Friday, March 13, 2015

ಮಾನವನ ಪವಾಡ...

ಅನ್ನಮಾಚಾರ್ಯರ ಕಲಗಂಟಿ ಕಾಲಕದು
ಮುಳ್ಳುಗಂಟಿಯ ಹಾದಿ, ತರಚು ಗಾಯ!
ದೇವ ಬೆಟ್ಟವೂ ಅದೊಮ್ಮೆ ಬಟಾಬಯಲು

ಏಳು ಬೆಟ್ಟಗಳವು ಬಗ್ಗವು ಬಡಪಟ್ಟಿಗೆ
ಫಲವತ್ತಲ್ಲ ಹೊದ್ದ ಮಣ್ಣದು ಬರಿಯ ಕಲ್ಲು,
ಮಳೆಯೂ ಅಂತಿಲ್ಲದ ರಾಯಲ ಸೀಮೆ
ಅಂತೊಮ್ಮೆ ಕನಿಕರಿಸಿ ಮಳೆ ಹುಯ್ದರೂ
ಕಡಿದಾದ ಬಂಡೆಗಳೆಲ್ಲಿ ಹೀರುವವು ನೀರು?

ಕೈಕಟ್ಟಿ ಕೂರಲಿಲ್ಲ ಭಕ್ತ ಜನ ಕೈಲಾಗದಂತೆ,
ದಶಕಗಳೇ ಉತ್ತರು ಹದ ಮಾಡಿ ನೆಟ್ಟರು
ಏರು ಗಿರಿಯಗುಂಟ ಏರಿ ಹೊತ್ತು ಕೊಡಪಾನ
ಹನಿಸಿ ಬೆವರಿಳಿಸಿ ಕಳೆ ಕಾಯ್ದು ಒಣ ಮುರಿದು
ಹಸಿಗೂಸಂತೆ ಸಸಿಗಳನಪ್ಪಿ ಪೊರೆದರು

ಶ್ರಮದಾನ ಸುಳ್ಳಾಗದು ಕಲಿಗಾಲದಲ್ಲೂ
ಗಿರಿಯ ಇಂಚಿಂಚಗೆದು ಕೂರಿಸಿದ ಸಸಿಗಳವು
ಇಂತಿಷ್ಟೆ ಚಿಗುರಿದ ಗಿಡಗಳೂ ಮರವಾದವು
ಸೆಳೆದವವು ಪುಂಡು ಮೋಡಗಳ ಮುದ್ದಿಸಿ
ಮಳೆಗಾಲಕದು ಸಪ್ತಗಿರಿಗೆ ಕುಂಭ ವೃಷ್ಟಿ

ಹರಿವನೂ ಅಡ್ಡಗಟ್ಟಿ ಇಂಗಿಸಿ ಜೀವ ಜಲ
ಉಳಿದ ಕಾಲಕೂ ಕಾಪಿಟ್ಟು ಉಳಿಸಿದರು
ಹಸಿರು ಹೊದೆಯಿತು ಬೆಂಗಾಡ ಕಾಡು,
ಮಿಕ್ಕೂ ತಪ್ಪಿಸಿಕೊಂಡವಷ್ಟೂ ಒಗ್ಗೂಡಿ
ಮಲೆ ತಾಯಿ ಸುತ್ತ ಕೆರೆ ಕಟ್ಟೆ ಮಕ್ಕಳು

ಸಾಕು ಸಂತತಿ ಸೊರಗಿ, ಕಾಡ್ಗಿಚ್ಚು ಹಬ್ಬಿ
ಸೊರಗಿ ಹೋದರೂ ಬೇಸಿಗೆಯ ಝಳಕೆ,
ಮಳೆ ಕಮ್ಮಿ ಕೇಳು ತಳಿಗಳನೆಲ್ಲ ಹುಡುಕಿ
ಮರಳಿ ಅಲ್ಲಲ್ಲೇ ಗುಣಿ ಅಗೆದು ಸಸಿ ಇಳಿಸಿ
ಮತ್ತದೇ ಆರೈಕೆ ಗೊಣಗದೆಯೇ ಇನಿತೂ

