Sunday, June 29, 2014

’ಪಾತ್ರ ಅನ್ವೇಷಣಾ’ ಕವನ ಸಂಕಲನಕ್ಕೆ ಸುನಾಥ್ ಅವರ ಮುನ್ನುಡಿ...

ನನ್ನ ಚೊಚ್ಚಲ ಕವನ ಸಂಕಲ ಇದೀಗ ಮಾರಾಟಕ್ಕೆ ಲಭ್ಯವಿದೆ.
ಪ್ರತಿಗಳಿಗಾಗಿ:
ಶ್ರೀ. ಅಶೋಕ್ ಶೆಟ್ಟಿ: ashokkodlady@gmail.com
ಅಥವಾ ನನ್ನ ಈ ಮೈಲ್:
badari7@yahoo.com ಗೆ ಸಂಪರ್ಕಿಸಬಹುದು.
ಬೆಲೆ: 100/-
ಶ್ರೀ ಸುನಾಥ್ ಅವರ ಜೊತೆಗೆ ನಾನು...

ಮುನ್ನುಡಿ

ಗಾಳಿ ಕಿರಿಸುಳಿ ಹುಟ್ಟಿತು, ಕವನವೇಷವ ತೊಟ್ಟಿತು”.
ವರಕವಿ ಬೇಂದ್ರೆಯವರು ಕಾವ್ಯವನ್ನು ವ್ಯಾಖ್ಯಾನಿಸುವ ರೀತಿ ಇದು. ಬದರಿನಾಥ ಪಲವಳ್ಳಿಯವರ ಕವನಗಳಿಗೆ ಈ ವ್ಯಾಖ್ಯಾನವು ಪೂರ್ಣರೂಪದಲ್ಲಿ ಅನ್ವಯಿಸುತ್ತದೆ. ಪಲವಳ್ಳಿಯವರ ಕವನಗಳ ವಿಷಯ ಏನೇ ಆಗಿರಲಿ, ಅವು ನಮ್ಮನ್ನು ಗಾಳಿಯ ಕಿರಿಸುಳಿಯಂತೆ ಸ್ಪರ್ಷಿಸುತ್ತವೆ. ಸುಖದ ಕಚಗುಳಿಯೇ ಆಗಿರಲಿ, ವೈಯಕ್ತಿಕ ದುಮ್ಮಾನವೇ ಇರಲಿ ಅಥವಾ ಸಾಮಾಜಿಕ ದುರಂತವೇ ಸಂಭವಿಸಿರಲಿ, ಈ ಕವಿಯ ಕವನಗಳು ನಯವಾದ ಬಣ್ಣಗಳಲ್ಲಿ ರೂಪುಗೊಳ್ಳುತ್ತವೆ. ಈ ಗುಣಧರ್ಮದಿಂದಾಗಿ ಪಲವಳ್ಳಿಯವರ ಕವನಗಳು ಓದುಗನಿಗೆ ತುಂಬ ಆಪ್ತವಾಗುತ್ತವೆ.

ಆಪ್ತತೆಯು ಪಲವಳ್ಳಿಯವರ ಕಾವ್ಯದ ಮೂಲ ಮನೋಭಾವವೆಂದು ನನಗೆ ಭಾಸವಾಗುತ್ತದೆ. ಅವರ ಆಪ್ತವಲಯದಲ್ಲಿ ಮಗು, ನಲ್ಲೆ ಅಥವಾ ಗೆಳೆಯರಷ್ಟೇ ಅಲ್ಲ, ಅವರ ಊರಿನ ಪಕ್ಕದ ಪಿನಾಕಿನಿ ನದಿ, ಅವರ ಕರ್ಮಕ್ಷೇತ್ರವಾದ ಬೆಂಗಳೂರೂ ಸಹ ಸೇರ್ಪಡೆಯಾಗುತ್ತವೆ. ತಮ್ಮ ಜಾಲತಾಣದಲ್ಲಿ ಅವರು ಪ್ರಕಟಿಸಿದ ಮೊದಲ ಕವನವೇ ಒಂದು ಈಕ್ಲಿಪಸ್ ಮರದ ಬಗೆಗೆ. ಆನಂತರದ ಕವನವೊಂದರಲ್ಲಿ ತಮ್ಮ ಬೆಂಗಳೂರಿನ ಸದ್ಯದ ಸ್ಥಿತಿಯ ಬಗೆಗೆ ಈ ಕವಿ ಅಲವತ್ತುಕೊಳ್ಳುವ ಬಗೆಯನ್ನು ನೋಡಿರಿ:
ಏನು ಹಿತವಾಗಿದ್ದೆ
ಅಂದು ನೀ ಪ್ರಿಯೇ ಬೆಂದಕಾಳೂರೇ...

