ಬುಧವಾರ, ಜುಲೈ 11, 2012

ಪಡುಮಟಿ ಸಂಧ್ಯಾ ರಾಗಂ...


ಕೆಲವು ಸಿನಿಮಾಗಳೇ ಹಾಗೆ, ಎಷ್ಟೋ ವರ್ಷಗಳ ನಂತರವೂ ಅದರ ಛಾಯೇ ಮನಸ್ಸಿನಲ್ಲಿ ಉಳಿದು ಬಿಡುತ್ತವೆ.

ಇಲ್ಲಿ ಭಾಷೆ ಮುಖ್ಯವೇ ಆಗುವುದಿಲ್ಲ, ಸಿನಿಮಾಗೆ ಅದರದೇ ಭಾಷೆ ಇರುವುದರಿಂದ ಅದು ಲೋಕ ಭಾಷೆ.

ಹೀಗೆ ನನಗೆ ಸದಾ ನೆನಪಿನಲ್ಲಿ ಉಳಿದ ಸಿನಿಮಾವೆಂದರೆ, ತೆಲುಗಿನ :

 "ಪಡುಮಟಿ ಸಂಧ್ಯಾ ರಾಗಂ"

೧೪ ರೀಲುಗಳ (೩೮೬೧.೯೦ ಮೀಟರ್) ಈ ಸಿನಿಮಾ ಏಪ್ರಿಲ್ ೨, ೧೯೮೭ರಲ್ಲಿ ಸೆನ್ಸಾರ್ ಆಯಿತು. ಮರುದಿನವೇ ತೆರೆ ಕಂಡಿತು.

ಈ ಚಿತ್ರ ಹಲವು ವಿಶಿಷ್ಟಗಳ ಸಂಗಮ:

ಈ ಚಿತ್ರವು ಪ್ರವಾಸಾಂಧ್ರ ಚಿತ್ರ ಲಾಂಛನದಲ್ಲಿ ನಿರ್ಮಾಣವಾಯಿತು. ನಿರ್ಮಾಪಕರು ಅನಿವಾಸಿ ಭಾರತೀಯರಾದ ಗುಮ್ಮಲೂರಿ ಶಾಸ್ತ್ರಿ ಮತ್ತು ಮೀರ್ ಅಬ್ಧುಲ್ಲ. ಸ್ವತಃ ನಿರ್ಮಾಪಕರು ನಾಯಕಿಯ ತಂದೆ ಹಾಗೂ ಚಿಕ್ಕಪ್ಪನ ಪಾತ್ರದಲ್ಲಿ ನಟಿಸಿದ್ದಾರೆ.
 ಮೀರ್ ಅಬ್ಧುಲ್ಲ ಮತ್ತು ಗುಮ್ಮಲೂರಿ ಶಾಸ್ತ್ರಿ

ತೆಲುಗಿನ ಮೇರು ಪ್ರತಿಭೆ, ಜಂಧ್ಯಾಲ (ಜಂಧ್ಯಾಲ ಸುಬ್ರಹ್ಮಣ್ಯ ಶಾಸ್ರಿ; ೧೯೫೨ - ೨೦೦೧) ಈ ಚಿತ್ರದ ನಿರ್ದೇಶಕರು. ಸದಾ ಹೊಸತನವನ್ನು ತೆರೆಗೆ ತರುವ ಹಾಸ್ಯಬ್ರಹ್ಮ  ಹಲವು ಹಾಸ್ಯ ನಟರನ್ನೂ ಪರಿಚಯಿಸಿದ್ದಾರೆ.   ಹಾಸ್ಯ ಚಿತ್ರಗಳನ್ನು ಅಮೋಘವಾಗಿ ರೂಪಿಸಿಕೊಡುವ ಇವರ ಸಿನಿಮಾಗಳಲ್ಲಿ ಹಾಸ್ಯವು ಸರಳವಾಗಿದ್ದು, ದ್ವಂದ್ವಾರ್ಥಗಳಿರುವುದೇ ಇಲ್ಲ. ಇವರನ್ನು "ಬೈಗುಳಗಳ ಜನಕ" ಅಂತಲೂ ಕರೆಯುತ್ತಾರೆ, ಅಷ್ಟು ಬೈಗುಳಗಳನ್ನು ತೆರೆಗೆ ಪರಿಚಯಿಸಿದ್ದಾರೆ. ಒಳ್ಳೆಯ ಚಿತ್ರಕಥೆ ಮತ್ತು ಸಂಭಾಷಣೆ ಬರೆಯುತ್ತಿದ್ದ ಇವರು ಕೆ. ವಿಶ್ವನಾಥ್ ನಿರ್ದೇಶನದ ಶಂಕರಾಭರಣಂ ಚಿತ್ರಕ್ಕೂ ಸಂಭಾಷಣೆಕಾರರು.
 
