ಮಂಗಳವಾರ, ಜುಲೈ 31, 2012

ಗುಬ್ಬಚ್ಚಿಯ ಗೂಡು -2


ಆಗೆಲ್ಲ ನಾನು ಎಷ್ಟು ಸೋಮಾರಿಯಾಗಿದ್ದೆ ಅಂದರೆ ಹತ್ತಿರದ ಸಿಗರೇಟ್ ಅಂಗಡಿಗೂ ಸ್ಕೂಟರ್ ಬಳಸುತ್ತಿದ್ದೆ. ಬಹುಶಃ ಹೊಸ ಸ್ಕೂಟರಿನಲ್ಲಿ ಅಲೆಯುವ ಹುಚ್ಚೂ ಇದ್ದಿರಬಹುದು ಅಂತ ಈಗ ಅನಿಸುತ್ತದೆ.

ಅಲ್ಲಿಯವರೆಗೂ ಬಡತನವನ್ನೇ ನೋಡಿದ್ದ ನನಗೆ, ಈ ಗುಬ್ಬಚ್ಚಿಯ ಗೂಡು ಇನ್ನಿಲ್ಲದ ಸ್ವಾತಂತ್ರ್ಯವನ್ನು ತಂದುಕೊಟ್ಟಿತ್ತು. ಒಟ್ಟೊಟ್ಟಿಗೆ ಐದಾರು ಹೊಸ ಜೊತೆ ಬಟ್ಟೆ ತಂದು ಬಿಡುತ್ತಿದ್ದೆ. ಅವನ್ನೆಲ್ಲ ಕೊಠಡಿಯ ನಡುವೆ ಹಗ್ಗ ಕಟ್ಟಿ ನೇತು ಹಾಕುತ್ತಿದ್ದೆ. ಅಷ್ಟು ಬಟ್ಟೆ ಇಟ್ಟುಕೊಳ್ಳಲು ನನಗೆ ಸರಿಯಾದ ಕಪಾಟೂ ಇರಲಿಲ್ಲ. ಬಂದ ಗೆಳೆಯರೆಲ್ಲ ಒಳ್ಳೆ ಲಾಂಡ್ರಿ ಮಾಡಿಟ್ಟಿದ್ದಿಯಲ್ಲೋ ಅಂತ ರೇಗಿಸುತ್ತಿದ್ದೂ ಉಂಟು.

ನಮ್ಮ ಕಟ್ಟಡದಲ್ಲಿ ಕುಡಿಯುವ ನೀರಿಗೇ ತತ್ವಾರ, ಇದರ ಮೇಲೆ ಬಟ್ಟೆ ಒಗೆಯಲು ನೀರೆಲ್ಲಿ ತರುವುದು? ಸರಿ, ಹತ್ತಿರದ ಲಾಂಡ್ರಿಯವನು ನನ್ನ ಬಟ್ಟೆ ಒಗೆದು ಒಗೆದೇ ಉದ್ಧಾರವಾಗಿ ಹೋದ!

ನನ್ನ ಮದುವೆಯಾಗಿ ನನ್ನ ಹೆಂಡತಿ ಆ ಪುಟ್ಟ ಕೊಠಡಿಗೆ ಬಂದಾಗ, ನಾನು ಒಂದಷ್ಟು ಬಟ್ಟೆ ಒಟ್ಟಿಗೆ ಅವಳಿಗೆ ಒಗಯಲಿಕ್ಕೆ ಹಾಕಿದೆ. ಪುರುಷಾಹಂಕಾರ ನೋಡಿ, ಹತ್ತು ಜೊತೆಗಳ ಮೇಲೆಯೇ ಪಾಪ ಅವಳೂ ಒಗೆದುಕೊಟ್ಟಳು. ನನ್ನ ಜೀನ್ಸ್ ಪ್ಯಾಂಟುಗಳಿಗೆ ನೀರು ಬಿದ್ದರೆ ಎತ್ತುವುದೇ ಕಷ್ಟ, ಪಾಪ ಈಗಲೂ ಅವನ್ನೆಲ್ಲ ಹೇಗೆ ಒಗೆಯುತ್ತಾಳೋ ಆಕೆ?

