Friday, April 17, 2015

ಸ್ವ ಗೀತ... 3

(ಖಂಡಿತ ಕಡೆಯ ಭಾಗ) ;-)

೬.
ಭೂತಕಾಲದಿ
ಹೂತ ಪಾಪಗಳೆಲ್ಲ ಧಿಗ್ಗನೆದ್ದಂತಾಗಿ
ಬೆಚ್ಚಿದೆ ಸಳಸಳನೆ ಬೆವರಿದೆ ನಡುಗಿ ಹೋದೆ,
ಸಣ್ಣ ತಪ್ಪಿಗೂ ಪಾಪ ಪ್ರಜ್ಞೆಯ ಛಡಿ ಏಟೇ?
ಮಿಸುಕುವಂತಿಲ್ಲ ಸಂಪುಟಗಳು ಭಾರವಿವೆ,
ತಿದ್ದಗೊಡದದು ಬೆನ್ನ ಹಿಂದಲ ಕರಿ ನೆರಳು
ಓಬೀರಾಯನವ ಸದಾ ಬೆಂಬಿಡದ ಭೂತ

ವರ್ತಮಾನವು
ಅಮೃತವೋ ಅದರ ಅಮಲೋ,
ಅಮೃತದ ಹೆಸರೊತ್ತ ಹಾಲಾಹಲವೋ?
ಹೆಂಡಕ್ಕೊಗ್ಗಿದ ಜಿಹ್ವೆ ಯಾಮಾರಿಯಾಗಿದೆ,
ಎಡವೆಂದಾಗ ಬಲ ಮಗ್ಗುಲೆಂದಿದೆ
ಗರಿಗರಿ ಖಾಲಿ ಕಾಗದ ಹರವಲೇ ಇಲ್ಲವದು,
ಕೊಟ್ಟಿದ್ದೊಂದೇ ವಿಧಿ
ಪೂರ್ವ ಮುದ್ರಿತ ತುಂಬ ಬಲ್ಲ ನಮೂನೆ!

ಭವಿತವ್ಯ
ಅಳಿಸು ಶಾಯಿಯಲೊರೆದ ಲಿಪಿಯು
ಬರೆದದ್ದೆಲ್ಲ ಓದಗೊಡದದು ಈಗಲೇನೇ,
ತನ್ನತನ ಜೀತಕಿಟ್ಟು ಒಳಿತನೇ ಒಟ್ಟಿದರೂ
ಕಣಜದೊಡಲು ಬರಿದೇ, ಬಿರಿವಷ್ಟು ಕಾಳೇ
ಇಲ್ಲ ಸಜ್ಜನಿಕೆ ಒಣ ಕಸ ಕಡ್ಡಿ ರಾಶಿಯೇ?
ಉತ್ತರವನು ನಾಳೆಗೆ ಮುಂದೂಡಿದಂತಿದೆ
ಕಾದು ಕಾದೇ ಕರಕಲೆದ್ದಿದೆ ಇಲ್ಲಿ ಈ ಬುಡ
ಮುರಿಯಬೇಡವೋ ನೈತಿಕತೆಯ ನಡ

ಭೂತದಿಂದೆತ್ತಿ ವರ್ತಮಾನದಿ ತೇಲಿಸಿ
ನಾಳೆಯನು ಸಹ್ಯವಾಗಿಸಬಲ್ಲ ಧೀರನವನೆಲ್ಲಿ?

7 comments:

 1. ಬದರಿ ಸರ್ ;ಮ್ಯಾಜಿಕ್ ಮಾಡುವವನ ಖಾಲಿ ಟೋಪಿಯಿಂದ ಬರುವ ಬಣ್ಣ ಬಣ್ಣದ ಗರಿಗಳ ಮಾಲೆಯನ್ನು ಬಾಯಿ ಬಿಟ್ಟುಕೊಂಡು ನೋಡುವ ಮಗುವಿನಂತೆ ಮೂಕವಿಸ್ಮಿತನಾಗಿ ನಿಮ್ಮ ಕವಿತೆಗಳನ್ನುಓದುವ ಖುಷಿ ನನ್ನದು. ಮುಂದುವರೆಯಲಿ ನಿಮ್ಮ ಕವಿತೆಗಳ ಇಂದ್ರಜಾಲ!!!!! :-)

  ReplyDelete
 2. ಅತೀ ಸೂಖ್ಮ ಸಂವೇದನೆಗಳ ಬಟಾ ಬಯಲು. ಅಂತರಂಗದ ಆಳದಿಂದ ಹೊರಹೊಮ್ಮಿದ ಅನುಭವದ ಭಾವನೆಗಳು. ಬಹಳ ಚೆನ್ನಾಗಿವೆ. ಹಲವಾರು ಪ್ರಶ್ನೆಗಳಿಗೆ ಇಂದಿಗೂ ನಮ್ಮಲ್ಲ್ಯಾರಲ್ಲೂ ಉತ್ತರವೇ ಇಲ್ಲ .

