Sunday, July 8, 2012

ಅಲಾ ಬೆಂಗಳೂರೇ...ನನ್ನ ಬೆಂಗಳೂರು, ಮೊದಲಿಂದಲೂ ಅರ್ಥ ಮಾಡಿಕೊಳ್ಳುವ ಮನದೆನ್ನೆಯಂತೆ ಅಪ್ಪಿ ಮುದಗೊಳಿಸಿದರೇ, ಕೆಲವೊಮ್ಮೆ ಅರ್ಥ ಮಾಡಿಕೊಳ್ಳದೆ ದೂರವಾದ ಗೆಳತಿಯಂತೆ ಕಕ್ಕಾಬಿಕ್ಕಿಯಾಗಿಸುತ್ತಾಳೆ!
 • ನನ್ನ ತಾಯಿ ನನ್ನ ಮನೆ ರಸ್ತೆಯಲ್ಲಿ ಬೆಳಿಗ್ಗೆ 8 ಗಂಟೆ ಮೇಲೆ ವಾಕಿಂಗ್ ಹೋಗಲು ಆಗಲ್ಲ ಮಗ, ಮೈ ಮೇಲೇ ಕಾರು ಲಾರಿಗಳು ಬರ್ತವೆ ಅಂದಾಗ...
 • ಅತಿ ಮಳೆ ಹುಯ್ದು ನಮ್ಮ ತಗ್ಗು ಪ್ರದೇಶಗಳೆಲ್ಲಾ ಜಲಾವೃತವಾದಾಗ, ಕಾಪಾಡುವ ಗಾಳಿ ಆಂಜನೇಯನ ದೇವಸ್ಥಾನಕ್ಕೂ ನೀರು ನುಗ್ಗಿ, ಪರಮಾತ್ಮ ನಿನಗ್ಯಾರಪ್ಪಾ ಕಾಪಾಡ್ತಾರೆ ಅನಿಸಿದಾಗ...
 • ಹಾದಿ ಬದಿ ಧುತ್ತೆಂದು ಯಾವುದೋ ಭಿಕ್ಷುಕಿ ಎಳೇ ಕಂದಮ್ಮನನ್ನು ಹಳೇ ಸೀರೆಯಲಿ ಸುತ್ತಿಕೊಂಡು ಕೈ ಚಾಚಿದಾಗ..
 • ಒಳ್ಳೆ ಓಡುವ ಕುದುರೆಯಂತಹವರು ಥಟ್ ಅಂತ ನೌಕರಿ ಕಳೆದುಕೊಂಡಾಗ ಪರಿಚಿತರೆಲ್ಲ ಅಪರಿಚಿರು ಅನಿಸುವಾಗ...
 • ನಟ್ಟ ನಡು ರಾತ್ರಿಯಲಿ ಬಸ್ಸೇ ಬರದ ಬಸ್ ಸ್ಟಾಪಿನಲ್ಲಿ, ಕರೆದ ಕಡೆ ಬಾರದ ಆಟೋ ಬಂಧುಗಳನ್ನು ಶಪಿಸುತ್ತಾ ನಿಂತಾಗ, ಅಲ್ಲೇಲ್ಲೋ ಹೊಯ್ಸಳ ಗಾಡಿಯ ಸೈರನ್ ಕೇಳಿದಾಗ...
 • ಸರಗಳ್ಳರ ಹಾವಳಿಗೆ ಬೇಸತ್ತು ಪೊಲೀಸರು ಬೆಳಿಗ್ಗೆಯೇ ಚೀತಾ - ಹೊಯ್ಸಳಾಗಳಲ್ಲಿ ಬೀಟ್ ಆರಂಭಿಸಿದಾಗಲಿಂದ, ನನ್ನ ಪಾರ್ಕಿನಲ್ಲಿ ವ್ಯಾಯಾಮ ಮಾಡುವಾಗ ಬಲಗಡೆ ಚೀತಾ ಕಾಣಿಸಿ, ಎಡಗಡೆ ಹೊಯ್ಸಳ ಕಾಣಿಸಿ, ನಗರ ಮೊದಲಷ್ಟು ಸುರಕ್ಷಿತ ಅಲ್ಲ ಅನಿಸತೊಡಗಿದಾಗ...
 • ಲಾಲ್ ಬಾಗಿಗೆ ಪ್ರವೇಶ ಧನ ಅಂತ ಬೋರ್ಡ್ ನೇತು ಹಾಕಿದಾಗ...
 • ಚಿಕ್ಕ ಪುಟ್ಟ ಹೋಟೆಲ್ ಮುಚ್ಚಿ ಅದೇನೋ ಡೇ, ಅಲ್ಲೇನೋ ಹಟ್ ಅಂತ ಶುರುವಾದಾಗ...
 • ಮೆಟ್ರೋ ಕಾಮಗಾರಿ, ರಸ್ತೆ ಅಗೆತ, ಏಕ ಮುಖ ಸಂಚಾರ ಮತ್ತು ಭೋರಿಡುವ ವಾಹನಗಳ ನಡುವೆ, ನನ್ನ ಗಾಡಿ ಸ್ಟಾರ್ಟಿಂಗ್ ಟ್ರಬಲ್ ಕೊಟ್ಟಾಗ...
 • ಇಡೀ ದೇಶದಲ್ಲಿ ಪದೇ ಪದೇ ದುಬಾರಿ ನಗರ ಅಂತ ಘೋಷಿಸಿದಾಗ...

