲ್ಲೇ ಕಂಡರೂ ಕೇಳಿದರು ಕಿವಿಗಳು, ಕಣ್ಣುಗಳು ಹರಿದಾಡುತ್ತವೆ ಸುಂದರ ನೆನಪುಗಳು ತಾಜಾತನದ ಕಂಪನ್ನು ಸೂಸುತ್ತಿವೆ ನಿಮ್ಮ ಲೇಖನದಲ್ಲಿ..

  ReplyDelete
 3. ಮಾವಿನ ಹಣ್ಣಿನಷ್ಟೇ ಸಿಹಿಯಾಗಿದೆ ನಿಮ್ಮ ಊರಿನ ಪರಿಚಯ.

  ReplyDelete
 4. ಎಸ್. ಎಲ್ ವಿ ಬಸ್ ಫೇಮಸ್ ಸರ್ ಆಗ ಹಹಹ... ಈಗಲೂ ಇರಬಹುದು ಅನ್ನಿಸುತ್ತೆ. ದೇವನಹಳ್ಳಿಯಿಂದ ಆಚೆಗೆ ಹೆಚ್ಚು ತೆಲುಗು ಇನ್ಪುಯನ್ಸ್ ಜಾಸ್ತಿ. ನಿಮ್ಮ ಊರಿನ ಬಗ್ಗೆ ಕೇಳಿದರೆ ನಾನು ಹುಟ್ಟಿ ಬೆಳೆದ ದೇವನಹಳ್ಳಿ ಹತ್ತಿರದ ಊರು ನೆನಪಾಗುತ್ತದೆ.

  ReplyDelete