Tuesday, April 21, 2015

ತನ್ನನೇ ಕಾಯದವ...

ಹಗಲಿರುಳು ತುಪಾಕಿ ಪಹರೆ
ಕಣ್ಗಾವಲು ಕ್ಯಾಮರದ ಕಣ್ಣು
ಮೈಕಟ್ಟು ಸಂಚಿಯಾಂತರಂಗವ
ಶೋಧಿಪ ಸ್ಕ್ಯಾನರುಗಳ ಸಾಲು
ಮೇಲೆ ನಿನ್ನದೂ ಅವ್ಯಕ್ತ ಭಯ!

ಆದರೂ ಕನ್ನ ಹಾಕಿ ನುಸುಳು
ಕಳ್ಳ ದೋಚುವನಷ್ಟೂ ಭಂಡಾರ
ಹುಂಡಿ ಬೆತ್ತಲೆ ಮಾಡಿ ಮೂಟೆಗಟ್ಟಿ
ನವರತ್ನ ಖಚಿತ ಚಿನ್ನಾಭರಣ
ರಜತ ಪಂಚಲೋಹದ ವಿಗ್ರಹಗಳ

ಬೆಲೆ ಕಟ್ಟಲಾರದ ಒಡವೆಗಳವು
ಎಣಿಸಲಸದಳ ಹುಂಡಿಯ ಕಾಸು,
ಲೂಟಿಗಾರ ವಲಸೆ ಬಂದವನೇ
ಅಥವ ಮೂಲ ನಿವಾಸಿಯೇ
ಹೇಳು ಪರಂಧಾಮ ನೀನೇ!

ಗರ್ಭ ಗುಡಿ ಬೀಗಗಳೇ ಅಭದ್ರ
ತನ್ನಡಿ ನಿಧಿ ಕಾಪು ಕಾಳ ಸರ್ಪ!
ಮಂಡಳಿಯು ಒಳ ಬಂದವರೂ
ಲೋಹ ಭಕ್ಷಕ ಅಗಾಧ ಹಸಿದವರು
ನಿನ್ನೊಳಗಿರಬೇಕಿತ್ತು ಸೈರನ್ನು

ತನ್ನನೇ ಕಾಯಲಶಕ್ಯ ದೇವನೂ
ಭಕ್ತನ ಪೊರೆಯುವನೆ ಅವನಾದರೂ,
ಧನ ಕನಕ ಸಂತಾನ ಭಾಗ್ಯವಿನ್ನಿತರೇ
ನಿಮ್ಮದೇ ಬೇಡಿಕೆಗಳ ಬಾಲಂಗೋಚಿ,
ಅವನೆಲ್ಲಿ ಮೊರೆಯಿಟ್ಟುಕೊಳ್ಳಬೇಕು?


(ಚಿತ್ರ ಕೃಪೆ: ಅಂತರ್ಜಾಲ)
_________
ದೇವಸ್ಥಾನಗಳಲೇ ಕಳ್ಳತನ! ತನ್ನ ಮನೆ ಕಾಯನು ದೇವರು, ಇನ್ನು ನಮ್ಮನ್ನೆಲ್ಲಿ ಕಾಯುವನು?

9 comments:

 1. BP Ji....
  kaluvaada devara vigrahagala news odide ....
  sooktha saalugalu .......
  "ತನ್ನನೇ ಕಾಯಲಶಕ್ಯ ದೇವನೂ....ಭಕ್ತನ ಪೊರೆಯುವನೆ ಅವನಾದರೂ,"....

  ReplyDelete
 2. ಬದರೀಜಿ;ನಿಮ್ಮದೇ ಬೇಡಿಕೆಗಳ ಬಾಲಂಗೋಚಿ,ಅವನೆಲ್ಲಿ ಮೊರೆಯಿಟ್ಟುಕೊಳ್ಳಬೇಕು?ಸೂಪರ್ ಸಾಲುಗಳು!!!!! :-)

