Monday, April 13, 2015

ಸ್ವ ಗೀತ... ೧

(ಭಾಗ -೧)


ತಪ್ಪೊಪ್ಪಿಗೆ:
ಉದ್ದೋ ಉದ್ದ ಕವನವೇ ಏಕೆ
ಹತ್ತು ಕವನಗಳ ಸರಕು ಒಂದರಲೇ ಇದೇಕೆ?
ನೀವೂ ನಿಲ್ಲಿಸಿ ಕೇಳುವರೇ ಕಟಕಟೆಯಲಿ!
ಅಡಿಗರಂತವರೇ ಬರೆದರಲ್ಲವೇ ಹೀಗೆ
ಬಂದದ್ದು ಬರೆದಿಟ್ಟಿಹೆ ಕ್ಷಮಿಸಿ ಓದಿಕೊಳ್ಳಿ,
ನಾಳೆ ಉಳಿಯುವನೋ ಗೊತ್ತಿಲ್ಲ ಎನಗೆ...


ಎಳಸು ಕಂಗಳ ಗಲ್ಲಿ ಕವಿ ಇವ
ಮೇಲೊಂದು ಮೌಢ್ಯದ ಚಾಳೀಸು,
ಮೆದುಳ ತೂಕಡಿಕೆಯನೂ ಮೀರಿ
ವಾರೆ ನೋಟಕಿಷ್ಟೇ ಒಳ ಹರಿವು

೧.
ಉದ್ಭವದಿ ಹನಿಯದೂ ಎಳಸು ದನಿ
ಹರವಲೇ ಧಿಗ್ಗೋಚರ ವಿರಾಟ್ರೂಪೂ,
ಐಕ್ಯವಾಗುವುದೇ ಜನುಮಕಂಟಿದ ಗುರಿಯು
ಓಘವೊಮ್ಮೆಗೆ ಹರಿಣ ಮತ್ತೆಲ್ಲೋ ಮಂದಗಮನ
ಅದರ ಗುಂಗಲೇ ನೆರೆಯು ಬತ್ತುವಿಕೆಯೂ,
ಅಹರ್ನಿಶಿ ಅದಕದರದೇ ಧ್ಯಾನ ಸಮ್ಮೋಹನ
ಪ್ರಣಯಾಸಕ್ತ ಪರಿತಪಿತ ವಿರಹದಳಲು

೨.
ಆಗಂತುಕ ನೆಲೆಯದು ಹುಟ್ಟಾ ನಿರ್ಭಾವ,
ಕುಳಿತಿಲ್ಲದೇನು ಕಾತುರಾಕ್ಷಿಯನು ಬೀರಿ
ತೋಳ್ಬಿಚ್ಚಿ ಬಿಗಿದಪ್ಪಲು ತಾ ತುದಿಯಲಿ,
ಬಿಂದುವಲೇ ಆರಂಭ ಬಾಡಿಗೆಯ ಸೈಕಲು
ಬಿಂದುವಲೇ ಮತ್ತದರ ಚಕ್ರಾರ್ಧ ಅಂತ್ಯ
ತಲುಪು ಹಾದಿಯ ಐತಿಹ್ಯ ಅಂಕು ಡೊಂಕು,
ಹಪಹಪಿಯು ಹನಿಯ ಅನಿವಾರ್ಯ ಕರ್ಮ
ತಾಣದ ಹೃದಯವೋ ಹೆಬ್ಬಂಡೆ ಕರಗಲೊಲ್ಲ

೩.
ಸುಲಭಕೊಗ್ಗುವುದು ಜೀರ್ಣವಾಗದು
ನಮಗೂ;
ಅಪ್ಪನೆಂಬ ಹೊಂಗೆಯ ಮರದ ನೆರಳು
ಕಡೆಯ ಅಗಳನೂ ಗುಕ್ಕನಿಡು ಹೆತ್ತೊಡಲು,
ಮನೆಯೇ ಮಂತ್ರಾಲಯವೋ ದಡ್ಡ
ಮೂತ್ರಾಲಯಕೂ ರೂಪಾಯಿ ಬಿಲ್ಲೆ ಈಗ!
ಅವರವರ ದಂ ಗಳೇ ಮೇಲು ಪತಿಗಳಿಗೆ
ಮನೆಯಾಕಿ ಹಿಮ ಲೇಪಿತ ಜ್ವಾಲಾಮುಖಿ
ಮುಡಿಸಿ ಮಲ್ಲೆಯನಿನಿತು ರಮಿಸಿ ಒಂದಿನಿತು
ಸಿಹಿ ನಗೆ ನಕ್ಕು ಸರಸಕಿಳಿದೊಡೆ ತಣಿವು

