Wednesday, September 3, 2014

ಊರು... ಗೋಲು...

ಮಹಾ ಕಾವ್ಯಕು ಮೂಲ
ಪುತ್ರ ಕಾಮೇಷ್ಟಿ ಯಾಗ,
ಪಂಚ ಪಾಂಡವರ ಜನನ
ಅದೂ ದೈವ ಪ್ರಯೋಗ

ಸುತ್ತಿ ಅರಳೀ ಮರ, ಹೊತ್ತು ಹರಕೆಯ ಭಾರ
ಗುಡಿ ಗೋಪುರಗಳಿಗೆಲ್ಲ ಅಡ್ಡ ಬಿದ್ದು
ಪಡೆಯ ಬಯಸುವರೆಲ್ಲ ವಂಶಕೊಂದು,
ತಮ್ಮದೇ ರೂಪು ಮೈದಳೆದು ಮಡಿಲಿಲಾಡು
ಕ್ಷಣಕೆ ತುಂಬು ಸಾರ್ಥಕತೆ, ಗೆದ್ದ ಅಹಂ ಭಾವ,
ಪಾಲನೆಯೇ ಸರ್ವತ್ರ ಚಿಂತೆ ಹೆಡೆದವರಿಗೂ
ಅದರ ದೇಹ ಸ್ಥಿತಿ ನಡೆ ನುಡಿ ಓದು ನೆಲೆಗಟ್ಟು
ಜೊತೆಗೆ ತಕ್ಕ ವಯೋಮಾನಕೆ ಗಳತ್ರ ಯೋಗ

ಘಾತುಕರೂ ಇಲ್ಲದಿಲ್ಲ ಭಂಜಕರು ಕುಡಿಗಳಲಿ
ಅನ್ನ ನೀರನೂ ಕಸಿವ ಅಪ್ರಯೋಜಕರು ಹಲವು

ಇಲ್ಲಿ ಹೂಡಿಕೆಗೆ ಇಡಿಗಂಟಿನಾಸೆಯು
ನಾಸ್ತಿ, ಅಂತೆಯೇ
ಕಡೆಗಾಲಕೆ ಒದಗುವ ದೂರಾಲೋಚನೆಯೂ

ಇನ್ನುಳಿದ ಕೆಲವರದು ಹೇಳಿಕೆಗೆ ಸಿಕ್ಕದಳಲು
ಕಾರಣವೇ ಕೊರತೆಯೋ ಇಲ್ಲ ನಿರ್ಧಾರವೇ ಮರುಳೋ
ಮಕ್ಕಳಿರದ ದಂಪತಿಗಳದಂತು ಅವ್ಯಕ್ತ ಪಾಡು,
ಗಟ್ಟಿ ಇರುವಷ್ಟೂ ದಿನಕು ಗಾಲಿ ಸುಭದ್ರ
ಇಳಿ ಸಂಜೆಗೆ ಹೇಗೋ ಊರುಗೋಲು?
ಸೂರು, ಹಿಡಿ ಅನ್ನ, ಖಾಯಿಲೆ ಕಸಾಲೆಗೂ
ಉಳಿಸಿಟ್ಟ ಕಿಗ್ಗಾಣಿ ಸಾಕಾಗಲೊಲ್ಲದೇನೋ
ಬಲು ತುಟ್ಟಿ ದಿನಗಳಿವೆ ತರಹರಿಕೆಗೆ ಮುಂದೆ

ಮೊದಲು ತೀರಿದವರಿಗೆ ಉಳಿದವರ ಕೊಳ್ಳಿ
ನಂತರ ಕಾಡುತ್ತಲ್ಲ ಆ ಒಂಟಿತನ, ಅದುವೇ ಸಾವು!

