ಮಂಗಳವಾರ, ಜನವರಿ 27, 2015

ಸುಖ ನಿರ್ಗಮನ...

ನೆಂಟ ಬರುತಾನಂತ
ಇಲ್ಲದೊಪ್ಪವ ಆರೋಪಿಸಿ
ತಿಪ್ಪೆ ಸಾರಿಸಿದ್ದೇ ಬಂತು

ಅವನ ದೃಷ್ಟಿಗೆ ನಿಲುಕುವಷ್ಟೇ
ಗೋಡೆಗೆ ಸುಣ್ಣ ಬಣ್ಣದ ಒಂಟಿ ಲೇಪ,
ಉಣ್ಣುವ ಗಂಗಾಳ, ನೀರ್ಲೋಟಗಳ
ಹಿಡಿ ಹುಣಸೆಯಲಿ ತಿಕ್ಕಿ ಫಳಫಳ,
ಪಟ್ಟಾಂಗ ಕುಳಿತನೆಂದರೆ ದೊಡ್ಡಣ್ಣ
ತಿಮಿಂಗಲೋದರಿ ಸೇರನ್ನಬಾಕ
ಬಸಿದ ಬಿಳೀ ಅಕ್ಕಿಯ ಉದುರನ್ನ,
ಪಟ್ಟಿ ಪಂಚ ಭಕ್ಷ್ಯ ಪರಮಾನ್ನ
ತುಪ್ಪದ ಘಮ ದಿನದ ವಿಶೇಷ!

ಅಗೋ ಬಂದನು ನೆಂಟ,
ತಂದಿಹನೇನೋ ಸಂಚಿಯಲ್ಲಿ
ಇಲ್ಲಿ ಧಾರವಾಹಿ ಕುತೂಹಲ!

ಒಬ್ಬರಿಗೊಬ್ಬರು ಮೈ ಮಸೆದು
ಬಂದೆರಡು ದಿನ ಜಂಟಿ ಗಾನ
ಕಟ್ಟೆ ಪಂಡಿತರಿಗಿದೇ ವರ್ತಮಾನ,
ಕಟಬಾಯಿ ಮೀರಿ ನಕ್ಕರೀರ್ವರೂ
ಬೀದಿ ನಾಯಿಗೂ ನೋಡು ಭಾಗ್ಯ,
ಊರ ಉಸುಬಾರಿಯೂ ಬೇಕವಗೆ
ಹತ್ತೂರನಾಳುವ ಜನ್ಮೇಪಿ ತೆವಲು,
ಕೌರವ ಕಿತಾಪತಿಗವನ ಲೇವಾದೇವಿ
ಗುಡ್ಡೆ ಹಾಕುತ್ತಾನೆಯೇ ಕಡಿದು
ಖಾಲಿ ಬುಟ್ಟಿಯ ಹಾವಾಡಿಗ!

ಅವನೂ ಅಮೋಘ ನಟ
ನಮ್ಮದೂನೂ ಖಾಂದಾನಿ ಕಲಾವಂಶ

ಇಗೋ ಹೊರಟನು ಮರಳಿ
ಬಂಡಿ ಏರಿದವಗೆ ದೆಂಡಿ ಟಾಟಾ,
ಕಿಸಿದದ್ದೇನಸಲು ಮರು ದಿನಕದೇ
ಬೇಲಿಯಾಚೆ ದಾಯಾದಿ ಕಾಟ!
(ಚಿತ್ರ ಕೃಪೆ: ಅಂತರ್ಜಾಲ)

50 ಕಾಮೆಂಟ್‌ಗಳು:

  1. ಭಾರತ-ಅಮೇರಿಕದ ಸಂಬಂಧವನ್ನು ಚೆನ್ನಾಗಿ ಹೇಳಿದಿರಿ ಬದರಿ ಸರ್...ಧಾರವಾಹಿಯ ಕುತೂಹಲದ ಬಳಕೆ ಇದನ್ನು ಇವತ್ತಿನ ಕವಿತೆಯನ್ನಾಗಿಸಿದೆ..