ನಳ ನಳಿಸೋ ಸಪ್ತಗಿರಿ ಮೇಲವನು
ಅಖಿಲಾಂಡ ಕೋಟಿ ಬ್ರಹ್ಮಾಂಡ ನಾಯಕ
ಮಾನವನ ಆರೈಕೆಯಲ್ಲವನ ಭೂದೇವಿ,
ಸೊಪ್ಪು ಸೆದೆ ಪುಷ್ಕಳ ಹುಲ್ಲು ಮೆದೆ ಮೆಂದು
ಹಿಂಡು ಜಿಂಕೆಗಳ ಸಂತತಿಯೂ ಅಗಣಿತ

ಭಕ್ತ ಗಾಯಕರ ಕೊರಳಲಿಂದದು ಆರ್ಧ್ರ
ಅದಿವೋ ಅಲ್ಲದಿವೋ ಶ್ರೀಹರಿವಾಸಮು..

(ಚಿತ್ರ ಕೃಪೆ: ಗೂಗಲ್)

25 comments:

 1. ಸೆಳೆದವವು ಪುಂಡು ಮೋಡಗಳ ಮುದ್ದಿಸಿ
  ಮಳೆಗಾಲಕದು ಸಪ್ತಗಿರಿಗೆ ಕುಂಭ ವೃಷ್ಟಿ

  ಆಹಾ!!!! ಇವು ಅದ್ಭುತ ಸಾಲುಗಳು ಬದರೀ. ಕೇವಲ ಬದರಿ ವರ್ಣಿಸಬಹುದು ವರ್ಣನಾತೀತವನು.
  ನಿಮಗೆ ಶುಭವಾಗಲಿ . ఆ ఏడుకొండలవాని దయ మీ పైన ఎప్పుడూ , ఎల్లప్పుడూ ఉందని

  ReplyDelete
 2. ಹಸಿರನುಡುವಳು ಅಮ್ಮ ಹರುಷದಲ್ಲಿ ಎಂಬ ಕವಿವಾಣಿಯಂತೆ ಬೆಟ್ಟ ಕೊರೆದು ದಾರಿ ಮಾಡಿ,ಅಂದು ನೆಟ್ಟ ಗಿಡಗಳು
  ಆಳೆತ್ತರವಾಗಿ ಮಳೆಗೂ ಅಭಾವವಾಗದೆ ಕಂಗೊಳಿಸುತ್ತಿರುವ,ಸಪ್ತಗಿರಿಗಳು,ಸಪ್ತಗಿರೀಶನಿಗೆ ದಾಸರಪದಗಳ
  ನಾಮಾಮೃತ .ಭೂವೈಕುಂಠದ ವರ್ಣನೆ ಅದ್ಭುತವಾಗಿ ಮೂಡಿಬಂದಿದೆ ಬದರಿಯವರೆ.ಹೀಗೇ ಬರಲಿ..

  ReplyDelete
 3. ತಿರುಮಲಗಿರಿಯ ವರ್ಣನೆ ತಮ್ಮದೇ ಆದ ಸ್ಟೈಲ್ ಅಲ್ಲಿ ಚೆನ್ನಾಗಿ ಮೂಡಿ ಬಂದಿದೆ.

  ನಳ ನಳಿಸೋ ಸಪ್ತಗಿರಿ ಮೇಲವನು
  ಅಖಿಲಾಂಡ ಕೋಟಿ ಬ್ರಹ್ಮಾಂಡ ನಾಯಕ
  ಮಾನವನ ಆರೈಕೆಯಲ್ಲವನ ಭೂದೇವಿ,
  ಸೊಪ್ಪು ಸೆದೆ ಪುಷ್ಕಳ ಹುಲ್ಲು ಮೆದೆ ಮೆಂದು
  ಹಿಂಡು ಜಿಂಕೆಗಳ ಸಂತತಿಯೂ ಅಗಣಿತ

  ನನಗಿಷ್ಟವಾದ ಸಾಲುಗಳು........

