Sunday, April 19, 2015

ನೋಟಿನ ಗಿಡ...

ತಲೆ ಕೆಟ್ಟ ಬುದ್ಧಿವಂತ
ನೋಟು ಬಿಡುವಂತೊಂದು
ಬೊನ್ಸಾಯಿ ಬೆಳೆದ,
ಅಂಗಳದಿ ನೆಟ್ಟರದೆಲ್ಲಿ
ಬುಡ ಸಮೇತ ಕದ್ದಾರಂತ
ಕುಂಡ ಪಡಖಾನೆಯಲಿಟ್ಟ

ಒಂದು ರೂಪಾಯಿ ಚಿಗಿರೊಡೆದು
ಬಲಿತು ಸಾವಿರವಾಯ್ತು,
ನಿದ್ರೆ ಬರಲಿಲ್ಲವಗೆ ಕೆರೆದ ಬೋಳ
ಕಸಿ ಮಾಡಿ ನೋಡಿದನಾಗ
ಬೆಳಗಾನ ಕೊಂಬೆ ರೆಂಬೆ ತುಂಬ
ಡಾಲರು ಯೆನ್ನು ಯೂರೋ

ತಡೆಯಲಾರದ ತುರಿಕೆ ಬಂತವಗೆ
ಮತ್ತೂ ಮೆದುಳ ಸಾಣೆ ಹಿಡಿದ,
ನೋಟು ನರ್ಸರಿ ಶುರುವಿಟ್ಟುಕೊಂಡ
ಚಿನ್ನಕ್ಕೊಂದು ಸಸಿ ಜಾಹಿರಾತು
ಮುಗಿಬಿದ್ದರು ನೋಡಿ ಜನ
ಹೆಂಡಿರ ತಾಳಿಗೂ ಬಿತ್ತು ಕತ್ತರಿ!

ತೆಂಗು ಸವರಿ ಕಬ್ಬನೂ ಕಡೆದು
ರಾಗಿ ಜೋಳ ಭತ್ತಗಳನು ಕಿತ್ತು
ನೆಟ್ಟರೋ ನೆಟ್ಟರು ನೆಡು ತೋಪ,
ಮೊಳೆತ ಸಸಿ ಗಿಡವಾಗಿ ಮರವಾಗಿ
ಗೊಂಚಲು ಗೊಂಚಲು ನೋಟು
ನಳ ನಳಿಸಿತು ಕಾಸು ತೋಟ

ಗೋಣಿ ಒಳ ಮನೆ ಹಜಾರದ ತುಂಬ
ಕಂತೆ ಕಂತೆ ನೋಟು ಬೆಳೆ ಬಂಪರು,
ದನ ಕರಗಳ ಹಗ್ಗ ಬಿಚ್ಚೊಗೆದರು ತಂದು
ಉಳುಮೆ ಕಟಾವುಗಳಿಗೆಲ್ಲ ಯಂತ್ರ,
ಸೈಕಲು ಗುಜರಿಗೆ ಹಡಗಿನಂತಹ
ಕಾರುಗಳು ಮಣ್ಣ ರೋಡುಗುಂಟ

ಅಪರಾತ್ರಿಯಲಿ ಬಿಚ್ಚಿ ಚಿನ್ನದ ಛತ್ರಿ
ಲಂಗೋಟಿಗಳೆಲ್ಲ ಲಕ್ಪತಿಗಳಾದರು,
ಹೀಗಿರಲು ಕೇಳೀತೇ ಪಾಪಿಷ್ಟ ಹೊಟ್ಟೆ?
ಕಾವ್ ಕಾವ್ ಅಂತು ಹಸಿದುಕೊಂಡು,
ಒಳಗೂ ಹೊರಗೂ ತಡಕಾಡಿದರೆಲ್ಲಿದೆ
ಅಕ್ಕಿಯೂ ಕಾಣೆ ಮನೆಯಾಕಿಯೂ!

ಸಾಕಿದ ಕತ್ತೆ ಹಿಂಗಾಲೊದೆದು ಕಿಸಕ್ಕಂತು
ಆಜಾ ಬೇಟಾ ಆಜಾ ಗಬಗಬನೆ ಸೇರಿ
ತಿಂಬೋಣ ಹಸಿ ಹಸಿ ಕರೆನ್ಸಿ ನೋಟ...


(ಚಿತ್ರ ಕೃಪೆ: ಅಂತರ್ಜಾಲ)

15 comments:

 1. Waaahhh...!! Sundara sandharbhochita saaligalu as usual....thank u sir..keep it up.😊 gm

  ReplyDelete
 2. ನಿಜ ಎಲ್ಲರೂ ಎಲ್ಲಾ ಮರೆತೂ ಹಣದ ಹಿಂದೆ ಹೋದರೆ ಮತ್ತೇನಾಗುತ್ತೆ.
  ಈಗಂತೂ ಮಕ್ಕಳೂ ಹಣ ತರೋ ಮೆಶೀನ್ ಅಂತಾನೇ ಎಣಿಸಿದ್ದಾರೆ, ಮಕ್ಕಳೂ ಅದೇ ರೀತಿ ಆದರೆ ಪೋಷಕರ ಗತಿ..?
  ಬದರಿಯವರೇ ಸಕಾಲಿಕ ಕವನ.