ಖ್ಯಾತ ಹಿನ್ನಲೆ ಗಾಯಕ ಪದ್ಮಭೂಷಣ ಡಾ|| ಎಸ್.ಪಿ. ಬಾಲಸುಬ್ರಹ್ಮಣ್ಯಂ  ಈ ಚಿತ್ರದ ಸಂಗೀತ ನಿರ್ದೇಶಕರು. ಸುಮಾರು ೪೦ ಸಿನಿಮಾಗಳ ಮೇಲೆ ಸಂಗೀತ ನಿರ್ದೇಶನ ಮಾಡಿರುವ ಎಸ್.ಪಿ.ಬಿ. ಈ ಚಿತ್ರದಲ್ಲಿ ಪಾಶ್ಚಾತ್ಯ ಮತ್ತು ಭಾರತೀಯ ಸಂಗೀತವನ್ನು ಅತ್ಯದ್ಭುತವಾಗಿ ಬಳಸಿಕೊಂಡಿದ್ದಾರೆ. ಈ ಚಿತ್ರಕ್ಕೆ ಶೀರ್ಷಿಕೆ ಹುಡುಕಿಕೊಟ್ಟವರೂ ಇವರೇ.

ಟಾಮ್ ಎಂಬ ಅಮೇರಿಕನ್ ಈ ಚಿತ್ರದ ನಾಯಕ ಮತ್ತು ತೆಲುಗಿನ ಅತ್ಯುತ್ತಮ ನಟಿ ವಿಜಯ ಶಾಂತಿ ಈ ಚಿತ್ರದ ನಾಯಕಿ. ಇಂದಿನ ವಿಶ್ವ ವಿಖ್ಯಾತ ಡ್ರಮ್ಮರ್ ಶಿವಮಣಿಯವರು ಈ ಚಿತ್ರದಲ್ಲಿ ನಟಿಸಿದ್ದಾರೆ. ಬಹುತೇಕ ನಟರು ಅನಿವಾಸೀ ಭಾರತೀಯರೇ ಆಗಿದ್ದು, ಉಳಿದಂತೆ ಕನ್ನಡದ ಜ್ಯೋತಿ ಮತ್ತು ಸುತ್ತಿ ವೇಲಭದ್ರರಾವ್ ನಟಿಸಿದ್ದಾರೆ.

ಮುಕ್ಕಾಲು ವಾಸಿ ಚಿತ್ರೀಕರಣ ಅಮೇರಿಕದಲ್ಲೇ ಜರುಗಿತು. ಅನ್ನಮಾಚಾರ್ಯರ ಅಮೋಘ ಕೀರ್ತನೆ "ಮುದ್ದುಗಾರೆ ಯಶೋಧ"ವನ್ನು ಎಸ್. ಜಾನಕಿಯವರು ಪುಟ್ಟ ಕಂದನ ಧ್ವನಿಯಲ್ಲಿ ಹಾಡಿದ್ದಾರೆ.


ಈ ಚಿತ್ರಕ್ಕೆ ಜಂಧ್ಯಾಲರಿಗೆ ಅತ್ಯುತ್ತಮ ಚಿತ್ರ ಕಥೆಗೆ ನಂದಿ ಪ್ರಶಸ್ತಿ ಮತ್ತು ಗುಮ್ಮಲೂರಿ ಶಾಸ್ತ್ರಿಯವರಿಗೆ ಫಿಲಿಂ ಫೇರ್ ಪ್ರಶಸ್ತಿ ಬಂದಿತು.

