Friday, December 14, 2012

ಶಸ್ತ್ರ ಚಿಕಿತ್ಸಾ ಕೊಠಡಿ ಎಂಬ ಕೌತುಕ...


Week : 11


"ಶರೀರೇ ಜರ್ಜರೀಭೂತೇ ವ್ಯಾಧಿಗ್ರಸ್ತೇ ಕಳೇವರೇ |
ಔಷಧಂ ಜಾಹ್ನವೀತೋಯಂ ವೈದ್ಯೋ ನಾರಾಯಣೋ ಹರಿಃ ||"  

ವಾಹಿನಿಗಳ ಛಾಯಾಗ್ರಾಹಕನಾಗಿ ನನ್ನ ವೃತ್ತಿ ಆರಂಭಿಸಿದ ಮೇಲೆ, ನಾನು ತುಂಬಾ ಪ್ರೀತಿಯಿಂದ ಇಂದಿಗೂ ಹೆಚ್ಚಿನ ಮುತವರ್ಜಿ ವಹಿಸಿ ಛಾಯಾಗ್ರಾಹಣ ಮಾಡುವ ವಿಭಾಗವೆಂದರೆಂದರೆ ವೈದ್ಯಕೀಯ ಛಾಯಾಗ್ರಹಣ. ಅದರಲ್ಲೂ ಮುಖ್ಯವಾಗಿ ಶಸ್ತ್ರ ಚಿಕಿತ್ಸೆಗಳು.

ದೇವರ ಕೃಪೆಯಿಂದ ಇಂದಿನವರೆಗೂ ನಾನು ತಲೆಯಿಂದ ಪಾದದವರೆಗೂ ಹಲವಾರು ಶಸ್ತ್ರ ಚಿಕಿತ್ಸೆಗಳನ್ನು, ಜಿಗಣೆ ಚಿಕಿತ್ಸೆ, ಕೇರಳದ ಕಾಯ ಕಲ್ಪ,  ಪ್ರಕೃತಿ ಚಿಕಿತ್ಸೆಯ ಎಲ್ಲಾ ಹಂತಗಳು (ಎನಿಮಾ ಒಂದನ್ನು ಹೊರತುಪಡಿಸಿ! ಹಹ್ಹಹ್ಹಾ...) ಮುಂತಾದ ಹಲವು ವೈದ್ಯ ಪದ್ಧತಿಗಳನ್ನು ಛಾಯಾಗ್ರಹಣ ಮಾಡಿದ್ದೇನೆ.

ಅದರಲ್ಲೂ ನನಗೆ ಶಸ್ತ್ರ ಚಿಕಿತ್ಸೆಯ ಛಾಯಾಗ್ರಹಣವೆಂದರೆ ಅತ್ಯಂತ ಮೆಚ್ಚಿನ ಜವಾಬ್ದಾರಿ. ಶಸ್ತ್ರ ಚಿಕಿತ್ಸಾ ಕೊಠಡಿ ಪ್ರವೇಶಿಸುವ ಮುನ್ನ ನನ್ನ ಎಲ್ಲ ಬಟ್ಟೆಗಳನ್ನು ಬಿಚ್ಚಿಟ್ಟು ಆಸ್ಪತ್ರೆಯ ಉಡುಗೆ ಧರಿಸಿ ಕೊಠಡಿ ಹೊಕ್ಕೆನೆಂದರೆ, ನನಗೆ ಜೀವ ಉಳಿಸುವ ಆ ವೈದ್ಯ ಲೋಕದ ವಿಸ್ಮಯಗಳು ತೆರೆದುಕೊಳ್ಳುತ್ತಾ ಹೋಗುತ್ತದೆ.

ಹಿಡಿ ಗಾತ್ರದ ಮೂತ್ರ ಪಿಂಡಗಳು ಕೈ ಕೊಟ್ಟಾಗ, ರೋಗಿಯ ಮೂತ್ರವನ್ನು ಶುದ್ಧೀಕರಿಸುವ ಆ ಬೃಹತ್ ಯಂತ್ರ.

ಹೃದಯದ ಶಸ್ತ್ರ ಚಿಕಿತ್ಸೆಗಳ ಸಮಯದಲ್ಲಿ ಬಳಸುವ ದೊಡ್ಡ ಗಾತ್ರದ ರಕ್ತ ಸಂಚಾಲನಾ ಯಂತ್ರ. 

