Tuesday, September 17, 2013

ಅಲಮೇಲು...

ಅಲಮೇಲುವಿಗೆ ಬೆಳಗಿಂದಲೂ ಒಂದು ನಿಮಿಷವೂ ಪುರುಸೊತ್ತು ಇರಲಿಲ್ಲ. ಗಂಡನನ್ನು ಆಫೀಸಿಗೆ ಸಿದ್ದಮಾಡಿ ಕಳುಹಿಸಿದ ಮೇಲೆ ಕೆನೆಟಿಕ್ ಚಲಾಯಿಸಿಕೊಂಡು ಬಜಾರ್ ಸ್ಟ್ರೀಟಿಗೆ ಬಂದವಳು ಅಂಗಡಿಯಿಂದ ಅಂಗಡಿಗೆ ಅಲೆಯುತ್ತಲೇ ಇದ್ದಾಳೆ.
ಮೊದಲು ಅವಳು ರಫೀಕ್ ಅಂಗಡಿಗೆ ಬಂದು, ತನ್ನ ಮೀನುಗಳ ತೊಟ್ಟಿಗಾಗಿ ವಿವಿದ ಆಹಾರಗಳನ್ನು ಕೊಂಡುಕೊಂಡಳು.

ಪೆಟ್ ಶಾಪಿಗೆ ಬಂದು ತನ್ನ ಮುದ್ದಿನ ನಾಯಿಗಳಾದ ಇಂಕು-ಮಿಂಕು-ಪಿಂಕು-ಟಿಂಕುಗಳಿಗೆ ನಾಯಿ ಬಿಸ್ಕತ್ತು, ಪೆಡಿಗ್ರೀ ದೊಡ್ಡ ಮೂಟೆ ಕೊಂಡಳು.

ಅಲ್ಲಿಂದ ಸಗಟು ದಿನಸಿ ಅಂಗಡಿಯ ಸರತಿಯಲ್ಲಿ ನಿಂತು ತನ್ನ ಮುದ್ದಿನ ಪಾರಿವಾಳಗಳಿಗೆ, ಗಿಳಿಗಳಿಗೆ, ಲವ್ ಬರ್ಡುಗಳಿಗೆ ಹಲವು ಕಾಳುಗಳನ್ನು ಕಟ್ಟಿಸಿಕೊಂಡಳು.

ಅಷ್ಟೆಲ್ಲ ಹೊತ್ತು ಕೆನೆಟಿಕ್ ಓಡಿಸಿಕೊಂಡು ಮನೆ ತಿರುವಿನವರೆಗೂ ಬಂದವಳಿಗೆ. ತಟ್ಟನೆ ಜೂಜೂ ನೆನಪಾಯಿತು, ಅದು ಎಲ್ಲೆಲ್ಲೋ ಹುಡುಕಿ ಆಸೆಯಿಂದ ತಂದು ಸಾಕಿಕೊಂಡ ಬೆಕ್ಕಿನ ಮರಿ. ಅದಕ್ಕೆ ಏನೂ ತರಲಿಲ್ಲವಲ್ಲ ಎಂದು ಮಂಕಾದಳು ಅಲಮೇಲು!

ಗಾಡಿ ಓಡಿಸುತ್ತಲೇ, ಈವತ್ತು ಮಾಡಬೇಕಾದ ಕೆಲಸಗಳ ಪಟ್ಟಿ ನೆನಪು ಮಾಡಿಕೊಂಡಳು.

ಹತ್ತು ಗಂಟೆಗೇ ಬರುತ್ತೀನೆಂದು ಹೇಳಿದ ಮಾಲಿ ಕೈಯಲಿ ಮನೆ ಮುಂದಿನ ಅಷ್ಟೂ ಗಿಡಗಳನ್ನು ಒಪ್ಪ ಮಾಡಿಸಬೇಕು. ಅವನಿಗೆ ಹೇಳಿ ಮನೆ ಮೂಲೆಗೆ ಮೈಸೂರ್ ವಿಳ್ಯದೆಲೆ ಬಳ್ಳಿ ಬಿಡಿಸಬೇಕು.

