Sunday, April 5, 2015

ಕಳೇವರದುಲಿ...


ರೈಲು ಛೇದಿಸಿ ಪಟ್ಟಿಗುಂಟ
ಛಾವಣಿ ಕೊಕ್ಕೆಗೆ ಜೋತು ಬಿದ್ದು
ಕೆರೆ ಕಟ್ಟೆ ಬಾವಿಗಳ ನೀರಲುಬ್ಬಿ
ಪಾಷಾಣದ ಬುರುಗನಷ್ಟೂ ಕಕ್ಕಿ,
ಹೊಚ್ಚ ಹೊಸದೊಂದು ಹೆಣ

ಹುಟ್ಟೂ ಅಸಲು ಆತ್ಮಹತ್ಯೆ
ಕೇಳೀ ಉಂಬಳಿಯದು ಕೇಳಿ!
ಆಯ್ಕೆಯದು ನಿಷಿದ್ಧ ಉಚ್ಛಾರ
ಕೆಮ್ಮಬಾರದು ಗರ್ಭಾಂತರ,
ವಿಧಾತನ ಕೆಲಸವೇ ಸುಲಭ
ಹಣೆಯ ಬರಹ ಕುಲುಕು ಚೀಟಿ

ಮೀನು ಥಾರಲಿ ಕರ್ಜೂರಕೋ
ಗತಿಯು ಆಗುಂಬೆ ಘಾಟಲಿ,
ಮೊಳಕೆಯೊಡೆದರೂ ಕಾಳುಗಟ್ಟೀತೆಲ್ಲಿ
ಭತ್ತ ಗೋದುಮೆಯು ಬರಡಲಿ,
ತೂರಿದಲ್ಲೇ ಹೆಮ್ಮರದ ಕನವರಿಕೆ
ವರ್ಗಾವಣೆ ಜಾರು ನೆಲೆಯಲಿ

ಮನ ಮನೆ ಅಂಗಳ ಗೋಮಾಳ
ಉಸಿರುಗಟ್ಟಿಸುತ್ತದೆಲ್ಲ ಪರಿಸರ,
ಕಳತ್ರ ಸಂತಾನ ಬಂಧುಗಳಾದಿ
ಹೀರ್ಗೊಳವೆಗಳ ತೀರದ ದಾಹ,
ಸುಭಿಕ್ಷುವನೂ ಭಿಕ್ಷುಕನಾಗಿಸು
ತೊಟ್ಟೂ ಸಮತಟ್ಟು ಒತ್ತು ಪಡಿ

ಕಿವಿಗೆಲ್ಲಿದೆ ರೆಪ್ಪೆಯಿನ್ನತರೇ ಬಿರುಡೆ

ಕೇಳಬಾರದ್ದೇ ಅದಕೆ ಪಥ್ಯಾಹಾರ,
ಕಳೇವರದುಲಿ ಕರುಳನೇ ಕಿವುಚಲಿ
ಐನು ಹೊತ್ತಲೇ ಕಿವುಡದು ಒಳಗಿವಿ,
ಹತನಾಗಿದ್ದು ಮುಖ್ಯ ಹಲುಬುವವಗೆ
ಕುಂಜರವೋ ಅಶ್ವತ್ಥಾಮನೇನವಗೆ!


(ಚಿತ್ರ ಕೃಪೆ: ಅಂತರ್ಜಾಲ)

18 comments:

 1. ಭೀಭತ್ಸ, ಕರುಣೆ, ವ್ಯಂಗ್ಯ, ಕಟುಕತನ, ಮತ್ಸರ, ಲೋಭ, ಮೋಹ, ಇತ್ಯಾದಿಗಳನ್ನು ಚೌಕಟ್ಟಾಗಿಸಿ ಕಳೇಬರದಿಂದ ಹೊರಡಿಸಿದ ಈ ಮಾತುಗಳಿಗೆ ಪ್ರತಿಕ್ರಿಯೆಗಾಗಿ ಪದಗಳಿಗಾಗಿ ತಡಕಾಡುವಂತೆ ಮಾಡಿದೆ. ಅದಾವ ಸಂಗತಿ ನಿಮ್ಮ ಈ ರಚನೆಗೆ ಪ್ರೇರಿಸಿತೋ, ಅದು ಒಳ್ಳೆಯ ಸಂಗತಿಯಂತೂ ಇರಲಾರದು!

  ReplyDelete
 2. klistakaravaada hosa shiliya kavana.. arthagarbitavaada saalugalu vividarthagala koduva padagalu nimma anisikeyeno ..!!! avara avara bhaavanege takka uttara sigabahudeno!..