ಮೂಳೆ ತಜ್ಞರು ಶಸ್ತ್ರ ಚಿಕಿತ್ಸೆಗಾಗಿ ಬಳಸುವ ಕತ್ತರಿಸುವ, ನೆಟ್ ಬೋಲ್ಟ್, ಸರಳು, ಕೃತಕ ಮಂಡಿ, ಮುಂತಾದ ಮರಗೆಲಸದಂತಹ ಸರಂಜಾಮುಗಳು.

ಅಲ್ಲೇಲ್ಲೋ ದೂರದ ದೇಶದಲ್ಲಿ ಕುಳಿತ ತಜ್ಞ ವೈದ್ಯ ಇಲ್ಲಿನ ರೋಗಿಗೆ ಯಂತ್ರ ಮಾನವ ಕೈಗಳ ಮೂಲಕ ಅಥವಾ ಸೂಚನೆಗಳನ್ನು ಕೊಡುವ ಮೂಲಕ ನಡೆಸುವ ಶಸ್ತ್ರ ಚಿಕಿತ್ಸೆ ಹೀಗೆ ಹತ್ತು ಹಲವು ಅಚ್ಚರಿಗಳು ತೆರೆದುಕೊಳ್ಳುವ ಪ್ರಪಂಚವದು.

ಇವೆಲ್ಲ ನೋಡಿದಾಗಲೆಲ್ಲ ಭಗವಂತ ಸೃಷ್ಟಿಯ ಕೌತುಕತೆ ಅಚ್ಚರಿ ತರಿಸುತ್ತದೆ. (ನಾಸ್ತಿಕ ಮಿತ್ರರಿಗಾಗಿ ಹೇಳುವುದಾದರೆ ಜೀವ ವಿಜ್ಞಾನದ ವಿಕಸನದ ಅದ್ಭುತ).

ನನಗೆ ಒದಗಿ ಬಂದ ಸದವಕಾಶಗಳಲ್ಲಿ ನನಗೆ ನೆನಪಿನಲ್ಲಿ ಉಳಿದ ಶಸ್ತ್ರ ಚಿಕಿತ್ಸೆ ಎಂದರೆ, ಆಂಧ್ರದ ಗಡಿ ಭಾಗದ ಜಲ್ಲೀ ಕ್ರಷರ್ ಕಾರ್ಮಿಕನೊಬ್ಬ ಅಚಾನಕ್ಕಾಗಿ ಅಪಘಾತಕ್ಕೆ ಒಳಗಾದ. ಆತನ ಒಂದು ಕೈಯು ಮೊಳ ಕೈ ಮೇಲ್ಭಾಗದವರೆಗೂ ಕತ್ತರಿಸಿ ಹೋಗಿತ್ತು. ಪ್ರಥಮ ಚಿಕಿತ್ಸೆಯ ನಂತರ ಆತನನ್ನು ಮತ್ತು ಆತನ ಕತ್ತರಿಸಿದ ಕೈಯನ್ನು ರಾಜಧಾನಿಯ ಆಸ್ಪತ್ರೆಗೆ ತಂದರು. ಅಪರೂಪದ ಶಸ್ತ್ರ ಚಿಕಿತ್ಸೆಯಾದ್ದರಿಂದ ಪರಿಚಿತ ವೈದ್ಯರು ನನ್ನನ್ನೂ ಕರೆಸಿಕೊಂಡಿದ್ದರು. ಇಡೀ ಎಂಟು ಗಂಟೆಗಳ ಪರಿಶ್ರಮದಿಂದ ರೋಗಿಗೆ ಕೈ ಮತ್ತೆ ಜೋಡಿಸಲಾಯಿತು.


ಇನ್ನೊಂದು ಪ್ರಕರಣದಲ್ಲಿ ೫ ತಿಂಗಳ ಮಗುವೊಂದು ಹುಟ್ಟಿನಲ್ಲೇ ಅದರ ಎರಡೂ ಕಣ್ಣು ರೆಪ್ಪೆಗಳ ಚರ್ಮ ಒಂದಕ್ಕೊಂದು ಬೆಸೆದು ಬಿಟ್ಟಿತ್ತು. ಕಣ್ಣು ತೆರೆಯಲೇ ಆಗುತ್ತಿರಲಿಲ್ಲ. ಅತ್ಯಂತ ನಾಜೂಕಿನ ಶಸ್ತ್ರ ಚಿಕಿತ್ಸೆಯಿಂದ ಎರಡೂ ರೆಪ್ಪೆಗಳನ್ನು ಬಿಡಿಸಿ ಮಗುವಿಗೆ ಕಣ್ಣು ಕಾಣಲು ಅವಕಾಶ ಮಾಡಿಕೊಡ ಬೇಕಾಯಿತು. ಆ ಮಗುವು ಈಗ ಯಾವುದೋ ಶಾಲೆಯ ಯಾವ ಪಠ್ಯ ಪುಸ್ತಕವನ್ನೋ ಶ್ರದ್ಧೆಯಿಂದ ಓದುತ್ತಿರಬಹುದು. ಪ್ರತಿ ನೋಟದಲ್ಲೂ ಆಕೆ ಬದುಕಿನ ಪೂರ ಅಂದು ಗಂಟೆಗಟ್ಟಲೆ ಸೂಕ್ಷ್ಮವಾಗಿ ಶಸ್ತ್ರ ಚಿಕಿತ್ಸೆ ಮಾಡಿದ ವೈದ್ಯರ ತಂಡವನ್ನು ನೆನೆಯುತ್ತಿರಬಹುದು.