ಮಳೆಗಾಲಕ್ಕೆ ನೀನು ಇಂತಿಷ್ಟೇ ಒದ್ದೆ
ಚಳಿಗೆ ಇರುಳೆಲ್ಲ ಕಾಡೋ ಅಪ್ಪುಗೆ
ಬೇಸಿಗೆಗೊಂದಿಷ್ಟು ಬೆವರ ಸಾಲು ”

ಒಂದು ನಗರವನ್ನು ಪ್ರಿಯೆ ಎಂದು ಕರೆಯಬಲ್ಲವರು, ತಮ್ಮ ಕೆಳದಿಯನ್ನು ಏನೆಂದು ಕರೆಯಬಹುದು? ಆಕೆ ನನ್ನೊಳಗೆ ನೀನೆಂಬ ಸಂಚಲನ ಕೋಶ! ಆದುದರಿಂದಲೇ ದಾಂಪತ್ಯಜೀವನವನ್ನು ಹೊರಳಿ ನೋಡಿದಾಗ ಇವರಿಗೆ ಅನ್ನಿಸುವದು:
ಸವೆದ ಹಾದಿಯ ಹಿನ್ನೋಟ, ಬದುಕೆಲ್ಲ ದಿವ್ಯ ಗಂಧ.
(---ಮಧುಮಯ ಸಮಯ)

ನಿಜ ಹೇಳಬೇಕೆಂದರೆ ದಾಂಪತ್ಯಪ್ರೇಮವು ಬದರಿನಾಥರ ಕಾವ್ಯದ ಒಂದು ಪ್ರಮುಖ ಭಾಗವಾಗಿದೆ. ಇನಿಯಳ ಮಾಧುರ್ಯವನ್ನು ಅರಿಯಲು ರಸಿಕನಿಗೇ ಸಾಧ್ಯ. ಅದನ್ನು ನವಿರಾಗಿ ಚಿತ್ರಿಸುವ ಕಲೆ ನೈಜ ಕವಿಗೇ ಸಾಧ್ಯ! ಈ ಕವಿತ್ವದ ಸಾಕ್ಷಿಯಾಗಿ ಪಲವಳ್ಳಿಯವರ ಕವನವೊಂದರ ಕೆಲವು ಸಾಲುಗಳನ್ನು ನೋಡಿರಿ:

"ತುಂತುರು ಮಳೆ ಹನಿಗೆ

ತೊಯ್ದ ಮಲ್ಲಿಗೆಯ ಬಳ್ಳಿ

ನಾಚಿ ನೀರಾಗಿ ನನಗಾಗಿ

ಹನಿಯುತಿದೆ ಒಲುಮೆ"

(...................ಅವಳು)

ಹಾಗೆಂದು ಜೀವನವೆಲ್ಲ ಹೂವ ಹಾಸಿಗೆಯಾಗಿರುವದಿಲ್ಲ. ಗಂಡಹೆಂಡಿರಲ್ಲಿ ಏನೋ ಮನಸ್ತಾಪವಾಗಬಹುದು. ಅದನ್ನು ಸರಿಪಡಿಸುವ ಸಮಾಧಾನ, ತಾಳ್ಮೆ ಇಬ್ಬರಿಗೂ ಬೇಕು. ಇಂತಹ ಗುಣ ಈ ಕವಿಯಲ್ಲಿ ಧಾರಾಳವಾಗಿದೆ. ಈ ಗುಣವೇ ಕವನವಾಗಿ ಹೊಮ್ಮುವುದು ಕವಿಸಹಜವಾದ ವ್ಯಾಪಾರ. ಪಲವಳ್ಳಿಯವರ ಮನಸ್ಸಿಗೆ ಕನ್ನಡಿಯಾದಂತಹ ಅವರ ಕವನವೊಂದರ ಸಾಲುಗಳನ್ನು ಗಮನಿಸಿ:
ಸುಮ್ಮನೆ ಓದಿ ನೋಡು

ಮತ್ತೆ ಗುನುಗಿಕೋ

ನಕ್ಕು ಹೇಳಿಬಿಡು

ಒಲವಾಯ್ತು ಅನಾವರಣ

ಬಾ ಹಾಡಿಕೊಳ್ಳೋಣ

ಜೋಡಿ ಗಾನ..”

(----ಜೋಡಿಗಾನ)
ಪಲವಳ್ಳಿಯವರ ಕವನಗಳಲ್ಲಿ ಬರುವ ಇಂತಹ ಹೃದಯಸ್ಪರ್ಶಿ ಚಿತ್ರಗಳು ಅವರ ಕವನಗಳ ಮುಖ್ಯ ಆಕರ್ಷಣೆಯಾಗಿವೆ. ನಾನು ಅತ್ಯಂತ ಮೆಚ್ಚಿಕೊಂಡ ಅವರ ಚಿತ್ರಕ ಕವನಗಳಲ್ಲಿ ಸಂಧ್ಯಾರಾಗವೂ ಒಂದು. ಪ್ರೇಮಚಿತ್ರಗಳ ಮೆರವಣಿಗೆಯೇ ಈ ಕವನದಲ್ಲಿ ತುಂಬಿದೆ. ‘ಹೊರಟು ನಿಂತಿರೇ ದೊರೆ, ಇರುಳು ಕರಗಿತೇ ಇಷ್ಟು ಬೇಗ?’ ಎಂದು ಪ್ರಾರಂಭವಾಗುವ ಈ ಕವನವು ತಿಂಗಳೊಪ್ಪತ್ತಿನಲ್ಲಿ, ನನ್ನ ಮನೆಯಂಗಳದಿ ಚಪ್ಪರ ಎಂದು ಕೊನೆಗೊಳ್ಳುವಾಗ, ಒಂದು ಅದ್ಭುತ ಜೀವನಧರ್ಮದ ದರ್ಶನವಾಗುತ್ತದೆ ಎಂದು ಹೇಳಬಹುದು.