  ReplyDelete
 3. ಎಲ್ಲೆಡೆ ಹಣದ ಮಾಯೆ, ಚೆನ್ನಾಗಿದೆ ಬದರಿ ಸರ್.

  ReplyDelete
 4. ಮುಟ್ಟಿದ್ದೆಲ್ಲ ಚಿನ್ನವಾಗಲೆಂಬ ವರ ಪಡೆದ ರಾಜನ ಕಥೆ ನೆನಪಾಯಿತು!!!

  - ಮಂಜುಳ ಹುಲ್ಲಹಳ್ಳಿ

  ReplyDelete
 5. ಎಷ್ಟಿದ್ದರೂ ಸಾಲದು ಎಂಬ ಹಪಿ ಹಪಿಯ ಮನುಷ್ಯರೇ ಈಗ ಎಲ್ಲಾ ಕಡೆ.
  ಯಂತ್ರ ಮಾನವರಂತಾದ ಅವರ ಮಕ್ಕಳನ್ನೂ ಎಳೆದೆಳೆದು ಈ ಸಾಲಿಗೆ ಒಡ್ಡಿ ನಂತರ ಪರಿತಪಿಸೋ ಪರಿ...
  ಮುಂದೇನಾದೀತು...?
  ಸಕಾಲಿಕ ಕವನ

  ReplyDelete
 6. ಅದ್ಭುತ ಕಲ್ಪನೆ ಬದರೀನಾಥ್.ಗಿಡಕ್ಕೆ ಪಡಸಾಲೆಯಲ್ಲಿ ಜಾಗ ಮಾಡಿದ್ದೀನಿ.

  ReplyDelete
 7. ಇಂತಹ ವಿಚಾರಗಳು ನಿಮಗೆ ಹೇಗೆ ಹೊಳೆಯುತ್ತದೆ , ನಿಜಕ್ಕೂ ಇಂತಹ ಕಲ್ಪನೆ ಅಚ್ಚರಿಯೇ ಸರಿ , ಗಿರಿ ಕನ್ಯೆ ಚಿತ್ರದ " ಏನೆಂದೂ ನಾ ಹೇಳಲೀ ಮಾನವಾನಾಸೆಗೆ ಕೊನೆಯಲ್ಲಿ " ಹಾಡು ಜ್ಞಾಪಕಕ್ಕೆ ಬರುತ್ತದೆ. ಇನ್ನೂ ಕವಿತೆಯ ಬಾಂಬ್ ಇಲ್ಲಿದೆ
  ​ಅಪರಾತ್ರಿಯಲಿ ಬಿಚ್ಚಿ ಚಿನ್ನದ ಛತ್ರಿ ಲಂಗೋಟಿಗಳೆಲ್ಲ ಲಕ್ಪತಿಗಳಾದರು, ಹೀಗಿರಲು ಕೇಳೀತೇ ಪಾಪಿಷ್ಟ ಹೊಟ್ಟೆ? ಕಾವ್ ಕಾವ್ ಅಂತು ಹಸಿದುಕೊಂಡು, ಒಳಗೂ ಹೊರಗೂ ತಡಕಾಡಿದರೆಲ್ಲಿದೆ ಅಕ್ಕಿಯೂ ಕಾಣೆ ಮನೆಯಾಕಿಯೂ! ಸಾಕಿದ ಕತ್ತೆ ಹಿಂಗಾಲೊದೆದು ಕಿಸಕ್ಕಂತು ಆಜಾ ಬೇಟಾ ಆಜಾ ಗಬಗಬನೆ ಸೇರಿ ತಿಂಬೋಣ ಹಸಿ ಹಸಿ ಕರೆನ್ಸಿ ನೋಟ...
  ಈ ಸಾಲನ್ನು ಓದಿದರೆ ನಮಗೆ ಬಾಂಬ್ ಬಿದ್ದಂತೆ ಆಗುತ್ತದೆ, ನಾವೆಲ್ಲಾ ಕನಸು ಕಾಣುತ್ತಾ ವಿಜ್ಞಾನದ ಹೊದಿಕೆ ಹೊದ್ದ ಅಜ್ಞಾನದ ಅಮಲಿನಲ್ಲಿ ಬೆಳೆಯುತ್ತಿರುವುದು ಇಂತಹ ಹಣ ಬಿಡುವ ಗಿದಗಳನ್ನೇ ಅಲ್ವೇ ...?
  ಬದರಿ ಬರೆದರೆ ಸಾಕು ಇಂತಹ ಕವಿತೆ ಹೆದರಿಕೊಂಡು ಓಡಿಹೋಗುತ್ತವೆ ನಮ್ಮ ಕವಿತೆಯಲ್ಲಿನ ಅಕ್ಷರಗಳು . ಪ್ರೀತಿಯ ಶುಭಾಶಯಗಳ ಅಪ್ಪುಗೆ ನಿಮಗೆ . ಜೈ ಬದರಿ ಜಿ

  ReplyDelete
 8. ಅದ್ಭುತ ಕವನ!!!!! ಇದು ಬದರಿಗೆ ಮಾತ್ರ ಸಿಕ್ಕಿದ ವರ!!!! ಓದುವ ಅದೃಷ್ಟ ನಮ್ಮದು !!!!!