    ಪ್ರತ್ಯುತ್ತರಅಳಿಸಿ
    ಪ್ರತ್ಯುತ್ತರಗಳು
    1. ಗೆಳೆಯ, ಅದಷ್ಟೇ ಅಲ್ಲ ಊರ ಉಸಬಾರಿ ನೆಂಟರು ಮತ್ತು ಕೊಂಕು ಖ್ಯಾತರಿಗೂ ಅನ್ವಯಿಸೇ ಬರೆದಿದ್ದೇನೆ. ಆ ಮಟ್ಟಿಗಿದು ಸಾರ್ವತ್ರಿಕ. :-D
      ಓದಿದ ನಿಮಗೆ ಶರಣು, ಅರಳಲಿ ನಿಮ್ಮದೂ ಬ್ಲಾಗು. :-)

      ಅಳಿಸಿ
  2. ಮರುದಿನವೇ ಬೇಲೆಯಾಚೆ ದಾಯಾದಿಗಳ ಕಾಟ !
    ಹೌದು ! ದಾಯಾದಿಗಳಿಗೂ ಕಂತಿನಲ್ಲಿ ಹಣ ಕಳಿಸುವ ಚತುರನವ !
    ಬೇಟಿಯಾ ಮರ್ಮ ನಮಗರಿವಾಗುವ ಮೊದಲೆ
    ಗಾಳದ ತುದಿಯಲ್ಲಿ ಹುಳುವಾಗಿರುವ ಅನುಭವ!

    ಪ್ರತ್ಯುತ್ತರಅಳಿಸಿ
    ಪ್ರತ್ಯುತ್ತರಗಳು
    1. ಅಲ್ಲೂ ತೂಗಿ, ಇಲ್ಲಿಯೂ ಜಿವುಟಾ ದೊಡ್ಡಣ್ಣನನ್ನು ಸಲೀಸಾಗಿ ನಂಬಲಿಕ್ಕೆ ಬರುವುದೇ ಪಾರ್ಥಸಾರಥಿ ಸಾರ್! ಭೋ ಡೇಂಜರಪ್ಪ ಈ ಅಪ್ಪುಗೆ... :-)

      ಅದಿರಲಿ, ತಮ್ಮ ವ್ಯಾಕರಣ ಬ್ಲಾಗು ಚಾಲ್ತಿಯಲ್ಲಿದೆ. ಮಹದುಪಕಾರ. ಆದರೆ ತಮ್ಮ ಅಸಲೀ ಬ್ಲಾಗಲ್ಲಿ ಕಥೆಗಳೂ ಇಲ್ಲ ಕವನಗಳು ಅಸಲೇ ಇಲ್ಲ! ಈ ಬಗ್ಗೆ ನನ್ನ ತೀವ್ರ ಪ್ರತಿಭಟನೆ ಇದೆ. :-(

      ಅಳಿಸಿ
  3. ಸೂಪರ್ ಕವಿತೆ ಸರ್. ವರ್ತಮಾನಕ್ಕೆ ಸೂಕ್ತ ಪದಬಂಧ.. ದೊಡ್ಡಣ್ಣನದು ಡೇಂಜರ್ ಅಪ್ಪುಗೆ ಎಂದಿದ್ದು ನಿಜ..

    ಪ್ರತ್ಯುತ್ತರಅಳಿಸಿ
    ಪ್ರತ್ಯುತ್ತರಗಳು
    1. ಅಲ್ಲವೇ ಮೇಡಂ, ದೊಡ್ಡಣ್ಣ ಎಷ್ಟೇ ನೈಸಾಗಿ ಮಾತನಾಡಿದರೂ ಸಹ ಅವನ ಸಪೋರ್ಟು ನೆರೆ ದೇಶಕ್ಕೇ! :-(

      ಅಳಿಸಿ
  4. ಹಹಹ..
    ತುಂಬಾ ಚೆನ್ನಾಗಿದೆ ವಿಡಂಬನೆ ಬದರಿಯವರೇ.
    ನಿಸ್ವಾರ್ಥ ವಿಡಂಬನೆಯಲ್ಲಿ ನಿಮ್ಮದು ಎತ್ತಿದ ಕೈ ಅಂತಲೇ ಹೇಳಬಹುದು.. :-D
    -Rj