ಕಥಾ ಹಂದರ: ಪಕ್ಕಾ ಭಾರತೀಯ ಮನಸ್ಥಿತಿಯ ನಾಯಕಿಯ ತಂದೆ, ಮಗಳು ಮತ್ತು ಹೆಂಡತಿ ಸಮೇತ ಅಮೇರಿಕಾದಲ್ಲಿ ಕೆಲಸ ಮಾಡಲು ವಲಸೆ ಹೋಗುತ್ತಾರೆ. ನಾಯಕಿಗೆ ಅಮೇರಿಕನ್ ಹುಡುಗನ ಜೊತೆಗೆ ಪ್ರೇಮಾಂಕುರವಾಗುತ್ತದೆ. ಇದನ್ನು ವಿರೋಧಿಸುವ ಅಪ್ಪನನ್ನು ಒಪ್ಪಿಸಲಾರದೇ ನಾಯಕಿ ಅವಳ ಚಿಕ್ಕಪ್ಪನ ಸಹಾಯದಿಂದ ಮದುವೆಯಾಗುತ್ತಾಳೆ.

ಮುನಿಸಿಕೊಂಡ ತಂದೆ ಅಮೇರಿಕ ಬಿಟ್ಟು ಭಾರತಕ್ಕೆ ವಾಪಸ್ಸಾಗುತ್ತಾರೆ. ತೆಲುಗು ಕಲೆಯುವ ನಾಯಕ, ಭಾರತೀಯ ಆಚಾರ ವಿಚಾರ ರೂಢಿಸಿಕೊಳ್ಳುತ್ತಾನೆ. ಕಡೆಗೆ ನಾಯಕಿಯ ತಂದೆಗೆ ಭಾರತದಲ್ಲಿ ಭಾರತೀಯ ಪದ್ಧತಿಯಂತೆ ಚಿತೆಗೆ ಅಗ್ನಿಸ್ಪರ್ಷ ನೀಡುತ್ತಾನೆ.


ಭಾರತೀಯ ಸಂಸ್ಕೃತಿಯು ಶ್ರೇಷ್ಟವಾದದ್ದು ಅದು ಒಳ್ಳೆಯ ವಿಚಾರಗಳನ್ನೂ ಸ್ವೀಕರಿಸುತ್ತದೆ ಎನ್ನುವುದು ಈ ಚಿತ್ರದ ಸಾರ.

ಭರಪೂರ ತಮಾಷೆ ಇರುವ ನೀವು ನೋಡಲೇ ಬೇಕಾದ ಸಿನಿಮಾ ಇದು.


ಈ ಚಿತ್ರವು ಒಳ್ಳೆಯ ಹಾಡುಗಳನ್ನು ಹೊಂದಿದ್ದು, ಕಥೆಗೆ ತಕ್ಕ ಛಾಯಾಗ್ರಹಣವನ್ನು ಪಿ. ದಿವಾಕರ್ ನೀಡಿದ್ದು, ಸಂಕಲನ ಗೌತಮ್ ರಾಜು ಅವರದು. 



