Thursday, May 7, 2015

ಸ್ವಂತಿಕೆ...

ಸ್ವಂತಿಕೆ ಇರದ ನಿರ್ಜೀವಿಗೆ
ಮಾತ್ರ
ಮೂಲಾನ್ವೇಷಣೆಯ ಆದ್ಯತೆ

ವಂಶಾವಳಿಯ ನಾಮ ಬಲ
ಪಿತೃ ಛತ್ರದಡಿಯ ನರಳು
ಮಾತೃ ಸೆರಗೊಳು ಶೌರ್ಯ
ಕಾಪು ಕಾಯದು ಮಗನೇ,
ಗಟ್ಟಿ ಇರಲೇ ಬೇಕು ಹಲ್ಲು
ರಣ ವೀಳ್ಯವ ಅಗೆಯಲೂ

ಕುದುರೆ ತಾಕತ್ತನೇ ನೆಚ್ಚಿ
ಹುಂಬ
ಉಲ್ಟಾ ಸವಾರಿಯು ಸಲ್ಲ

ಉಜ್ಜು ಕಲ್ಲಿರದು ತಲೆಯೊಳಗೆ 
ತಿಕ್ಕಿ ತೀಡಲೇ ಬೇಕು ಆಗಾಗ
ಮಸ್ತಿಷ್ಕಕೂ ಬೇಕಲ್ಲಪ್ಪ ಕಾವು,
ಉಕ್ಕು ಚಿಲುಮೆ ಬತ್ತಬಾರದು
ಭಂಗಿ ಸೊಪ್ಪಿದೆ ಜಹಾಪಾನಾ
ಹೊಗೆ ಕಕ್ಕುತಿರಲಿ ಜೀವಂತ

ಅಪ್ಪ ಅವನಪ್ಪನ ಹೆಸರಲೇ
ಮತ್ತೂ
ಕಿಸಿಯ ಕೂರಬಾರದು ನಾವು!

ಧಗಧಗಿಸಿ ಉರಿಯು ಜ್ವಾಲೆಗೆ
ನೆನಪಿದ್ದೀತೆ ಆ ಮೊದಲ ಕಿಡಿ,
ಭೋರ್ಗೆರೆವ ನದಿ ಹರವಲೆಲ್ಲಿ
ಹುಡುಕುವುದು ಉದ್ಭವದ ಹನಿ,
ದೇಹದಿ ಅಡಗಿ ಕುಳಿತಿಹದೆಲ್ಲೋ
ಅಸಲಿ ಜೀವತಂತುವಿನ ಪಡಿ

(ಚಿತ್ರ ಕೃಪೆ: ಅಂತರ್ಜಾಲ)

6 comments:

  1. ಕುಸಿದು ಕೂರಬಾರದು ನಾವು, ಪರಾವಲಂಬಿಗಳಾಗದೆ ಬದುಕುವುದು ಮುಖ್ಯ

    ReplyDelete
  2. ಉಜ್ಜು ಕಲ್ಲಿರದು ತಲೆಯೊಳಗೆ
    ತಿಕ್ಕಿ ತೀಡಲೇ ಬೇಕು ಆಗಾಗ.. ಆಹಾ..ಭಂಗಿಸೊಪ್ಪು ಹಾಕಿ ಬುಧ್ದಿ ಚಿಗುರಲು ಚಂದವಾಗಿ ಹೇಳಿದ್ದೀರಿ.. ನಮ್ಮ ಬುದ್ಧಿ (ಮೆದುಳೋ/ಮನಸ್ಸೋ/ ಏನೋ) ಖಾಲಿ ಕುಂತಿರಬಾರದು.. ಯಾವುದಾದರೂ ಹೊಸ ವಿಚಾರದ ಸೊಪ್ಪನ್ನು ಹಾಕಿ ಮೆಲುಕಾಡಿಸುತ್ತಿರಬೇಕು.. ಹೊಸಹೊಸ ವಿಷಯ ಕಲಿಕೆಯಲ್ಲಿ ನಿರತವಾಗಿರಬೇಕು.

    ReplyDelete
  3. ತುಂಬ ಸೊಗಸಾದ ಕವನವನ್ನು ಬರೆದಿದ್ದೀರಿ, ಬದರಿನಾಥರೆ. Hats off ! ಎಂದು ಹೇಳಲೇ ಬೇಕು.

    ReplyDelete
  4. ಸೊಗಸಾದ ವಿಚಾರ! 'ನಿನ್ನ ಬಲದಲೆ ನಿಲ್ಲು, ನಿನ್ನ ಬಲದಲೆ ಸಾಯು' - ಇದು ವಿವೇಕವಾಣಿ ಕೂಡಾ! ಆದರೆ, ಎರವಲು/ಮೂಲ ಸಹ ಕೆಲಕಾಲ ಕೆಲವರಿಗೆ ಆಸರೆಯಾಗಿರುತ್ತದೆ. (ರಾಜಕೀಯ ನಾಯಕರೇ ಉದಾಹರಣೆ!) :)

    ReplyDelete
  5. ಅಪ್ಪ ಹಾಕಿದ ಆಲದಮರಕ್ಕೆ ಜೋತು ಬೀಳುವವರಿಗೆ ಕಿವಿಮಾತು. ಚ೦ದದ ಸಾಲುಗಳು ಬದ್ರಿ ಅವರೇ!

    ReplyDelete
  6. ಪರಾವಂಬಿಗಳಾಗಿಯೇ ದಿನ ದೂಡುವವರಿಗೆ ಅಕ್ಕರೆಯ ಕಿವಿಮಾತು..
    ಇಷ್ಟವಾಯಿತು

    ReplyDelete