ನಾನೇ ಗಮನಿಸುತ್ತಾ ಬಂದಂತೆ, ಶಸ್ತ್ರ ಚಿಕಿತ್ಸಾ ವಿಧಾನಗಳು, ಬಳಸುವ ಪರಿಕರಗಳು, ಶಸ್ತ್ರ ಚಿಕಿತ್ಸೆಗಾಗಿ ತೆಗೆದುಕೊಳ್ಳುವ ಸಮಯ ಮತ್ತು ರೋಗಿಯು ಚೇತರಿಸಿಕೊಳ್ಳಲು ತೆಗೆದುಕೊಳ್ಳುವ ಸಮಯದಲ್ಲೂ ಕ್ರಾಂತಿಕಾರಕ ಸುಧಾರಣೆಗಳಾಗಿವೆ. ಅಂತರ್ಜಾಲದ ಮೂಲಕ, ಪುಟ್ಟ ಯಂತ್ರ ಮಾನವ ಕೈಗಳ ಮೂಲಕ, ತೆರೆದ ಶಸ್ತ್ರ ಚಿಕಿತ್ಸೆಯನ್ನು ತಪ್ಪಿಸುವ ಲ್ಯಾಪ್ರೋಸ್ಕೋಪಿ ಎಂಬ ವೈದ್ಯಕೀಯ ವರದಾನದ ಮೂಲಕ ದಿನೇ ದಿನೇ ಶಸ್ತ್ರ ಚಿಕಿತ್ಸೆ ಪರಿಣಾಮಕಾರಿ ಆಗುತ್ತಿದೆ.

ಒಮ್ಮೆ ಹೀಗೆ ಬದಲೀ ಮೂತ್ರ ಪಿಂಡದ ಮರು ಜೋಡಣೆ ಶಸ್ತ್ರ ಚಿಕಿತ್ಸೆಗಾಗಿ ನಾನೂ ಮತ್ತು ನನ್ನ ಸಹಾಯಕ ಆಸ್ಪತ್ರೆಗೆ ಹೋಗಿದ್ದೆವು. ಇದು ನಡೆದದ್ದು ಸುಮಾರು ಹತ್ತು ವರ್ಷಗಳ ಹಿಂದಿನ ಮಾತು. ಆಗ ಕ್ಯಾಮರಾ ಬೇರೆ ಯಮ ಗಾತ್ರದ್ದು ಮತ್ತು ಅದಕ್ಕೆ ವಿದ್ಯುತ್ ಕೊಡುವ ಬ್ಯಾಟರಿಯೇ ಬೇರೆ ಇರುತಿತ್ತು. ನಾವಿಬ್ಬರೂ ಆಸ್ಪತ್ರೆಯ ಉಡುಪು ಬದಲಿಸಿಕೊಂಡು ಶಸ್ತ್ರ ಚಿಕಿತ್ಸೆ ಕೊಠಡಿ ಪ್ರವೇಶಿಸಿದೆವು. ನಾನು ಕ್ಯಾಮರಾ ಹೆಗಲಿಗೆ ಏರಿಸಿದ್ದರೆ, ನನ್ನ ಪಕ್ಕದಲ್ಲಿ ತೂಕದ ಬ್ಯಾಟರಿ ಪೆಟ್ಟಿಗೆ ನೇತು ಹಾಕಿಕೊಂಡು ನನ್ನ ಸಹಾಯಕ. ಮಂಚದ ಮೇಲೆ ರೋಗಿಯನ್ನು ಮಲಗಿಸಿ ಮೊದಲೇ ಗುರುತಿಸಿದ್ದ ಚುಕ್ಕೆಗಳ ಅನ್ವಯ ವೈದ್ಯರು ಮೂತ್ರ ಪಿಂಡದ ಸ್ಯಾಂಪಲ್ ಸಂಗ್ರಹಿಸಲು ದಬ್ಬಳದಂತಹ ಉದ್ದದ ಸೂಜಿಯನ್ನು ದೇಹದೊಳಗೆ ತೂರಿಸಿದರು. ನಾನು ಯಾವ ಹಂತವೂ ತಪ್ಪಿಹೋಗದಂತೆ ಚಿತ್ರೀಕರಿಸುತ್ತಲೇ ಇದ್ದೆ. ಯಾಕೋ ನನ್ನ ಕ್ಯಾಮರಾವು ಜಗ್ಗಿದಂತಾಯ್ತು. ಸಹಾಯಕನಿಗೆ ಹುಷಾರಪ್ಪ ಎಂದು ಹೇಳಲು ಅವನ ಕಡೆ ತಿರುಗಿದೆ. ಆಸಾಮಿ ನಾಪತ್ತೇ! ಅರೆ ಎಲ್ಲಿ ಹೋದ ಎಂದು ನೋಡಿದರೆ ರಕ್ತ, ಶಸ್ತ್ರ ಚಿಕಿತ್ಸೆ ಕೊಠಡಿಯ ವಾತಾವರಣ, ಅದರ ವಾಸನೆಗಳು ಮತ್ತು ಸೂಜಿ ಚುಚ್ಚಿದ್ದನ್ನು ನೋಡಿದ ಆ ಹುಡುಗು ಮೂರ್ಚೆ ಹೋಗಿದ್ದ! 


