ಶುಕ್ರವಾರ, ಆಗಸ್ಟ್ 30, 2013

ಅವಳೆಂಬ ಪ್ರಶ್ನೆ...

ನನ್ನ ಮೊಬೈಲ್ ತುಂಬಾ ಅವಳದೇ ಚಿತ್ರಗಳು, ವಿಡಿಯೋ ತುಣುಕುಗಳು.

ದಿನಕೆ ಅದೆಷ್ಟು ಬಾರಿ ಅದನ್ನೇ ನೋಡುತ್ತಾ ಕಳೆಯುತ್ತೇನೋ.

ಮುಂದಿನ ಬಾರಿ ಸಿಕ್ಕಾಗ ಇನ್ನಷ್ಟು ವಿಡಿಯೋ ಮಾಡಿಟ್ಟುಕೊಳ್ಳುವವರೆಗೂ ಇವೇ ನನಗೂ ಸರಕು.

ನನ್ನ ಕವಿತೆಗಳನ್ನು ಅವಳು ಮುಂದೊಮ್ಮೆ ಓದಿಯಾಳು ಎಂದು ಅತಿ ಎಚ್ಚರಿಕೆಯಿಂದ ಪದಗಳನ್ನು ಹೆಣೆಯುತ್ತೇನೆ. ಚಿಕ್ಕ ಅಶ್ಲೀಲತೆಯೂ ಅವಳಿಗೆ ಅಸಹ್ಯ ಅನಿಸಬಾರದಲ್ಲ ಎನ್ನುವುದು ನನ್ನ ಆಶಯ.

ನಾನು ಅಪರಾತ್ರಿಯಲ್ಲಿ ಗಾಡಿ ಓಡಿಸಿಕೊಂಡು ಮನೆಗೆ ಬರುವಾಗಲೂ ಅವಳ ಜೊತೆಯೇ ಮಾತಿಗಿಳಿಯುತ್ತೇನೆ. ಅಲ್ಲಿ ನನ್ನದೇ ಏಕ ಪಾತ್ರಾಭಿನಯ.

ಅವಳು ನನಗೆ ಸಿಗುವುದೇ ಅಪರೂಪ, ಸಿಕ್ಕಾಗ ಅವಳ ನಡೆ ಇನ್ನೂ ನನಗೆ ಅಚ್ಚರಿ.

ಒಮ್ಮೆ ಅಪ್ಪಿ ಮುದ್ದಾಡಿಬಿಡುತ್ತಾಳೆ, ಅಂಟಿಕೊಂಡೆ ಇದ್ದು ಬಿಡುತ್ತಾಳೆ. ಮತ್ತೊಮ್ಮೆ ಸಿಕ್ಕಾಗ ಅಸಲು ಗುರುತು ಪರಿಚಯವೇ ಇಲ್ಲವೇನೋ ಎನ್ನುವಷ್ಟು ಅಪರಿಚಿತೆ.

ನನ್ನನ್ನು ಅಪ್ಪಿದಾಗ ನಾನು ಆನಂದವೆಂದರೆ ಏನು ಎಂಬುದನ್ನು ಆಸ್ವಾದಿಸುತ್ತೇನೆ. ಅದೇ ಅವಳು ಅಪರಿಚಿತಳಂತೆ ವರ್ತಿಸಿಬಿಟ್ಟಾಗ ನಾನು ಸುಮಾರು ದಿನ ಮನೋಜ್ಞಾತ ವಾಸಕ್ಕೆ ಕಳೆದು ಹೋಗುತ್ತೇನೆ.

ಆಗೆಲ್ಲ ರಾತ್ರಿಗಳು ನಿದ್ರಾ ಹೀನ. ಅದೆಷ್ಟು ಅಳುತ್ತೀನೋ ಒಬ್ಬನೇ, ನಿಶ್ಯಬ್ದವಾಗಿ.

ಈ ವಯಸ್ಸಿನಲ್ಲಿ ನಾನು ಅತ್ತರೆ ಚೆನ್ನಾಗಿರುವುದಿಲ್ಲ. ಪಕ್ಕದಲ್ಲೇ ಮಲಗಿರುವ ಹೆಂಡತಿಗೂ ಅದು ಕಿರಿಕಿರಿ.