ಸಾಯಿಂಕಾಲ ಮಹಿಳಾ ಮಂಡಳಿ ಪಂಕಜಮ್ಮನನ್ನು ಓಲೈಸಿ ಈ ಭಾನುವಾರ ಅನಾಥಶ್ರಮಕ್ಕೆ ಒಪ್ಪೊತ್ತು ಹೋಳಿಗೆ ಊಟ ವ್ಯವಸ್ಥೆ ಮಾಡಬೇಕು.  ಹೀಗೆ...

ಅಲಮೇಲು ಇಡೀ ಕಾಲೋನಿಯಲ್ಲೇ ಕೈ ತೋಟ ನಿರ್ವಹಣೆಗೆ, ಮನೆಯಲ್ಲಿ ಸಾಕಿರುವ ತರಹೇವಾರಿ ಮುದ್ದಿನ ಪ್ರಾಣಿಗಳಿಗೆ ಮತ್ತು ಮಹಿಳಾ ಮಂಡಳಿಯ ಸಮಾಜ ಸೇವೆಗಳಿಗೆ ಹೆಸರುವಾಸಿ.

ಗೇಟು ತೆರೆದು ಒಳ ಬಂದು ಗಾಡಿ ನಿಲ್ಲಿಸುವುದಕ್ಕಿಂತಲೂ ಮುಂಚೆಯೇ ಇಂಕು-ಮಿಂಕು-ಪಿಂಕು-ಟಿಂಕು ಮುತ್ತಿಕೊಂಡವು. ಅವುಗಳಿಗೆ ನಾಯಿ ಬಿಸ್ಕತ್ ಹಂಚಿದಳು.

ಅದಾಗಲೇ ಮಾಲೀ ರಂಗಪ್ಪನೂ ಸಿಕ್ಕ, ಅವನನ್ನು ಮಾತನಾಡಿಸಿ ಇಲ್ಲೇ ಇರಪ್ಪ ಎಂದು ಹೇಳಿ ಮನೆ ಒಳಗೆ ಬಂದು ಡೈನಿಂಗ್ ಟೇಬಲ್ಲಿನ ಮೇಲಿದ್ದ ಅಷ್ಟೂ ಬಿಸಿಬೆಳೆ ಬಾತ್ ಒಂದು ತಟ್ಟೆಗೆ ಸುರುವಿಕೊಂಡು ಅವನಿಗೆ ಕೊಟ್ಟಳು.

ಆ ಮೇಲೆ ಮೊದಲು ಮೀನುಗಳ ತೊಟ್ಟಿಗೆ ಆಹಾರ ಹಾಕಿದಳು. ಗಾಳಿ ಸರಿಯಾಗಿ ಒಳಗೆ ನುಗ್ಗುತ್ತಾ ಬುಗ್ಗೆ ಮಾಡುತ್ತಿದೆಯೇ ಪರೀಕ್ಷಿಸಿದಳು. ಮನಸ್ಸಿಗೆ ತೃಪ್ತಿಯಾಯಿತು.

ಗಂಡ ಆಫೀಸಿಗೆ ಹೋದ ಮೇಲೆ ಸಂತೆ ಸುತ್ತಿ ಆಕೆ ಮನೆಗೆ ಬರುವಷ್ಟರಲ್ಲಿ ಸುಮಾರು ಮದ್ಯಾಹ್ನ ಒಂದು ಗಂಟೆಯೇ ಆಗಿಹೋಗಿತ್ತು.

ಆಕೆಗೂ ಹೊಟ್ಟೆ ಚುರುಗುಟ್ಟಿದಂತಾಗಿ, ಅಡುಗೆ ಮನೆ ಕಡೆ ಹೊರಟಳು. ಅಲ್ಲಿ ಅವಳ ಅತ್ತೆ ತೊಂಬತ್ತರ ಹಣ್ಣು ಹಣ್ಣು ಮುದುಕಿ ಅಡುಗೆ ಮನೆಯ ನೆಲದ ಮೇಲೆ ಗೋಡೆಗಾತುಕೊಂಡು ಕುಳಿತು ಅಲ್ಲೇ ನಿದ್ದೆಗೆ ಜಾರಿದ್ದರು. ಅವರ ಕೈಯಲ್ಲಿ ಒಂದು ಖಾಲೀ ತಟ್ಟೆ.

