Monday, May 2, 2016

ಬರದ ಬರೆ...


ಆಳಕೆ ಮತ್ತೂ ಆಳಕೆ
ಹೆಂಡತಿ ತಾಳಿ ಮಾರಿ
ಕೊರೆಸಿದ್ದೇ ಬಂತು ಬೋರು
ಬಂಡೆ ಸಿಕ್ಕರು ಸುಳಿವಿಲ್ಲ
ಹನಿ ನೀರೂ!

ಗುಂಟೆಗಳರ್ಧ ಖರಾಬು
ಕಡೆಯ ಮಗನಂತವ
ಕಳ್ಳೇಕಾಯಿಗಿಲ್ಲ ನಸೀಬು,
ಬಂಜರು ಬಿದ್ದ ನೆಲವೆಂದು
ಕಂಡಿತೋ ಮುಂಗಾರು?

ಕುರುಚಲು ಚುಂಬನಕೆಲ್ಲ
ಕರುಣಿಸಿತೇ ಕಾರ್ಮೋಡ,
ಮಳೆಗಾಲಕೇ ಒಣ ಕೆರೆ
ಕೃಷಿ ಇಲಾಖೆಯ ಭ್ರಾಂತು 
ಹನಿ ನೀರಾವರಿ ಕರಪತ್ರ

ಗುಳೆ ಎತ್ತಲು ಮುಲಾಜು
ಬಿಡದಲ್ಲ ನೆಲದ ನಂಟು,
ಬಡ ರೈತಾಪಿ ಪಾಲಿಗಿಂದು
ತಲೆ ಮೇಲೆ ತೀರದ ಸಾಲ
ಅಸಲಪ್ಪನಂತ ಬಡ್ಡಿ ಶೂಲ

ನೂರುಗಳೇ ದಾಟಿತೆಂದೋ
ಆತ್ಮಹತ್ಯೆಗಳ ಸರಣಿ ಲೆಕ್ಕ,
ಆಳುವರಿಗೆ ಕಲ್ಲು ಗುಂಡಿಗೆ
ವಿಪಕ್ಷದವರ ಅಹರ್ನಿಶಿ
ಪ್ರಚಾರಕೆ ಗ್ರಾಮ ವಾಸ್ತವ್ಯ

(ಚಿತ್ರ ಕೃಪೆ: ಅಂತರ್ಜಾಲ)

5 comments:

  1. ಬರದ ಬರೆ ಬರೀ ಒಂದು ವರ್ಗದ ಜನರಿಗಲ್ಲ., ಎಲ್ಲಾ ಜನರಿಗೂ ತಟ್ಟಲಿದೆ ಸರ್..,ನೀರಿನ ಸಮಸ್ಯೆ ಬಗೆ ಹರಿಸುವುದು ಬಹಳ ಕಷ್ಟದ ಕೆಲಸವೇ ಸರಿ.

    ReplyDelete
  2. ನೀರಿನ ಜತೆಗೆ ಕಣ್ಣೀರೂ ಬತ್ತಿ ಹೋಗಿದೆ, ಬದರಿನಾಥರೆ. ನಿಮ್ಮ ಕವನ ಆ ವಾಸ್ತವವನ್ನು ಸರಿಯಾಗಿ ಬಿಂಬಿಸಿದೆ.

    ReplyDelete
  3. <<>>> ಕಟು ವಾಸ್ತವ!
    ಅದು ಗುಳೆ ‘ಏಳಲು’ ಅಂತಾಗಬೇಕಿತ್ತೇನೋ, ಒಮ್ಮೆ ಸುನಾಥ ಕಾಕಾರನ್ನು ಕೇಳಿ ನೋಡಿ.

    ReplyDelete
    Replies
    1. ಧನ್ಯವಾದಗಳು ಜೆ.ಪಿ. ಮೇಡಂ.
      ನನ್ನ ಬ್ಲಾಗಿಗೆ ಬಂದು ಕವನ ಓದಿ ಅಭಿಪ್ರಾಯ ದಾಖಲಿಸಿದ್ದಕ್ಕೆ ಅನಂತ ಧನ್ಯವಾದಗಳು.

      ನಮ್ಮೂರ ಕಡೆ ಗುಳೆ ಎತ್ತಲು ಅಂತಲೂ ಬಳಸುತ್ತಾರೆ. ಕೋಲಾರ ತೆಲುಗು ಮಿಶ್ರಿತ ಕನ್ನಡ ಪ್ರಯೋಗವಿದು!

      Delete
  4. ರೈತಾಪಿ ವರ್ಗದ ಬದುಕು ತೀರದ ಬವಣೆ ..ಇದೆಕೆಲ್ಲಾ ಹೊರುತ್ತಾನೆಯೇ ಮಳೆ ರಾಯ ಹೊಣೆ...ನೀರಿನ ಹಾಹಾಕಾರದಿ ಬೇಸತ್ತ ಜನ ..
    ಚೆನ್ನಗಿದೆ ಸರ್ ಕವನ

    ReplyDelete