ಅವಳು ನನ್ನ ಮನೆಯಲ್ಲಿರುವಷ್ಟು ದಿನ ನನಗೆ ಬೇರೆ ಲೋಕವೇ ಇರುವುದಿಲ್ಲ. ಅವಳು ಇಲ್ಲಿಂದ ಹೊರಟು ಹೋದ ಮೇಲೂ ಅವಳು ತಾಕಿದ ಅಷ್ಟೂ ವಸ್ತುಗಳು ನಾನು ಜತನದಿಂದ ಎತ್ತಿಡುತ್ತೇನೆ.

ನಟ್ಟಿರುಳ ಯಾವುದೋ ಜಾವದಲಿ ತಟ್ಟನೆ ಎಚ್ಚರವಾದಾಗ ಆ ವಸ್ತುಗಳೇ ನನಗೆ ಸಂಗಾತಿ.

ಅವಳು ಒಮ್ಮೊಮ್ಮೆ ಅದೇಕೆ ಅಪರಿಚಿತಳಂತೆ ವರ್ತಿಸಬೇಕು?

ಮತ್ತೊಮ್ಮೆ ಏಕೆ ಮುದ್ದಾಡಬೇಕು?

ನನ್ನ ಭಾವನೆಗಳ ಜೊತೆ ಹೀಗೆ ಆಟವಾಡುವುದು ಅವಳ ಆಟವೇ?

ಅಥವಾ ನನಗೇ ಅತೀ ಆಸೆಯೇ?

ಗೊತ್ತಿಲ್ಲ, ತೀರಾ ಅವಳಿಂದ ಹೆಚ್ಚಿನದೇನನ್ನೂ ನಿರೀಕ್ಷೆ ಮಾಡಲು ನನಗಾದರೂ ಎಲ್ಲಿದೆ ಅಧಿಕಾರ?

ಮೊದಲ ತಪ್ಪೇ ನನ್ನದು, ನನಗೆ ಒಂದು ಸರಳ ಸತ್ಯವೂ ಬೇಕೆಂತಲೇ ಮರೆತುಹೋಗಿರುತ್ತದೆ.

ತೆಲುಗು ಅಪರೂಪದ ಗಾಯಕ ಘಂಟಸಾಲ ಮಾಸ್ಟರ್ ಹಾಡಿದಂತೆ:

"ತೆಲಿಸಿ ವಲಚಿ ವಿಲಪಿಂಚುಟಲೊ
ತೀಯದನಂ ಎವರಿಕಿ ತೆಲುಸು?"

(ಗೊತ್ತಿದ್ದೂ ಬಯಸಿ ಅಲವತ್ತುಕೊಳ್ಳುವುದರಲ್ಲಿ
ಇರೋ ಸಿಹಿ ಯಾರಿಗೆ ಗೊತ್ತು?) 


ಅವಳು ನನ್ನ ನಾದಿನಿಯ ಪಾಪು ಎರಡೇ ವರ್ಷದ ಮಗುವೆಂದೂ.

ಅವಳ ನೆನಪಿನ ವ್ಯಾಪ್ತಿಯೇ ಕಡಿಮೆಯೆಂದು. ನಾನೂ ಅವಳಿಗೆ ಸಿಗುವುದೇ ಅಪರೂಪವೆಂದು.

ನನಗೂ ಮರೆತು ಹೋಗಿರುತ್ತೆ. ಯಾಕೆಂದರೆ ಅವಳೇ ತುಂಬಿರುತ್ತಾಳಲ್ಲ ನನ್ನ ಹೃದಯದ ಪೂರಾ ಪೂರಾ...

ಸಿಕ್ಕ ಕೂಡಲೇ ದೊಡ್ಡಪ್ಪ ಎಂದು ಮಾತನಾಡಲು.

ನನ್ನ ಜೊತೆ ಆಟವಾಡಲು ಇನ್ನೂ ಹಿಡಿಯುತ್ತೆ ತುಸು ಸಮಯ ಅಲ್ಲವೇ ಮತ್ತೆ!

25 ಕಾಮೆಂಟ್‌ಗಳು:

  1. ಮಕ್ಕಳೇ ಹೀಗೆ...

    ವರ್ಣಿಸಲಿಕ್ಕೆ ಶಬ್ಧಗಳೇ ಸಾಲದು..

    ಮಕ್ಕಳಿಗೆ ನಾವು ಏನೆಲ್ಲ ಮಾಡಿದ್ದೇವೆಂದು ಹೇಳುತ್ತೇವೆ.
    ಅವರಿಂದ ಅದನ್ನು ವಾಪಸ್ ಬಯಸುವದರಲ್ಲಿ ತಪ್ಪೇನಿದೆ?

    ಆದರೆ ಧರ್ಮ ಸೂಕ್ಷ್ಮ ಹೇಳುತ್ತದೆ..

    "ಮಕ್ಕಳು ತಮ್ಮ ಬಾಲ್ಯದಲ್ಲಿ ತಮ್ಮ ಮುದ್ದು ತನಗಳಿಂದ ಅದನ್ನು ಯಾವಾಗಲೋ ತಿರುಗಿಸಿರುತ್ತಾರೆ..."..

    ಹೃದಯಕ್ಕೆ ಹತ್ತಿರವಾದ ಬರಹ..

    ಧನ್ಯವಾದಗಳು ಬದರಿ ಭಾಯ್...

    ಪ್ರತ್ಯುತ್ತರಅಳಿಸಿ
  2. ಕೂತುಹಲದ ಮೂಲಕ ಮೂಲಕ ಕೊನೆಯಲ್ಲಿ Twist ಬಹಳ ಚೆನ್ನಾಗಿದೆ ಸರ್.... ಮನದಲ್ಲಿ ಮನೆ ಮಾಡಿರುವ ಪ್ರೀತಿ ಪಾತ್ರರ ಅಗಲಿಕೆಯ ವೇದನೆಯನ್ನು ಚೆನ್ನಾಗಿ ತಿಳಿಸಿದ್ದಿರಿ....

    ಪ್ರತ್ಯುತ್ತರಅಳಿಸಿ
  3. ಮಕ್ಕಳಿಂದ ಸಿಗುವ ಖುಶಿಯೇ ಪರಮಸುಖ. ಅದನ್ನು ನೀವು ಅನುಭವಿಸುತ್ತಿದ್ದೀರಿ. ಕಾಳಿದಾಸನೂ ಸಹ ತನ್ನ ‘ಶಾಕುಂತಲಮ್’ದಲ್ಲಿ ಇದನ್ನೇ ಹೇಳಿದ್ದಾನೆ:ಮಕ್ಕಳನ್ನು ಎತ್ತಿಕೊಂಡಾಗ ಮೈಕೈ ಮಲಿನವಾದರೆ ಅವರೇ ಧನ್ಯರು!
    ನಿಮ್ಮ ಸುಖ ಅನಂತವಾಗಲಿ.

    ಪ್ರತ್ಯುತ್ತರಅಳಿಸಿ
  4. ಬಹಳ ಚೆನ್ನಾಗಿ ಮೂಡಿ ಬಂದಿದೆ .... ಮಕ್ಕಳು ಕೊಡುವ ಖುಷಿಯ ಹಾಗೆ ...ಅವರ ನಗುವಿನಲ್ಲಿ ಒಂದು ಅಮಲಿರುತ್ತದೆ :)

    ಪ್ರತ್ಯುತ್ತರಅಳಿಸಿ
  5. :) ಅವಳಿಗೂ ಅರ್ಥವಾಗುವ ಸಮಯ ಬಹುಬೇಗ ಬರತ್ತೆ ಬಿಡಿ.
    ಈ ಕಥೆ ಅವಳಿಗೂ ಇಷ್ಟ ಆಗತ್ತೆ

    ಪ್ರತ್ಯುತ್ತರಅಳಿಸಿ
  6. ಪ್ರತಿಯೊಂದು ಜೀವಿಯು ಹುಟ್ಟುವುದು ಸೃಷ್ಟಿಕ್ರಿಯೆಯ ಸಂಕೇತ...
    ಇನ್ನ ಮುದ್ದು ಮಕ್ಕಳ ಪ್ರೀತಿಗೆ ಮನಸೋಲದ ಜೀವವಿಲ್ಲ (ಜೀವಿಯೂ ಅಲ್ಲ) ಎನ್ನಬೇಕು...
    ತುಂಬಾ ಅಪ್ಯಾಯಮಾನವಾದ ಕಥೆ...