    ಪ್ರತ್ಯುತ್ತರಅಳಿಸಿ
  5. ಒಳ್ಳೆಯ ಸಾಲುಗಳು ಸರ್ ..... ಅರ್ಥಗಳನ್ನು ಮೈಗೂಡಿಸಿಕೊಂಡ ಚಂದದ ಸಾಲುಗಳು :)

    ಪ್ರತ್ಯುತ್ತರಅಳಿಸಿ
  6. ಕವಿತೆಗಳನ್ನು ಎಲ್ಲೇ ಓದಿದರೂ ನಿಮ್ಮದೆಂದು ಗುರುತಿಸಬಹುದು. ಪದಪದಗಳಲ್ಲಿ ನಿಮ್ಮ ಸಹಿ ಎದ್ದು ಕಾಣುತ್ತಿದೆ. ತುಂಬಾ ಚೆನ್ನಾಗಿವೆ.

    ಪ್ರತ್ಯುತ್ತರಅಳಿಸಿ
    ಪ್ರತ್ಯುತ್ತರಗಳು
    1. ಅನಂತ ಧನ್ಯವಾದಗಳು ಸಾರ್. ನಿಮ್ಮ ನಿರಂತರ ಓದಿನಿಂದಲೂ ಮತ್ತು ಪ್ರೋತ್ಸಾಹದಿಂದಿಲೂ ನನಗೆ ಇನ್ನೂ ಬರೆಯುವ ಉಮೇದಿ ಇರುವುದು. :-)

      ಅಳಿಸಿ
  7. ನಿಮ್ಮ ಪದಬಳಕೆ ಮತ್ತು ಆಯ್ದುಕೊಂಡ ವಿಷಯ ಎರಡೂ ಇಷ್ಟ ಆಯ್ತು ಸರ್.
    ರಾಜೋ ಅವರು ಹೇಳಿದ ಹಾಗೆ ನಿಸ್ವಾರ್ಥ ವಿಡಂಬನೆ ಯಲ್ಲಿ ನೀವು ಎತ್ತಿದ ಕೈ.

    ಪ್ರತ್ಯುತ್ತರಅಳಿಸಿ
    ಪ್ರತ್ಯುತ್ತರಗಳು
    1. ನಿಸ್ವಾರ್ಥ ವಿಡಂಬನೆ ನಿಜ ನಿಜ...
      ಆಯ್ದುಕೊಂಡ ವಿಚಾರದ ಉಪ ಸಂಹಾರ ಸದಾ ಕಾಡುವ ಬೆಂಭೂತವಾಗದಿರಲಿ ಎಂಬುದೇ ನಮ್ಮೆಲ್ಲರ ಪ್ರಾರ್ಥನೆ. :-(
      ಕಮೆಂಟು ಅರ್ಥಗರ್ಭಿತವಾಗಿದೆ ಧನ್ಯವಾದಗಳು. :-)

      ಅಳಿಸಿ
  8. ಸಾರ್ವತ್ರಿಕ ಸತ್ಯದ ವಿಡಂಬನಾತ್ಮಕ ಅನಾವರಣ. ನಿಮ್ಮದೇ ಸಿಗ್ನೇಚರ್ ಸ್ಟೈಲ್ನಲ್ಲಿ! ವಾಹ್.. ಮೆಚ್ಚಿದೆ!

    ಪ್ರತ್ಯುತ್ತರಅಳಿಸಿ
    ಪ್ರತ್ಯುತ್ತರಗಳು
    1. ನನ್ನದೂ ಒಂದು ಸಿಗ್ನೇಚರ್ ಸ್ಟೈಲ್ ಇದೆ ಅನ್ನೋದೇ ಖುಷಿ ಸಂಗತಿ. ಅದನ್ನು ತಾವು ಗುರುತಿಸಿದ್ದು ಸಂತೋಷದ ವಿಚಾರ ನನಗೆ. :-)
      ತಮ್ಮ ಬೆನ್ನು ತಟ್ಟುವಿಕೆ ಸದಾ ಹೀಗೆ ಇರಲಿ.
      ಬ್ಲಾಗುಗಳು ಬೆಳಗುತಿರಲಿ...

      ಅಳಿಸಿ
  9. ಜಟ್ಪಿಯಾಗಿದ್ದೀರಿ ಕವಿತೆಯ ಮೂಲಕ ಬಂದವನಿಗೊಂದು ಗಟ್ಟಿಪೂಜೆ ಮಾಡಿ.