ಅವೆಲ್ಲ ಹೊತ್ತುಕೊಂಡು ನಾನು ಒಣಗಿ ಹಾಕಲು ತಾರಸಿ ಏರಿದೆ. ಅಲ್ಲಿ  ಹಗ್ಗವಾಗಲೀ, ತಂತಿಯಾಗಲಿ ಇರಲಿಲ್ಲ. ಸರಿ ನಾನೇ ಒಂದು ನೈಲಾನ್ ಹಗ್ಗ ತಂದು ಈ ಮೂಲೆಯ ಪಿಲ್ಲರಿಗೆ ಕಟ್ಟಿದೆ. ಮತ್ತೊಂದು ಕೊನೆ ಎಲ್ಲಿ ಕಟ್ಟೋಣ ಅಂತ ನೋಡಿದಾಗ  ಹಿಂದಿನ ರೂಂನಲ್ಲಿದ್ದ ಪಾರಿವಾಳಗಳನ್ನು ಸಾಕುತ್ತಿದ್ದ ಹಾಷೀಂ ಭಾಯ್ ಅವರು ತಮ್ಮ ಹಕ್ಕಿಗಳಿಗಾಗಿ ನಿರ್ಮಿಸಿದ್ದ ಹಕ್ಕಿಯ ಚಪ್ಪರ ಕಾಣಿಸಿತು. ಅದನ್ನು ಅವರು ಖಾಲಿ ಬ್ಯಾರಲಿನಲ್ಲಿ ಮಣ್ಣು ತುಂಬಿ ಇಟ್ಟಿದ್ದರು. ಹಗ್ಗದ ಇನ್ನೊಂದು ತುದಿ ಅಲ್ಲಿಗೆ ಕಟ್ಟಿದೆ.

ಒಂದೊಂದಾಗಿ ಬಟ್ಟೆ ಒಣಹಾಕುತ್ತಾ ಬಂದೆ, ಒದ್ದೆ ಬಟ್ಟೆಗಳ ಯಮ ಭಾರಕ್ಕೆ ಹಕ್ಕಿ ಚಪ್ಪರವೂ ಜಗ್ಗುತ್ತಿತ್ತು. ಆ ಕಡೆ ನನ್ನ ಗಮನವೇ ಇರಲಿಲ್ಲ. ಪೂರ್ತಿ ಬಟ್ಟೆ ಒಣ ಹಾಕುವಷ್ಟರಲ್ಲಿ ಧೊಪ್ ಅಂತ ಒಂದು ಸದ್ದು ಕೇಳಿಸಿತು. ಹಕ್ಕಿಯ ಚಪ್ಪರ ನನ್ನ ಕಡೆಯೇ ಜಗ್ಗಿ ನನ್ನ ಮೇಲೆ ಬಿದ್ದಿತ್ತು. ಅದರ ಒಂದು ಚೂಪಾದ ಕೊನೆ ನನ್ನ ಕುತ್ತಿಗೆಗೆ ತಾಕಿ ದೊಡ್ಡ ಗಾಯವೇ ಆಗಿಹೋಯ್ತು.

ಇದ್ದ ಬಟ್ಟೆಗಳನ್ನೆಲ್ಲ ತಾರಸಿಯಲ್ಲೇ ಬಿಟ್ಟವನೇ, ಹೌಹಾರುತ್ತಾ ಗುಬ್ಬಚ್ಚಿ ಗೂಡಿಗೆ ಬಂದೆ. ತೊಟ್ಟ ಬಟ್ಟೆಯೆಲ್ಲ ರಕ್ತ ಸಿಕ್ತ. ನನ್ನವಳು ಮೂರ್ಛೆ ಹೋಗುವುದೊಂದು ಬಾಕಿ!

ನನ್ನ ಹೆಂಡತಿಯನ್ನು ಕೂರಿಸಿಕೊಂಡು ಅದೇ ಹೊಸ ಸ್ಕೂಟರಿನಲ್ಲಿ ನನ್ನ ಅಣ್ಣ ವೈದ್ಯರಾಗಿದ್ದ ನರ್ಸಿಂಗ್ ಹೋಂಗೆ ಓಡಿದೆ.

ಆಗ ಆದ ದೊಡ್ಡ ಗಾಯದ ಗುರುತು ಇಷ್ಟು ವರ್ಷಗಳ ನಂತರವೂ ನನ್ನ ಪುರುಷಾಹಾಂಕಾರದ ಕುರುಹಾಗಿ ನನ್ನ ಕುತ್ತಿಗೆಯಲ್ಲಿದೆ.


ಗಲ್ಫ್ ಕನ್ನಡಿಗದಲ್ಲಿ ಪ್ರಕಟಿತ.
http://gulfkannadiga.com/news/culture/4492.html

27.09.2012

10 ಕಾಮೆಂಟ್‌ಗಳು:

  1. ಇದು ನಮ್ಮ ಲೈಫು. ಗೊತ್ತು ಗುರಿಯಿಲ್ಲವಂತಲ್ಲ. ಕೆಲವೊಮ್ಮೆ ಮದ. ಕೆಲವೊಮ್ಮೆ ಉದಾಸೀನತೆ. ಸಿಹಿ ಅನುಭವಗಳು. ಲಘು ಬರಹ ಚೆನ್ನಾಗಿದೆ ಬದ್ರಮಾಮ್!