  ReplyDelete
 9. ಹೊಟ್ಟೆಯ ಹಸಿವು ಮತ್ತು ಮನಸಿನ ಹಸಿವು ನಮ್ಮನ್ನು ಸದಾ ಕಾಡುತ್ತಲೇ ಇರುತ್ತದೆ ಅಲ್ಲವಾ ಬದರಿ ಸರ್..ಯಾವುದನ್ನೂ ಅತಿಯಾಗಿ ನೀಗಿಸಲು ಹೋಗಬಾರದೇನೋ..ಇನ್ನೊಂದು ಮರೆಯುತ್ತದೆ...ಊಟವಾದವನಿಗೆ ಮುಂದಿನದರ ಚಿಂತೆ,ಉಳಿದವರಿಗೆ ಊಟದ್ದೇ ಚಿಂತೆ...ನಡೆಯುತದೆ ಬದುಕು :) :)....
  ಧನ್ಯವಾದ ಸರ್ :) :)...
  ಬರೆಯುತ್ತಿರಿ :) ನಮಸ್ತೆ ;)

  ReplyDelete
 10. ನಿಮ್ಮ ಕವನದ ಧಾಟಿ ಈ ಸಲ ಸ್ವಲ್ಪ ಬದಲಾಗಿದೆ. ರುಚಿ ಮಾತ್ರ ಮೊದಲಿನಂತೆಯೇ ಉತ್ಕೃಷ್ಟ. ಕಲ್ಪನೆಯನ್ನು ಹದಗೊಳಿಸಿ, ಕವನದ ವೇಷವನ್ನು ತೊಡಿಸಿದ್ದೀರಿ.

  ReplyDelete
 11. ಇದೊಂದು ಅದ್ಭುತ ಕವನ ಬದರೀ. ಅನ್ನದ ಅರ್ಥಕ್ಕಿಂತಾ ಚಿನ್ನದ ’ಅರ್ಥ’ವೇ ಹೆಚ್ಚಾದಾಗ ಉಂಟಾಗುವ ಅನಾಹುತ, ’ಕತ್ತೆಪಾಡು’. ಸೊಗಸಾಗಿದೆ.

  ReplyDelete
 12. olleya concept sir... adu vastavada badukige teera hattiraviuva vishayada bagge tumbaa chennagi bardiddeera...

  ReplyDelete
 13. Notina gida sooper
  Manushya eshte dudidaru, ene madidru hotte tumbsodu hidi annane... Idanna nimma kavana sashaktavaagi heltide.. Chappale

  - Veena Badiger

  ReplyDelete
 14. ವಾಹ್ ವಾಹ್ ಸೂಪರ್ ಬದರಿ ಸರ್.. ಸಾಮಾನ್ಯ ನನ್ನ ಅನಿಸಿಕೆ ಬರೆದು ಅಂತ್ಯದಲ್ಲಿ ಬರಹಗಾರರ ಬಗ್ಗೆ ಬರೆಯುವುದು ನನ್ನ ಸೂತ್ರ. ಅದನ್ನು ಇಂದು ಮುರಿದಿದ್ದೇನೆ.

  ಸುಂದರವಾದ ಸಂದೇಶ ಉಳ್ಳ ಕವಿತೆ. ಮೇಯರ್ ಮುತ್ತಣ್ಣ ಚಿತ್ರದಲ್ಲಿ "ಹಸಿವಿಗೆ ಅನ್ನ ತಿನ್ನದೇ ಚಿನ್ನವನ್ನು ತಿನ್ನಲು ಸಾಧ್ಯವೇನು" ಎನ್ನುವ ಹಾಡಿನಂತೆ.. ಎಲ್ಲಾ ಕಡೆಯೂ ಚಿನ್ನವೇ ಅಂದರೆ ಹಣವಿದ್ದರೆ ಆಗುವ ದುಸ್ಥಿತಿಯ ಬಗ್ಗೆ ಸುಂದರವಾಗಿದೆ.

  ತುಘಲಕ್ ದರ್ಬಾರಿನಲ್ಲಿ ಲೋಹದ ನಾಣ್ಯದ ಬದಲಿಗೆ ಚರ್ಮದ ನಾಣ್ಯವ ಬಳಕೆ ಮಾಡಿ ಎಂದಾಗ.. ಅವನ ಪ್ರಜೆಗಳು ಚರ್ಮದ ನಾಣ್ಯಗಳನ್ನು ತಾವೇ ಮಾಡಿಕೊಂಡು ಅರಾಜಕತೆಯನ್ನು ಸಮಸ್ಯೆಯನ್ನು ತಂದೊಡ್ಡಿದ್ದರು..

  ಸೂಪರ್ ಬದರಿ ಸರ್

  ReplyDelete