ತಮ್ಮ ಗೆಳೆಯನಿಂದ ಬೇರ್ಪಡೆಯಾಗುತ್ತಿರುವಾಗಲೂ ಸಹ ಈ ಸಹೃದಯ ಕವಿ ಅವನಿಗೆ ಅಕ್ಷರದ ಹೂಮಾಲೆಯನ್ನು ಸಮರ್ಪಿಸುತ್ತಾರೆ! ಹೊಸ ಬೆಳಗಿನಲ್ಲಿ ತಮ್ಮ ಹೊಸ ದಾರಿಯನ್ನು ಹಿಡಿಯುವಾಗ ಅವರಿಗೆ ಗೆಳೆಯನ ಅಗಲುವಿಕೆಯ ವಿಷಾದವಿದೆ:
ನಾಳೆ ಹೊಸ ಬೆಳಗು

ನನ್ನದೇ ದಾರಿಗುಂಟ

ಒಬ್ಬಂಟಿ ಪಯಣ.

ಉಳಿದದ್ದು ಬರಿ ವಿಷಾದ..”

ಭಾವಜೀವಿಯಾದ ಈ ಕವಿಗೆ ಬಾಲ್ಯದ ಗೆಳತಿಯರ ಮಧುರ ನೆನಪು ಸಹಜವಾದದ್ದು. ಅಂತಹ ಗೆಳತಿಯೊಬ್ಬಳು ಆಕಸ್ಮಿಕವಾಗಿ ಭೇಟಿಯಾದರೆ ಹೇಗಿರಬಹುದು?
ಭಲೇ ಕಲಾವಿದೆ!

ಹಳತನ್ನ ಮರೆತಂತೆ

ದಿವ್ಯ ನಟನೆ!

ನನ್ನ ಕಣ್ಣಾಲಿಯಲಿ

ದುಮ್ಮಿಕ್ಕಲಾರದೆ ತಡೆದ

ಕಣ್ಣೀರ ಹನಿ!”

(--ಉಪನಯನ)

ಕವಿ ತನ್ನ ಬಾಲ್ಯದ ಗೆಳತಿಗೆ ತನ್ನ ಮನಸ್ಸಿನಲ್ಲಿಯೇ ಪ್ರಶ್ನಿಸುತ್ತಾರೆ:
ಎಂದಾದರೂ ನೆನಪಾದೀತೆ ಹೇಳು,

ನೀಳ ದಾರದ ಕೊನೆಗಳೆರಡೂ ದೂರ ದೂರ

ಬೆಂಕಿ ಕಡ್ಡಿ ಖಾಲಿ ಪೆಟ್ಟಿಗೆಗಳೆರಡು ಬಂಧಿ.”

(--ನನ್ನೆದೆಯ ಜೋಕಾಲಿ)

ಈ ಪ್ರಶ್ನೆಗೆ ಉತ್ತರ ಕವಿಯಲ್ಲಿಯೇ ಇದೆ!
ಅವಳಿಗೂ ನನ್ನೆತ್ತರದ ಮಗನೀಗ

ನಕ್ಕಾಗ ಅದೇ ಕೆನ್ನೆ ಗುಂಡಿ

ನೆನೆವಳೋ ಇಲ್ಲವೋ, ಆತಂಕ!”

(--ಕೆಲ ಚಿತ್ರಗಳೇ ಹಾಗೆ, ಚೆನ್ನ ಚೌಕಟ್ಟಿನೊಳಗೆ)

ರಮ್ಯ ಕವನಗಳ ಈ ನವಿರು ಕಂಪನ್ನು ಆಘ್ರಾಣಿಸಿದಾಗ ರಮ್ಯತೆಯೇ ಈ ಕವಿಯ ಮನೋಭಾವ ಎನ್ನುವ ಭಾವನೆ ಬರಬಹುದು. ಇದು ಸರಿಯಲ್ಲ. ಇದೇ ಸಂಕಲನದಲ್ಲಿರುವ ಇವರ ಕವನಗಳ ವೈವಿಧ್ಯವು ಓದುಗನನ್ನು ಬೆರಗುಗೊಳಿಸದಿರಲಾರದು. ಒಂದು ಶಾಸ್ತ್ರೀಯ ಆಸಕ್ತಿಯಿಂದ ಪರೀಕ್ಷಿಸಿದಾಗ ಈ ಕವನಗಳನ್ನು ಸ್ಥೂಲವಾಗಿ ಈ ರೀತಿಯಾಗಿ ವರ್ಗೀಕರಿಸಬಹುದು ಎನಿಸುತ್ತದೆ:
. ಒಲುಮೆ, ಸ್ನೇಹ ಹಾಗು ದಾಂಪತ್ಯ ಪ್ರೇಮದ ಕವನಗಳು