  ReplyDelete
 4. ತುಂಬಾ ಇಷ್ಟ ಆಯ್ತು...
  ಶ್ರಮದಾನ ಸುಳ್ಳಾಗದು ಕಲಿಗಾಲದಲ್ಲೂ... I believe if we put an effort by heart one or the other day we would get it back the result....!!!

  ReplyDelete
 5. ದೇವನೊಲುಮೆಯ ನೆರಳಿಗೆ,
  ಮರುಳಾಗೋ ಮನಸಿಗೆ,
  ಮುದಗೊಳಿಸುವ ಸಾಲುಗಳು

  ReplyDelete
 6. ಸಾಲು ಉದಿಸಿ ಗಳಿಸಿ ಪೋಷಿಸಿ ಪೋಣಿಸಿದ ರೀತಿ ಅತೀ ಮಧುರ...

  ReplyDelete
 7. ಶ್ರಮದಾನ ಸುಳ್ಳಾಗದು ಕಲಿಗಾಲದಲ್ಲೂ..
  ಗಿರಿಯ ವರ್ಣನೆ ಸೊಗಸಾಗಿದೆ ಬದರಿ ಸರ್...
  ಮತ್ತಷ್ಟು ಬರಲಿ....

  ReplyDelete
 8. Sandesha talupithu sir. Nanoo neduve chinthaney sasi jana manadalli hagoo belesuve jnana gidagala sutta....eshtey kashta bandaroo bittukade!

  Thank you for the guidance on my pursuit of goal of life. Great write up. Lot of messages conveyed as you meant it to be! :)

  ReplyDelete
 9. ಬದರಿ, ನಿಮ್ಮದೇ ಆದ ವಿಭಿನ್ನ ಶೈಲಿಯಲಿ ಕವನ ಕಟ್ಟುವುದು ನಿಮಗೆ ನಿಮ್ಮತನವನ್ನು ಪ್ರಸಾದಿಸಿದೆ ಎನ್ನುವುದಕ್ಕೆ ಸಪ್ತಗಿರಿವಾಸನ ನೆನೆದು ..ಪ್ರಕೃತಿ ಮಡಿಲ ವರ್ಣನೆಯ ಜೊತೆಗೆ ಪರಿಸರ ಪ್ರೇಮ ಮೆರೆದ ಸಾಲುಗಳು, ಪದ-ಪದಕ್ಕೊಂದು ಮುದಕೊಡುವ ಪರಿ...ವಾಹ್ ತುಂಬಾ ಇಷ್ಟವಾಯಿತು. ಅದರಲ್ಲೂ ಈ ಸಾಲುಗಳು: ನಳ ನಳಿಸೋ ಸಪ್ತಗಿರಿ ಮೇಲವನು
  ಅಖಿಲಾಂಡ ಕೋಟಿ ಬ್ರಹ್ಮಾಂಡ ನಾಯಕ
  ಮಾನವನ ಆರೈಕೆಯಲ್ಲವನ ಭೂದೇವಿ,
  ಸೊಪ್ಪು ಸೆದೆ ಪುಷ್ಕಳ ಹುಲ್ಲು ಮೆದೆ ಮೆಂದು
  ಹಿಂಡು ಜಿಂಕೆಗಳ ಸಂತತಿಯೂ ಅಗಣಿತ

  ReplyDelete
 10. nice sir ! ಸಾಕು ಸಂತತಿ ಸೊರಗಿ, ಕಾಡ್ಗಿಚ್ಚು ಹಬ್ಬಿ
  ಸೊರಗಿ ಹೋದರೂ ಬೇಸಿಗೆಯ ಝಳಕೆ,
  ಮಳೆ ಕಮ್ಮಿ ಕೇಳು ತಳಿಗಳನೆಲ್ಲ ಹುಡುಕಿ
  ಮರಳಿ ಅಲ್ಲಲ್ಲೇ ಗುಣಿ ಅಗೆದು ಸಸಿ ಇಳಿಸಿ
  ಮತ್ತದೇ ಆರೈಕೆ ಗೊಣಗದೆಯೇ ಇನಿತೂ