  ReplyDelete
 3. ಸಕಾಲಿಕವಾಗಿದೆ....ವಾಸ್ತವ ಚಿತ್ರಣ

  ReplyDelete
 4. ಎಂಥಾ ಸತ್ಯ! ತುಂಬಾ ಇಷ್ಟವಾಯ್ತು.

  ReplyDelete
 5. ommege arthaisikollalaagade...matte matte...odide. hats off . eshtu chanda kattideeri kavana badari. abhinandanegalu

  ReplyDelete
 6. ಆತ್ಮಹತ್ಯೆಯ ವಿಧಾನಗಳ ಮೊದಲ ಪ್ಯಾರ ಓದುವಾಗಲೆ ಎಂತದೋ ವಿಷಾದ ಮನವನ್ನು ತುಂಬುವುದು ,
  ಕಣ್ಣಿಗೆ ಇದ್ದಂತೆ ಕಿವಿಗೆ ರೆಪ್ಪೆಯಿಲ್ಲ, ಅನುಗಾಲವು ತೆರೆದಿರುವುದು.
  ಅಗತ್ಯವೋ ಅನಗತ್ಯವೋ ಎಲ್ಲ ವಿಷಗಳು ಮನ ಕಲಕುವುದು ,
  ಹಾಗಾಗಿ ಒಳಗಿವಿ ಕಿವುಡೇನೋ
  .
  ನಿಮ್ಮ ಕವನಗಳು ಓದುವಾಗ
  ಮನಸು ತಿಣಕುವಂತೆ ಆಗುವುದು
  ಅರ್ಥಮಾಡಿಕೊಳ್ಲಲು ಒಮ್ಮೆ, ಅರ್ಥವಾದರೆ ಮತ್ತೊಮ್ಮೆ
  ...
  ಪಾರ್ಥಸಾರಥಿ

  ReplyDelete
 7. ಬದರಿ; ನಿಮ್ಮ ಕವನ ನಮ್ಮ ಜೀವನದಂತೆ!!!!! ಒಂದೇ ಸಲಕ್ಕೆ ಅರ್ಥವಾಗುವುದಿಲ್ಲ!!! ಆದರೆ ಕೌತುಕ ಹುಟ್ಟಿಸುತ್ತದೆ.ಯಾವುದೋ ಪದ ಮನಸೆಳೆಯುತ್ತದೆ.ಮತ್ತೆ ಓದುವಂತೆ ಮಾಡುತ್ತದೆ!!!! ಬದುಕೂ
  ಹಾಗೆಯೇ ಅಲ್ಲವೇ !!!? :-)

  ReplyDelete
 8. ಹಣೆಯ ಬರಹ ಕುಲುಕು ಚೀಟಿ ..ಎಷ್ಟೊಂದು ಆಳವಾಗಿದೆ ಈ ವಾಕ್ಯ ! ನಿಜಕ್ಕೂ ಹಣೆಬರಹಗಳ ,ಬರಹವೆ ಒಂದು ಕೌತುಕ , !.. ಕಳೆವರವದ ಭಾವನೆಗಳನ್ನು ನಿಮ್ಮ ಕವನದಲ್ಲಿ ಮಾತಾಡಿಸಿ ಬಿಟ್ಟಿದ್ದೀರಿ , ಅಸಲಿಗೆ ನಿಮ್ಮ ಕವನಗಳು ಒಂದೇ ಗುಕ್ಕಿಗೆ ಅರ್ಥವಾಗುವಂಥದಲ್ಲ ,ನಮ್ಮ ಓದುಗ ಮನಸುಗಳೂ ಮಾಗಬೇಕು ಇದನ್ನು ದಕ್ಕಿಸಿಕೊಳ್ಳಲು ,, ಶರಣು ಬದರಿ ಸರ್ ನಿಮ್ಮ ಕಾವ್ಯ ಪ್ರೌಡಿಮೆಗೆ !

  - ಆರತಿ ಘಟಿಕಾರ್

  ReplyDelete
 9. ಬದರಿನಾಥರೆ,
  ಸಂಕೀರ್ಣವಾದ ಈ ಬದುಕನ್ನು ಸಂಕೀರ್ಣ ಕವನದ ಮೂಲಕ ಸೊಗಸಾಗಿ ವ್ಯಕ್ತಪಡಿಸಿದ್ದೀರಿ.

  ReplyDelete
 10. jeernisalu kashtavaaguvantaha satya.... chennagi barediddeeri. nimma blog vinyasavoo adhbuta vaagide... :-) (Y)

  ReplyDelete
 11. ಇಂದ್ರಿಯಗಳು ತಮ್ಮ ಕರ್ತವ್ಯ ಮರೆತು ಬಿಟ್ಟರೆ

  ಬದರಿಯವರೇ

  ಸಹನಾತೀತ ಬದುಕಿನ ಬವಣೆ . . .