    ಪ್ರತ್ಯುತ್ತರಅಳಿಸಿ
  7. ಮಕ್ಕಳ ಜೊತೆ ಆಡುವಾಗ ನಾವು ಮಕ್ಕಳಾಗಬೇಕು
    ಮತ್ತೇನನ್ನು ಯೋಚಿಸಬಾರದು
    ಅಂದರೆ ಮಕ್ಕಳು ನಮ್ಮ ಜೊತೆ ಬೆರೆಯುತ್ತವೆ

    ಪ್ರತ್ಯುತ್ತರಅಳಿಸಿ
  8. ಮಕ್ಕಳು ಹಾಗೆ ಇಷ್ಟವಾಗಲು ಕಾರಣಗಳು ಬೇಕಿಲ್ಲ
    ಕೆಲವು ಮನೆಗಳಲ್ಲಿ ಅವರಿರುವುದರಿಂದಲೇ ಅದೊಂದು ಮನೆ ಅನ್ನಿಸುತ್ತದೆ

    ಚೆನ್ನಾಗಿದೆ ಸರ್

    ಪ್ರತ್ಯುತ್ತರಅಳಿಸಿ
  9. ಕುತೂಹಲ ತಡೆಯದೆ ಅರ್ಧ ಓದಿ ಎಂಡ್ ನೋಡಿ ಮತ್ತೆ ಪೂರ್ತಿ ಓದಿದೆ....ತುಂಬಾ ಚನ್ನಾಗಿದೆ..ಮಕ್ಕಳ ನಿಷ್ಕಲ್ಮಶ ಮನಸ್ಸು ಎಂತವರನ್ನು ಸೆರೆ ಹಿಡಿದುಬಿಡುತ್ತದೆ ...

    ಪ್ರತ್ಯುತ್ತರಅಳಿಸಿ
  10. ಪುಟ್ಟ ಮಕ್ಕಳೇ ಹಾಗೆ. ಅವರ ಒಂದು ನಗು ಚೇತೊಹಾರಿ. ಮೊನ್ನೆ ನಮ್ಮ ಅಕ್ಕನ ಯಜಮಾನರು ತೀರಿಕೊಂಡರೆಂದು ಹೈದರಾಬಾದಿಗೆ ಹೋಗಿದ್ದೆ. ಸಾವಿನ ಮನೆಯಲ್ಲಿ ಒಂದು ಪುಟ್ಟ ೩ ತಿಂಗಳ ಮಗು. ಅದರ ಒಡನಾಟದಲ್ಲಿ ಸೂತಕದ ಭಾವ ಅಭಾವವಾಗಿ ಎಲ್ಲರ ಮನಸ್ಸೂ ತಿಳಿಯಾಗೇ ಇತ್ತು. ಆ ಮಗುವಿನ ನಗು, ಆಟ, ಕೇಕೆಹಾಕಿ ನಗುವ ಪರಿ ಎಲ್ಲವೂ ದುಃಖವನ್ನು ಮರೆಸಿಬಿಟ್ಟಿತ್ತು. ಅದೇ ಮಗುವಿನ ಮುಗ್ದತೆಯ ಪ್ರಭಾವ.

    ಪ್ರತ್ಯುತ್ತರಅಳಿಸಿ
  11. ನೀವು ನಿಜಕ್ಕೂ ದೊಡ್ಡ(ಮನಸಿನ)ಅಪ್ಪ ಬದರಿ ಸರ್ :)
    ಮಕ್ಕಳು ದೇವರಂತೆ, ಸದಾ ಸಿಹಿಯನ್ನೇ ನೀಡರು. ಆಗಾಗ ಒಂದು ಚಿವುಟಿನ ಕಹಿಯನ್ನೂ ಕೊಡುತ್ತಾರೆ, ಸಿಹಿ ತೀರ್ಥದೊಳಗಿನ ತುಳಸಿಯಂತೆ :)

    ಪ್ರತ್ಯುತ್ತರಅಳಿಸಿ
  12. MakkaLallina mugdhatana nammannu aavarasibiuttade.
    Devara sanketa endembante.....
    nimma attachment I can understand and relate too.
    nice article BP avre :)

    ಪ್ರತ್ಯುತ್ತರಅಳಿಸಿ
  13. ಕತೆಯನ್ನು ಓದಿದಾಗ ಮನಸ್ಸಿಗೆ ತಂಪೆರೆದಂತಾಯ್ತು....!!ಸ್ವಾರಸ್ಯವಾದ ಬರಹ...!!!