  ReplyDelete
 11. ಅದ್ಭುತ ಕವಿತೆ ಬದರಿ ಸರ್, ನಮ್ಮ ಅಜ್ಜನವರು ಅಲ್ಲಿಗೆ ನಡೆದುಕೊಂಡೇ ಹೋಗಿದ್ದರಂತೆ, ಆ ಸಮಯದಲ್ಲಿ ಅಲ್ಲಿ ಸುತ್ತ ಮುತ್ತ ಕೇವಲ ಕಾಡು, ನಿಮ್ಮ ವರ್ಣನೆಗೆ ಒಂದು ಸಲ್ಯೂಟ್.

  ReplyDelete
 12. ವಿವರ ಬಂಧ ತುಂಬಾನೇ ಖುಷಿ ಕೊಟ್ಟಿತು
  ಬದರಿಯವರೇ

  ಮನುಷ್ಯನೇ ಮಾಡಿಕೊಂಡ ದೇವರು ಸೃಷ್ಟಿಸಿದ ಮನುಷ್ಯ
  ಕವನ ಇಷ್ಟವಾಯಿತು

  ReplyDelete
 13. ಭಗವಂತನ ಪ್ರೇರಣೆ ಮಾನವನ ಪವಾಡ...ಶ್ರಮದಾನ ಸುಳ್ಳಾಗದು ಕಲಿಗಾಲದಲ್ಲೂ
  ಗಿರಿಯ ಇಂಚಿಂಚಗೆದು ಕೂರಿಸಿದ ಸಸಿಗಳವು
  ಇಂತಿಷ್ಟೆ ಚಿಗುರಿದ ಗಿಡಗಳೂ ಮರವಾದವು
  ಸೆಳೆದವವು ಪುಂಡು ಮೋಡಗಳ ಮುದ್ದಿಸಿ
  ಮಳೆಗಾಲಕದು ಸಪ್ತಗಿರಿಗೆ ಕುಂಭ ವೃಷ್ಟಿ
  ನಳ ನಳಿಸೋ ಸಪ್ತಗಿರಿ ಮೇಲವನು
  ಅಖಿಲಾಂಡ ಕೋಟಿ ಬ್ರಹ್ಮಾಂಡ ನಾಯಕ
  ಮಾನವನ ಆರೈಕೆಯಲ್ಲವನ ಭೂದೇವಿ,
  ಸೊಪ್ಪು ಸೆದೆ ಪುಷ್ಕಳ ಹುಲ್ಲು ಮೆದೆ ಮೆಂದು
  ಹಿಂಡು ಜಿಂಕೆಗಳ ಸಂತತಿಯೂ ಅಗಣಿತ., ತುಂಬಾ ಇಷ್ಟವಾದ ಸಾಲುಗಳು.

  ReplyDelete
 14. ನನಗಿಷ್ಟವಾದ ಸಾಲುಗಳು
  ಮಾನವನ ಆರೈಕೆಯಲ್ಲವನ ಭೂದೇವಿ,
  ಸೊಪ್ಪು ಸೆದೆ ಪುಷ್ಕಳ ಹುಲ್ಲು ಮೆದೆ ಮೆಂದು
  ಹಿಂಡು ಜಿಂಕೆಗಳ ಸಂತತಿಯೂ ಅಗಣಿತ

  ReplyDelete
 15. ವಿಶಿಷ್ಟವಸ್ತುವೊಂದನ್ನು ಕವಿತೆಗೆ ಆರಿಸಿಕೊಂಡು ವಿಶಿಷ್ಟ ಶೈಲಿಯಲ್ಲಿ ಬರೆದಿರುತ್ತೀರಿ. ಅಭಿನಂದನೆಗಳು

  ReplyDelete
 16. ನಿಮ್ಮ ಸಾಹಿತ್ಯಕ್ಕೆ ಗಾಯನ ಜೋಡಿಸಿದರೆ ಅವನೆ ಖುಶಿಯಾಗಿ ಎದ್ದು ಬರಬಹುದೇನೋ.. Awesome