  ನಿಮ್ಮ ಈ ಕವನಕ್ಕೆ ಎರಡನೇ ಬಾರಿ ಬರೆದದ್ದು
  ಮೊದಲಿನದ್ದು ಮಾಯವಾಗಿ ಬಿಟ್ಟಿದೆ ಯಾಕೋ . . .
  ಅತೀ ವಿಶಿಷ್ಟ ಕವನ ನಿಮ್ಮದು

  ReplyDelete
 12. ಇಂದ್ರಿಯಗಳು ತಮ್ಮ ಕರ್ತವ್ಯ ಮರೆತು ಬಿಟ್ಟರೆ

  ಬದರಿಯವರೇ

  ಸಹನಾತೀತ ಬದುಕಿನ ಬವಣೆ . . .

  ನಿಮ್ಮ ಈ ಕವನಕ್ಕೆ ಎರಡನೇ ಬಾರಿ ಬರೆದದ್ದು
  ಮೊದಲಿನದ್ದು ಮಾಯವಾಗಿ ಬಿಟ್ಟಿದೆ ಯಾಕೋ . . .
  ಅತೀ ವಿಶಿಷ್ಟ ಕವನ ನಿಮ್ಮದು

  ReplyDelete
 13. ಇಂದ್ರಿಯಗಳು ತಮ್ಮ ಕರ್ತವ್ಯ ಮರೆತು ಬಿಟ್ಟರೆ

  ಬದರಿಯವರೇ

  ಸಹನಾತೀತ ಬದುಕಿನ ಬವಣೆ . . .

  ನಿಮ್ಮ ಈ ಕವನಕ್ಕೆ ಎರಡನೇ ಬಾರಿ ಬರೆದದ್ದು
  ಮೊದಲಿನದ್ದು ಮಾಯವಾಗಿ ಬಿಟ್ಟಿದೆ ಯಾಕೋ . . .
  ಅತೀ ವಿಶಿಷ್ಟ ಕವನ ನಿಮ್ಮದು

  ReplyDelete
 14. ಇಂದ್ರಿಯಗಳು ತಮ್ಮ ಕರ್ತವ್ಯ ಮರೆತು ಬಿಟ್ಟರೆ

  ಬದರಿಯವರೇ

  ಸಹನಾತೀತ ಬದುಕಿನ ಬವಣೆ . . .

  ನಿಮ್ಮ ಈ ಕವನಕ್ಕೆ ಎರಡನೇ ಬಾರಿ ಬರೆದದ್ದು
  ಮೊದಲಿನದ್ದು ಮಾಯವಾಗಿ ಬಿಟ್ಟಿದೆ ಯಾಕೋ . . .
  ಅತೀ ವಿಶಿಷ್ಟ ಕವನ ನಿಮ್ಮದು

  ReplyDelete
 15. ಹೆಚ್ಚೇನೂ ಹೇಳಲಾರೆ ತುಂಬಾ ಇಷ್ಟವಾಯ್ತು

  ReplyDelete
 16. ಜನನಕೂ ಹಾಡು ಮರಣಕು ಹಾಡು ಲಾಲಿ ಚರಮಗಳು ಎನ್ನುವ ಹಾಗೆ ಹುಟ್ಟು ನಮಗೆ ಗೊತ್ತಿರದ ವಿಷಯ.. ಅಂತ್ಯ ಗೊತ್ತಿದ್ದರೂ ಅರಿವಿಗೆ ಬಾರದ ವಿಷಯ.. ಒಬ್ಬೊಬ್ಬರದು ಒಂದೊಂದು ಬಗೆಯ ವೇದನೆ ರೋಧನೆ ನಿವೇದನೆ..

  ಕಳೆ ಶುರುವಾದಾಗ ಬರಹದ ಅಂತ್ಯ ಆಗಲೇ ಅದಾಗುವುದು ಕಳೆಬರಹ.. ಕಾಳಿನಂತೆ ಜೀವನ.. ಒಂದು ಹುಟ್ಟಿಗೆ ಕಾರಣವಾದರೆ ಇನ್ನೊಂದು ಅಂತ್ಯಗೊಂಡು ಮರು ಹುಟ್ಟಿಗೆ ಜಾಗ ಹುಡುಕುತ್ತಾ ಹೊರಡುತ್ತದೆ

  ವಿಶ್ವವನ್ನೇ ಈ ಕವಿತೆಯಲ್ಲಿ ತುಂಬಿದ್ದೀರಿ ಸೂಪರ್ ಎನ್ನದೆ ಬೇರೆ ಪದಗಳು ನಿಲುಕುತ್ತಿಲ್ಲ

  ReplyDelete