Sunday, April 24, 2016

ಅವಸ್ಥೆ...


ಹುಳುವಿದ್ದಾಗೊಂದು ಅವಸ್ಥೆ
ಗೂಡು ಹೊಕ್ಕ ಕ್ಷಣ ಬದಲೀ ವ್ಯವಸ್ಥೆ,
ಸ್ಥಾಯಿ ಗತಿಯಿರದ ಪಯಣ
ನದಿ ಪಾತ್ರ ಗಮ್ಯದೆಡೆಗೆ ಗಮನ

ಸುಕೃತ ಲಿಖಿತ ಹಣೆ ಬರಹ,
ಚತುರ್ಮುಖನ ಉದರಿ ಬಳಪ
ಬೇಡಂದವರಾರು ಸನ್ನಡತೆಯ
ತನ್ನಾವಸ್ಥೆಯನೆ ತಿದ್ದುವ ಹಕ್ಕು

ಇರುವು ಆರ್ಜಿತ ಪುಣ್ಯ ಫಲ
ನಂಬಿಕೆಯದು ಒಳ ತಿರುಳು,
ಸಕಾರ ನಕಾರ ತಕ್ಕಡಿ ತೂಗಿಗೆ
ತೂಗುವುದು ಬದುಕ ವಜನು

ಉಡುಗೆ ಕ್ರಾಪು ಶೈಲಿ ಇಸ್ಮೈಲು
ಬರಿಯ ಸಜ್ಜಿಕೆಯ ತೋರ್ಪಡಿಕೆ,
ಕಡುಗಪ್ಪು ಮುಖಾರವಿಂದಕೆ
ಡಬ್ಬಿ ತಳ ಕೆದಕಿ ಮೆತ್ತು ಪೌಡರು

ಮೂಲ ವಿಗ್ರಹಕೆ ಸೆಡ್ಡು ಹೊಡೆದೀತೆ
ತಳತಳ ಹೊಳೆವ ಉತ್ಸವದ ಮೂರ್ತಿ?
ಕೆತ್ತುವ ಕಾಲಕೆ ಅದುವೂ ಕಗ್ಗಲ್ಲೇ
ಗರ್ಭಗುಡಿ ಮಂದ ಬೆಳಕಲಿದೆ ನಿಜವು!

8 comments:

 1. ಬದಲಾವಣೆಯೇ ಜಗದ ನಿಯಮ ಬದರಿ ಸರ್..:) :)

  ReplyDelete
 2. ಬದಲಾವಣೆಯೇ ಜಗದ ನಿಯಮ ಬದರಿ ಸರ್..:) :)

  ReplyDelete

 3. "ಬೆಟ್ಟದಿಂದ ನೀರು ಜಾರಿ ಹರಿಯುತಿದೆ ಸಾಗರ ಸೇರೋ ಆತುರ ತೋರಿ ಗಾಳಿಗಿಂತ ವೇಗವಾಗಿ ಹರಿಯುತಲಿದೆ" ಹೊಸಬೆಳಕು ಚಿತ್ರದಲ್ಲಿ ಅಣ್ಣಾವ್ರು ಹಾಡಿದ ಹಾಗೆ, ಜೀವನದ ಒಂದು ಸಂಪೂರ್ಣ ಮಗ್ಗಳನ್ನು ಕೆಲವು ಪದಗಳಲ್ಲಿ ಕಟ್ಟಿ ಹಾಕಿರುವ ರೀತಿ ಸೂಪರ್. ಬೊಮ್ಮನ ಕೈಯಲ್ಲಿ ಬರೆಸಿಕೊಂಡ ಹಣೆಬರಹ ಬದಲಾಗೋದಿಲ್ಲ, ಹಾಗೆಯೇ ನಮ್ಮ ಕವಿ ಸಾರ್ವಭೌಮ ಬದರಿ ಸರ್ ಕೈಯಲ್ಲಿ ಅವಿತುಕೊಂಡು ಹೊರಗೆ ಬಂದ ಪದ ಪುಂಜಗಳಿಂದ ಮೂಡಿ ಬಂದ ಕವಿತಾ ಸತ್ವ ಸೂಪರ್ ಸೂಪರ್..