    ಪ್ರತ್ಯುತ್ತರಅಳಿಸಿ
  2. ಬದರಿ ಸರ್ ಜೀ..
    ನಿಜ ನಮ್ಮ ಪುರುಷ ಅಂಹಂ ಬಲು ಕಷ್ಟ...

    ನಿಮ್ಮ ಕುಟುಂಬದ ಅನ್ಯೋನ್ಯತೆ ನಾನು ನೋಡಿರುವೆ...

    ಸದಾ ಹೀಗೆ ಸಿಹಿಯಾಗಿರಲಿ...

    ಪ್ರತ್ಯುತ್ತರಅಳಿಸಿ
  3. ಗುಬ್ಬಚ್ಚಿನ ಗೂಡಿನ ಕಥೆಗಳು ಚೆನ್ನಾಗಿವೆ ಬದರಿಯಣ್ಣ.. ಹೀಗೆ ಮೂಡುತ್ತಿರಲಿ..

    ಪ್ರತ್ಯುತ್ತರಅಳಿಸಿ
  4. ಸುಂದರವಾಗಿ ನೀರಿನ ಝರಿಯಂತೆ ಹರಿದಾಡುತಿದೆ ಮುಂದುವರೆಯಲಿ...ನಮ್ಮ ಇಂದಿನ ಅನುಭವಗಳು ನಾಳಿನ ಪಾಠಗಳಾಗುತ್ತವೆ...

    ಪ್ರತ್ಯುತ್ತರಅಳಿಸಿ
  5. ಬದರಿನಾಥರೆ,
    ಊರಲ್ಲಿ ಇರದ ಕಾರಣ, ನಿಮ್ಮ ಲೇಖನವನ್ನು ಓದಲು ವಿಳಂಬವಾಯಿತು. ಅಹಂಕಾರವನ್ನು ಅರಗಿಸಿಕೊಂಡವನೇ ಜಾಣ, ಅಲ್ಲವೆ!

    ಪ್ರತ್ಯುತ್ತರಅಳಿಸಿ
  6. ಕಥೆಯ ಮುಂದುವರೆದ ಭಾಗದಲ್ಲಿ ನವರಸಗಳು ತುಂಬಿಕೊಂಡು ಮುಂದೆ ಮುಂದೆ ಓದಲು ಮತ್ತಷ್ಟು ಸೆಳೆಯುತ್ತಿದೆ ... ನಿಮ್ಮ ಆ ಗುಬ್ಬಚ್ಚಿ ಗೂಡು ಈಗಲೂ ಇದೆಯಾ ಸರ್.. ಅಥವಾ ಬೆಂಗಳೂರಿನ ಶಾಪಿಂಗ್ ಮಾಲ್ , ಬಹುಮಹಡಿ ಕಟ್ಟಡಗಳ ಪಾಲಾಗಿ , ಆ ನೆನಪು ಸಹ ಇಲ್ಲದಾಗಿದೆಯಾ ? ಏಕೆಂದರೆ ನಮ್ಮಪ್ಪಾಜಿಯವರು ಬೆಂಗಳೂರಿನಲ್ಲಿ ಓದುತ್ತಿದ್ದಾಗ ಇದ್ದ ರೂಂ ಈಗ ಶಾಪಿಂಗ್ ಕಾಂಪ್ಲೆಕ್ಸ್ ಆಗಿದೆ.. ಮತ್ತು ಇನ್ನು ಚಿಕ್ಕ ಚಿಕ್ಕ ಹೋಟೆಲ್`ಗಳು ಸಹ ಅಲ್ಲಿ ರಸ್ತೆ ಅಗಲೀಕರಣದಲ್ಲಿ ಮರೆಯಾಗಿ ಹೋಗಿದೆ .. ಈಗ ಅಲ್ಲಿ ಹೀಗಿತ್ತು ಎಂದು ನಮ್ಮ ಅಪ್ಪಾಜಿಯವರು ಹೇಳಿದ ಮಾತುಗಳಷ್ಟೇ ಆ ಸ್ಥಳದ ಇತಿಹಾಸವನ್ನು ತೋರಿಸುತ್ತದೆ .. :)

    ಪ್ರತ್ಯುತ್ತರಅಳಿಸಿ