ಅಲಮೇಲುವಿಗೆ ಆಗ ನೆನಪಾಯಿತು ಬೆಳಿಗ್ಗೆ ತನ್ನ ಅತ್ತೆಯನ್ನು ಇಲ್ಲೇ ಕೂತಿರಿ ಈಗ ತಿಂಡಿ ತಂದು ಬಡಸುತ್ತೇನೆ ಎಂದು ಹೊರಬಂದವಳಿಗೆ, ಜಗವೇ ಮರೆತೇ ಹೋಗಿ ತನ್ನ ಸಾಕು ಪ್ರಾಣಿಗಳಿಗೆ ಆಹಾರ ತರಲು ಹೊರಟೇ ಹೋಗಿದ್ದಳು!

35 comments:

 1. Reality.....

  tumbaa chennaagi barediddeeri sir...

  ReplyDelete
 2. Mixed reactions Infact....
  ಅಲಮೇಲೂಗೆ ಪ್ರಾಣಿಗಳ ಮೇಲಿರುವ ಪ್ರೀತಿ - ಕಾಳಜಿ ಮೆಚ್ಚಬೇಕೊ
  ಪಾಪ ಅಜ್ಜಿ ಬೆಳಗ್ಗಿನಿ೦ದ ಖಾಲಿ ತಟ್ಟೆ ಹಿಡಿದು ಹಸಿದಿದ್ದು ನೋಡಿ - ಅಲಮೇಲುರವರನ್ನ ತರಾಟೆಗೆ ತೆಗೆದುಕೊಳ್ಳಬೇಕೊ....
  Well, Alamelu is a Nice Lady, and these things Happen ಅ೦ತ ಸಮಜಾಯಿಷಿ ಕೊಡಬೇಕೊ....

  ReplyDelete
 3. ಅನೀರೀಕ್ಷಿತ ತಿರುವು !! ತುಂಬಾ ಸೊಗಸಾಗಿದೆ ! ಹಮ್ಮ .. ಅಂದಹಾಗೆ ಆ ಅಜ್ಜಿಗೆ ಏನೂ ಆಗಿಲ್ಲ ತಾನೇ .. ? :)

  ReplyDelete
 4. ಹುಫ್ಹ್ಹ್ಹ್... ಅಲಮೇಲು ಪ್ರಾಣಿ ಪ್ರೀತಿಯಲ್ಲಿ ಮನುಷ್ಯರನ್ನು ಮರೆತರು.. ಚೆನ್ನಾಗಿದೆ ಸರ್ ಕಥೆ

  ReplyDelete
 5. ಅನೀರೀಕ್ಷಿತ ತಿರುವು !! ತುಂಬಾ ಸೊಗಸಾಗಿದೆ ! ಹಮ್ಮ .. ಅಂದಹಾಗೆ ಆ ಅಜ್ಜಿಗೆ ಏನೂ ಆಗಿಲ್ಲ ತಾನೇ .. ? :)

  ReplyDelete
 6. ಮೊದಲೆಲ್ಲ ಅಲಮೇಲುವಿನ ಬಗೆಗೆ ಅನುಕಂಪವನ್ನೇ ಉಕ್ಕಿಸಿದ್ದೀರಿ. ಕೊನೆಯ ವ್ಯಂಗ್ಯ ಹಾಗು punch ಅದ್ಭುತವಾಗಿವೆ. ಕತೆ ಅಂದರೆ ಹೀಗಿರಬೇಕು:Short but forceful.

  ReplyDelete
 7. ಮನುಷ್ಯರಿಗೆ ಇಲ್ಲದ ಬೆಲೆ ಪ್ರಾಣಿಗಳಿಗೆ ಇದೆ. ಅಲಮೇಲು ಒಂದು ಹೆಣ್ಣು, ಅವಳಿಗೇ ಅವಳ ಅತ್ತೆಯ ಪಾಡು ಒದಗಿದಾಗ.., ಸ್ಥಿತಿಯ ಅರಿವು ಮೂಡಬಹುದು. ಎಲ್ಲವನ್ನು ನೆನಪಿಡುವ ಹೆಂಗಸಿಗೆ, ಈ ವರ್ತನೆ ಇದು ಶೋಭೆ ತರುವುದಿಲ್ಲ.

