Sunday, March 29, 2015

ಸೂತ್ರವಿರದ ಸಾಲುಗಳು...

ತಿಕ್ಕಿಯೇ ತಿಕ್ಕಿದೆ ಬರಲಿಲ್ಲ
ಒಂದಕ್ಷರವೂ,
ಮೈಮರೆವಲುಜ್ಜಿದೆ ಮೈ
ದೀಪವಾಗಿರಲಿಲ್ಲ,
ಅಡವಿಟ್ಟಿದ್ದಾನೆಲ್ಲೋ ಕಳ್ಳ
ಅಲ್ಲಾವುದ್ಧೀನ!

ಉದ್ದಕ್ಕೂ ಹೊಯ್ದಾಟ ಜಂಜಾಟ
ತಲೆ ಕಾಯ್ದುಕೊಳ್ಳಲು ಪರದಾಟ,
ಗಣಕ ಸಂಯೋಜಿತವಲ್ಲ ಬಾಳ್ಮೆ
ಆರಿಸಿ ಜೋಡಿಸೋ ಅಚ್ಚುಮೊಳೆ
ಸುಲಭವಲ್ಲದ ತಿದ್ದು ಚೌಕಟ್ಟಿನಾಚೆ

ಆಯ್ದ ಗುರುವೋ ನಕಲೀ ನಕ್ಷತ್ರ
ಮಾದರಿಗಳವು ರಾವಣ ಪ್ರತಿಮೆ
ಗೂಗಲಾಯ್ದರೆ ದೆಂಡಿ ಪ್ರೇಮ ಪತ್ರ!
ಜಾಣ ಕುರುಡೇ ಅವಿವೇಕಿಗಳಿಗೆ
ಹೆತ್ತವರ ಮೂಕೆತ್ತು ಉಳುಮೆ?

ಮೂಲೋತ್ಪತ್ತಿಯು ಜನ್ಮ ದೆಶೆ
ಬೆಳವಣಿಗೆಯು ಪರಿಸರದ ಕೃಪೆ,
ಸೆಳೆವಂದ ಮೈಮಾಟ ಚಹರೆ
ಗರ್ಭದೊಳಗೇ ತಂತು ನಿರ್ಧಾರ,
ಸ್ವಯಾರ್ಜಿತವೊಂದೇ ಅಹಮು!

ಒರಸು ಕಾಗದವದು ಸಾಕಾಯ್ತು
ಪದ್ಯಕೂ ಮಡಿವಂತಿಕೆ ಬೇಕೇ,
ಸೂತ್ರವಿರಲೇ ಬೇಕೇ ಅದಕೆ?
ಕ್ಷಮೆ ಇರಲಿ ಓದುಗ ದೊರೆಯೇ
ಕವಿ ಮದ್ಯಸ್ತ ತಟ್ಟಾಡುತ್ತೆ ಕವಿತೆ!

25 comments:

 1. ಅಕ್ಷರದೀಪವನ್ನು ಅಲ್ಲಾವುದ್ದೀನ ಅಡಗಿಸಿಟ್ಟಿದ್ದಾನೆಯೇ? ಎಂತಹ ಕಲ್ಪನೆ ನಿಮ್ಮದು.

  ReplyDelete
 2. ಓಹ್! ಜೀವನ ಸತ್ಯವನ್ನು ಇಷ್ಟು ಸರಳವಾಗಿ ವಾಸ್ತವದ ನೆರಳಿನಲ್ಲಿ ಹೇಳಿದ್ದು ಕಂಡಿರಲಿಲ್ಲ. ಮೆಚ್ಚುಗೆಗಳು :)

  ಗಣಕ ಸಂಯೋಜಿತವಲ್ಲ ಬಾಳ್ಮೆ
  ಆರಿಸಿ ಜೋಡಿಸೋ ಅಚ್ಚುಮೊಳೆ

  ReplyDelete
 3. ಸುಂದರ ಕಲ್ಪನೆ . ಹೆಚ್ಚು ಹೆಚ್ಚು ಬರಲಿ

  ReplyDelete
 4. ನಿಮ್ಮ ಕಲ್ಪನೆಗಳ ಮುಟ್ಟುವುದು ನಮಗೆ ಕಷ್ಟ. ಶಿರ್ಶಿಕೆ ಹೊಂದುವಂತದ್ದು.