    ಪ್ರತ್ಯುತ್ತರಅಳಿಸಿ
    ಪ್ರತ್ಯುತ್ತರಗಳು
    1. ಹೂವಪ್ಪ, ಯಾಕಪ್ಪ ನೀವು ಬ್ಲಾಗಿಸಿತ್ತಿಲ್ಲ ಕಣಪ್ಪ.
      ಬ್ಲಾಗಿಗೆ ವಾಪಸಾಗಪ್ಪ.
      ನಿಮ್ಮ ಕಮೆಂಟು ನನಗೆ ನಿಜ ಸಮ್ಮಾನ.

      ಅಳಿಸಿ
  10. ತುಂಬಾ ಚೆನ್ನಾಗಿ ಮೂಡಿ ಬಂದಿದೆ ನಿಮ್ಮ ವಿಡಂಬನಾತ್ಮಕ ಕವಿತೆ. ಇಂದಿನ ಕಾಲಕ್ಕೆ ಅದರಲ್ಲೂ ನಮ್ಮ ನಗರ ಜೀವನಕ್ಕೆ ಸೂಕ್ತವಾದ ಕವಿತೆ.

    ಪ್ರತ್ಯುತ್ತರಅಳಿಸಿ
  11. ಬಹಳ ಚೆನ್ನಾಗಿದೆ ಸರ್ ನಿಮ್ಮ ವಿಡಂಬನಾತ್ಮಕ ಕವಿತೆ

    ಪ್ರತ್ಯುತ್ತರಅಳಿಸಿ
  12. ಪ್ರತ್ಯುತ್ತರಗಳು
    1. ಧನ್ಯವಾದಗಳು ಮೇಡಂ.
      ಆದರೂ ವಾಸುದೇವದಲ್ಲಿ ಮಾದ್ಯಮ ಬರಹಗಳು ಮತ್ತು ತಮ್ಮ ನವಿರಾದ ಕವಿನಗಳ ಬ್ಲಾಗೂ ಬರಹಗಳಿಲ್ಲದೆ ಸೊರಗಿದೆ. ದಯೆತೋರಿಸಿರಿ. :-)

      ಅಳಿಸಿ
  13. ಪ್ರತ್ಯುತ್ತರಗಳು
    1. ಕಳೆದು ಹೋಗಿದ್ದೆ ಬ್ಲಾಗಿಗನ ಪುನರಾಗಮನವಾದಂತಹ ಖುಷಿ ಕೊಟ್ಟಿತು ನಿಮ್ಮ ಕಮೆಂಟು. :-)

      ಅಳಿಸಿ
  14. ವಿಭಿನ್ನ ಬ್ಲಾಗಿಗ, ಶ್ರೀನಿವಾಸ ಪ್ರಭು ಅವರ ಊವಾಚ:
    ಬದರಿಯವರ ಬರಹ ಅಂದರೆ ಹಾಗೆ. "ಅವನೂ ಅಮೋಘ ನಟ
    ನಮ್ಮದೂನೂ ಖಾಂದಾನಿ ಕಲಾವಂಶ" ! ಎಷ್ಟೊಂದು ವಾಸ್ತವ! ನೆಂಟರು ಬರುವವರಿದ್ದಾರೆ ನಮ್ಮ ಮನೆ ಹೇಗೆ ತಾತ್ಕಾಲಿಕವಾಗಿ ಬದಲಾಯಿತುತ್ತೇವೆ ಅಲ್ಲವೇ? ಹಿಂದೆಯೂ ಇದು ನಡೆದಿತ್ತು ಈಗಲೂ ನಡೆಯುತ್ತಿದೆ ಮುಂದೆಯೂ ನಡೆಯಲಿದೆ. ಇದು ನಮ್ಮ ಮನೆಯಿಂದ ದೇಶದವರೆಗೂ ಅನ್ವಯಿಸುತ್ತದೆ. ಲಯವಾದ ಬರವಣಿಗೆಯ ರುಚಿ ನೋಡಿದರೆ ಮತ್ತೊಮ್ಮೆ ಓದಿಸುತ್ತೆ. ಹಾಸ್ಯ ಪ್ರವೃತ್ತಿಯವರಿಗೆ ಮುಗುಳು ನಗುವಂತೆ ಬರವಣಿಗೆ ಸಾಗಿದೆ. ಚೆನ್ನಾಗಿದೆ ಸಾರ್.

