Sunday, April 26, 2015

ಮಸಣದ ಹೂವುಗಳು....

ಪರದೆ ಹಿಂದೆ ಅರೆಗತ್ತಲೆ
ಸರಿದಾಡು ನೆರಳುಗಳು
ಜೀವವಿರದೊಂದು ನಗು
ಮೆಲುದನಿಯ ವ್ಯವಹಾರ
ಖಾಲಿ ಬಿಸುಟ ನಿಟ್ಟುಸಿರು

ಒಡಲ ಬೆಂಕಿಯ ಕಾವಿಗೆ
ಕೊತಗುಟ್ಟುತ್ತೆ ಜೀವ ಜಲ
ಅಕ್ಕಿ ಬೇಡುತ್ತೆ ಪಾಪಿ ತಪ್ಪಲೆ
ಪಕಳೆಗಳು ಕಳಚಿದರಷ್ಟೇ
ಅಲ್ಲಿ ಬೇಯುತ್ತೆ ಅನ್ನ

ಸಭ್ಯ ಮುಖವಾಡಗಳಷ್ಟೂ
ಬೆತ್ತಲಾಗು ನಿಷಿದ್ಧ ಮನೆ,
ಜಗಲಿಯಾಚೆಯ ಒಗಟು
ಒಳಗೆ ಬೆವರುಗಳ ಕಮಟು
ಗೋಡೆಗಳವು ಬಂಡವಾಳ

ಬಳೆಗಳ ಘಲ್ ಘಲ್ ಕರೆ
ಗೆಜ್ಜೆಗಳ ಮಾದಕ ರವಳಿ
ಘಮ್ಮೆನ್ನು ಮಲ್ಲಿಗೆಯಮಲು
ವಿಟ ಪುರುಷನಿಗದು ಮತ್ತು
ಮಿಂದ ಅವಳಿಗಿದು ಹಳತು

ನಿತ್ಯ ನೆರೆ ಭೋರ್ಗೆರತ
ಕಟ್ಟಬೇಕವಳು ಕೈಯಾರೆ
ಕುಸಿಯಲೆಂದೇ ಆಣೆಕಟ್ಟು,
ಹೊಟ್ಟೆಪಾಡಿನ ಬದುಕು
ಆದಿ ಪುರಾತನ ಕಸುಬು


(ಚಿತ್ರಕೃಪೆ: ಅಂತರ್ಜಾಲ)

11 comments:

  1. ತುಂಬಾ ಚೆನ್ನಾಗಿದೆ. :)

    ReplyDelete
  2. ನಿಟ್ಟುಸಿರು ಬಿಡುವಂತಹ ಕವನ.

    ReplyDelete
  3. ​​ಒಡಲ ಬೆಂಕಿಯ ಕಾವಿಗೆ
    ಕೊತಗುಟ್ಟುತ್ತೆ ಜೀವ ಜಲ
    ಅಕ್ಕಿ ಬೇಡುತ್ತೆ ಪಾಪಿ ತಪ್ಪಲೆ
    ಪಕಳೆಗಳು ಕಳಚಿದರಷ್ಟೇ
    ಅಲ್ಲಿ ಬೇಯುತ್ತೆ ಅನ್ನ

    ಬದರಿ ಸರ್ ಸ್ಪೆಷಲ್ ಈ ಮೇಲಿನ ಸಾಲುಗಳು

    ಮಸಣದ ಹೂವು ಚಿತ್ರವನ್ನು ಎಷ್ಟು ಸಾರಿ ಬೇಕಾದರೂ ನೋಡಬಹುದು ಆದರೆ ಮಸಣದ ಹೂವು ಕಾದಂಬರಿಯನ್ನು ಒಮ್ಮೆ ಓದುವಷ್ಟ್ತೊತ್ತಿಗೆ ಯಪ್ಪಾ ಎನಿಸುವಷ್ಟು ಮನಸ್ಸು ಗಲಿಬಿಲಿಗೊಂಡಿರುತ್ತದೆ. ತ ರಾ ಸು ಅವರ ಆ ಕಾದಂಬರಿಯ ಪ್ರತಿ ಸಾಲುಗಳಲ್ಲೂ, ಪುಟಗಳಲ್ಲೂ ಇಣುಕುವ ಆ ಕತ್ತಲಿನ ಜೀವನದ ನೋವುಗಳು, ರೋಗ ರುಜಿನಗಳು, ಅವರ ಜೀವನ ಶೈಲಿ, ಅಬ್ಬ ಅನಿಸುತ್ತದೆ.