18 comments:

 1. ಸ್ವಗೀತೆಯ ಕವಿಯು ಮೌಢ್ಯದ ಚಾಳೀಸು ಧರಿಸಿದ ಗಲ್ಲಿ ಕವಿ ಎನ್ನುವುದನ್ನು ನಾನು ಒಪ್ಪಲಾರೆ. ಈತ ಪ್ರಬುದ್ಧ ಕವಿ. ತನ್ನ ಸಂಕೀಱ್ಣ ಭಾವನೆಗಳನ್ನು ರಸಮಯವಾಗಿ ಕವನಿಸಬಲ್ಲ ಕವಿ. ಬದುಕನ್ನು ತಿಳಿವಳಿಕೆಯಿಂದ ಸಂಬಾಳಿಸಬಲ್ಲವನು. ಆದುದರಿಂದಲೇ ಈತ ಹೀಗೇ ಉಸರಬಲ್ಲ:
  ‘ಸಿಹಿನಗೆ ನಕ್ಕು ಸರಸಕಿಳಿದೊಡೆ ತಣಿವು.’

  ReplyDelete
 2. Tumbaa chennagide, arthagarbhitavaagide nimma antaraalada bhavanegala kavana.

  ReplyDelete
 3. Sooper Kavana sir., oduttidre bereondu lokakke hogibidtivi...!!

  ReplyDelete
 4. ಕವಿಯ ಭಾವದುದ್ದದಷ್ಟು ಕವಿತೆ. ಅದಕ್ಕೆ ಇಂತಿಷ್ಟೇ ಸಾಲುಗಳೆಂಬ ಲೆಕ್ಕ ಬೇಕಿಲ್ಲ. ಅರ್ಥಪೂರ್ಣ ಕವಿತೆ. ಮುಂದುವರಿಸಿ.

  ReplyDelete
 5. ಅಪ್ಪನೆಂಬ ಹೊಂಗೆಯ ಮರದ ನೆರಳು
  ಕಡೆಯ ಅಗಳನೂ ಗುಕ್ಕನಿಡು ಹೆತ್ತೊಡಲು,
  ಮನೆಯೇ ಮಂತ್ರಾಲಯವೋ ದಡ್ಡ
  ಮೂತ್ರಾಲಯಕೂ ರೂಪಾಯಿ ಬಿಲ್ಲೆ ಈಗ!

  ಸತ್ಯವ ಎತ್ತಿ ತೋರುವ ಸಾಲುಗಳು ಚನ್ನಾಗಿದೆ ಬದರಿ ಸರ್

  ReplyDelete
 6. Himalepitha jvalamukhi. ..kannige kattuththe.
  Sorry can't type in Kannada from tab

  ReplyDelete
 7. ಬದರೀಜಿ ;ನಿಮ್ಮ ಕವಿತೆಗಳನ್ನು ಓದುವಾಗ ನನಗನ್ನಿಸುವುದು ಹೀಗೆ ;ಎಳಸು ಕಂಗಳ ಗಲ್ಲಿ ಓದುಗ ಇವ !!!!ಮೇಲೊಂದು ಮೌಢ್ಯದ ಚಾಳೀಸು,ಮೆದುಳ ತೂಕಡಿಕೆಯನೂ ಮೀರಿ ವಾರೆ ನೋಟಕಿಷ್ಟೇ ಒಳ ಹರಿವು!!!
  ಸುಂದರ ಕವನ.ಮುಂದುವರೆಯಲಿ ನಿಮ್ಮ ಕವಿತಾ ಅಭಿಯಾನ!!!!

  ReplyDelete
 8. ಚೆನ್ನಾಗಿದೆ ಸರ್, ಮುಂದುವರಿಯಲಿ.

  ReplyDelete
 9. ಮೊಳಕೆಯೊಡೆದಾಗಲೇ ಆಗಸವ ಕಂಡ ಕಾಣ್ಕೆಗೆ
  ಚಂದ್ರನಾ ಮೇಲೆ ಹಬ್ಬುವಾ ಹೆಬ್ಬಯಕೆ
  ಭರಭರನೆ ದಾಟುವ ಮನುಜರು, ದೈತ್ಯ ಪ್ರಾಣಿಗಳ
  ಕಾಲ ಸದ್ದಿಗೆ
  ಕಾರಿರುಳ ಕವಿದಂತೆ ಮೌನ ರೋದನ
  ಹೊಸಕಿ ಹಾಕುವಷ್ಟರಲೇ
  ಉಳಿದುಕೊಂಡ ಘಳಿಗೆಯನು ಮನದಿ ನೆನೆ-ನೆನೆದು

  ಸರ್....
  ಏನೋ ನಿಮ್ಮ ಸಾಲುಗಳನ್ನು ಮುಂದುವರೆಸಲು ಹೊಳೆದದ್ದು....
  ನಿಮ್ಮ ಕವಿತೆಗೆ ಮಲ್ಲಿಗೆಯ ಕಂಪು
  ನಾನೋ ಆರ್ಟಿಫಿಸಿಯಲ್ ಸುಗಂಧ.....

  ReplyDelete
 10. ಅಷ್ಟು ಸುಲಭದಲ್ಲಿ ಜೀರ್ಣವಾಗದು ನಮಗೂ ... :) ಚೆಂದದ ಅರ್ಥಗರ್ಭಿತ ಕವಿತೆ ಮುಂದುವರೆಯಲಿ

  ReplyDelete
 11. prabuddhateya oLaharivu arivige baruttalide.. :) kaTTikoTTa reeti,adu chenda chenda.. :)
  ಬಿಂದುವಲೇ ಆರಂಭ ಬಾಡಿಗೆಯ ಸೈಕಲು
  ಬಿಂದುವಲೇ ಮತ್ತದರ ಚಕ್ರಾರ್ಧ ಅಂತ್ಯ
  ತಲುಪು ಹಾದಿಯ ಐತಿಹ್ಯ ಅಂಕು ಡೊಂಕು,
  ಹಪಹಪಿಯು ಹನಿಯ ಅನಿವಾರ್ಯ ಕರ್ಮ.. ishTa aaglEbEku ee kavite :)

  ReplyDelete
 12. ಬೆಳೆಯುವ ಆಟ ಅನೂಚಾನ
  ಮಗ ಅಪ್ಪನಾಗಿ . . . . . ಈ ಆಟ ನಿರಂತರ
  ನೋಡುವ ಕಣ್ಣುಗಳು ಬದಲಾದರೇನು . ಅದೇ ಕನ್ನಡಕವೇ . . ಇಲ್ಲೂ

  ReplyDelete
 13. ಬೆಳೆಯುವ ಆಟ ಅನೂಚಾನ
  ಮಗ ಅಪ್ಪನಾಗಿ . . . . . ಈ ಆಟ ನಿರಂತರ
  ನೋಡುವ ಕಣ್ಣುಗಳು ಬದಲಾದರೇನು . ಅದೇ ಕನ್ನಡಕವೇ . . ಇಲ್ಲೂ

  ReplyDelete
 14. ಮನಸ್ಸು ಕಣ್ಣ ತೆರೆದು ನೋಡಿದರೆ ಎಲ್ಲಾ ಶೂನ್ಯ ಇಹುದು
  ಪ್ರೀತಿಯ ನಂಬಿದರೆ ಅಂಧಕಾರದಲ್ಲೂ ಕಾಣುವುದು ಎನ್ನುವ ರಣಧೀರ ಚಿತ್ರದ ಹಾಡಿನಲ್ಲಿ ಇರುವವಂತೆ
  ಬಹುಮಹಡಿ ಕಟ್ಟಡ ನೋಡಿ ಗುಡಿಸಲು ಸೊರಗಬಾರದು. ಆ ಬಹು ಮಹಡಿ ಕಟ್ಟಡ ಕೂಡ ಗುಡಿಸಿನಷ್ಟೇ ಜಾಗದಿಂದ ಶುರುವಾದದ್ದು.

  ಆಶಾವಾದ ತುಂಬಲಿ.. ನಿರಾಶವಾದ ದೂರವಾಗಲಿ.. ಅವರವರ ಬೊಗಸೆಗೆ ಬಂದಷ್ಟು ನೀರು ನಮ್ಮ ದಾಹವನ್ನು ಇಂಗಬಲ್ಲದು. ಆ ಗುಣ ನಿಮ್ಮಲಿದೆ..

  ಸ್ವಗತ ಆದರೂ ಇದು ಬರಿ ಒಬ್ಬರ ಲೋಕವಲ್ಲ.. ಇದು ಸ್ನೇಹಲೋಕದ ಮಾತುಗಳು

  ಸೂಪರ್ ಬದರಿ ಸರ್ ಬರಲಿ ಆಶಾದಾಯಕ ಕವನಗಳು

  ReplyDelete