    ಪ್ರತ್ಯುತ್ತರಅಳಿಸಿ
    ಪ್ರತ್ಯುತ್ತರಗಳು
    1. ತಮ್ಮ ಕಮೆಂಟು ನನಗೆ ಗ್ಲೂಕೋಸಿನಂತೆ ಕೆಲಸ ಮಾಡುತ್ತದೆ. ಇನ್ನೂ ಕವನಗಳನ್ನು ಬರೆಯಬೇಕೆನಿಸುತ್ತಿದೆ.

      ಅಳಿಸಿ
  15. ವಿಶಿಷ್ಟ ಕವಿತೆ. ಅರ್ಥಪೂರ್ಣ. ಚಿಂತನೆಗೆ ವಸ್ತು.
    ಪ್ರಸಾದ್.

    ಪ್ರತ್ಯುತ್ತರಅಳಿಸಿ
  16. ಅವನ ದೃಷ್ಟಿಗೆ ನಿಲುಕುವಷ್ಟೇ
    ಗೋಡೆಗೆ ಸುಣ್ಣ ಬಣ್ಣದ ಒಂಟಿ ಲೇಪ,

    ಕಿಸಿದದ್ದೇನಸಲು ಮರು ದಿನಕದೇ
    ಬೇಲಿಯಾಚೆ ದಾಯಾದಿ ಕಾಟ!

    ಸಮಯ ಪ್ರಜ್ಞೆಯ ಕವಿತೆ ಗುರುಗಳೇ .
    ತುಂಬಾ ಅರ್ಥಪೂರ್ಣವಾಗಿದೆ.
    ಸಂಬಂಧಿಸಿದವರು ಅರ್ಥ ಮಾಡಿಕೊಂಡಾರೆಯೇ ??

    ಪ್ರತ್ಯುತ್ತರಅಳಿಸಿ
    ಪ್ರತ್ಯುತ್ತರಗಳು
    1. ಅವರಿಗೆ ಕನ್ನಡ ಬರಲ್ಲ ಮೇಡಂ, ಅದೇ ನನ್ನ ಧೈರ್ಯ!
      :-)
      ದಯವಿಟ್ಟು ತಮ್ಮ ಬ್ಲಾಗನ್ನೂ ಮರೆಯಬೇಡಿ.

      ಅಳಿಸಿ
  17. ಅಭಿನಂದನೆಗಳು ಸರ್
    ಕಂಡದ್ದಷ್ಟೇ ಕಾಣ್ಕೆ ಎಂಬುವಂತೆ
    ಆಗಮಿಸುವ ನಂಟನ ಖುಷಿಪಡಿಸಲು
    ಕೈಡೆಟುವುದನ್ನು ಕಂಗೊಳಿಸುವಂತೆ ಬಿಂಬಿಸುವ
    ಆದರಾತಿಥ್ಯದ ವಿಡಂಬನೆ ಅತ್ಯಂತ ಮಾರ್ಮಿಕವಾಗಿ ಮೂಡಿಬಂದಿದೆ....

    ಪ್ರತ್ಯುತ್ತರಅಳಿಸಿ
    ಪ್ರತ್ಯುತ್ತರಗಳು
    1. ಖುಷಿಯಾಯಿತು ನಿಮ್ಮ ಕಮೆಂಟು ಓದಿ.
      ಉತ್ಕೃಷ್ಟ ಕವಿಯಾದ ನಿಮ್ಮ ಆಶೀರ್ವಾದ ನನ್ನ ಮೇಲೆ ಸದಾ ಇರಲಿ.

      ಅಳಿಸಿ
  18. ಸುವರ್ಣ ಸುದ್ದಿ ವಾಹಿನಿಯ ಪ್ರಧಾನ ತಾಂತ್ರಿಕ ಅಧಿಕಾರಿ
    ಶ್ರೀಯುತ. ವಾಸುದೇವ ಸಾರ್ ಅವರ ಅಭಿಪ್ರಾಯ:

    Kandiddu sullagabahudu, kanaddu nijavagabahudu! Kanada sathyavanna bichhitidare Nanna sahudyogi Badarinathaharu! Obama bhetiya hindina uddesha matthu badalagada bhavishyda khatora sathya nudididdare. Marane dinave nadeda Col.Rai kole idakke sakshi.