  ReplyDelete
 3. ನಿಮ್ಮ ಪ್ರಶ್ನೆಗೆ ಯಾರಲ್ಲೂ ಉತ್ತರವಿಲ್ಲ. ಆದರೂ ಬಸವಣ್ಣನವರು ನುಡಿದ ಮಾತೊಂದು, ಆಶಾಕಿರಣದಂತೆ ಆಗಾಗ ಮಿಂಚುತ್ತದೆ:
  ‘ತಮಂಧ ಘನ ಜ್ಯೋತಿ ಕಿರಿದೆನ್ನಬಹುದೆ?’

  ReplyDelete
 4. ಬದರಿಯವರೇ
  ನಿನ್ನೆ ಇನ್ನೆಲ್ಲಿ
  ನಾಳೆ ಮುಂದಿದೆ
  ಇವತ್ತಿನದು ಮಾತ್ರ ನಮ್ಮದು
  ಅದೂ ಈಗ....
  ಸಹ್ಯವೇ ಅಸಹ್ಯವೇ ನಮ್ಮದೇ .............

  ReplyDelete
 5. ಪ್ರಶ್ನೆಗಳಿಗೆ ಉತ್ತರವನ್ನೂ ನಾನೂ ಹುಡುಕುತ್ತಿದ್ದೇನೆ .
  ಸ್ವಗೀತ ಸರಣಿ ಚೆನ್ನಾಗಿದೆ . ಇಲ್ಲಿ ಹಿರಿಯರು ಹೇಳಿದಂತೆ ಅದು ನಮ್ಮೆಲ್ಲರೂ ಹಾಡೂ ಕೂಡ
  ಹಾಡಿದ ಕವಿಗೆ ಶರಣು

  ReplyDelete
 6. ಕಾವ ದೇವ ಎಂದಿಗೂ ಬೆನ್ನ ಬಿಡುವುದಿಲ್ಲ.. ಸದಾ ಎಚ್ಚರಿಸುತ್ತಲೇ ಇರುತ್ತಾನೆ.. ಆ ಘಂಟೆಯ ನಿನಾದಕ್ಕೆ ಮನಸೋಲದೆ ಜಾಗೃತಿ ಮೂಡಿಸಿಕೊಂಡಾಗ ಜಗವೇ ಒಂದು ಸುಂದರ ಬನ.. ಎವರೆಸ್ಟ್ ಪರ್ವತ ಅಷ್ಟು ಎತ್ತರಕ್ಕೆ ನಿಂತಿರುವುದು ತನ್ನ ಸ್ವ ಸಾಮರ್ಥ್ಯದಿಂದ ಅಲ್ಲ.. ಅದಕ್ಕೆ ನೆರವಾಗಿರುವುದು ಸಣ್ಣ ಪುಟ್ಟ ಗುಡ್ಡಗಳು, ಬೆಟ್ಟಗಳು, ಕಣಿವೆಗಳು, ಹಿಮದ ಹೊದಿಕೆಗಳು. ಹಾಗೆಯೇ ಎಲ್ಲಾ ಜೀವಿಗೂ ಒಂದಲ್ಲ ಒಂದು ಆಸರೆ ಆಶ್ರಯ ಆಶಾಭಾವ ಆ ಕಾಣದ ದೇವ ಕೊಟ್ಟಿರುತ್ತಾನೆ.

  ಹೀಗೆಯೇ ಎಂದು ಕೊಳ್ಳದೆ ಹೀಗೆ ಎಂದು ಇರುವ ಸಂತಸವನ್ನು ಕೊಳ್ಳುತ್ತಾ ಕಾಲ ಹಾಕಬೇಕು

  ಸ್ವಗೀತ ಮುಗಿದದ್ದು ಕುಶಿಯಾಯಿತು... ನಿಮ್ಮ ಕಲಾ ಸರಸ್ವತಿಗೆ ನಮಿಸುತ್ತಾ ನನ್ನ ಬಡಿಗೆಯನ್ನು ಹರಿತ ಮಾಡಿಕೊಂಡಿದ್ದೇನೆ

  ಸೂಪರ್ ಬದರಿ ಸರ್

  ReplyDelete