ಅಂತಹ ಜೀವನ್ಮರಣದ ಪ್ರಶ್ನೆ ಇರುವ ಗಳಿಗೆಯಲ್ಲೂ ನಾನು ನೆನಸಿಕೊಂಡು ನಗುವ ಹಾಸ್ಯದ ಸಂಗತಿ ಎಂದರೆ, ಯಾರೋ ರಾಜಕಾರಣಿಗೆ ಚಿಕ್ಕದೇನೋ ಶಸ್ತ್ರ ಚಿಕಿತ್ಸೆ ಇದ್ದಾಗ ವೈದ್ಯರು ಸ್ಥಳೀಯ ಅರವಳಿಕೆ ಕೊಡಲು ಮುಂದಾದರು. ಇದನ್ನು ತಿಳಿದುಕೊಂಡ ಆತ ವೈದ್ಯರಿಗೆ ಇಂಪೋರ್ಟೆಡ್ ಆರವಳಿಕೆ ಮದ್ದೇಕೊಡಿ ಎಂದು ದುಂಬಾಲು ಬಿದ್ದನಂತೆ.

ತುಂಬಾ ಪರಿಚಿತ ಪರಿಚಿತ ವೈದ್ಯರೊಬ್ಬರು ನನಗೇ ಆಪರೇಷನ್ ಟೇಬಲ್ಲಿನಲ್ಲೂ ರೀ ಟೇಕ್ ಕೇಳಬೇಡಪ್ಪ ಎಂದು ಹಾಸ್ಯ ಮಾಡುತ್ತಿದ್ದರು!

ಇತ್ತೀಚೆಗಂತೂ ವೈದ್ಯಕೀಯ, ಆಸ್ಪತ್ರೆ ಮತ್ತು ಔಷಧಿ ದುಬಾರಿಯಾಗುತ್ತ, ಮಧ್ಯಮ ಹಾಗೂ ಬಡ ರೋಗಿಗಳ ಪಾಲಿಗೆ ಗಗನ ಕುಸುಮವಾಗುತ್ತಿದೆ. ಈ ನಡುವೆಯೂ ದಾನಿಗಳು ಮುಂದೆ ಬಂದು ವೆಚ್ಚವನ್ನು ಭರಸುತ್ತಿದ್ದಾರೆ. ಸರ್ಕಾರೀ ಪ್ರಾಥಮಿಕ ಚಿಕಿತ್ಸಾ ಕೇಂದ್ರಗಳು ಮತ್ತು ದೊಡ್ಡ ಆಸ್ಪತ್ರೆಗಳು ತಕ್ಕ ಮಟ್ಟಿಗೆ ಒಳ್ಳೆಯ ಕೆಲಸವನ್ನೇ ಮಾಡುತ್ತಿವೆ. ಅಂತೆಯೇ ನೌಕರರಿಗೆ ಲಭ್ಯವಿರುವ ಇ.ಎಸ್.ಐ ಮತ್ತು ಶ್ರೀಸಾಮಾನ್ಯರಿಗೂ ಒದಗುವ ವೈದ್ಯಕೀಯ ವಿಮಾ ಯೋಜನೆಗಳು ಸಹ.