  ನಾಲ್ಕು ನಾಲ್ಕು ಸಾಲುಗಳಲ್ಲಿ ಅರಳುವ ನಿಮ್ಮ ಕವಿತೆಗಳು ಎಷ್ಟು ಅರ್ಥಗರ್ಭಿತವಾಗಿವೆ, ಓದುತ್ತಾ ಓದುತ್ತಾ ಹೋದಂತೆ ಅರಳುವ ಹೂವಿನಂತೆ ಅರ್ಥೈಸಿಕೊಳ್ಳುತ್ತಾ ಹೋಗುತ್ತದೆ

  ಬದರಿ ಸರ್ ನಿಮ್ಮ ಫಾರಂಗೆ ಬರ್ತಾ ಇರೋದು ಕುಶಿ.. ಮುಂದುವರೆಸಿ

  ReplyDelete
  Replies
  1. ಸುಮ್ಮನೇ ಪುಟಿಯದು ಕಾರಂಜಿಯು, ತಿವಿದೆಬ್ಬಿಸಿ ಸಂಭ್ರಮಿಸುವ ಶ್ರೀಮಾನ್ ತಮಗೆ ಶರಣು.

   Delete
 4. ಅರ್ಥಗರ್ಭಿತ ಕವನ ಬದರಿ ಸರ್,
  `ಮೂಲ ವಿಗ್ರಹಕೆ ಸೆಡ್ಡು ಹೊಡೆದೀತೆ
  ತಳತಳ ಹೊಳೆವ ಉತ್ಸವದ ಮೂರ್ತಿ?'
  ಸಾಲುಗಳು ಇಷ್ಟವಾದವು.

  ReplyDelete
 5. ಬದರಿನಾಥರೆ,
  ಅವಸ್ಥಾಂತರಗಳನ್ನು ಬಿಡಿಸಿಡುವ ನಿಮ್ಮ ಕವನಕ್ಕೆ ಶರಣು. ಬ್ರಹ್ಮನ ಬಳಪ ಉದುರೀತು; ನಿಮ್ಮ ಬಳಪಕ್ಕೆ ತೀರದ ಬಲ ಇದೆ ಎಂದು ಹೇಳಬಲ್ಲೆ. ಸತತ ಸ್ವವಿಮರ್ಶೆ ನಿಮ್ಮ ಅನೇಕ ಕಾವ್ಯಗಳ ತಿರುಳಾಗಿದೆ. ಇದು ಅಡಿಗರ ಅನೇಕ ಕಾವ್ಯಗಳಿಗೂ ಅನ್ವಯಿಸುವ ಮಾತು. ಕವನಪಯಣ ಮುಂದುವರೆಯಲಿ, ಓದುಗರಿಗೆ ಸುಖ ನೀಡಲಿ ಎಂದು ಹಾರೈಸುವೆ.

  ReplyDelete
 6. " ಬೇಡಂದವರಾರು ಸನ್ನಡತೆಯ
  ತನ್ನಾವಸ್ಥೆಯನೆ ತಿದ್ದುವ ಹಕ್ಕು"

  ಈ ಸಾಲುಗಳು ಬಹಳ ಹಿಡಿಸಿದವು. ಪರಮಾತ್ಮನ ಸೃಷ್ಟಿಯಲ್ಲಿ ಪ್ರತೀ ಪ್ರಾಣಿಗೂ ಈ ಅವಕಾಶವುಂಟು ಎನ್ನುವುದನ್ನು ಬಹಳ ಸೂಕ್ತವಾಗಿ ಬಿಂಬಿಸಿದ್ದೀರಿ. ಒಟ್ಟಾರೆ ಕವನ ಸುಂದರ - ಎಂದಿನಂತೆ - ನಮಸ್ಕಾರ

  ReplyDelete
 7. ಬಸವಣ್ಣವರ ವಚನಗಳು ನೆನಪಿಗೆ ಬಂದವು ಸರ್, ತುಂಬಾ ಚೆನ್ನಾಗಿದೆ ಸರ್, ಬಹು ದಿನಗಳನಂತ್ರ ಮತ್ತೆ ನಿಮ್ಮ ಕವನ ಓದುವ ಭಾಗ್ಯ ನಮ್ಮದಾಯಿತು.

  ReplyDelete