-----------------------------------------------

ಜಂಧ್ಯಾಲ ನಿರ್ದೇಶನದ ಸಿನಿಮಾಗಳು:
ಮುದ್ದ ಮಂದಾರಂ, ಮಲ್ಲೆ ಪಂದಿರಿ, ನಾಲುಗು ಸ್ಥಂಭಾಲಾಟ, ನೆಲವಂಕ, ರೆಂಡು ಜಳ್ಳ ಸೀತಾ, ಅಮರಜೀವಿ, ಮೂಡು ಮುಳ್ಳು, ಆನಂದಭೈರವಿ. ಶ್ರೀವಾರಿಕಿ ಪ್ರೇಮ ಲೇಖ, ರಾವು ಗೋಪಾಲರಾವು, ಪುಟ್ಟಡಿ ಬೊಮ್ಮ, ಬಾಬಾಯಿ ಅಬ್ಬಾಯಿ, ಶ್ರೀವಾರಿ ಶೋಭನಂ, ಮೊಗುಳ್ಳು ಪೆಳ್ಳಾಲು, ಮುದ್ದುಲ ಮನವರಾಲು, ರೆಂಡು ರೆಳ್ಳ ಆರು, ಸೀತಾ ರಾಮ ಕಲ್ಯಾಣಂ, ಚಂಟಬ್ಬಾಯ್, ಪಡುಮಟಿ ಸಂಧ್ಯಾ ರಾಗಂ, ರಾಗ ಲೀಲ, ಸತ್ಯಾಗ್ರಹಂ, ಅಹಾ ನಾ ಪೆಳ್ಳಂಟ, ಚಿನ್ನಿ ಕೃಷ್ಣುಡು, ಚೂಪುಲು ಕಲಸಿನ ಶುಭವೇಳ, ಹೈ ಹೈ ನಾಯಕ, ಜಯಮ್ಮು ನಿಶ್ಚಯಂಮ್ಮುರ, ಭಾವ ಭಾವ ಪನ್ನೀರು, ಪ್ರೇಮ ಎಂತ ಮಧುರಂ ಹಾಗೂ ಕಡೆಯ ಚಿತ್ರ ವಿಚಿತ್ರಂ.

ಮೂರು ಬಾರಿ ರಾಜ್ಯ ನಂದಿ ಪ್ರಶಸ್ತಿ ಪಡೆದ ಜಂಧ್ಯಾಲ, ಹಲವು ಪ್ರಶಸ್ತಿಗಳನ್ನೂ ಪಡೆದಿದ್ದಾರೆ.


(ಚಿತ್ರ ಕೃಪೆ : ಅಂತರ್ಜಾಲ, ವಿಡಿಯೋ ಕೃಪೆ: ಯೂ ಟ್ಯೂಬ್, ಮಾಹಿತಿ ಕೃಪೆ : ವಿಕಿಪೀಡಿಯಾ)

13 ಕಾಮೆಂಟ್‌ಗಳು:

  1. "ಪಡುಮಟಿ ಸಂಧ್ಯಾ ರಾಗಂ..." ಸಿನಿಮಾದ ಮಾಹಿತಿ ಚೆನ್ನಾಗಿದೆ ಸರ್..

    ನಾನು ಈ ಸಿನಿಮಾವನ್ನು ತುಂಬಾ ದಿನಗಳ ಹಿಂದೆ ನೊಡಿದ್ದೆ.

    ತುಂಬಾ ಇಷ್ವವಾಯಿತು....

    ಪ್ರತ್ಯುತ್ತರಅಳಿಸಿ
  2. ಲೇಖಕರು ಈ ಕಾಮೆಂಟ್‌ ಅನ್ನು ತೆಗೆದು ಹಾಕಿದ್ದಾರೆ.

    ಪ್ರತ್ಯುತ್ತರಅಳಿಸಿ
  3. ಪಡಮಟಿ ಸಂಧ್ಯಾ ರಾಗಂ - ಅದ್ಬುತ ಚಲನ ಚಿತ್ರಗಳಲ್ಲೊಂದು.
    ಮುದ್ದುಗಾರೆ ಯಶೋದ,, ಪಿಬರೆ ರಾಮರಸಂ - ಈ ಎರಡೂ ಹಾಡುಗಳು ನನಗೆ ಬಹಳ ಇಷ್ಟ
    ಪ್ರತಿ ಬಾರಿ ನೋಡಿದಾಗಲೂ ಹೊಸತನ ಇಂಥಹ ಚಲನ ಚಿತ್ರಗಳಲ್ಲಿರುತ್ತದೆ.
    ಈ ಸಿನಿಮಾದ ಬಗ್ಗೆ ಸಾಕಷ್ಟು ಮಾಹಿತಿ ನೀಡಿದ್ದಕ್ಕಾಗಿ ಧನ್ಯವಾದಗಳು.

    ಪ್ರತ್ಯುತ್ತರಅಳಿಸಿ
  4. ಕಥೆ ಚೆನ್ನಾಗಿದೆ... ಮಾಹಿತಿಗಾಗಿ ಧನ್ಯವಾದಗಳು...