. ಆತ್ಮ ವಿಮರ್ಶೆ, ದುಮ್ಮಾನ ಹಾಗು ಸುಮ್ಮಾನದ ವ್ಯಕ್ತಿಗತ ಕವನಗಳು

. ಸಾಮಾಜಿಕ ಜೀವನದ ಕವನಗಳು

. ಜೀವನ ಪ್ರೀತಿ ಹಾಗು ಜೀವನ ದರ್ಶನದ ಕವನಗಳು

. ವಿನೋದ, ವ್ಯಂಗ್ಯ ಹಾಗು ಮನೋಲಹರಿಯ ಕವನಗಳು

ವ್ಯಂಗ್ಯವು ಈ ಕವಿಯ ಬತ್ತಳಿಕೆಯಲ್ಲಿರುವ ಮಹತ್ವದ ಅಸ್ತ್ರವಾಗಿದೆ. ಅದರಲ್ಲೂ ಸಾರ್ವಜನಿಕ ಜೀವನದಲ್ಲಿ ಕಾಣುವ ಮೋಸ, ಅಪಚಾರ ಮೊದಲಾದವುಗಳು ಈ ಸಹೃದಯ ಕವಿಯ ಮನಸ್ಸನ್ನು ಅಳಲಿನಿಂದ ತುಂಬುತ್ತವೆ. ಆಗ ಹೊರಹೊಮ್ಮುವುದು ನವಿರಾದ ವ್ಯಂಗ್ಯದಿಂದ ಕೂಡಿದ, ಮನೋವೇಧಕವಾದ ಕವನಗಳು. ಆ ವ್ಯಂಗ್ಯದ ಕೆಲವು ಉದಾಹರಣೆಗಳನ್ನು ನೋಡಿರಿ:

ಕೇಸರಿಯು ಬಣ್ಣಗೆಟ್ಟಿದೆ

ಬಿಳಿಯು ಅನುಮಾನಾಸ್ಪದ

ಹಸಿರಂತು ಬರಿಯ ಕನಸು

ಗಟ್ಟಿಯೊಂದೇ ನಡುಬೀದಿಯಲಿ

ನೆಟ್ಟ ಒಬ್ಬಂಟಿ ಕಂಬ!

(-------------ತಿರಂಗೀ)ನನ್ನ ನೆಲ ಬರಡು ಭೂಮಿ

ಕೊರೆದಷ್ಟು ಹುಡಿ ಮಣ್ಣು ಕಲ್ಲು ಧೂಳು

ನೀರಿಗೇ ತತ್ವಾರವಿಲ್ಲ

ಗರೀಬನಿಗೋ ಅಪ್ಸರೆಯ ತೆವಲು

ಇರುಳೆಲ್ಲ ತೈಲ ಬಾವಿಯ ಕನಸು!

(---------------------ತುಟ್ಟಿ ತೈಲ)ಸರ್ಕಾರೀ ತುಘಲೀಕರಣ

ಆಧುನೀಕರಣದ ಅಂಧ ಕಾರ್ಯಾಚರಣೆ”

(--ವೃಕ್ಷೋ ಭಕ್ಷತಿ ಭಕ್ಷಿತಃ)ಸಂಸ್ಕಾರ ಬಾಬ್ತಿಗೆ

ಗತಿ ವಿಶ್ವ ಬ್ಯಾಂಕಿನ ಸಾಲ”

(--ಮಸಣವೂ ಸಾಯುವಂತಿದ್ದರೇ)ಪಾಲಿಡದೆ ಮಣ್ಣಿಸರು ಪುತ್ರಸಂತಾನ”

(--ಹೆಣ್ಣು)

ಕಾವ್ಯಪ್ರತಿಭೆಗೆ ಎರಡು ಮುಖಗಳಿವೆ. ಮೊದಲನೆಯದು ಅಂತಃಸ್ಫೂರ್ತಿ. ಇದು ಬಹು ಮುಖ್ಯವಾದದ್ದು. ಇದರಷ್ಟೇ ಮುಖ್ಯವಾದದ್ದು ರಚನಾಕೌಶಲ್ಯ. ಪಲವಳ್ಳಿಯವರಲ್ಲಿ ಈ ಎರಡೂ ಮುಖಗಳ ಸಂಗಮವಾಗಿದೆ. ಕನ್ನಡ ಕಾವ್ಯದಲ್ಲಿ ಮೊದಲೆಲ್ಲೂ ಕಾಣದ ಒಂದು ವೈಶಿಷ್ಟ್ಯವನ್ನು ನಾವು ಇವರ ಕವನಗಳಲ್ಲಿ ಗಮನಿಸಬಹುದು. ಅದು ಇವರ ಕವನಗಳಲ್ಲಿ ಕಾಣುವ ಪದಗಳ ಹಾಗು ಪ್ರತಿಮೆಗಳ ಸರಾಗ ಕ್ರೀಡೆ. ಇದು ಈ ಕವಿಯ ಸಹಜ ಸಿದ್ಧಿ. ಇಂತಹ ಕೆಲವು ಸಾಲುಗಳು ಹೀಗಿವೆ:

ಎಲ್ಲ ಬಿಟ್ಟೀ ತಬ್ಬುಗೆಗಳ ಅಂತ್ಯ

ಪರಮ ಸುಖವೆಂದೇ ಕನಸದಿರಿ

ಗಂಡು ಜೇಡಕೆ ಅಂತ್ಯ ಮಿಲನದಲ್ಲೇ!”

(--ವ್ಯರ್ಥ ಹಂಬಲ)ಮುಚ್ಚಿದೆ ಕಿಟಕಿ ಪರದೆ ಗವಾಕ್ಷಿ

ಸ್ವಯಾರ್ಜಿತ ಗರ್ವ, ಗರ್ಭಸ್ಥ ಕತ್ತಲು!”

(---ಅಂತಃಶತ್ರು)ಉತ್ತ ಬೀಜಗಳೆಲ್ಲ ಬೋಧಿವೃಕ್ಷಗಳಾದರೆ

ಹಾದಿ ಬೀದಿಗಳಲೂ ಉದ್ಭವ ಗೌತಮ ಬುದ್ಧರು!”