ಇರುವಿಕೆಯೇ ಬಿಡಿಸಲಾರದ ಕಗ್ಗಂಟಿನ

ಆಸ್ತಿ, ಅಂತೆಯೇ
ಕ್ರೂರ ನಾಳೆಗಳು ಕಾದಿವೆಯೇನೋ ಇವರ ಪಾಲಿಗೆ?
(ಚಿತ್ರ ಕೃಪೆ: ಅಂತರ್ಜಾಲ)

17 comments:

 1. ಪಲವಳ್ಳಿ ಸರ್,,,, ಕಾಡುತ್ತವೆ ಸಾಲುಗಳು ಎಡೆಬಿಡದೆ,,,,, ಅದ್ಯಾವ ಮೌನ ಸಾಗರದಿಂದ ಹಾರಿ ಬಂದವು ಇವು,,,??? ಸುಂದರ ಬರಹ

  ReplyDelete
 2. ಮಕ್ಕಳ ಪಡೆಯದೇ ಸುಖವಿಲ್ಲ
  ಹೊಕ್ಕುಳ ಬಳ್ಳಿ ನಮ್ಮದೇ ಇರಬೇಕೆಂದು
  ಚಿಕ್ಕ ಚಿಕ್ಕ ಆಸೆಯಲ್ಲಿಯೂ ಸ್ವಾರ್ಥ
  ಬಿಕ್ಕಳಿಸುತಿದೆ ಯುಗ ಯುಗಗಳಲ್ಲಿ ---- ಈ ಭಾವ ತುಂಬಾ ಸುಂದರವಾಗಿ ಮೂಡಿ ಬಂದಿದೆ

  ReplyDelete
 3. ಬದರಿ ನೀವು ಪೋಣಿಸಿದ ಶಬ್ದಗಳು, ಸಾಲುಗಳು ಅದರಲ್ಲಡಗಿದ ಅರ್ಥಗಳು..
  ಉಫ್ ಒಟ್ಟಾರೆಯಾಗಿ ಇಡೀ ಕವನ ಆಪೋಶನ ತಗೊಳುತ್ತೆ..

  ReplyDelete
 4. ಬಹಳ ಚನ್ನಾಗಿದೆ ಬದರಿ. ಕವನ ಓದುತ್ತಾ ..ಯಾವ ಸಾಲುಗಳು ಹೆಚ್ಚು ಹಿಡಿಸಿದ್ದು ?? ಗೊಂದಲಕ್ಕೆ ಬಿದ್ದೆ..ಇದಾ ಇದಾ ?? ಮತ್ತೊಮ್ಮೆ ಓದಿದೆ.. ಕಡೆಗೆ ಸಿಕ್ಕ ಸಾಲುಗಳು ...ವಾವ್..ಸರಳ ಸುಂದರ. ಗಾಢ ಅರ್ಥ
  ಮೊದಲು ತೀರಿದವರಿಗೆ ಉಳಿದವರ ಕೊಳ್ಳಿ
  ನಂತರ ಕಾಡುತ್ತಲ್ಲ ಆ ಒಂಟಿತನ, ಅದುವೇ ಸಾವು!

  ReplyDelete
 5. ಕನಸು ಕಟ್ಟಿ , ಆಸೆ ಹೊತ್ತು, ವಾಸ್ತವತೆಯ ಬೆನ್ನನೇರಿ, ಕಡೆಗೂ ನಿತ್ರಾಣವಾಗುವ ಮುದಿವಯಸು, ಹೆತ್ತ ಮನಸು..

  ReplyDelete
 6. ಕನಸು ಕಟ್ಟಿ , ಆಸೆ ಹೊತ್ತು, ವಾಸ್ತವತೆಯ ಬೆನ್ನನೇರಿ, ಕಡೆಗೂ ನಿತ್ರಾಣವಾಗುವ ಮುದಿವಯಸು, ಹೆತ್ತ ಮನಸು..

  ReplyDelete
 7. ಚಂದದ ಕವನ...
  ನಿಮ್ಮ ಶಬ್ಧಗಳ ಮೋಡಿಗೆ ಬೆರಗಾಗಿದ್ದೇನೆ...

  ಆದರೆ..
  ಮಕ್ಕಳಿದ್ದರೆ ಎಲ್ಲವೂ...
  ಮಕ್ಕಳಿಲ್ಲದಿದ್ದರೆ ಒಂಟೀತನ ಎನ್ನುವದನ್ನು ಒಪ್ಪಲಾರೆ..

