Monday, January 2, 2017

ಶೀರ್ಷಿಕೆಯೂ ದಂಡ!...

ಜನ ಸಾಗರದ ನಟ್ಟ ನಡುವೆ
ಅಬ್ಬೇಪಾರಿ ಅಮಾಯಕ ರೂಪು
ಥೇಟ್ ಕಳ್ಳ ಬೆಕ್ಕಿನ ಪ್ರತಿರೂಪು,
ಹಲವು ಹಸಿವುಗಳ ಹಪಾಹಪಿ
ಮೇಲೆ ಛದ್ಮವೇಷದ ಸೋಗು

ಬೆಳಗೆದ್ದರೆ ಮನೆಯವರ ವರಾತ
ಹಳೆಯ ಬೇಡಿಕೆಗಳಿಗೆ ತಿದ್ದುಪಡಿ
ಟಪಾಸು ನಾಲಿಗೆಯುದ್ದ ಸರಮಾಲೆ,
ಬದುಕ ತಾಟಿಗೆ ಮತ್ತೆ ಬಿದ್ದ ಮೃಷ್ಟಾನ್ನ
ನಿನ್ನೆಯ ಉತ್ತರವು ಇಂದಿಗೆ ಹಳಸಲು!

ತಾವೋ ಸ್ವಯಂ ಘೋಷಿತ
ಗುಲಗಂಜಿ ವಿಶ್ವವಿದ್ಯಾಲಯಗಳು
ಬೇಡದ್ದಕ್ಕೇ ಪ್ರಖಾಂಡ ವಿಶ್ಲೇಷಕರು,
ಪೇಟಾ ತೊಡಿಸುವ ಕಲೆ ಕಲೆತು
ಪೇಟಂಟು ಅರ್ಜಿ ತುಂಬುವವರು

ಬಳಸಿ ಬಳಸಯೇ ಸವೆಯಿತು ಬಳಪ
ಅಳಸಿ ಹಾಕುತ್ತದು ಕಾಲದ ತೊಡಪ
ವಿಕಸನ ಕ್ರಿಯೆಗೇಕೆ ಪೂರ್ಣ ವಿರಾಮ?
ಮರ್ಕಟ ಮನವು ಅರಿತಿರಬೇಕದು
ಮಂಗನಿಂದಲ್ಲ ಮಾನವನ ಉಗಮ

ಆಯ ಹುಡುಕಿ ಮೂತ್ರಿಸಿ ರಸ ಸ್ರವಿಸಿ
ತನ್ನ ಅಸ್ಥಿತ್ವಕ್ಕಾಗಿ ಪ್ರತಿ ಕ್ಷಣಕವೂ
ಕಸರತ್ತು ಮಾಡುತ್ತಲ್ಲ ಜೀವ ಜಗತ್ತು?
ಸಿಕ್ಕ ಬೂಸ ಹಿಂಡಿಗಳನಲ್ಲ ಮೆಂದು 
ಮನಕೆ ಗುಬುರು ಮೇನಕೆಯ ಮತ್ತು

ಹಿತ್ತಲ ಬಚ್ಚಲಲವಿತ ಮಾರ್ಜಾಲ,
ಹೊರ ಮೈ ಲಕಲಕಿಸಿ ಒಳ ಕೊಳಿಸಿ
ಸುರಿಸಿ ಮಾರ್ಜಕ ಫಿನಯಿಲ್ಲು ದೆಂಡಿ
ತೊಳೆದರೂ ರಪರಪ ಮತ್ತದೇ ನಾತ
ಮರುದಿನಕೆ ಮನದ ಪಾಯಖಾನೆ!


(ಚಿತ್ರ ಕೃಪೆ: ಅಂತರ್ಜಾಲ)

3 comments:

  1. ಅಬ್ಬಾ ತಾತ್ವಿಕತೆಯನ್ನು ಚಿಕ್ಕ ಪದಗಳಲ್ಲಿ ಹೇಗೆಲ್ಲ ಬಂದಿಸಿದಿರಿ,,,,,,,, ವೆರಿ ನೈಸ್

    ReplyDelete
  2. ಆಯ ಹುಡುಕಿ ಮೂತ್ರಿಸಿ ರಸ ಸ್ರವಿಸಿ
    ತನ್ನ ಅಸ್ಥಿತ್ವಕ್ಕಾಗಿ ಪ್ರತಿ ಕ್ಷಣಕವೂ
    ಕಸರತ್ತು ಮಾಡುತ್ತಲ್ಲ ಜೀವ ಜಗತ್ತು?

    ಜೀವ ಜಗತ್ತಿನ ಕರ್ಮವೇ ಅದು..... ಹುಟ್ಟು ಹೊಟ್ಟೆಯ ಕೂಸು, ಕರ್ಮ ಅದರ ಬೋಸು.

    ReplyDelete
  3. ಮತ್ತೊಂದು ಅದ್ಭುತ ಕವನ!

    ReplyDelete