(--ನಮ್ಮ ಕಾವಲಿಯೇ ತೂತು)

ನನ್ನ ಕಾಲಕೆ ಕಳ್ಳೇ ಕಾಯಿ ಪರಿಷೆಯಲಿ

ಪ್ರದ್ಯುಮ್ನ ಬಾಣಕ್ಕೆ ಸಿಕ್ಕ ಪದ್ಮ ಮೀನಾಕ್ಷಿಯರು!”

(--ಎರಡು ಚಿತ್ರಗಳು)ಮನಸ ಮಸೂರಕೂ ಸುತ್ತ

ಕೈಯಾರೆ ಪೊರೆ ಹೆಣೆವೆ ಬುದ್ಧಿಗೇಡಿ”

(--ಛಾವಣಿಯ ಬಾವಲಿ)ಕಣ್ಣ ಕಾಡಿಗೆಗಿಂತಲೂ ತಂಪು ನೆನಪ ಕಿತಾಬು

ತೆರೆವವು ನೂರು ಪುಟಗಳು ಗೈರು ಹಾಜರಿಯಲಿ”

(--ಕಾಯುತಿಹಳು ಊರ್ಮಿಳೆ)ಯಾಕೆ ದೇವರು ಹೀಗೆ?

ಜಲಮಂಡಲಿಗಿಂತಲೂ ಕಡೆಯೇ

ನಿನ್ನ ನೀರ ಸರಬರಾಜು?”

(---ಯಾಕೆ ದೇವರು ಹೀಗೆ?...)

ಯಾವ ತಂತ್ರಕ್ಕೂ ಅಂಟಿಕೊಳ್ಳದೆ, ಉತ್ಕಟ ಭಾವವನ್ನು ಸರಳವಾಗಿ ಹೇಳುವಂತಹ ಕವನವು ಓದುಗನನ್ನು ನೇರವಾಗಿ ತಟ್ಟುತ್ತದೆ. ಅಂತಹ ಒಂದು ಕವನ: ‘ನನ್ನ ಕೂಸೇ. ತನ್ನ ಕೂಸೊಂದು ಎಷ್ಟು ತ್ವರಿತವಾಗಿ ಬೆಳೆದು ನಿಂತಿಹಳಲ್ಲ ಎಂದು ತಾಯಿಯೊಬ್ಬಳು ಬೆರಗಾಗುವ ಪರಿಯನ್ನು, ಕವನದ ತುಂಬ ಸೂಸುವ ಅವಳ ಮಮತೆಯನ್ನು ಓದಿಯೇ ಅನುಭವಿಸಬೇಕು.
ಇಂತಹದೇ ಮತ್ತೊಂದು ಕವನ ಚಿಟ್ಟೆ ಚಪ್ಪಲಿ. ಬದುಕನ್ನು ಪ್ರೀತಿಸುವ ಕವಿಯು ಚಿಟ್ಟೆಚಪ್ಪಲಿಯನ್ನು ಬಯಸುವ ಮಗುವಿನೊಡನೆ ತಾದಾತ್ಮ್ಯ ಹೊಂದುವ ಪರಿಯನ್ನು ಈ ಕವನದಲ್ಲಿ ನೋಡಬಹುದು.

ಸರಳತೆಯೇ ಒಂದು ತಂತ್ರವಾಗಬಹುದೆ? ಹಾಗೇನಿಲ್ಲ! ಆದರೆ, ಸರಳ ಮನಸ್ಸಿನ ಈ ಕವಿಯು ಸಂಕೀರ್ಣ ಸಂಬಂಧವನ್ನು ಸರಳವಾಗಿಯೇ ಅಭಿವ್ಯಕ್ತಿಸುವ ಸಾಮರ್ಥ್ಯವನ್ನು ಹೊಂದಿದ್ದಾನೆ. ಆ ಅಭಿವ್ಯಕ್ತಿಗೆ ಸಹಾಯವಾಗುವುದು ಅವನಿಗೆ ಸಿದ್ಧಿಸಿದ ರೂಪಕಕೌಶಲ್ಯ. ಈ ಕುಶಲತೆಯನ್ನು ಸಾಬೀತು ಪಡಿಸುವ ಕವನವೊಂದರ ಸಾಲುಗಳನ್ನು ನೋಡಿರಿ:

ಇದು ನಾನು

ಅದು ನೀನು

ಗೆರೆ ಗೀಚದಿರು ಹೀಗೆ,

ಬೆಳೆ ತೆಗೆದರಾಯ್ತು

ಬಿಡು ಬಂಜರಲ್ಲೂ

ಖುಷ್ಕಿ ಏಕೆ ಬೇಕು?”

(---ಬಿರಿಯಬಹುದೇ..)

ಪಲವಳ್ಳಿಯವರ ಕವನಗಳನ್ನು ಓದುತ್ತಿದ್ದಂತೆಯೇ, ನಮ್ಮನ್ನು ಆಕರ್ಷಿಸುವುದು ಅವರ ಈ ರೂಪಕ ಕೌಶಲ್ಯ. ಅದರ ಕೆಲವು ಉದಾಹರಣೆಗಳನ್ನು ಇಲ್ಲಿ ನೋಡಬಹುದು:

ದಾನಿಗಳಾರೋ

ಪೀಕುದಾನಿಗಳಾರೋ

ನಕಲಿ ವಜ್ರಗಳು ಮಾತ್ರ

ಜನಜನಿತವೀಗ”

(---ಅಪಾತ್ರದಾನ)

ನಕಲಿಗೇ ಒಗ್ಗಿದ ಧಣಿಗೆ ಬಂಗಾರದ ಕುರುಡು


ಗುರುತಿಸಲಾರ ವಜ್ರದ ಹರಳು”

(---ಬಂಗಾರದ ಕುರುಡು)

ಹುಲ್ಲು ಮೇಯುವ ಮನಕೆ

ಯಾರಾದರೂ ಸೈ ಮೇನಕೆ”

(--ಕಾಮನ ಹುಣ್ಣಿಮೆ)

ಆರುವ ದೀಪಗಳಂತೆ


ನಾವುಗಳು ನೀವುಗಳು

ಯಾವ ಕ್ಷಣವೋ

ಇಲ್ಲಿಂದ ಅಲ್ಲಿಗೆ ಪಯಣ?”

(--ಅವರೂ ಇವರೂ)ತುಂತುರು ಮಳೆ ಹನಿಗೆ

ತೊಯ್ದ ಮಲ್ಲಿಗೆಯ ಬಳ್ಳಿ

(--ಅವಳು...)ನಗೆಯ ಬುಗ್ಗೆಯೊಂದು

ನಡುನಡುವೆ ಹಾರುತಿರೆ

ಮೂಕಿ ಕಳೆದು ಟಾಕಿ”

(--ಬಿರಿಯಬಹುದೇ)ಗಾಳಿ ಮೆಟ್ಟಿಲನೇರು ಭ್ರಮೆಯಲಿ

ನಿಂತ ನೆಲವನೇ ಒದ್ದರೇ,”

(--ಮನಸು..)ಬೆನ್ನುಗಳ ಸಂವಾದ

ಬೇರ್ಪಡುವ ನಿರ್ಧಾರ

ಸಡಲಿಸಲು ತಂತುವೊಂದು”

(--ರೇಖೆಗಳೆರಡು)ಅಮರತ್ವ ಚಪಲತೆಯೇ

ಅರೆ ಕಾಸಿನೀ ಚಪ್ಪಲಿಗೆ”

(--ನಗೆಯ ಸಂಕ್ರಮಿಸಿ)ಗಾಳಿ ಯಂತ್ರವೂ ಹಳ್ಳಿ ಬೆಳಕು

ಹಸಿ ಕಸವೂ ಲಕುಮೀ”

(---ತ್ಯಾಜ್ಯ ವ್ಯಾಜ್ಯ..)ಒಬ್ಬಂಟಿ ಹರವೂ ಬೇಜಾರು!

ಸಂಗಮಸುಖ ಬೇಡವೇನೇ ಪದ್ಮ?

ಬ್ರಹ್ಮಪುತ್ರನ ಅಳಲು

ನೀನಾದರೂ ಕೇಳು...”

(---ಸಂಗಮಸುಖ)

ಸಂಗಮಸುಖ ಎನ್ನುವ ಈ ಕವನದ ರೂಪಕದಲ್ಲಿ ಹುದುಗಿರುವ ವೈಶಿಷ್ಟ್ಯವೊಂದನ್ನು ಗಮನಿಸಬೇಕು. ಭಾರತೀಯ ಸಂಪ್ರದಾಯದ ಪ್ರಕಾರ ಬ್ರಹ್ಮಪುತ್ರವೊಂದೇ ಗಂಡು ಪ್ರವಾಹ (ಅಥವಾ ನದ). ಉಳಿದ ಪ್ರವಾಹಗಳೆಲ್ಲವೂ ಹೆಣ್ಣು ಅಂದರೆ ನದಿಗಳು. ಬ್ರಹ್ಮಪುತ್ರನನ್ನು ಪದ್ಮಾ ವಂಗಭೂಮಿಯಲ್ಲಿ ಸಂಧಿಸುತ್ತಾಳೆ. ವಾಸ್ತವವನ್ನೆ ರೂಪಕವಾಗಿಸುವ ಈ ಕಲೆ ನಮ್ಮ ಹಳೆಯ ಕವಿಗಳಲ್ಲಿ ಬೇಂದ್ರೆಯವರಿಗೆ ಮಾತ್ರ ವಿಶಿಷ್ಟವಾದದ್ದು. ಅದನ್ನು ಮತ್ತೀಗ ಪಲವಳ್ಳಿಯವರಲ್ಲಿಯೂ ಕಾಣುವುದು ಸಂತಸದ ಸಂಗತಿ.

ಪಲವಳ್ಳಿಯವರ ಕಾವ್ಯದ ಮತ್ತೊಂದು ಆಕರ್ಷಣೆ ಎಂದರೆ ಅವರು ಸಾಧಿಸುವ ನುಡಿಕಟ್ಟುಗಳು. ಅಡಿಗರ ಕವನಗಳನ್ನು ನೆನಪಿಸುವಂತಹ ಅನೇಕ ನುಡಿಕಟ್ಟುಗಳು ಪಲವಳ್ಳಿಯವರ ಕವನಗಳಲ್ಲಿವೆ. ರೂಪಕದ ಭಾಷೆಯಲ್ಲಿಯೇ ಹೇಳುವುದಾದರೆ, ಅವರ ಕವನಗಳೆನ್ನುವ ಹೂವುಗಳಿಗೆ ನುಡಿಕಟ್ಟು ಹಾಗು ರೂಪಕ ಎನ್ನುವ ಪಕಳೆಗಳಿವೆ! ಹೀಗೆ ಹೇಳುವುದೇ ವಾಸ್ತವಕ್ಕೆ ಹತ್ತಿರವೆನ್ನುವುದು ನನ್ನ ನಂಬುಗೆ. ಸಾಕ್ಷಿಯಾಗಿ ಕೆಲವೇ ನಿದರ್ಶನಗಳನ್ನು ಇಲ್ಲಿ ನೀಡುತ್ತೇನೆ:

ದಕ್ಕಿದ್ದೇ ಅರೆಪಾವು ಜಿಂದಗೀ
ಜೀಕುವುದು ಗ್ರಾಫು ಏರುಪೇರು”
(-----ಅವರೂ ಇವರೂ)

ಪಾತಾಳಗರಡಿಗೂ ಸಿಗದ
ಉಬ್ಬಿದ ಹೆಣಗಳಿಗೆಲ್ಲ
ನಿಜಾಯತಿ ಬೋಧಿಸೋ ಉಮೇದಿ,
ಕದ್ದವನೇ ಖರೇ ಪ್ರಾಮಾಣಿಕ”
(---ಬಂಗಾರದ ಕುರುಡು)

ಅಂದೆಂದೋ ಬೀದಿ ಪಾಲು
ಕಾಮಾಟಿಯ ಪಾತಿವ್ರತ್ಯ”
(--ಚರಂಡೀಪುರದ ಕಥೆ)

ಊಹೆ ನಿಲುಕದ ಗ್ರಹಚಾರ,
ಉಟ್ಟುಡುಗೆಯೇ ಭಾರ
ಜಾರುತದೆ ನಾಚಿಕೆ ಬಿಲ್ಲೆ
ಸ್ವಕೆರೆತಕಿಲ್ಲ ಪುರುಸೊತ್ತು”
(-----ದೊಂಬರಾಟ)

ಜೀವ ಇರು ಹೊತ್ತೂ ಅವಗೆ
ಡೊಳ್ಳು ಬಡಿವ ಉಮೇದಿ”
(---ದೊಂಬರಾಟ)

ನವೋದಯ ಕಾವ್ಯದ ಮನೋಧರ್ಮ ಹಾಗು ನವ್ಯಕಾವ್ಯದ ತಂತ್ರ ಎರಡನ್ನೂ ಸ್ವೀಕರಿಸುತ್ತಲೇ ಪಲವಳ್ಳಿಯವರು ಇವೆರಡನ್ನೂ ದಾಟಿ ಬೆಳೆದಿದ್ದಾರೆ. ನವ್ಯೋತ್ತರದ ನಂತರದ ಕಾಲದ ಕವಿಯಾದ ಪಲವಳ್ಳಿಯವರು ಕಾವ್ಯಕ್ಷೇತ್ರದಲ್ಲಿ ತಮ್ಮದೇ ಆದ ವೈಶಿಷ್ಟ್ಯಗಳೊಡನೆ ಮಹತ್ವದ ಸಾಧನೆಗೈದಿದ್ದಾರೆ. ಆದರೂ ಸಹ ಒಂದು ಆರೋಗ್ಯಕರವಾದ ಅತೃಪ್ತಿ ಅವರಲ್ಲಿದೆ. ತಮ್ಮ ಉನ್ನತಿಗಾಗಿ ಅವರು ವಿಧಾತನಲ್ಲಿ ಬೇಡಿಕೊಳ್ಳುತ್ತಾರೆ:

ಎಂದಿನವರೆಗೋ ಈ ನಿರೀಕ್ಷಣೆ,
ಯಾವ ವರಸಿದ್ಧಿಗೆ ತಪಿಸೋ ಜೀವನ?”
(--ನಿರೀಕ್ಷಣೆ)
ಎತ್ತಿಕೋ ಉಳಿ
ಕೆತ್ತು ಈ ಕಗ್ಗಲ್ಲು
ದೇವರಾಗದಿದ್ದರೂ
ದ್ವಾರಪಾಲಕನಾಗಲಿ”
(--ತಾಲೀಮು)

ಕವಿ ತನ್ನ ಕವನದಿಂದ ಬಯಸುವದು ಏನನ್ನು? ಪಲವಳ್ಳಿಯವರಿಗೆ ಕವನವೆಂದರೆ ಅಚ್ಚರಿಯ ಮಾಯಾದೀಪ. ನನಗೇನೋ ಅವರ ಕವನಗಳು ಪರಿಮಳ ಪಸರಿಸುತ್ತಿರುವ ಹೂವುಗಳಂತೆ ಭಾಸವಾಗುತ್ತಿವೆ.

ಕವಿತೆ ಎಂದರೆ ಗೆಳೆಯ!
ನನ್ನ ಕಲ್ಪನೆಗಳೇ ಹಾಗೆ,
ದ್ವೀಪದಿಂದೆತ್ತಿ ದಡ ಸೇರಿಸುವ
ನೆನೆದಾಗ ಬರುವ ಆಪ್ತಮಿತ್ರ...”
(--ಕವಿತೆ ಎಂದರೆ ಗೆಳೆಯ!)

ಬದರಿನಾಥ ಪಲವಳ್ಳಿಯವರ ಕವನಗಳು ಅವರಿಗೆ ಹೇಗೊ, ನಮಗೂ ಹಾಗೇ...................‘ನೆನೆದಾಗ ಬರುವ ಆಪ್ತಮಿತ್ರ!