  ನಮ್ಮ ಮನೆಯ ಬಳಿ ಒಂದು ವೃದ್ಧಾಶ್ರಮವಿದೆ..

  ಅಲ್ಲಿಗೆ ನಿಮ್ಮನ್ನೊಮ್ಮೆ ಕರೆದುಕೊಂಡು ಹೋಗುವೆ...

  ಆ ವೃದ್ಧಾಶ್ರಮದಲ್ಲಿ
  ಕಮರುತ್ತಿರುವ ಕನಸುಗಳ ಬಗೆಗೆ..
  ಅಲ್ಲಿನ ನಿಟ್ಟುಸಿರುಗಳ ಬಗೆಗೆ ಒಂದು ಕವನ ದಯವಿಟ್ಟು ಬರೆಯಿರಿ ಎನ್ನುವದು ನನ್ನ ಪ್ರೀತಿಯ ವಿಜ್ಞಾಪನೆ...

  ಇದ್ದರೂ...
  ಇಲ್ಲದಿದ್ದರೂ...

  ಖುಷಿಪಡುವದು
  ದುಃಖಪಡುವದು
  ಅವರವರ ಮನಸ್ಥಿತಿ.... ಅಲ್ವ?

  ReplyDelete
 8. ಬದರಿನಾಥರೆ,
  ಮತ್ತೊಂದು ಅದ್ಭುತ ಪದಗುಂಫನ!
  ‘ಮಕ್ಕಳಿದ್ದರು ಚಿಂತೆ, ಇಲ್ಲದಿದ್ದರು ಚಿಂತೆ’ ಎನ್ನುವ ದಾಸರ ಪದ ನೆನಪಿಗೆ ಬರುತ್ತದೆ.

  ReplyDelete
 9. ಬದರಿ ಜೀ -
  ಕವನ ಯಾವು ಯಾವುದೋ ಭಾವಗಳ ಕೆದಕಿ ಕಾಡುತ್ತಿದೆ....:(

  ReplyDelete
 10. ನಿಮ್ಮ ಕವಿತೆ ಓದಿ ಭಾವುಕನಾದೆ , ಬಹಳ ಅರ್ಥ ನೀಡುವ ಪದಗಳ ಬಳಕೆ, ಪ್ರತೀ ಪದದಲ್ಲೂ ವಾಸ್ತವತೆಯ ದರ್ಶನ, ಇದು ಪ್ರತಿಯೊಂದು ಕುಟುಂಬದ ಕಥೆಯೂ ಹೌದು, ಈ ಕವಿತೆ ಓದಿದ ಯಾರೇ ಆದರೂ ಒಮ್ಮೆ ಹೌದಲ್ವಾ ಅಂದುಕೊಳ್ಳುತ್ತಾರೆ . ಕವಿತೆಯ ಪ್ರತೀ ಪದವೂ ಇಷ್ಟವಾಗಿದೆ . ನಿಮ್ಮ ಕವಿತೆಯ ಗಾರುಡಿಗೆ ಒಳಗಾದವನು ನಾನು. ಜೈ ಹೊ ಬದರೀ ಸಾರ್.

  ReplyDelete
 11. ಇದು ವಾಸ್ತವವೇ ಆದರೂ ಓದಿದಾಗ ಭಯವಾಯಿತು ಸರ್
  "ಮೊದಲು ತೀರಿದವರಿಗೆ ಉಳಿದವರ ಕೊಳ್ಳಿ
  ನಂತರ ಕಾಡುತ್ತಲ್ಲ ಆ ಒಂಟಿತನ, ಅದುವೇ ಸಾವು!"
  ಈ ಸಾಲುಗಳನ್ನು ಮರೆಯಲು ಸಾಧ್ಯವೇ ಇಲ್ಲ .

  ReplyDelete
 12. ಬಲು ತುಟ್ಟಿ ದಿನಗಳಿವೆ ತರಹರಿಕೆಗೆ ಮುಂದೆ, ಮಾರ್ಮಿಕ , ತುಂಬಾ ