ಭಾನುವಾರ, ಜುಲೈ 18, 2021

ಬಿನ್ನಹ ಕುಸುಮ...

 


ಪೂರ್ಣ ವಿರಾಮಕೂ ಮುನ್ನ
ಲೇಖನ ಚಿನ್ಹೆಗಳನಿಟ್ಟೆ ಪ್ರಭುವೇ!
ಇಹದ ಗುಡಾರ ಮುಷ್ಟಿ ಗುಂಡಿಗೆ,
ಒಟ್ಟುವೆ ಅಚ್ಚರಿಯ ಪ್ರಶ್ನೆಗಳೆನಿತು
ಕಂಸದೊಳಗಣ ಕಣ ಬದುಕಿಗೆ

ಗೆರೆಯ ಆಚೆಗೇ ನಿಲ್ಲಿಸಿ ನಿಲ್ಲಿಸಿ
ಗೆಲುವ ರುಚಿಯನೂ ತೋರದಿರೆ,
ಸಹಸ್ರ ಈಜುಗಾರರನೆಲ್ಲ ಹಿಂದಿಕ್ಕಿ
ಯಾರಪ್ಪಾ ಗೆಲ್ಲಿಸಿದ್ದು ಈ ಶುಕ್ರ
ಅಜ್ಞಾತನನು ಅಂದು ಮುನ್ನುಗ್ಗಿಸಿ

ತಿಳುವಳಿಕೆ ಅರೆಬರೆ ಬತ್ತಳಿಕೆ
ಅಹಮು ಬುರುಗಿನಗಾಧ ಗೋಳ
ಸೀಳ ಬಲ್ಲದು ಮೊಂಡು ಕೊಂಬು,
ಕೊಟ್ಟು ನೋಡು ಸಾಣೆಯ ಪ್ರಜ್ಞೆ
ಚೂಪಾಗಲಿ ಮಗಂದು ಮಸ್ತಿಷ್ಕ

ಅರ್ಧ ಅಲ್ಪ ಅಪ್ರಬುದ್ಧ ವ್ಯುತ್ಪತ್ತಿ
ಪದಪದಗಳ ನಡುವೆ ಮಡಗಿದೆ
ಉದ್ಧಾರದ ಕೀಲಿಗಳೇ ಮಣೆಯಲಿ,
ಕೂಡಿಸು ಸಂಧಿ ಸಮಾಸದಿ ಏಕವಾಗಲಿ
ಲೋಪಾಗಮಾದೇಶ ಚಲಾಯಿಸಿ...

"ಪ್ರತಿ ಸಾಲಿಗೂ ಬೇಕೆ ಪ್ರಾಸದಂತ್ಯ
ಪ್ರಸವಗಳೆಲ್ಲ ಸುಲಲಿತವೇ ಓದುಗರೆ?
ಸುಲಭ ಓದಿಗೆ ಜೀರ್ಣವಾಗು ಕವಿತೆ
ಸುಲಿದ ಬಾಳೆಯ ಹಣ್ಣ ತೆರದಿಯೆ ಖ್ಯಾತಿ,
ಹಲಸೇ ಇಷ್ಟ ಕವಿಗೆ, ಬಿಡಿಸಿರಿ ತಾವೇ"

(ಚಿತ್ರ ಕೃಪೆ: ಗೂಗಲ್)

7 ಕಾಮೆಂಟ್‌ಗಳು:

 1. ಅದ್ಭುತ ಸರ್..ಎಂಥಾ ಪ್ರತಿಮೆಗಳು.. ಹಲಸೆ ಇಷ್ಟವಾಗುವ ಕವಿಯ ತುಡಿತ.. Unbelievable sir..ಶುದ್ಧ ಪ್ರತಿಭೆಯ ನಿಜ ಕವಿ ತಾವು..ಅಬ್ಬಾ ಶುಕ್ರ ಅಜ್ಞಾತನನು ಅದ್ಭುತ..ಅಸದಳ..Outstanding sir..ತುಂಬಾ ಚೆನ್ನಾಗಿದೆ..ಖಾಲಿ ಬತ್ತಳಿಕೆ, ಗುಡಾರ..ಅದ್ಭುತ ಸರ್