ಇಲ್ಲಿನ ಕವನಗಳ ಒಂದು ವೈಶಿಷ್ಟ್ಯ ಹೀಗಿದೆ:

ಒಂದು ಪ್ರತಿಪಾದನೆಯೊಂದಿಗೆ ಕವನ ಪ್ರಾರಂಭವಾಗಿ, ತರ್ಕಬದ್ಧವಾಗಿ ಮುಂದುವರೆದು ಒಂದು ’ಸತ್ಯ’ದಲ್ಲಿ ಕೊನೆಗೊಳ್ಳುತ್ತದೆ. ಇಂತಹ tight rope walking ದಲ್ಲಿ ಸಹ ಕವನ ಎಲ್ಲೂ ಜಾಳಾಗದೆ, ತನ್ನ ಆಕರ್ಷಣೆಯನ್ನು ಉಳಿಸಿಕೊಳ್ಳುತ್ತದೆ. Excellent Construction!

ಪಲವಳ್ಳಿಯವರಿಗೆ ಹಾಗು ಅವರ ಕವನಗಳಿಗೆ ಒಲವಿನ ಶುಭಾಶಯಗಳು. ಅವರಿಂದ ಇನ್ನಿಷ್ಟು ಕವನಗಳು ಬರಲಿ ಹಾಗು ಓದುಗರ ಮನಸ್ಸನ್ನು ತಣಿಸಲಿ ಎಂದು ಹಾರೈಸುತ್ತೇನೆ.


ಧಾರವಾಡ
14.01.2013                                                                                                   
ಸುನಾ
ಥ ದೇಶಪಾಂಡೆ
http://sallaap.blogspot.in/
http://gaduginabharata.blogspot.in/

ಮುಖ ಪುಟ: ಶ್ರೀಮತಿ. ಸುಗುಣ ಮಹೇಶ್
ಬೆನ್ನುಡಿ:      ಶ್ರೀಯುತ. ಆಜಾದ್

8 comments:

 1. ಸುನಾಥ ದೇಶಪಾಂಡೆಯವರು ತಮ್ಮ ಪ್ರತಿಭೆಯನ್ನು ನಿಖರವಾಗಿ ವಿಶ್ಲೇಷಿಸಿದ್ದಾರೆ ಬದರಿ ಸರ್. ಪ್ರತಿಯೊಂದು ಕವನದಲ್ಲೂ ನಿಮ್ಮ ಪ್ರತಿಭೆ ಎದ್ದು ಕಾಣುತ್ತದೆ.

  ReplyDelete
 2. ಶುಭವಾಗಲಿ ಸರ್ ,,,, ಇನ್ನಷ್ಟು ಕವನದ ಹೂಗಳು ಅರಳಲಿ,,,,

  ReplyDelete
 3. ಸುನಾಥ್ ರವರ ಮುನ್ನುಡಿ ನಿಜವಾಗಿಯೂ ನಿಮ್ಮ ಪ್ರತಿಭೆಗೆ ಹಿಡಿದ ಕನ್ನಡಿ. ಶುಭವಾಗಲಿ ಮತ್ತಷ್ಟು ಕವನಗಳೆಂಬ ಪುಷ್ಪಗಳು ನಿಮ್ಮ ಮನದಂಗಳದ ತೋಟದಲಿ ಅರಳಿ, ಸೌರಭವ ಸೂಸುತಲಿರಲಿ ಎಂಬುದೇ ನಮ್ಮ ಆಶಯ.

  ReplyDelete
 4. ಖುಷಿಯಾಗುತ್ತೆ ಸರ್... ಶುಭವಾಗಲಿ

  ReplyDelete
 5. ಅಭಿನಂದನೆಗಳು. ಶುಭವಾಗಲಿ

  ReplyDelete
 6. ವಾವ್. ಕವನ ಸಂಕಲನ ಬೇಗ ಹೊರಬರಲಿ...ಶುಭಾಶಯಗಳು

  ReplyDelete
 7. ನಿಮ್ಮ ಸೃಜನ ಇನ್ನೂ ಹೆಚ್ಚು ಬೆಳೆಯಲಿ ಬೆಳಗಲಿ.

  ReplyDelete
 8. ಹೂವನ್ನು ಆರಿಸಿ ಮಾಲೆ ಕಟ್ಟುತ್ತ ಹೋದ ಹಾಗೆ.. ಬೇಕಾದ ಆಕಾರದ ಬಣ್ಣದ ಹೂಗಳನ್ನು ಆಯ್ದು ಆಯ್ದು ಮಾಲೆಗೆ ಸೇರುತ್ತಾ ಹೋಗುತ್ತದೆ.. ಮಿಕ್ಕ ವರ್ಣಮಯ ಹೂಗಳು ತಮ್ಮ ಸರತಿಯನ್ನು ಕಾಯುತ್ತಿರುತ್ತದೆ. ಹಾಗೆಯೇ ಬದರಿ ಸರ್ ನಿಮ್ಮ ಕವಿತೆಯು ಹಾಗೆ.. ಆ ಕವಿತೆಗೆ ಸೇರಿಕೊಳ್ಳಲು ಪದಗಳು ಅಕ್ಷರಗಳು ಭಾವಗಳು ಸಾಲುಗಟ್ಟಿ ನಿಂತಿರುತ್ತವೆ.

  ಸುನಾಥ್ ಸರ್ ವಿಶ್ಲೇಷಿಸಿರುವ ಪರಿ ಮತ್ತು ಅದಕ್ಕೆ ತಕ್ಕ ಮಾತುಗಳು ಸೂಪರ್ ಸೂಪರ್

  ReplyDelete