Thursday, April 16, 2015

ಸ್ವ ಗೀತ... 2


(ಭಾಗ -೨)


೪.
ಸ್ವರ್ಗಾರೋಹಣವಿದೆಯೇ,
ಕೆರೆದೆ ಅಂತರಾತ್ಮವನೊಮ್ಮೆ...ತಟ್ಟನೆಯೆ ಉಸುರಿತದು ತಡವರಿಸದೆಯೇ
ಅಸಂವಿಧಾನ್ವಿಕ ಪದ ಪ್ರಯೋಗವದು ನಿನಗೆ
ತೊಡರ ಬಾರದು ನಾಲಿಗೆಯು ಕೂಸೇ,
ಕೊತಗುಟ್ಟುವ ತೈಲ ಮಜ್ಜನ ಮಗನೇ
ಖಾಯಂಗೊಂಡಿದೆ ನಿನಗೆ ರವರವ ನರಕ!
ಅರೆ ಬೆಂದ ಕವಿ ಜನುಮಕದು ಜುಲ್ಮಾನೆ
ಕಂಡವರಿಗೆಲ್ಲ ವಾಚಿಸಿದೆ ಪಿಡಿದಿಟ್ಟು ಕವನ
ಚಿಟ್ಟು ಹಿಡಿದವರಿತ್ತ ಹಿಡಿ ಶಾಪಗಳಿವೆ ಲೆಕ್ಕ,
ಗೋಣಿಯಾಳಕು ತಡಕಿದರೂ ಸಿಗಲೊಲ್ಲ
ನಿನ್ನ ಪುಣ್ಯ ಫಲ ಚುಕ್ಕಿ ರೇಷಿಮೆ ಮೊಟ್ಟೆ!


೫.
ಕಳೆವ ಲೆಕ್ಕವೇ ಸುಲಭ ಜೇಬಿಗೂ ಹಗುರ
ಕೂಡುವಿಕೆ ಜೀವ ಶಾಸ್ತ್ರ, ಗಣಿತಕಾದರೆ ಉಂಡೆ,
ಮೆಟ್ಟಡಿ ಹೊಸಕಿದಷ್ಟೂ ಧೂಮಾಸುರರ ಲೆಕ್ಕ
ಸಮ ಪ್ರಾಧಿಕಾರದೊಂದು ವಾಸದ ಜಾಗ,
ಎದೆ ಉರಿತ ಉಸಿರಾಟಕೂ ಬಲು ಕಷ್ಟ ಕಷ್ಟ
ನಿವಾರಣಾರ್ಥ ಗುಳಿಗೆ ಸಿಂಚನ ಮುಲಾಮು,
ಕ್ಯಾಕರಿಸಿ ಉಗಿದುಗಿದು ನೀರಿಳಿಸುವರೆಲ್ಲ
ಕಾಲವಾಗುವೆ ಇನ್ನಾದರೂ ಕಡ್ಡಿ ಗೀರ ಬೇಡ,
ಕೇಳದು ಚಪಲ ಚಿತ್ತ; ನೆಪ ರೈತರ ಪರ
ಬೇಡವೇ ಬೆಳೆಗಾರ ಬ್ಯಾರನ್ನಿನವರ ಉದ್ಧಾರ


ವರ್ಷಾಂತ್ಯಕೆ ತೇಲು ಮತ್ತಲಿ
ಮಡಿಲಲಿ ತಲೆ ಇಟ್ಟು ಮತ್ತದೇ
ಭೀಷ್ಮ ಪ್ರಮಾಣವ ತಟ್ಟು...


೫.
ಮನಗೊಳದ ನೀರದು ಕಡು ಪಾಚಿ ಗಬ್ಬು
ನಾರುತ್ತಿದೆ ಅದರಲ್ಲೇ ಚಿಂತನೆಯ ಮುಳುಗು,
ತಿಳಿಯಾಗದದು ತಿಳಿಯದೆ ತಿಳಿಗೊಳ್ಳದೆ
ಮರಗಟ್ಟಿದೆ ಜ್ಞಾನೇಂದ್ರಿಯಗಳಷ್ಟೂ ಒಮ್ಮೆಗೆ,
ಬುದ್ಧಿ ಮಾತದು ವಾಕರಿಕೆ ಕರ್ಣ ಪಟಲಕೆ
ಬೇಡವೆಂದರೂ ಕಣ್ಣು ಹಾಯುತ್ತೆ ಬೇಡದ ಕಡೆಗೆ
ನಾಲಗೆ ದೇಸಿ ಒಗ್ಗದು ಬಯಸುತ್ತೆ ಬೆಂದ ತೊಡೆ
ಪರಿಮಳ ಮೂಸಲದು ತಿಪ್ಪೆ ಗುಂಡಿಯ ಕಡೆಗೆ,
ಆಯ್ಕೆಗಳೇ ನಿಷಿದ್ಧ ಬಡವನ ಪಾಲಿಗೆ 

ಮತ್ತೂ ಒಡ್ಡುತ್ತೀಯ ಕಚ್ಚೆ ಭದ್ರತೆಗೆ ಪರೀಕ್ಷೆ
ಭಗವಾನ್ ಯಾಕಿನಿತಪ್ಪ ಮೇನಕೆಯರ ಕಾಟ?
ಕುಳಿತರೆ ಧ್ಯಾನಕೆ ನೀನೊಬ್ಬನೇ ಕಾಣೆ ಮನದಿ!

7 comments:

 1. ಮನಗೊಳದ ನೀರದು ಕಡು ಪಾಚಿ ಗಬ್ಬು
  ನಾರುತ್ತಿದೆ ಅದರಲ್ಲೇ ಚಿಂತನೆಯ ಮುಳುಗು, Superb Lines Badri Sir.

  ReplyDelete
 2. ಬದರೀಜಿ ; ನಿಮ್ಮ ಸ್ವಗೀತ ಪ್ರತಿಯೊಬ್ಬರ ಆತ್ಮ ವಿಮರ್ಶಾ ಗೀತೆ !!!!! ಅದನ್ನೆಲ್ಲಾ ತೊಳೆಯಲು ಅವನೇ ದಾರಿಗಾಣಿಸಬೇಕು !!!! :-)

  ReplyDelete
 3. chintane inda gnana no.. gnana dinda chintayeno!... ottinalli Gabbu kattide Mana.. tiliyaguvudendu!.. sundaravagide.

  ReplyDelete
 4. ಈ ಕವನವೂ ಪ್ರತಿಯೊಬ್ಬನ ಆತ್ಮಗೀತೆಯೇ ಆಗಿದೆ!

  ReplyDelete
 5. ಆತ್ಮಾವಲೋಕನ ಚೆನ್ನಿದೆ...
  ನಡುಗಡ್ಡೆ ಬೇಕು ಪ್ರತಿಯೊಬ್ಬರಿಗೂ
  ನಿಂತ ನೀರ ಕಲಕದೇ ಒಳಗ ಕಾಣಲು

  ReplyDelete
 6. "ಬಾಳಿಗೊಂದು ಎಲ್ಲೇ ಎಲ್ಲಿದೆ ನಿನ್ನಾಸೆಗೆಲ್ಲಿ ಕೊನೆಯಿದೆ ಏಕೆ ಕನಸು ಕಾಣುವೆ ನಿಧಾನಿಸು ನಿಧಾನಿಸು" ಪ್ರೇಮದ ಕಾಣಿಕೆಯಲ್ಲಿ ತಮ್ಮ ಅಭಿಮಾನಿಗಳಿಗೆ ಅಣ್ಣಾವ್ರು ಕೊಟ್ಟ ಹಿತವಚನ.

  ಈ ಬಾಳು ಒಂದು ವರ.. ದೇವರು ಕೊಟ್ಟ ವರ. ಅದನ್ನು ನಿಧಾನವಾಗಿ, ಆ ದೇವನ ಕರುಣೆಯ ಬಲದಿಂದ ಉತ್ತು ಬಿತ್ತು ಬೆಳೆಯಬೇಕು ಸುವರ್ಣ ಪುಷ್ಪವನ್ನು. ಅದರ ಬದಲು ಹೊರಳು ಹಾದಿಗೆ ಇಳಿದಾಗ ಧೋತರವು ಕೂಡ ಕೆಸರಿನ ಕಲೆಯಿಂದ ಮುಕ್ತಿಯಾಗದು. ನರಕ ಸ್ವರ್ಗ ಎಲ್ಲಾ ಇಲ್ಲೇ.

  ತಮಗೆ ಅರಿತದ್ದು ಅರಿವಿಗೆ ಬಂದದ್ದು ಮಿಕ್ಕ ಹಂಚುವ ಸುಂದರ ಮನಸ್ಸು ಈ ಕವಿಗೆ ಇರುವುದರಿಂದ ಸ್ವರ್ಗ ನರಕದ ಬಗ್ಗೆ ಚರ್ಚೆಗಿಂತ ಸ್ನೇಹಲೋಕದ ಸಗ್ಗದಲ್ಲಿಯೇ ಸದಾ ಇರಿ.

  ಸುಂದರ ಬದರಿ ಸರ್

  ReplyDelete