  - ಸತ್ಯ ಬೋಧ ಜೋಶಿ

  ಪ್ರತ್ಯುತ್ತರಅಳಿಸಿ
 2. ಯಾವ ಸಾಲಿಗೆ ಪ್ರತಿಕ್ರಿಯಿಸಲಿ? ಯಾವ ನೋಟಕೆ ನೆಟ್ಟನೆಡಲಿ? ಬದರಿಯ ಸದರಿಯಂಬಿಗೆ ಗುರಿಗಳೆನಿತೋ ಅರಿಯಲೆಂತು? ಬದರಿ ಮಾಮ ..!!
  ತಿಳುವಳಿಕೆ ಅರೆಬರೆ ಬತ್ತಳಿಕೆ
  ಅಹಮು ಬುರುಗಿನಗಾಧ ಗೋಳ
  ಸೀಳ ಬಲ್ಲದು ಮೊಂಡು ಕೊಂಬು,
  ಕೊಟ್ಟು ನೋಡು ಸಾಣೆಯ ಪ್ರಜ್ಞೆ
  ಚೂಪಾಗಲಿ ಮಗಂದು ಮಸ್ತಿಷ್ಕ
  ಅರೆಬರೆ ಬತ್ತಳಿಕೆಯಲಿವೆಯಲ್ಲಾ ಬಿರುಸು ಬಾರಣಗಳು? ಸಾಣೆ ಹಿಡಿಯಲಾಗದು ಬಿರುಸುಗಳ ಬಳಸು ಮುದದಿ ಪ್ರಾಸಕಿಲ್ಲ ಪ್ರಯಾಸ ಬದರಿಮಾಮ.
  ಬಹುಪರಾಕ್...ಕವನ ಜೋಲ್ ಗಾರ್ನರ್ ನ ಬೌನ್ಸರ್ ನಂತೆ ನನ್ನ ತಲೆಯ ಮೇಲಿಂದ ಸಾಗಿತು ಎನ್ನದೇ ವಿಧಿಯಿಲ್ಲ.... :) :)

  ಪ್ರತ್ಯುತ್ತರಅಳಿಸಿ
 3. ಹಲಸೇ ಇರಲಿ, ಸುಲಿದ ಬಾಳೆಯ ಹಣ್ಣೇ ಆಗಿರಲಿ,
  ತಪ್ಪದಂತಹ ಗುರಿ ನಿಮ್ಮ ಕೂರಂಬಿಗೆ!

  ಪ್ರತ್ಯುತ್ತರಅಳಿಸಿ
 4. ತಮ್ಮ ಕವಿತೆಗಳು ಸದಾ ಹಲಸೆ ,
  ಬಿಡಿಸಿದಾಗ ಮಾತ್ರ ರುಚಿಯ ಸೊಗಸು

  ಪ್ರತ್ಯುತ್ತರಅಳಿಸಿ
 5. ಹಲಸು ದಕ್ಕದು ಸುಲಭಕೆ
  ಜಿಗುಟು ಹತ್ತಿದ ಬೆರಳು
  ಮೆತ್ತಿಕೊಳ್ಳುವ ಉರುಳು
  ಮುಳ್ಳುಗಂದದಿ ಹೊರಗು
  ಒಳಗಿದೆ ಜೇನೊಂದಿಗಿನ ಸವಿ...
  ಬಹಳ ಆಂತರ್ಯದ ಮಂಥನಗಳ ಸಾರ ಪದಗಳ ಭಾರ ಓದುತ್ತಾ ಮುಂದಕ್ಕೆ ಹೋಗದಂತೆ ಮತ್ತೆ ಮತ್ತೆ ಒಂದೆರಡು ಹಿಂದ ಪದಗಳ ಜೋಡಿಸಿ ಇನ್ನೊಂದು ಅರ್ಥದತ್ತ ಕೊಂಡೊಯ್ಯುವ ಬರೆವಣಿಗೆಯ ಪರಿ...ವಾಹ್...‌ ಬದರಿಗೆ ಬದರಿಯೇ ಸಾಟಿ...:) :)

  ಪ್ರತ್ಯುತ್ತರಅಳಿಸಿ