ನನಗೆ ಬೆಂಗಳೂರು ಅಪರಿಚಿತ ಅನಿಸಲಾರಂಭಿಸುತ್ತದೆ!!!

4 comments:

 1. ಬದರಿನಾಥ್ ಸರ್,
  ನಿಮ್ಮ ಈ ಪುಟ್ಟ ಲೇಖನವನ್ನು ಓದಿದಾಗ ನನಗೂ ಹಾಗೆ ಅನ್ನಿಸುತ್ತದೆ...ನಿಮ್ಮ ಅನುಭವಗಳು ಅನೇಕರ ಬೆಂಗಳೂರಿನ ಅನುಭವಗಳಾಗಿವೆ...

  ReplyDelete
 2. ಬೆಂಗಳೂರು ಇತ್ತೀಚೆಗೆ concrete jungle ಹಾಗು ಜನಾರಣ್ಯವಾಗಿದೆ. ನಿಮ್ಮ ಲೇಖನ ವಾಸ್ತವಕ್ಕೆ ಹಿಡಿದ ಕನ್ನಡಿ.

  ReplyDelete
 3. ಕೆಲವು ಕಾರಣಗಳಿಗೆ ಬೆಂಗಳೂರು ಅಪರಿಚಿತ ಹೌದು ಸರ್.. ಹಾಗೆಯೇ ಹೊಸತನವನ್ನು ಸೃಷ್ಟಿ ಮಾಡುವ ಸ್ಥಳವೂ ಹೌದು .. :)
  ಬೇರೆ ಕಡೆಗಳಲ್ಲೂ ಹೊಸತನವನ್ನು ಹುಟ್ಟುಹಾಕಬಹುದು.. ಆದರೆ ಇಲ್ಲಿ ಏನನ್ನೇ ಮಾಡಿದರೂ ಅದಕ್ಕೆ ತಕ್ಕ ಪರಿಣಾಮ ಕ್ಷಣ ಮಾತ್ರದಲ್ಲೇ ದೊರಕುವ ಜಾಗ.. & ಇನ್ನೂ ಕೆಲವೊಮ್ಮೆ ಅಪರಿಚಿತ ಅನ್ನಿಸಿದಾಗ ಬದುಕಿನಲ್ಲಿ ಹೊಸದನ್ನು ಕಂಡಂತೆ , ಏನೋ ತಿಳಿಯದ ವಿಷಯಗಳ ಪತ್ತೆ ಹಚ್ಚಿದಂತೆ , ಅಪರೂಪಕ್ಕೊಮೆ ಯಾವುದೋ ಒಂದು ನಿಮಿಷ ನಾವೇ ವಿಜ್ಞಾನಿಗಳು ಅನ್ನುವಂತೆ ಊಹೆಗಳನ್ನು ಮಾಡಲಾರಂಭಿಸುತ್ತೇವೆ.. ಹಾಗೆಯೇ ಜೊತೆಯಲ್ಲಿ ನಾವು ಹುಟ್ಟಿ ಬೆಳೆದ ನಮ್ಮೂರೇ ನಮಗೆ ಚೆಂದ ಎನ್ನುವಂತೆ ಕೆಲವೊಮ್ಮೆ ಅನಿಸುತ್ತದೆ.. ಅದಕ್ಕೆ ನಮ್ಮವರು ಮತ್ತು ನಮ್ಮ ಇಚ್ಚಾನುಸಾರ ಖುಷಿಯನ್ನು ಹೊಂದುವ ಘಟನೆಗಳು ಕಾರಣ ಆಗುತ್ತವೆ.. ಸರ್.. :)

  ReplyDelete