    Very well observed. Col. Rai's murder made your forecast true.

    ಪ್ರತ್ಯುತ್ತರಅಳಿಸಿ
    ಪ್ರತ್ಯುತ್ತರಗಳು
    1. ಅನಂತ ಧನ್ಯವಾದಗಳು ಸಾರ್.
      ಹುತಾತ್ಮ ರಾಯ್ ಅವರ ಆತ್ಮಕ್ಕೆ ಶಾಂತಿ ಸಿಗಲಿ.
      ಆಳುವ ದೊರೆಗಳು ಇದರಿಂದಲಾದರೂ ಪಾಠ ಕಲಿತಾರೆ?

      ಅಳಿಸಿ
  19. ಬದರಿನಾಥರೆ,
    ನಿಮ್ಮ ಅಪೂರ್ವ ಶೈಲಿಯ ಮತ್ತೊಂದು ಕವನವನ್ನು ಮತ್ತೊಮ್ಮೆ ಸವಿಯುವ ಅವಕಾಶ ಸಿಕ್ಕಿತು. ಧನ್ಯವಾದಗಳು.

    ಪ್ರತ್ಯುತ್ತರಅಳಿಸಿ
  20. ಸುಂದರ ಸಾಲುಗಳು ... ಇರುವುದನ್ನು ಹೀಗೂ ಹೇಳಬಹುದು ಎಂದು ತೋರಿಸಿದ್ದೀರಿ .!!!
    ನಂಟ ... ಉಂಡು ಕೊಂಡೂ ಹೋಗದೆ ಕೊಟ್ಟು ಹೋದ ಅನ್ನುವುದೇ ಸ್ವಲ್ಪ ಸಮಾಧಾನ

    ಪ್ರತ್ಯುತ್ತರಅಳಿಸಿ
    ಪ್ರತ್ಯುತ್ತರಗಳು
    1. ಏನು ಕೊಟ್ಟು ಹೋದನೋ ಗೆಳೆಯ, ನಮ್ಮನ್ನು ನಮ್ಮ ಪಾಡಿಗಿರಲು ಅವನೆಲ್ಲಿ ಬಿಟ್ಟಾನು? ಕೆರೆಯುವುದೇ ಅವನ ಚಾಳಿ! :-(
      ತಮ್ಮ ಪ್ರೀತಿಯ ಪ್ರೋತ್ಸಾಹಕ್ಕೆ ಶರಣು.

      ಅಳಿಸಿ
  21. ಬದರೀನಾಥರೇ, ನೆಂಟರ ಉಸಾಬರಿ ಸೊಗಸಾಗಿದೆ. ಇಂದು ನೆಂಟರು ಬರುವುದು-ಹೋಗುವುದು ಎಲ್ಲವೂ ಭೂತಕಾಲಕ್ಕೆ ಸೇರಿಬಿಟ್ಟಿದೆ. ಈಗ ಗಂಡ-ಹೆಂಡತಿ, ಅಪ್ಪ-ಅಮ್ಮ-ಮಕ್ಕಳು ಇವರುಗಳೇ ಪರಸ್ಪರ ನೆಂಟರಾಗುತ್ತಿದ್ದಾರೆ.

    ಪ್ರತ್ಯುತ್ತರಅಳಿಸಿ
    ಪ್ರತ್ಯುತ್ತರಗಳು
    1. ತಾವು ಹೇಳುವ ಕೋನದಲ್ಲೂ ನಿಜವಿದೆ. ಮನೆಯೊಳಗೇ ಭಾವನೆಗಳನ್ನು ಹಂಚಿಕೊಳ್ಳುವ ಕಾಲವಿದಲ್ಲ. ಗೋಡೆಗಳ ನಡುವೆಯೇ ಅಪರಿಚಿತರು!

      ತಮ್ಮ ಈ ಸಹೃದಯ ಪ್ರೋತ್ಸಾಹ ಸದಾ ಹೀಗೇ ಇರಲಿ...