    ನಿಮ್ಮ ಕವಿತೆಯಲ್ಲಿ ಆ ಘೋರ ಲೋಕ ಸಹ್ಯವಾಗಿ ಇಣುಕಿದರೂ ಈ ಲೋಕದ ಒಂದು ಮಜಲನ್ನು ಕೊಟ್ಟಿರುವ ರೀತಿ ಸೂಪರ್ ಆಗಿದೆ.

    ಅಮೋಘ ಕವಿತೆ ಎಂದರೆ ಈ ಲೋಕವನ್ನು ಹೊಗಳಿದ ಹಾಗೆ.. ಆದರೆ ಆ ಲೋಕದ ಜೀವಿಗಳಿಗೆ ಸಂತಾಪ ಸೂಚಿಸುತ್ತಾ, ಅದನ್ನು ಸೃಷ್ಟಿಸಿದ ಈ ಸಮಾಜಕ್ಕೆ ಧಿಕ್ಕಾರ ಹಾಕುತ್ತಾ... ನಿಮ್ಮ ಕವಿ ಹೃದಯಕ್ಕೆ ಸಲಾಂ ಹೇಳುತ್ತಿದ್ದೇನೆ.

    ಬದರಿ ಸರ್ ಅಟ್ ಯುವರ್ ಬೆಸ್ಟ್

    ReplyDelete
  4. ಕಣ್ಣಿನ ಮುಂದೆ ಆ ನೋವುಗಳು ಹರಿದು ಹೋದ್ವು.. ತುಂಬಾ ಚೆನ್ನಾಗಿ ಬರೆದಿದ್ದೀರಿ ಸರ್..

    - ಅಕ್ಷತಾ ಗೌಡ

    ReplyDelete
  5. ಅಯ್ಯೋ ಅಂದರೆ ಅವರಿಗೆ ತಲುಪದು, ಜೀವನ ಸುಧಾರಣೆಗೆ ಜನ/ಸರ್ಕಾರ ಮನಸ್ಸು ಮಾಡುವವರೆಗೂ ಇದು ನಿಲ್ಲದು! :((

    ReplyDelete
  6. ಕೊತಗುಟ್ಟುತ್ತೆ ಜೀವ ಜಲ
    ಅಕ್ಕಿ ಬೇಡುತ್ತೆ ಪಾಪಿ ತಪ್ಪಲೆ
    ಪಕಳೆಗಳು ಕಳಚಿದರಷ್ಟೇ
    ಅಲ್ಲಿ ಬೇಯುತ್ತೆ ಅನ್ನ"
    ಸೂಪರ್ ಸಾಲುಗಳು ಬದರಿ ಸರ್ !!!!!! :-)

    ReplyDelete
  7. ಮನಸ್ಸು ದೃವಿಸಿತು

    ReplyDelete
  8. ಮನಸ್ಸು ದೃವಿಸಿತು

    ReplyDelete
  9. ಕಣ್ಣಿಗೆ ಕಾಣದ "ಕಾಮ" ಟಿ ಪುರದ ದರ್ಶನ .... ಅಮೋಘ ...... :-) ;-)

    ReplyDelete
  10. ಒಂದೊದು ರೂಪಕ್ಕೆ ಒಂದೊಂದು ಬೆಲೆ
    ಹಾದರದ ಒಳಗೆ ಕಂಡುಕೊಂಡಿಹರು ನೆಲೆ.

    ReplyDelete