  ReplyDelete
 5. ಅದ್ಭುತವಾಗಿದೆ ಕೆಲವೊಮ್ಮೆ ತಿಕ್ಕುವುದಷ್ಟೇ ಕೆಲಸ ಆದರೇ,ಫಲಿತಾಂಶ ಶೂನ್ಯ :-).. ಚಂದದ ಕವಿತೆ

  ReplyDelete
 6. Ishtavaaythu.... kavithe BP Ji :)

  ReplyDelete
 7. ಇಷ್ಟವಾಯಿತು ಎಂದಷ್ಟೇ ಹೇಳಲು ಶಕ್ತ...

  ReplyDelete
 8. ಗದ್ಯವೋ, ಪದ್ಯವೋ, ಅದು ಹೃದ್ಯವಾಗಿದ್ದರೆ ಮಿಕ್ಕಿದ್ದೆಲ್ಲಾ ಗೌಣ! ಸುಂದರ ಅಭಿವ್ಯಕ್ತಿಗೆ ಮನದಾಳದ ಅಭಿನಂದನೆಗಳು.

  ReplyDelete
 9. ಅಲ್ಲಾದ್ದೀನನ ದೀಪ ನಿಮ್ಮದು ಅದಕ್ಕೆ ತಿಕ್ತಾ ಇದ್ದೀರಿ
  ಬರ್ತಾನೆ ಇವೆ ಕವಿತೆಗಳು.
  ಗಣಕ ಸಂಯೋಜಿತವಲ್ಲ ಬಾಳ್ಮೆ, ಸ್ವಯಾರ್ಜಿತವೊಂದೇ ಅಹಮು... ಇಷ್ಟ ಆಯ್ತು.

  ReplyDelete
 10. ಆಲ್ಲಾದ್ದೀನನ ಅಕ್ಷರ ದೀಪವೋ ದ್ರುಪದ ಪುತ್ರಿಯ ಅಕ್ಷಯ ಪಾತ್ರೆಯೋ,
  ದೇವರಾಕ್ಷಸರ ಮಥನ ಕ್ರಿಯೆಯೋ ಹೊರಬರುತ್ತಿರಲಿ ಕವನಗಳ ಜಾತ್ರೆ,
  ಕಡೆಗೊಮ್ಮೆ ಕಾಯುತ್ತಿರುವೆವು ಅಮೃತದ ಪಾತ್ರೆ

  ReplyDelete
 11. ಚೆನ್ನಾಗಿದೆ ಸರ್, ಸುಂದರ ಕಲ್ಪನೆ.

  ReplyDelete
 12. ಅಲ್ಲಾಉದ್ದೀನನ ದೀಪಕ್ಕೆ ಹೊಸದೊ೦ದು ಸವಾಲು! ಅಕ್ಷರ ಬಿಡದೆ ವಿಧಿ ಇಲ್ಲ ಅವನಿಗೆ!ಚೆನ್ನಾಗಿದೆ ಸರ್!!

  ReplyDelete
 13. ಈಗಿನ ಪ್ರಸಂಗ ಅಲ್ಲಾವುದ್ದೀನನ ದೀಪದ ಜಿನಿಯಿಂದಲೂ ಸರಿ ಪಡಿಸಲಾಗದ
  ನಾಯಿ ಬಾಲದಂತಿದೆ
  ನಮ್ಮ ರಂಗದ ಪ್ರಸಂಗವ ಪೂರೈಸುವದೊಂದೇ ನಮ್ಮ ಧರ್ಮ
  ಖುಷಿಯಾಯ್ತು ಬದರಿಯವರೇ

  ReplyDelete
 14. ಮತ್ತೊಮ್ಮೆ ಅದ್ಭುತ ಪ್ರತಿಮೆಗಳು...ಚಂದ ಕವಿತೆ..

  ReplyDelete
 15. ಬದರೀಜಿ :ಮತ್ತೊಂದು ಅದ್ಭುತ ಕವಿತೆ!!!! ನಿಮ್ಮ ಕವಿತೆಗಳೇ ನಮಗೆ ಅಲ್ಲಾದ್ದೀನನ ದೀಪದ ಹಾಗೆ!!!! ಯಾವುದೋ ಮಾಯಾ ಲೋಕಕ್ಕೆ ಕರೆದೊಯ್ಯುತ್ತವೆ!!!! ತಾವು ಹೀಗೇ ಬರೆಯುತ್ತಿರಿ. ಓದುವ ಖುಷಿ ನಮಗಿರಲಿ!!!!