  ReplyDelete
 8. ಅಬ್ಬಾ....I second Sunath kaaka Short but forceful.

  ReplyDelete
 9. ಕಟುಸತ್ಯವನ್ನು ತೋರಿಸುವ ಪುಟ್ಟ ಕತೆ ..ಇಷ್ಟವಾಯ್ತು .

  ReplyDelete
 10. ಚಿಕ್ಕದಾದರೂ ಚೊಕ್ಕದಾದ ಕಥೆ. ಕೊನೆಗೆ ಅಲಮೇಲುವಿನ ಅತ್ತೆಗೆ ಏನೂ ಆಗಿಲ್ಲಾ ತಾನೆ!?

  ReplyDelete
 11. ಅಲಮೇಲು ಕಥೆಗೆ ನೀವು ಕೊಟ್ಟ ಟ್ವಿಸ್ಟ್ ಇಷ್ಟವಾಯಿತು

  ReplyDelete
 12. ಕತೆ ತುಂಬಾ... ತುಂಬಾ ಚೆನ್ನಾಗಿದೆ...!

  ReplyDelete
 13. ಬಾದರಿ ಭಾಯ್..

  ಮನೋಜ್ಞ ತಿರುವು...
  ಮನ ತಟ್ಟಿತು...

  ReplyDelete
 14. ಅರೆ? ಬದರಿಯವರೇ,ನೀವು ಕತೆಯನ್ನು ತುಂಬ ಮಟ್ಟಸವಾಗಿಯೇ ಬರೆದಿದ್ದೀರಿ.ಓದುವಾಗ ಎಲ್ಲೂ ನಿಲ್ಲಲಿಲ್ಲ,ತಡವರಿಸಲಿಲ್ಲ.ಒಳ್ಳೆಯ ಪ್ರಯತ್ನ ಮತ್ತು ಕತೆಯ ಥೀಮ್ ಚೆನ್ನಾಗಿದೆ.ಇನ್ನಷ್ಟು ಕತೆ ಬರೆಯಿರಿ.ಖುಷಿಯಾಯಿತು.
  -Rj

  ReplyDelete
 15. ಚೆನ್ನಾಗಿದೆ ಬದರಿ.. ಅತ್ತೆನ್ನ ಎಲ್ಲಿ ಸಾಯಿಸಿ ಬಿಡ್ತೀಯೋ ಅಂತ ಭಯ ಪಟ್ಟು ಓದಿದ್ದಾಯ್ತು ;-) :-)
  ಜಯಶ್ರೀ

  ReplyDelete
 16. ಪ್ರಾಣಿಗಳ ಮೇಲಿರುವ ಪ್ರೀತಿ ಸ್ವಲ್ಪ ಮನೆಯ ಜನಗಳ ಮೇಲೆ ಮೂಡಿದರೆ ಇನ್ನೂ ಚೆನ್ನ. ಮನಮುಟ್ಟಿದ ಬರಹ. ಈಗಿನ ಕಾಲದಲ್ಲಿ ಮನೆಯ ಹಿರಿಯರನ್ನ ಅನಾಥಾಶ್ರಮದಲ್ಲಿ ಇಟ್ಟು ಪ್ರಾಣಿಗಳನ್ನ ಮನೆಯಲ್ಲಿ ಸಾಕುವವರಿಗೆ ಎನೆನ್ನಬೇಕೊ..?

  ReplyDelete
 17. ಅಲಮೇಲುವಿಗೆ ಆಗ ನೆನಪಾಯಿತು ಬೆಳಿಗ್ಗೆ ತನ್ನ ಅತ್ತೆಯನ್ನು ಇಲ್ಲೇ ಕೂತಿರಿ ಈಗ ತಿಂಡಿ ತಂದು ಬಡಸುತ್ತೇನೆ ಎಂದು ಹೊರಬಂದವಳಿಗೆ, ಜಗವೇ ಮರೆತೇ ಹೋಗಿ ತನ್ನ ಸಾಕು ಪ್ರಾಣಿಗಳಿಗೆ ಆಹಾರ ತರಲು ಹೊರಟೇ ಹೋಗಿದ್ದಳು!
  .
  .
  ಕಡೆಯ ಸಾಲು ಕತೆಯ ಪಂಚ್ !