      ಅಳಿಸಿ
  22. ವರ್ಣ ರಂಜಿತ ಬಣ್ಣನೆ, ಸತ್ಯತೆಗಳಿಂದ ಕೂಡಿದ ಕವನ, ಗೆಳೆತನವೋ ಭಯವೋ ಗೊತ್ತಿಲ್ಲ ಅಂತೂ ಬಂದು ಹೋದ ದೊಡ್ಡಣ್ಣ.
    ಜೊತೆಗೆ ಕೋಟಿ ಕೋಟಿ ವೆಚ್ಚ.

    ಪ್ರತ್ಯುತ್ತರಅಳಿಸಿ
    ಪ್ರತ್ಯುತ್ತರಗಳು
    1. 'ಗೆಳೆತನವೋ ಭಯವೋ' ಸರಿಯಾಗಿ ಹೇಳಿದಿರಿ ಸಾಹೇಬರೇ. ಅಥವ ದೊಡ್ಡಣ್ಣನನ್ನು ಸರಿ ಮಾಡಿಕೊಳ್ಳುವ ಮಹದುದ್ಧೇಶವೂ ಇದ್ದೀತು!
      ಹೀಗೆ ಬರುತಿರಿ ಈ ಅಙ್ಞಾತ ಕವಿಯ ಬ್ಲಾಗಿಗೆ.

      ಅಳಿಸಿ
  23. ಒಂದು ವಿಷಯವನ್ನು ಪದಗಳಿಂದ ಅಲಂಕರಿಸಿ ಅದಕ್ಕೆ ನಿಮ್ಮ ಸ್ಪರ್ಶ ಕೊಡುವುದು ನಿಮ್ಮ ಶಕ್ತಿ.
    ಯಾರಾದರು ಮನೆಗೆ ಬರುತ್ತಾರೆಂದರೆ ಅವರಿಗೆ ಇಷ್ಟವಾಗುವ ರೀತಿಯಲ್ಲಿ ಆ ಅಷ್ಟು ದಿನಗಳು, ಕ್ಷಣಗಳು, ಬದುಕುವುದು ನಮ್ಮ ನೆಲೆಯ ಸಂಸ್ಕೃತಿ.

    ಮೇಯರ್ ಮುತ್ತಣ್ಣ ಚಿತ್ರದಲ್ಲಿ ಅಣ್ಣಾವ್ರು ಹೇಳಿದ ಹಾಗೆ ನಮ್ಮ ನಾಡಿನ ಬಡತನ ತೋರಿಸುವ ಬದಲು, ನಮ್ಮ ಕಲೆ ಸಂಸ್ಕೃತಿಯ ಪರಿಚಯ ಮಾಡಿಕೊಡುತ್ತಾ ನಮ್ಮ ನಾಡಿನಲ್ಲಿರುವ ಹುಳುಕುಗಳನ್ನು ಮುಚ್ಚಿ... ನಮ್ಮ ನಾಡಿನಲ್ಲಿರುವ ಐಸಿರಿಯ ಹೇಳಬೇಕು ಎನ್ನುವ ಅರ್ಥ ಬರುವ ಮಾತುಗಳು ಇವೆ.

    ಆ ನಿಟ್ಟಿನಲ್ಲಿ ನಿಮ್ಮ ಕವನದಲ್ಲಿ ಕಂಡು ಕಾಣದಂತಿರುವ ಈ ಗುಪ್ತ ಗಾಮಿನಿ ಸಂದೇಶ ಸುಂದರವಾಗಿ ಮೂಡಿ ಬಂದಿದೆ
    ಸೂಪರ್ ಬದರಿ ಸರ್

    ಪ್ರತ್ಯುತ್ತರಅಳಿಸಿ
  24. ಮರು ದಿನಕದೇ ಬೇಲಿಯಾಚೆ ದಾಯಾದಿ ಕಾಟ!, ಎಂಬ ಸಾಲುಗಳು, ಸಂಬಂದದ ನೈಜತೆಯ ಬಗ್ಗೆ ಕಾಡುತ್ತವೆ

    ಪ್ರತ್ಯುತ್ತರಅಳಿಸಿ