Thursday, April 9, 2015

ಪುಟ್ಟ ಅಂತಃಕರಣ...

ನೀಲಿ ದೀಪವು ಆರಿದಂತಿದೆ
ಮೇಲೆ ಕುಳಿತಿದೆ ಆ ನೊಣ,
ದಾರಿ ಕೇಳುವ ಸದ್ದು ಅಡಗಿದೆ
ಧ್ಯಾನಕಿಳಿಯಲಿಲ್ಲದಕೆ ತಲ್ಲಣ

ನಿಟ್ಟುಸಿರಿಟ್ಟು ಚಿಂತಿಸಿತದು ಒಮ್ಮೆ
ತಾನು ಏರಿದ ಗಾಡಿಯ ಗಿರಿಮೆ,
ತುರ್ತು ವಾಹನಕನ್ವರ್ಥವು ಸಂಖ್ಯೆ
ನೂರೆಂಟು ರುಜಿನಗಳಗದೇ ಅಂಕೆ

ತಪ್ಪಲಾರದದು ಶರೀರ ಮಾತ್ರರಿಗೆ
ರೋಗವೆಂಬುದು ಪ್ರಾಪ್ತ ಬಹುಮತಿ,
ಕೆಲವು ಅಂಟು ಮಿಕ್ಕವು ಸ್ವಗಂಟು
ಗಟ್ಟಿ ಪಿಂಡವೂ ಚಿತ್ತು ಹಣ್ಣುಗಾಯಿ

ಕರುಣಕಾದರೂ ಹರಣಕೂ ಯಾನ
ಅರೆಜೀವವು ಒಳಗಡೆ ಜೀವನ್ಮರಣ,
ಮತ್ತೆ ಕಳಚಿದಾಗಲೂ ಇಹದ ಋಣ
ಪೂಂಪುಹಾರಿನತ್ತ ಶಾಂತ ಪಯಣ

ದೀಪ ಭಗ್ಗನೆ ಘಂಟಾರವ ಗಣಗಣ
ನೊಣವಲ್ಲಾಡಿ ಹೋಯಿತೊಮ್ಮೆಲೆ
ಹೊರಟು ನಿಂತ ಗಾಡಿ ಬಿಟ್ಟೆದ್ದಿತು,
ಅಂತಃಕರಣ ಶುದ್ಧಿಯಿಂದಾರೈಸುತ

5 comments:

  1. shavapettigeyalli....ondu ride hogi banda anubhava aythu badarinath!

    ReplyDelete
  2. ನೊಣವು ಪುಟ್ಟದಾದರೇನು, ಅಂತಃಕರಣ ಪುಟ್ಟದೆ?

    ReplyDelete
  3. ನೀಲಿ ಅನಂತಕ್ಕೆ ನೀಲಿ ಆಕಾಶಕ್ಕೆ
    ಈ ನೀಲಿಯ ಮಹಿಮೆ ಬೇರೆಯೇ
    ಕಾಲನ ನಿಯಮಕ್ಕೆ ಪ್ರತಿಯೊಂದೂ ಅಧೀನ
    ನಿಮ್ಮ ವಿಶಿಷ್ಟ ಕವಿತೆಗೆ ಶರಣು

    ReplyDelete
  4. ಕರಣ ಪುಟ್ಟದು...
    ಅಂತಃಕರಣ ಹಿರಿಯದು!!!

    ವಿಶಿಷ್ಟ ಕವಿತೆಯ
    ಅಂತರಂಗದ ಭಾವಕ್ಕೆ ನಮನ!

    - ಮಂಜುಳ ಹುಲ್ಲಹಳ್ಳಿ

    ReplyDelete
  5. ಮಾನವ ಮೂಳೆ ಮಾಂಸದ ತಡಿಕೆ.. ಅದರ ಮೇಲಿದೆ ತೊಗಲಿನ ಹೊದಿಕೆ ಎನ್ನುವ ಅಣ್ಣಾವ್ರ ಭಕ್ತ ಕುಂಬಾರ ಚಿತ್ರದ ಹಾಡಿನಂತೆ.. ಹಿಂದಿನ ಸಾಲ ತೀರಿಸಲೆಂದು ಬಂದಿಹೆವಯ್ಯ ಜನ್ಮದ ತಳೆದು ಎನ್ನುವ ಇನ್ನೊಂದು ಗೀತೆಯಂತೆ ನಮ್ಮ ಜನುಮ ನಮ್ಮ ಮರಣ ಆ ವಿಧಾತನ ಕೈಯಲ್ಲಿದೆ. ಅವನಿತ್ತ ಬುತ್ತಿಯ ಗಂಟನ್ನು ಹೊತ್ತು ಆದಷ್ಟು ದೂರ ನಡೆಯುವುದೊಂದೇ ಆಯ್ಕೆ ನಮ್ಮಲ್ಲಿರುವುದು.

    ವೈರಾಗ್ಯದ ಹೂರಣ ತುಂಬಿದ ಸಾಲು ಸಾಲು ಕವಿತೆಗಳು ಅನಾವರಣಗೊಂಡಿವೆ ಕಳೆದ ಹತ್ತೆಂಟು ಕವಿತೆಗಳಲ್ಲಿ.. ಆಶಾವಾದಿಗಳಾಗಿ ಬದರಿ ಸರ್..

    ಕವಿತೆ ಮಾತ್ರ ಪದಗಳ ಈಜಾಟದಲ್ಲಿ ಸೂಪರ್ ಸೂಪರ್ ಆಗಿವೆ

    ReplyDelete