ಇಂದು ಹಲವು ಪ್ರತಿಷ್ಠಿತ ಆಸ್ಪತ್ರೆಗಳು ದಾನಿಗಳ ಪಟ್ಟಿ ಮಾಡಿಟ್ಟು, ಬಡ ರೋಗಿಗಳ ಶಸ್ತ್ರ ಚಿಕಿತ್ಸೆಯನ್ನು ಉಚಿತವಾಗಿ ನೆರೆವೇರಿಸುತ್ತಿದ್ದಾರೆ.

ಮುಖ್ಯವಾಗಿ ಸರ್ಕಾರಗಳು ಮುತವರ್ಜಿ ವಹಿಸಿ, ವೈದ್ಯ ಶಾಸ್ತ್ರದ ಬಗೆಗೆ ಹೆಚ್ಚಿನ ಸಂಶೋಧನೆಗಳನ್ನು ಪ್ರೇರೇಪಿಸಬೇಕಿದೆ. ಮನುಜ ಮತ್ತು ಪಶುಗಳ ಅರೋಗ್ಯದ ದೃಷ್ಟಿಯಿಂದ ವಾರ್ಷಿಕ ಅಯವ್ಯಯದಲ್ಲೂ ಸಂಶೋಧನೆಗಳಿಗೆ ದೊಡ್ಡ ಪಾಲನ್ನು ಎತ್ತಿಡಬೇಕಿದೆ. ಸುಲಭ ಮತ್ತು ಮಿತವ್ಯಯಕಾರಿ ಚಿಕಿತ್ಸಾ ಪದ್ಧತಿಗಳು ಮುಂದಿನ ದಿನಗಳಲ್ಲಿ ನಗರಗಳಲ್ಲಿ ಮಾತ್ರವೇ ಅಲ್ಲದೇ ಗ್ರಾಮೀಣ ಪ್ರದೇಶಗಳಲ್ಲೂ ಗುಡ್ಡಗಾಡುಗಳಲ್ಲೂ ಬರಲೆಂದು ಆಶಿಸುತ್ತೇನೆ.

ಅಂತೆಯೇ ಇಲ್ಲಿಯವರೆಗೂ ನಾನು ಚಿತ್ರೀಕರಣ ಮಾಡದ ಎಲ್ಲ ಶಸ್ತ್ರ ಚಿಕಿತ್ಸೆಗಳ ಮತ್ತು ವೈದ್ಯಕೀಯ ಪದ್ಧತಿಗಳ ಛಾಯಾಗ್ರಹಣ ಮಾಡುವ ಅವಕಾಶವೂ ನನಗೆ ದೊರೆಯಲಿ.

ನಮ್ಮ ಬದುಕಿನ ಅವಭಾಜ್ಯ ಅಂಗವಾಗಿ ನಮ್ಮ ಸ್ವಾಸ್ಥ್ಯವನ್ನು ಸದಾ ಕಾಪಾಡುವ ಎಲ್ಲ ವೈದ್ಯರಿಗೆ ನಾನು ಈ ಮೂಲಕ ನಮಿಸುತ್ತೇನೆ.

ಗಲ್ಫ ಕನ್ನಡಿಗ ಈ ಪತ್ರಿಕೆಯಲ್ಲಿ ಪ್ರಕಟಿತ.
14.12.2012

http://gulfkannadiga.com/news/culture/26881.html

(ಚಿತ್ರ ಕೃಪೆ : ಅಂತರ್ಜಾಲ) 

15 comments:

 1. ಮಾಹಿತಿಪೂರ್ಣ ಬ್ರದರ್...ಯಾರೂ ಬರೆದಿರದ ಮಾತುಗಳು

  ReplyDelete
 2. ನಿಮ್ಮಅನುಭವ ಕೇಳಿ ಮೈ ಜುಮ್ಮೆನ್ನತ್ತೆ. ಅದನ್ನ ಬರೆದ ರೀತಿ ಸುಪರ್. ನಿಮಗೆ ಹೆದರಿಕೆ ಆಗ್ತಾ ಇರಲಿಲ್ಲವಾ..? ನೀವು ಬರೆದ ರೀತಿ ನೋಡಿದರೆ, ನಾನಾಗಿದ್ದರೆ ತಲೆ ತಿರುಗಿ ಬೀಳುತ್ತಿದ್ದೆ.. ಒಂದು ಪ್ರಶ್ನೆ... ಇಷ್ಟೆಲ್ಲಾ ದೊಡ್ಡ ದೊಡ್ಡ ಶಸ್ತ್ರಚಿಕಿತ್ಸೆ ಚಿತ್ರೀಕರಣ ಮಾಡಿದ, ನೋಡಿದ ನಂತರ ನಿಮಗೆ ಚಿಕ್ಕಪುಟ್ಟ ಚಿಕಿತ್ಸೆ ಮಾಡಲು ಬರಬಹುದೇನೋ ..ಅಲ್ಲವೋ....ಹ್ಹ ಹ್ಹ..