  ReplyDelete
 16. ಬದರಿನಾಥರೆ,
  ನೀವು ಕಾವ್ಯದೀಪವನ್ನು ತಿಕ್ಕದಿದ್ದರೆ ಮಾತ್ರ, ಈ ಓದುಗನು ನಿಮ್ಮನ್ನು ಕ್ಷಮಿಸುವದಿಲ್ಲ! ನಮಗೆ ನಿಮ್ಮ ಅದ್ಭುತ ಕವನಗಳು ಬೇಕೇ ಬೇಕು.

  ReplyDelete
 17. ಒಂದು ಅದ್ಭುತವಾದ ಕಲ್ಪನಾಯುಕ್ತ ಕಾವ್ಯ. ಇಂತಹ ಕಾವ್ಯಗಳ ಧಾರೆ ತಮ್ಮಿಂದ ಮತ್ತಷ್ಟು ಮಗದಷ್ಟು ಹರಿದು ಬರಲೀ.

  ReplyDelete
 18. ಅಕ್ಷರದೀಪವನ್ನು ಅಲ್ಲಾವುದ್ದೀನ ಅಡಗಿಸಿಟ್ಟಿದ್ದಾನೆ, ಇರುವುದು ನಕಲೀ ದೀಪ, ನಕಲೀ ಗುರುಗಳು. ಉಜ್ಜಿದರೆ ಅಕ್ಷರವೆಲ್ಲಿ ಬಂದೀತು... ಅಕ್ಷರವು ಹಿಡಿದಿಡುವ ಕಾವ್ಯದ ಪ್ರತಿಮೆಯಾಗಿ ಸ್ವಯಂ ಅಕ್ಷರವನ್ನೇ ಬಳಸಿಕೊಂಡ ಪ್ರತಿಭೆ ಮನಕ್ಕೆ ಮೆಚ್ಚಾಯಿತು. ದೀಪದಂತೆ ಬಳಸಲೆತ್ನಿಸುವ ಮೈ, ನಕಲೀ ನಕ್ಷತ್ರ, ರಾವಣಪ್ರತಿಮೆ, ಒರಸುಕಾಗದ ಇತ್ಯಾದಿಗಳು ಹಣ್ಣನ್ನು ಬಿಸುಟು ಸಿಪ್ಪೆಯನ್ನೇ ಹಣ್ಣೆಂದು ಬಗೆಯುವ ಕವಿಗುರುಡನೊಬ್ಬನ ಸ್ಥಿತಿಯನ್ನು ಸೊಗಸಾಗಿ ಕಟ್ಟಿಕೊಡುತ್ತವೆ. ಸೊಗಸಾದ ಕವನ ಬದರೀ, ಕಾವ್ಯದ ಬಗ್ಗೆ ನಿಮ್ಮ ಒಳನೋಟ ಬದಲಾಗುತ್ತಿರುವಂತಿದೆ :)

  ReplyDelete
 19. ಗಣಕ ಸಂಯೋಜಿತವಲ್ಲ ಬಾಳ್ಮೆ - ನಮಗೆ ಬೇಕಾದಾಗ ಎಡಿಟ್, ಡಿಲಿಟ್ ಮಾಡಿಕೊಳ್ಳಲಾಗದು ನಮ್ಮ ಬಾಳ್ಮೆ. ನಿಮ್ಮ ಮಾತು ನೂರಕ್ಕೆ ನೂರು ಸತ್ಯ. ಚೆಂದದ ಕವನ ಸರ್ ಧನ್ಯವಾದಗಳು. ಕ್ಷಮೆ ಇರಲಿ ತಡವಾಗಿ ಓದುತ್ತಿರುವುದಕ್ಕೆ.

  ReplyDelete
 20. ಮೂಲೋತ್ಪತ್ತಿಯು ಜನ್ಮ ದೆಶೆ
  ಬೆಳವಣಿಗೆಯು ಪರಿಸರದ ಕೃಪೆ,
  ಸೆಳೆವಂದ ಮೈಮಾಟ ಚಹರೆ
  ಗರ್ಭದೊಳಗೇ ತಂತು ನಿರ್ಧಾರ,
  ಸ್ವಯಾರ್ಜಿತವೊಂದೇ ಅಹಮು!


  ಎಂತಹಾ ಅದ್ಭುತ ಸಾಲುಗಳು ಸಾರ್‍ :)
  ಒಂದೊಂದು ಸಾಲೂ ಮುತ್ತು...