    ಪ್ರತ್ಯುತ್ತರಅಳಿಸಿ
  5. ಪದಮಟಿ ಸಂಧ್ಯರಾಗಂ ನೋಡ್ಬೇಕು ಅಂತ ಇದೆ ಸರ್.
    ಡಿವಿಡಿಯಲ್ಲಿ ನೋಡ್ತೀನಿ.
    ಈ ಹೆಸರು ನಂಗೆ ಇಷ್ಟ.
    ಜಂಧ್ಯಾಲರ ಆನಂದ ಭೈರವಿ ನಂಗೆ ತುಂಬಾ ಇಷ್ಟದ ಸಿನೆಮ.
    ಪರಿಚಯಿಸಿದ್ದಕ್ಕೆ ವಂದನೆಗಳು
    ಸ್ವರ್ಣಾ

    ಪ್ರತ್ಯುತ್ತರಅಳಿಸಿ
  6. ಮಳೆಗಾಲದ ಆರಂಭದಲ್ಲಿ ಮೋಡಗಳು ಹತ್ತಿ ಹಿಂಜಿದಂತೆ ಹಿಂಜಿ ಹಿಂಜಿ ಆಗಸದಲ್ಲಿ ತುಂಬಿರುತ್ತವೆ..ಅದನ್ನು ನೋಡುವುದೇ ಒಂದು ಚಂದ..ಹಾಗೆಯೇ..ನಿಮ್ಮ ಈ ಲೇಖನ..ಆ ಸಿನಿಮಾದ ಹೂರಣವನ್ನು ಬಿಡಿ ಬಿಡಿಸಿ..ಆ ಸಿನೆಮಾವನ್ನು ನೋಡಬೇಕೆನ್ನುವ
    ಬಯಕೆಯನ್ನು ತರಿಸುತ್ತಿದೆ..ಕಂಡಿತ ನೋಡುವೆ...ಒಳ್ಳೆಯ ಲೇಖನ...ಹಂಚಿಕೊಂಡದ್ದಕ್ಕೆ ಧನ್ಯವಾದಗಳು

    ಪ್ರತ್ಯುತ್ತರಅಳಿಸಿ
  7. ನಿಮ್ಮ ಲೇಖನ ಹೊಸ ಹೊಸ ಮಾಹಿತಿಗಳನ್ನು ನೀಡಿದೆ ಅಣ್ಣ.. ಶುಭವಾಗಲಿ..

    ಪ್ರತ್ಯುತ್ತರಅಳಿಸಿ
  8. ಬದರಿ ಸರ್...

    ನನಗೆ ತೆಲುಗಿನವರನ್ನು ಕಂಡ್ರೆ ಹೊಟ್ಟೆಕಿಚ್ಚಿದೆ..

    ಆಕಾಶಮಂತೆ..ಸ್ವಾತಿಮುತ್ಯಮ್, ಶಂಕರಾ ಭರಣಮ್...
    ನನ್ನ ಪಟ್ಟಿ ತುಂಬಾ ಉದ್ದವಿದೆ..

    ಎಷ್ಟು ಚಂದದ ಸಿನೇಮಾಗಳನ್ನು ಮಾಡಿದ್ದಾರೆ.. ವಾಹ್ !!

    ನಗೆ ಸಾಮ್ರಾಟ್ ಬ್ರಹ್ಮಾನಂದರ ಬಗೆಗೆ ಗೆಳೆಯ "ಮಲ್ಲಿಕಾರ್ಜುನ್" ಹೇಳಿದಾಗ
    ಅವರ ಸಿನೇಮಾಗಳನ್ನು ಹುಡುಕಿ ಹುಡುಕಿ ನೋಡಿದೆ..

    ಅವರೊಂದು ಅದ್ಭುತ !!

    ಈ ಸಿನೇಮಾ ನೋಡಿಲ್ಲ ಖಂಡಿತ ನೋಡುವೆ...

    ಈ ಸಿನೇಮಾ ನೋಡಿ ಅಂತ ಹೊಟ್ಟೆ ಉರಿಸಿದ್ದಕ್ಕೆ ಧನ್ಯವಾದಗಳು...