  ReplyDelete
 3. ದೇವನ ಆಲಯದಲ್ಲಿ ಅವನ ಹುಂಡಿಗೆ ಕಣ್ಣ ಹಾಕುವ ಜನರ ಬಗ್ಗೆ , ಹಾಗು ಭಕ್ತರು ನೀಡಿದ ಆಭರಣಗಳನ್ನು ಮಾಯಮಾಡಿ ದೇವರ ಅಸ್ತಿತ್ವನ್ನೇ ಅವನ ಸನ್ನಿಧಿಯಲ್ಲಿ ಪ್ರಶ್ನಿಸಿ ಅಣಕ ಮಾಡುತ್ತಿರುವ ಖದೀಮರ ಬಗ್ಗೆ ಪುಂಗಾನು ಪುಂಗವಾಗಿ ವರದಿಗಳು ಎಲ್ಲೆಡೆಯಿಂದ ಬರುತ್ತಿವೆ. ನಿಮ್ಮ ಕವಿತೆಯ ಆಶಯ ಸಹ ಇದನ್ನೇ ಬಿಂಬಿಸಿದೆ . ಭಕ್ತಿಯಿಂದಲೋ , ಪಾಪ ಪ್ರಜ್ಞೆ ಯಿಂದಲೋ, ಹೆದರಿಕೆಯಿಂದಲೋ ಭಕ್ತರು ಕಾಣಿಕೆಯಾಗಿ ಹರಕೆಯ ರೂಪದಲ್ಲಿ ಧನ , ಆಭರಣ , ಮುಂತಾದವುಗಳನ್ನು ಅರ್ಪಿಸುತ್ತಾರೆ , ಹಿಂದಿನ ಕಾಲದಲ್ಲಿ ರಾಜರೂ ಸಹ ತಮ್ಮ ರಾಜ್ಯದ ದೇವಾಲಯಗಳಿಗೆ ಅಪಾರ ಮೌಲ್ಯದ ಆಭರಣಗಳನ್ನು ಅರ್ಪಿಸಿದ್ದಾರೆ , ಅವುಗಳ ಮೌಲ್ಯವನ್ನು ಇಂದಿಗೂ ನಿರ್ಧಾರ ಮಾಡಲು ಆಗದು, ಅಂತಹ ಆಭರಣಗಳು ನಿತ್ಯವೂ ದೇವನ ಸೇವೆ ಮಾಡುವ ಸೇವಕರ ರೂಪದ ಕೆಲವು ಕಳ್ಳ ಜನರುಗಳು ಅಪಹರಣ ಮಾಡುತ್ತಿರುವುದು ಭಕ್ತರ ನಂಬಿಕೆಗೆ ಕೊಡಲಿ ಇಟ್ಟಂತೆ , ನೂರಾರು ವರ್ಷಗಳಿಂದ ತಲತಲಾಂತರದಿಂದ ತನ್ನದೇ ಮಹಾತ್ವ ಪಡೆದ ದೇಗುಲಗಳಲ್ಲಿ ಇಂತಹ ಘಟನೆ ನಡೆದದ್ದು ನಿಜಕ್ಕೂ ದೇವರ ಅಸ್ತಿವವನ್ನು ಅವನ ನಿತ್ಯ ಪೂಜೆ ಮಾಡುವ ಪುಣ್ಯ ಕಾರ್ಯ ಮಾಡಬೇಕಾದ ಕೆಲವು ಗೋಮುಖ ವ್ಯಾಗ್ರಗಳು ಪ್ರಶ್ನಿಸಿದಂತೆ .ಆಗಿದೆ. ಈ ಕೆಲಸ ಮಾಡಿದ ಮನಸುಗಳಿಗೆ ನಿಮ್ಮ ಈ ಕವಿತೆ ಚಾಟಿ ಬೀಸಿದೆ . ಕಣ್ತೆರೆಸುವ ಕಾಯಕವನ್ನು ಒಬ್ಬ ಕವಿ ಮಾಡಬಲ್ಲಾ ಎಂಬುದಕ್ಕೆ ನೀವೇ ಸಾಕ್ಷಿ

  ReplyDelete
 4. ಕಾಯುವವನನ್ನೇ ಮಾರಾಟದ ಸರಕಾಗಿಸಿಕೊಂಡವರು ನಾವಲ್ಲವೇ ? ಅವನಿಗೂ ಸೈರನ್ ಇರಿಸುವ ಕಾಲ ಬೇಗ ಬರತ್ತೆ ಬಿಡಿ .ಕವಿತೆ ಚೆನ್ನಾಗಿದೆ

  ReplyDelete
 5. ನಾವೇ ಕಲ್ಲು ಮಣ್ಣನ್ನೇ ನಮ್ಮ ಸ್ವಾರ್ಥಕ್ಕೆ ದೇವರಾಗಿಸಿ
  ಇನ್ನು ಅವನ ಮೇಲೇ ಆರೋಪ ಮಾಡಿದರೆ,,,,,,,,
  ಏನೆನ್ನುವ ಅವ..?
  ಅಲ್ಲವೇ..?