  ReplyDelete
 21. ಗಣಕ ಸಂಯೋಜಿತವಲ್ಲ ಬಾಳ್ಮೆ
  ಆರಿಸಿ ಜೋಡಿಸೋ ಅಚ್ಚುಮೊಳೆ
  ಎಂತಹ ಅದ್ಬುತ ಸಾಲುಗಳು ಸರ್...
  ನಿಜ ಸರ್.... ಜೀವನ ಅನ್ನೋದು ಅಚ್ಚು ಮೊಳೆಗಳ ರಾಶಿ.. ನಾವು ಒಳ್ಳೆಯದನ್ನ ಆರಿಸಿಕೊಂಡ್ರೆ ಒಳ್ಳೆಯ ಪದಗಳ ಜೋಡಣೆ ಆಗುತ್ತೆ.. ಜೀವನ ಸುಂದರವಾಗುತ್ತೆ...
  ನಿಮ್ಮ ಕವನದ ಹಾಗೆ.... :-)

  ತುಂಬಾ ಖುಷಿಕೊಟ್ಟ ಕವನ ಸರ್....
  ಹೀಗೆ ನಿಮ್ಮ ಪೆನ್ ಎಂಬ "ಅಲ್ಲವುದ್ದೀನನ ದೀಪವನ್ನ" ಕಾಗದದ ಕೈಗಳ ಮೇಲೆ ಉಜ್ಜುತ್ತಾ ಇರಿ ಸರ್... ಮತ್ತಷ್ಟು... ಮಗದಷ್ಟು ಕವನಗಳು ಜೀವನ ಪೂರ್ತಿ ಪ್ರತ್ಯಕ್ಷ ಆಗ್ತಿರುತ್ವೆ...

  ReplyDelete
 22. Nijakkuu ondondu aksharavu deepave aagide sir.,adbhuta Kavana., hosa kalpanegala saakshaatkaara..!!!

  ReplyDelete
 23. ವಾಹ್ ವಾಹ ಬದರಿ ಭಾಯ್...ಸೂಪರ್...ನನ್ನ ಕಟ್ಟಿದ್ದು ಈ ಸಾಲುಗಳು: ಆಯ್ದ ಗುರುವೋ ನಕಲೀ ನಕ್ಷತ್ರ
  ಮಾದರಿಗಳವು ರಾವಣ ಪ್ರತಿಮೆ. ಗುರುವು ಅದೂ ನಾವೇ ಆರಿಸಿದ ಗುರುವು ನಕಲಿ ಆದರೆ,,,!!! ಎಂತಹ ಆತ್ಮಹತ್ಯೆ ಅಲ್ಲವೇ,,,?? ರಾವಣ ಪ್ರತಿಮೆಗಳು ಮಾದರಿ ಯಾಗುತ್ತಿರುವುದಂತೂ ನಿಜ ..ರಾಮ,ಗಾಂಧಿಯರಿಗಿದು ಕಾಲವಲ್ಲ.. ರಾವಣ ಗೋಡ್ಸೆಗಳ ರಾಜ್ಯ,,,

  ReplyDelete
 24. ಗಾಳಿಪಟಕ್ಕೆ ಸೂತ್ರವಿರಬೇಕು
  ಜೀವನದ ಪಟಕ್ಕು ಸೂತ್ರವಿರಬೇಕು
  ಆದರೆ ತರಗೆಲೆಯಂಥಹ ಜೀವನ ಕೆಲವೊಮ್ಮೆ ಸೂತ್ರ ಬೇಡವೆನ್ನುತ್ತದೆ
  ಸಿಕ್ಕ ಗಾಳಿಯಲ್ಲಿ ತೂರಿಕೊಂಡು ಬದುಕುವ ಛಲ ತೋರಿಸುತ್ತದೆ
  ಎಂಥಹ ಸಂದೇಶ ಭರಿತ ಕವಿತೆ.. ಮೊದಲ ಓದಿಗೆ ಒಂದು ಅರ್ಥ.. ನಂತರದ ಓದಿಗೆ ಒಳಾರ್ಥ..
  ಓದುತ್ತಾ ಓದುತ್ತಾ ಹೋದ ಹಾಗೆ.. ಮಹಾಭಾರತದ ಹಾಗೆ ಅರ್ಥ ಮಾಡಿಕೊಂಡಷ್ಟು ಅರ್ಥಗಳು ಹೊಮ್ಮುತ್ತವೆ
  ಬದರಿ ಸರ್ ಶರಣು ನಿಮ್ಮ ಪ್ರತಿಭೆಗೆ

  ReplyDelete