  ReplyDelete
 17. ಸಾಧಕರ ಪ್ರಯತ್ನವನ್ನು ನೋಡುವ, ಮೆಚ್ಚಿಕೊಳ್ಳುವ ಹಾಗೂ ಸಮಂಜಸ ಶೈಲಿಯ ಕವನದಲ್ಲಿ ವ್ಯಾಖ್ಯಾನಿಸುವ ನಿಮ್ಮ ಪ್ರತಿಭೆಗೆ ಶರಣು, ಶರಣು!

  ReplyDelete
 18. ಏಡುಕೊಂಡಲವಾಡ ವೆಂಕಟರಮಣ, ಗೋವಿಂದ ಗೋವಿಂದಾ... ಬೆಟ್ಟ ಹತ್ತಿ, ಸ್ವಾಮಿಯ ದರ್ಶನ ಮಾಡಿದಷ್ಟೇ ಸಂತಸವಾಯ್ತು; ಪ್ರತಿ ಸಾಲುಗಳಲ್ಲಿ ಜೀವನೋತ್ಸಾಹದ ಚಿಲುಮೆಯ ಹರಿಸಿದ್ದಿರಿ.

  ReplyDelete
 19. ವಿಶಿಷ್ಟವಾದ, ವಿಭಿನ್ನವಾದ ಕವನ. ಚೆನ್ನಾಗಿದೆ ಬದರಿ ಅಣ್ಣ

  ReplyDelete
 20. ನಿಮ್ಮೊಳಗಿನ ಕವಿಗೆ ನನ್ನ ಸಲಾಮ್..
  ನಿಜಕ್ಕೂ ಬಲು ಸೊಗಸು !

  ReplyDelete
 21. ಬಹಳ ಚಂದ ಇದೆ ಬದರಿ ತಿರುಪತಿಗೆ ಹೋಗುವ ಆಸೆ ಆಗ್ತಾ ಇದೆ :-)

  ReplyDelete
 22. ಶ್ರಮದಾನ ಸುಳ್ಳಾಗದು ಕಲಿಗಾಲದಲ್ಲೂ

  ನಿಜ!

  ReplyDelete
 23. ಬೇಕೋ ಬೇಡವೋ ಶ್ರೀನಿವಾಸ ಎಲ್ಲರ ಮೆಚ್ಚಿನ ದೇವತೆ.. ಏಳು ಬೆಟ್ಟಗಳ ಒಡೆಯನ ಆ ಹಾದಿ ದುರ್ಗಮವಾಗಿದ್ದರೂ ಮನುಜ ತನ್ನ ಬುದ್ದಿಶಕ್ತಿಯಿಂದ ತನಗೆ ಬೇಕಾದ ಮಾರ್ಗ ಕಂಡುಕೊಂಡ. ಹಿಂದಿನ ಕವಿತೆಯಲ್ಲಿ ಮಾನವನ ದುಷ್ಕೃತ್ಯಗಳ ಬಗ್ಗೆ ಹೇಳಿ ಒಂದು ಯು ಟರ್ನ್ ಹೊಡೆದು ಮನುಜ ಮಾಡಿದ ಕಲ್ಯಾಣ ಗುಣಗಳನ್ನು ಎತ್ತಿ ಹಿಡಿಯುವುದು ನಿಮ್ಮೊಳಗಿನ ಅಧ್ಯಯನಶೀಲ ಮನಸ್ಸನ್ನು ಹೊರಹಾಕುತ್ತದೆ.

  ಸುಂದರ ಪದಗಳನ್ನು ಅರ್ಥಗಳೊಳಗೆ ಕೂರಿಸುವ ನಿಮ್ಮ ಪ್ರತಿಭಾಶಕ್ತಿಗೆ ಗೋವಿಂದ ಗೋವಿಂದಾ ಸೂಪರ್ ಬದರಿ ಸರ್

  ReplyDelete