  ReplyDelete
 3. ನಾನೆ ಆ ಕೊಠಡಿಯೊಳಗೆ ಹೋಗಿ ಬಂದ ಅನುಭವವಾಯಿತು..
  ನಿಜಕ್ಕೂ ಭಗವಂತನ ಸೃಷ್ಟಿ ಅಚ್ಚರಿಯೇ..[ಆಸ್ತಿಕನಾದ್ದರಿಂದ ಈ ಮಾತು..!!!!!]

  ReplyDelete
 4. ಶಸ್ತ್ರಗಳು, ಅಸ್ತ್ರಗಳು ಬರಿ ನಾವು ಮಹಾಭಾರತದಲ್ಲಿ ನೋಡಿದ್ದೆವು...ಅದರ ಪರಿ ಪೂರ್ಣ ಮಾಹಿತಿ, ನಿಮ್ಮ ಕೆಲ ಅನುಭವಗಳು ಮೈನವಿರೇಳಿಸುವಂತಿದ್ದರೆ, ಇನ್ನು ಕೆಲವು ಹೃದಯ ಮಿಡಿಯುತ್ತದೆ, ಕೆಲವು ನಗೆ ಉಕ್ಕಿಸುತ್ತದೆ. ಏನೇ ಆಗಲಿ ಭಗವಂತನ ಎರಡನೇ ಅವತಾರವಾದ ವೈದ್ಯರು ಹಾಗೂ ಅವರ ಪರಿಶ್ರಮಗಳು ನಿಜಕ್ಕೂ ಅಭಿನಂದನೀಯ...ಅಂತ ದೇವರಂಥ ವೈದ್ಯಕೀಯ ಸಿಬ್ಬಂಧಿಗಲಿಗೆಲ್ಲರಿಗೂ ನನ್ನ ಅಭಿನಂದನೆಗಳು ..ಹಾಗು ಸುಂದರ ಲೇಖನ ಬರೆದ ಹರಿಯ ಇನ್ನೊಂದು ರೂಪ ಬದರಿನಾಥ್ ಅವರಿಗೂ ಕೂಡ ಅಭಿನಂದನೆಗಳು

  ReplyDelete
 5. ನಿಮ್ಮ ಅನುಭವವನ್ನು ನಮ್ಮದೇ ಎನ್ನುವಷ್ಟು ತಾದ್ಯಾತ್ಮವಾಗಿ ಬರೆದಿದ್ದೀರಿ ಬದರಿಯವರೇ, ಇ0ಥಾ ಅನೇಕ ಅವಕಾಶಗಳು ನಿಮಗೆ ದೊರೆಯಲಿ ಎ0ದು ಆಶಿಸುತ್ತೇನೆ.
  prabhamaninagraj

  ReplyDelete
 6. ಸೊಗಸಾದ ಬರಹ ಬದರೀ...

  ReplyDelete
 7. ಬದರಿನಾಥರೆ,
  ನಿಮ್ಮ ಅನುಭವವನ್ನು ಬರೆಯುತ್ತಲೇ, ವೈದ್ಯಲೋಕದ ವಿಸ್ಮಯವನ್ನು ತೆರೆದಿಟ್ಟಿದ್ದೀರಿ. ನಿಮ್ಮ ಚಿತ್ರೀಕರಣಗಳನ್ನೆಲ್ಲ ಸಂಕಲಿಸಿದರೆ, ಅದೊಂದು ಹೆಬ್ಬೊತ್ತಿಗೆಯೇ ಆಗಿರಬಹುದು. ಅದನ್ನು ಇತರ ಶಸ್ತ್ರಚಿಕಿತ್ಸಕರು ಬಳಸಿಕೊಳ್ಳಲು ಸಾಧ್ಯವಾಗುತ್ತದೆ. ಅಂತಹ ಪ್ರಯತ್ನ ನಡೆದಿದೆಯೆ?

  ReplyDelete
 8. ಉತ್ತಮ ಬರಹ ಬದರಿ.ಅಭಿನಂದನೆಗಳು.