  ವಯಸ್ಸಾದ ಮೇಲೆ ಬಾಳು ನಾಯಿಗಿಂತ ಕೀಳು ಅನ್ನುವರು ಅದಕ್ಕೊ ಎನೊ !

  ReplyDelete
 18. ಅಲಮೇಲು ಎಷ್ಟು ಒಳ್ಳೆಯವಳು ಎಂದು ಅಂದುಕೊಳ್ಳುವಾಗಲೇ ಎಷ್ಟು ಒಳ್ಳೆಯವಳು ಎಂದು ಯೋಚಿಸುವಂತಾಯಿತು!

  ReplyDelete
 19. PraNigaLa hotte tumbisutta ajjiya hotte kaaliyiruvuda maretare hege.... papa.....

  ReplyDelete
 20. ಉಫ್! ದೀಪದಡಿಯ ಕತ್ತಲೆಯ ವಿಪರ್ಯಾಸ..

  ReplyDelete
 21. ಬದರಿ ಸರ್ ನಿಜವಾಗಲೂ ನಂಬ್ತೀರಾ
  ಕೈಯಲ್ಲಿ ತಟ್ಟೆ ಹಿಡಿದು ಊಟ ಮಾಡ್ತಾ ನಿಮ್ಮ ಕತೆ ಓದ್ತಾ ಇದ್ದೆ, ನನ್ನ ಕೊನೆ ತುತ್ತು ಕೈಯಲ್ಲಿ ತಗೊಳೋದಕ್ಕೂ ಅಜ್ಜಿ ತಟ್ಟೆ ಖಾಲಿ ಅಂತ ಓದೋದಕ್ಕೂ ಸಮ ಆಯ್ತು, ಆ ಕೊನೆ ತುತ್ತು ಒಳಗೆ ಹೋಗಲಿಲ್ಲ.
  ನಾನು ಪ್ರಾಣಿ ದಯಾ ಸಂಘದಿಂದ ತುಂಬಾ ದೂರ,
  ಪ್ರಾಣಿ ಪಕ್ಷಿಗಳಿಗೆ ತೋರುವ ಪ್ರೀತಿಯಲ್ಲಿ ಸ್ವಲ್ಪ ಅಜ್ಜಿಗೂ ಪಾಲು ಸಿಕ್ಕಿದ್ದರೆ ಅಲಮೇಲು ನಿಜವಾಗಿ ಮೇಲು ಮನುಷ್ಯಳಾಗುತ್ತಿದ್ದಳು. ಈಗಿನ ಸಮಾಜದ ಕನ್ನಡಿ ಈ ಕಥೆ.

  ReplyDelete
 22. ತುಂಬಾ ಚಂದದ ಕತೆ, ಬೇಗ ಮುಗಿದದ್ದೇ ( ಅಜ್ಜಿಯ ತಿರುವಿನೊಂದಿಗೆ ) ಬೇಸರವಾಯಿತು.

  ReplyDelete
 23. ತುಂಬಾ ಚಂದದ ಕತೆ, ಬೇಗ ಮುಗಿದದ್ದೇ ( ಅಜ್ಜಿಯ ತಿರುವಿನೊಂದಿಗೆ ) ಬೇಸರವಾಯಿತು.

  ReplyDelete
 24. ಜವಾಬ್ದಾರಿ ನಿಭಾಯಿಸಲಾಗದವರಿಗೊಂದು ಚಾಟಿ ಏಟೋ? ಚೆನ್ನಾಗಿದೆ ಕತೆ ಬದರಿ ಮಾಮ್!

  ReplyDelete
 25. ಅತ್ತೆ ಅಲಮೇಲು ಮದುವೆಯ ಮೊದಲಿನಿಂದ ಆ ಮನೆಯಲ್ಲಿ ಇದ್ದವಳು .. ಸಾಕು ಪ್ರಾಣಿಗಳು ಅಲಮೇಲು ತಂದು ಸಾಕಿದ್ದು , ಅವುಗಳ ಮೇಲೆ ಮಕ್ಕಳ ಮಮತೆ .. ಅತ್ತೆ ಗೆ ಊಟ ಕೊಡುವುದು ಮನೆಗೆಲಸಗಳಲ್ಲಿ ಒಂದು !! ಪ್ರಸಕ್ತ ಪರಿಸ್ಥಿತಿಯ ವಾಸ್ತವ ಚಿತ್ರಣ .
  ಅಭಿನಂದನೆಗಳು .

  ReplyDelete
 26. ಅಲಮೇಲು ಇಂದಿನ ವಾಸ್ತವತೆಯ ಸಂಕೇತ, ಪ್ರಾಣಿಗಳ ಪ್ರೀತಿ ಮಾಡಿದರೆ ಹೆಸರು ಕೀರ್ತಿ ಬರುತ್ತೆ , ಆದ್ರೆ ವಯಸ್ಸಾದವರನ್ನು ಪ್ರೀತಿಯಂದ ನೋಡಿಕೊಂಡು ಊಟ ಹಾಕಿದ್ರೆ ಏನು ಬರುತ್ತೆ ?? ಎನ್ನುವ ಮನೋಭಾವ ಇರುವ ಹೆಣ್ಣು ಮಗಳು ಆಕೆ. ಜೊತೆಗೆ ಮನೆಯಲ್ಲಿ ಅಡಿಗೆ ಮಾಡಲು ಅವಳಿಗೆ ಪುರುಸೊತ್ತಿಲ್ಲ ಅಥವಾ ಅಡಿಗೆ ಬರೋಲ್ಲಾ ಅವಳಿಗೆ , ಒಂದು ವೇಳೆ ಅಡಿಗೆ ಬಂದಿದ್ರೆ ಮೊದಲು ಅಡಿಗೆಮಾಡಿ ವಯಸ್ಸಾದ ಅತ್ತೆಗೆ ನೀಡಿ ನಂತರ ಪೇಟೆಗೆ ಹೋಗುತ್ತಿದ್ದಳು, ಇಂತಹ ಪ್ರಕರಣ ನಾನು ನೋಡಿದ್ದೇನೆ . ಎಲ್ಲಾ ಹೆಣ್ಣು ಮಕ್ಕಳು ಹೀಗೆ ಇರೋಲ್ಲಾ ಆದರೆ ಕೆಲವೊಂದು ಹೆಣ್ಣುಮಕ್ಕಳು ಹೀಗೆ ಇರೋದಂತೂ ಸತ್ಯ.

  ReplyDelete
 27. ಹೊಟ್ಟೆ ಉರಿಸೀರಿ ಬದರಿ..ಎಂಥಾ ಕತೆ ಇದು..!!!

  ReplyDelete
 28. oora ushaabari hottavarige maneya kashta gottaglwante!...haage saaku praanigala meliruva preeti atteyanna maresitu :( .. chennagide sir nimma ee kathe

  ReplyDelete
 29. ಎಂಥ ವಿಪರ್ಯಾಸ. people care for their pets more than fellow humanbeings. have seen this. ನಮ್ಮ ಮನೆಯ ಬಳಿ ಒಂದು ಪರಿವಾರ ಇದೆ. ಹಾಲಿನ ಪುಡಿ ಹಾಕಿ ಕೆಟ್ಟದಾಗಿ ಚಹಾ ಮಾಡಿ ಕೊಡುತ್ತಾರೆ ತಮ್ಮ ಕೆಲಸದಾಕೆಯನ್ನು. ಆದರೆ ಬೆಕ್ಕಿಗೆ ನಾಯಿಗಳಿಗೆ ಒಳ್ಳೆ ದಪ್ಪ ಹಾಲು. :-(

  ReplyDelete
 30. ಇಸ್ತ್ರಿ ಪೆಟ್ಟಿಗೆ ಮುಟ್ಟಿದ ಅನುಭವ.. ಬಿಸಿಯಾದರೆ ಬಟ್ಟೆ ಬೇಗ ಇಸ್ತ್ರಿ ಮಾಡಬಹುದು ಎನ್ನುವ ತವಕ ಒಂದು ಕಡೆಯಾದರೆ.. ತುಂಬಾ ಬಿಸಿಯಾದರೆ ಕೈಬೆರಳು ಸುಡಬಹುದು ಎನ್ನುವ ಆತಂಕ.. ಕಥೆ ಹೆಣೆದಿರುವ ಶೈಲಿ ಸೂಪರ್ ಬದರಿ ಸರ್

  ReplyDelete