  ReplyDelete
 6. ಮನುಜನೆ ದೇವರನ್ನು ಕಟ್ಟಿ ಕೊಂಡಿದ್ದಾನೆ, ದೇವರು ಬಂದು ಎಂದೂ ಹೇಳಲಿಲ್ಲ ನನಗೆ ಕಾವಲು ಬೇಕೆಂದು, ಮನುಜನೆ ತೊಡಿಸಿದ ವಜ್ರ ಬಂಗಾರ ಎಲ್ಲ, ಮನುಷ್ಯನಿಗೆ ದೇವರನ್ನು ನಂಬಿ ಸಹ ಅವನ ಮೇಲೆ ನಂಬಿಕೆ ಇಲ್ಲದಂತೆ, ಅವನು ಸಾಧಾರಣ ಮನುಷ್ಯ ತಾನೇ, ಭಯ ಅವನಿಗೆ ಸೊತ್ತು ಕಳ್ಳತನವಾದರೆ, ಇನ್ನು ಭಕ್ತರಲ್ಲಿ ಕೆಲವು ಕಳ್ಳರು ಇರುವುದು ಸಹಜ, ಆ ಕಳ್ಳರಲ್ಲಿಯೂ ಕೆಲವು ವಿಧಗಳು, ಕೆಲವು ನಾಸ್ತಿಕರು, ಕೆಲವು ಬಡ ಆಸ್ತಿಕರು. ನಿಮ್ಮ ಕವನ ಗಹನವಾಗಿದೆ, ವಾಸ್ತವತೆ ಕೂಡಿದೆ.

  ReplyDelete
 7. ಈ ಕಟುವ್ಯಂಗ್ಯಕ್ಕೆ ದೇವರೂ ಬೆಚ್ಚಿಬಿದ್ದಾನು!

  ReplyDelete
 8. ದೇವರ ಗರ್ಭಗುಡಿ.... ಬೀಗವೇ ಅಭದ್ರ...ವಾಹ್!! ಗರ್ಭ ಗುಡಿ ಬೀಗಗಳೇ ಅಭದ್ರ
  ತನ್ನಡಿ ನಿಧಿ ಕಾಪು ಕಾಳ ಸರ್ಪ!.. ನಿಧಿಗೆ ವಿಷ ಸರ್ಪದ ಕಾವಲು... ಮಾನವ ದೇವರಿಗೆ ಹೆದರಲಿ ಎಂದರೆ ಅವನ ಸೃಷ್ಟಿಯಲ್ಲಿ ದೇವರೇ ಭಯಗೊಂಡು ಬೀಗ ಜಡಿದು ಒಳಕುಳಿತನೇ ಎನ್ನುವಂತಾಗುತ್ತದೆ... ಬಹಳ ಚನ್ನಾಗಿದೆ...ಆಶಯ, ಕಾಳಜಿ, ಕವನ

  ReplyDelete
 9. ಬೀಗವ ಹಾಕುವುದು ನಮ್ಮ ಭದ್ರತೆಗೆ ಕಳ್ಳನ ಭದ್ರತೆಗಲ್ಲ ಎನ್ನುವ ಗಾದೆಯಿದೆ.. ಹಾಗೆಯೇ ತನಗಿಂತ ಶಕ್ತಿವಂತನನ್ನು ಬೇಡುವುದು ಸಹಾಯ ನಿರೀಕ್ಷಿಸುವುದು ಸಹಜ... ಗಾದೆಯಿದೆ ಮೂಲ ದೇವರೇ ಮಣ್ಣು ತಿನ್ನುತ್ತಿರುವಾಗ ಮೂಲೆ ದೇವರು ತಂಬಿತ್ತು ಕೇಳಿದ ಹಾಗೆ ಎನ್ನುವುದು ನಿಜ..

  ಕೆಲವೊಮ್ಮೆ ಆ ದೇವ ಕೂಡ ಪರೀಕ್ಷೆ ಮಾಡುತ್ತಾನೆ.. ಹಾಗು ತನ್ನನ್ನೇ ಪರೀಕ್ಷೆಗೆ ಒಡ್ಡಿಕೊಳ್ಳುತ್ತಾನೆ ಎನ್ನುವುದು ಈ ವಿಗ್ರಹಗಳ, ತಿಜೋರಿಯ ಕಳುವು ಹೇಳುತ್ತದೆ.

  ಇಡಿ ವಾದ ಈ ಗಾದೆಯ ಮೇಲೆ ನಿಂತಿದೆ.. ಸೂಪರ್ ಬದರಿ ಸರ್..

  ReplyDelete