  ReplyDelete
 9. ಸೊಗಸಾಗಿ ಬಣ್ಣಿಸಿದ್ದಿರಿ ನಿಮ್ಮ ಅನುಭವವನ್ನ
  ನಿಮಗೆ ಅವಕಾಶಗಳು ಸಿಗಬೇಕೆಂದರೆ ಯಾರೋ ಶಸ್ತ್ರ ಚಿಕಿತ್ಸೆಗೆ ಒಳಗಾಗಬೇಕು
  ಬೇಡ ಬಿಡಿ ಸರ್ ಬೇರೆ ಏನಾದ್ರು ಚಿತ್ರೀಕರಿಸಿ :)

  ReplyDelete
 10. ಆಪರೇಶನ್ ಬದರಿ.. ಲೇಖನ ಸಕ್ಸಸ್

  ReplyDelete
 11. ಬದರಿ ಸರ್...
  ಅಬ್ಬಾ...ಆಪರೇಷನ್ ಮಾಡುವಾಗ ಛಾಯಾಚಿತ್ರಣವನ್ನು ಮಾಡುತ್ತಾರೆ ಎಂಬುದೇ ಗೊತ್ತಿರಲಿಲ್ಲ...ಬರಿಯ ಡಾಕ್ಟರು ಇರುತ್ತಾರೆ ಅಂದುಕೊಂಡಿದ್ದೆ... ಧನ್ಯವಾದ ಮೊದಲು ನಿಮಗೆ ಅದಕ್ಕೆ..
  ಹಮ್ ನಿಜವಾಗಿಯೂ ಹೆದ್ರಿಕೆಯಾಯ್ತು ನಿಮ್ಮ ಬರಹ ಓದಿ..ಆ ಆಪರೇಷನ್ ಥಿಯೇಟರ್ರು..ಅಯ್ಯಪ್ಪಾ..

  ಬರೆಯುತ್ತಿರಿ..ಓದುತ್ತಿರುತ್ತೇವೆ..
  ನಮಸ್ತೆ

  ReplyDelete
 12. ಅಬ್ಬಾ .....ಶಸ್ತ್ರಚಿಕಿತ್ಸೆ ಬಿಡಿ....ಆಸ್ಪತ್ರೆಯ ವಾತಾವರಣವೇ ನನಗೆ ತಲೆ ತಿರುಗಿಸಿಬಿಡುತ್ತದೆ...ರಕ್ತ ನೋಡಲು ನನ್ನಿಂದಾಗದು.......ನೀವು ಶಸ್ತ್ರಚಿಕಿತ್ಸೆಯ ಸಂದರ್ಭದಲ್ಲಿ ಫೋಟೋ ತೆಗೆಯುತಿದ್ದಿರಿ ಎನ್ನುವುದನ್ನು ನಂಬಲಾಗಲಿಲ್ಲ....ತುಂಬಾ ಕಷ್ಟದ ಕೆಲಸ....ನಿಮ್ಮ ಅನುಭವಗಳನ್ನು ಕಣ್ಣಿಗೆ ಕಟ್ಟುವಂತೆ ನಿರೂಪಿಸಿದ್ದೀರಿ....ಸುಂದರ ಲೇಖನ.....

  ReplyDelete
 13. ಆರಂಭದಿಂದ ಕೊನೆವರೆಗೂ ಲೇಖನ ಕುತೂಹಲಕಾರಿಯಾಗಿ ಓದಿಸಿಕೊಂಡು ಹೋಗುತ್ತದೆ.. ವಿಸ್ಮಯದ ಸಂಗತಿಗಳನ್ನು ಸಾಮಾನ್ಯ ಓದುಗನಿಗೆ ದಕ್ಕುವಂತೆ ಸರಳವಾಗಿ ಕಟ್ಟಿಕೊಟ್ಟಿದ್ದಿರಿ ..ಅಭಿನಂದನೆಗಳು ಸರ್..

  ReplyDelete
 14. ಬಹಳ ಮಾಹಿತಿಪೂರ್ಣವಾಗಿದೆ. ನೀವು ಬರೆದಿರುವ ಎಷ್ಟೋ ವಿಷಯಗಳು ತಿಳಿದಿರಲಿಲ್ಲ. ಅದರೂ, ಶಸ್ತ್ರ ಚಿಕಿತ್ಸೆಯನ್ನು ನೋಡಲು ಧ್ಯರ್ಯ ಬೇಕು! ನಾನಾಗಿದ್ದರೆ ನಿಮ್ಮ ಗೆಳೆಯನ ಹಾಗೆ ಮೂರ್ಚೆ ಹೋಗಿರುತ್ತಿದ್ದೆ :)

  ReplyDelete
 15. ಬದರೀ ಸಾರ್..


  ನಿಮ್ಮ ಈ ಲೇಖನವನ್ನ ಒಂದು ವಾರದ ಹಿಂದೆಯೇ ನಾನು ಓದಿಯಾತ್ತು.. ಅದು ನನ್ನ ಫೋನಿನಲ್ಲಿ..


  ಮೊಬೈಲ್ ಫೋನಿನಲ್ಲಿ ಕನ್ನಡ ಆದ ಬಹುದಷ್ಟೇ ಬರೆಯೋ ಸೌಲಭ್ಯವಿಲ್ಲ.. ಆದ್ದರಿಂದ ಕಾಮೆಂಟ್ ಹಾಕಿರಲಿಲ್ಲ..


  ಆಪರೇಶನ್ ಅಥವಾ ಇನ್ನ್ಯಾವುದೇ ಚಿಕಿತ್ಸೆಗಳ ವೀಡಿಯೋ ಚಿತ್ರೆಕರಣ ಮಾಡಲಾಗುತ್ತೆ ಅನ್ನೋ ವಿಚಾರದ ಬಗ್ಗೆ ನನಗೆ ಸ್ವಲ್ಪವೂ ಗೊತ್ತಿರಲಿಲ್ಲ..


  ಸಿನಿಮಾಗಳಲ್ಲಿ ನೋಡಿದ ಒಂದೆರೆಡು ತುಣುಕು ಬಿಟ್ಟರೆ ಆಪರೇಶನ್ ಥಿಯೇಟರ್ ಗಳ ಕಲ್ಪನೆಯೂ ನನಗಿಲ್ಲ.


  ನೀವು ನಂಬಲೇ ಬೇಕು.. ಎದುರಿಗಿಹ ಯಾರಿಗೆ ಆಗಲಿ ಸಣ್ಣ ಗಾಯವಾಗಿ ಚಿಕ್ಕದಾಗಿ ರಕ್ತ ಹೊರ ಚಿಮ್ಮಿದರೂ ನನ್ನ ಮೈಯೆಲ್ಲಾ ಜುಮ್ಮ್ ಎಂದು.. ಅದನ್ನ ನೋಡಲಾಗದೆ ಮುಖವನ್ನ ಇತ್ತ ಕಡೆ ತಿರುಗಿಸಿ ಕೊಂದು ಬಿಡುವ ಪುಕ್ಕಲುತನ ಚಿಕ್ಕ ವಯಸ್ಸಿನಿಂದ ಹಿಡಿದೂ ಈಗಲೂ ನನ್ನನ್ನು ಬಿಟ್ಟಿಲ್ಲ..


  ಅಂಥದ್ದರಲ್ಲಿ ರಕ್ತ ಮಾಂಸಗಳ ಜೊತೆ ಸರಸವಾಡುವ. ಕೊಯ್ಯುವ.. ಹೊಲಿಯುವ ಕ್ರಿಯೆಗಳ ಜೊತೆ ಆಟವಾಡುವ ದೃಶ್ಯವನ್ನ ಮರುಕ ಪಡುವ ಯಾವ ವ್ಯಕ್ತಿಯೂ ದಿಟ್ಟಿಸಿ ನೋಡಲಾರ..


  ಆದರೆ ಡಾಕ್ಟರ್ ಗಳಿಗೆ ಮರುಕವಿಲ್ಲ ಎಂದಲ್ಲ.. ಎಷ್ಟೆಂದರೂ ಅದು ಅವರ ಕಾಯಕ.. ಅವರೇ ಹೆದರಿದರೆ ನಮಗೆಲ್ಲಿ ಜೀವ ಜೀವನ..


  ಅವರ ಹೊರತಾಗಿ ಇದನೆಲ್ಲ ನೋಡೋಕೆ ಅಥವಾ ಅದನ್ನೂ ಮೀರಿ ಚಿತ್ರೀಕರಣ ಮಾಡೋಕೆ ನಿಮಗೆ ಅದಕ್ಕಿಂತಲೂ ಹೆಚ್ಚು ಮಾನಸಿಕ ಸಿದ್ಧತೆ & ಸ್ಥೈರ್ಯ ಬೇಕಾಗುತ್ತದೆ..


  ನಿಮ್ಮನ್ನ ಕಂಡರೆ ನಮಗೆ ಹೆಮ್ಮೆ ಅನ್ನಿಸುತ್ತದೆ ಸಾರ್.. ಅನುಭವಗಳನ್ನ ನಾಜೂಕಾಗಿ ಬರಹಕ್ಕೆ ಇಳಿಸಿದ್ದೀರಿ ಇಷ್ಟವಾಯ್ತು.

  ReplyDelete