    ಪ್ರತ್ಯುತ್ತರಅಳಿಸಿ
  14. ತುಂಬಾ ಚೆನ್ನಾಗಿ ನಿಮ್ಮ ಪ್ರೀತಿಯನ್ನು ವ್ಯಕ್ತಪಡಿಸಿದ್ದೀರಿ... ಪಾಪು ದೊಡ್ಡಪ್ಪನನ್ನು ಅಷ್ಟು ಪ್ರೀತಿಯಿಂದ ಅಚುಮೆಚ್ಚಾಗಿದ್ದಾಳೆ... ನಿಮ್ಮ ಕೂಸು ಸದಾ ನಿಮ್ಮ ಜೊತೆ ಇರುವಂತಾಗಲಿ

    ಪ್ರತ್ಯುತ್ತರಅಳಿಸಿ
  15. ಮನೋಜ್ಞ ಲೇಖನದ ಮಿಡಿತ ಓದುತ್ತಿರುವಂತೆ ಲಯಬದ್ಧವಾಗುವುದು ನಿಮ್ಮ ಕಡೆಯ ಘಂಟಸಾಲ ಹಾಡಿನ ಸಾಲುಗಳ ಗಹನತೆಯ ಸಾರವನ್ನು ಆಸ್ವಾದಿಸುವಾಗ... ಚನ್ನಾಗಿದೆ ಬದರಿ...
    ಮನಸು ಗತಿ ಇಷ್ಟೇ; ಮನುಷ್ಯನ ಬದುಕಿಷ್ಟೇ... ಈ ಹಾಡಿನ ಪಲ್ಲವಿ,,, ಕೊನೆಗೆ ನಾವೂ ಹಾಡಬೇಕಾಗಬಹುದು...

    ಪ್ರತ್ಯುತ್ತರಅಳಿಸಿ
  16. ಮನೋಜ್ಞ ಲೇಖನದ ಮಿಡಿತ ಓದುತ್ತಿರುವಂತೆ ಲಯಬದ್ಧವಾಗುವುದು ನಿಮ್ಮ ಕಡೆಯ ಘಂಟಸಾಲ ಹಾಡಿನ ಸಾಲುಗಳ ಗಹನತೆಯ ಸಾರವನ್ನು ಆಸ್ವಾದಿಸುವಾಗ... ಚನ್ನಾಗಿದೆ ಬದರಿ...
    ಮನಸು ಗತಿ ಇಷ್ಟೇ; ಮನುಷ್ಯನ ಬದುಕಿಷ್ಟೇ... ಈ ಹಾಡಿನ ಪಲ್ಲವಿ,,, ಕೊನೆಗೆ ನಾವೂ ಹಾಡಬೇಕಾಗಬಹುದು...

    ಪ್ರತ್ಯುತ್ತರಅಳಿಸಿ
  17. :) ಮಕ್ಕಳು ದೇವರಂತೆ ಅವರಿಗಿಷ್ಟವಾದಾಗ ಮಾತ್ರ ನಮಗೆ ಪ್ರೀತಿ ಕೊಡುತ್ತವೆ..ಚೆನ್ನಾಗಿದೆ ಸಾರ್

    ಪ್ರತ್ಯುತ್ತರಅಳಿಸಿ
  18. ಮನೆಯಲ್ಲಿ ಕಂದಮ್ಮನ ಓಡಾಟ ಇದ್ದರೆ ಮನೆಗೆ ಬೀಸಣಿಕೆ ಬೇಡವೆನ್ನುತ್ತದೆ ಜಾನಪದ ಗೀತೆ. ಆ ಪಾಪುವಿನ ಸುಂದರ ಆಟೋಟಗಳ ಬಗ್ಗೆ ತೊದಲು ನುಡಿಗಳ ನಡುವಿನ ಆ ಪದಗಳ ಚಾತುರ್ಯ ಭಾವುಕರನ್ನಾಗಿ ಮಾಡುವುದಷ್ಟೇ ಅಲ್ಲದೆ ಒಮ್ಮೆ ಸುತ್ತ ಮುತ್ತಾ ನೋಡುವ ಹಾಗೆ ಆಗುತ್ತದೆ. ಸುಂದರ ನೆನಪಿನ ದೋಣಿ ಬದರಿ ಸರ್

    ಪ್ರತ್ಯುತ್ತರಅಳಿಸಿ
  19. ನಿಮ್ಮ ಬ್ಲಾಗ್ ನಿಮ್ಮ ಕವನಗಳು ಎಲ್ಲರನ್ನು ಮರೆಯದೆ ನೆನೆಸಿಗೊಳ್ಳುವ ನಿಮ್ಮ ಗುಣ ಎಲ್ಲವೂ ಎಲ್ಲರಿಗೂ ಇಷ್ಟವಾಗುತ್ತದೆ ಖಂಡಿತ.
    ಅಭಿನಂದನೆಗಳು
    ಪಾರ್ಥಸಾರಥಿ

    ಪ್ರತ್ಯುತ್ತರಅಳಿಸಿ