    ಪ್ರತ್ಯುತ್ತರಅಳಿಸಿ
  9. ಚಿತ್ರದಲ್ಲಿ ಹಾಸ್ಯವೂ ಇದೆ ಮತ್ತು ನಾಯಕ ಚಿತೆಗೆ ಬೆಂಕಿ ಇಡುವುದು ಭಾರತದಲ್ಲಿ ಕೊನೆಯಲ್ಲಿ ... ಪ್ರೀತಿಯ ಒಪ್ಪದೇ ಹೋಗುವ ತಂದೆ... ಇಲ್ಲಿ ಗಮನಿಸಿದರೆ .. ಇದು ದುರಂತದ ಕಥೆ ಅನ್ನಿಸುತ್ತದೆ .. ಹಾಗೂ ತುಂಬಾ ಸೆಂಟಿಮೆಂಟಲ್ ಮೂವಿ ಎನ್ನಿಸುವ ಭಾವನೆಗಳು ಮೂಡುತ್ತಿದೆ.. ಇನ್ನು ಅಷ್ಟು ಹಳೆಯ ಚಿತ್ರ ನೋಡಲು ನಮ್ಮೂರಲ್ಲಿ ಸಿಗುವುದಿಲ್ಲ ಮತ್ತು ನೀವು ಇಲ್ಲಿ ಸೂಚಿಸಿದ ಚಿತ್ರಗಳ ಪಟ್ಟಿಯಲ್ಲಿನ ಯಾವುದೇ ಚಿತ್ರಗಳನ್ನು ಸಹ ನೋಡಿಲ್ಲ.. ಮತ್ತು ಇದುವರೆಗೂ ಅವುಗಳ ಹೆಸರೂ ಸಹ ಕೇಳಿರಲಿಲ್ಲ.. ಅಷ್ಟು ಹಳೆಯ ಚಿತ್ರಗಳ ವಿಸಿಡಿ ಕೂಡ ನಮ್ಮೂರಲ್ಲಿ ಸಿಗುವುದಿಲ್ಲ.. ಈ ಚಿತ್ರದ ಯೂ ಟ್ಯೂಬ್ ಲಿಂಕ್ ಇದ್ದರೆ ಅದನ್ನು ಮೆಸೇಜ್ ಮಾಡಿ ಸರ್ ಒಮ್ಮೆ ಚಿತ್ರ ನೋಡುತ್ತೇವೆ.. ವೀಡಿಯೊ ಲಿಂಕ್ ಕೊಟ್ಟ ಹಾಡುಗಳು ಮತ್ತು ಸಂಗೀತ ಸೂಪರ್ ... :) :)

    ಪ್ರತ್ಯುತ್ತರಅಳಿಸಿ
  10. ನೀವು ಹೇಳಿದ ಸಂಪೂರ್ಣ ವಿಚಾರ ಕೇವಲ ಹತ್ತೇ ನಿಮಿಷದ ವಿಡಿಯೋದಲ್ಲಿ ಸಿಕ್ಕಿದೆ ಸರ್... ಸಂಭಾಷಣೆ ಸೂಪರ್ ... ಮದುವೆ , ಜಾತಿ , ಸಂಪ್ರದಾಯ , ಪ್ರೀತಿ ವಾತ್ಸಲ್ಯ , ಸ್ನೇಹ ಬಾಂಧವ್ಯ .. ಎಲ್ಲವೂ ಚಿತ್ರದ ಕೊನೆಯ ಹತ್ತು ನಿಮಿಷಗಳಲ್ಲೇ ಸ್ಪಷ್ಟವಾಗುವಂತೆ ಚಿತ್ರಿಸಿಲಾಗಿದೆ .. ಅತ್ಯದ್ಭುತ ಚಿತ್ರಕಥೆ ಮತ್ತು ನಿರ್ದೇಶನ .. :)

    ಪ್ರತ್ಯುತ್ತರಅಳಿಸಿ
  11. ಬದರಿ ಸರ್,

    ಈ ಸಿನಿಮಾದ ಬಗ್ಗೆ ಸಾಕಷ್ಟು ಮಾಹಿತಿ ನೀಡಿದ್ದಕ್ಕಾಗಿ ಧನ್ಯವಾದಗಳು.

    ಪ್ರತ್ಯುತ್ತರಅಳಿಸಿ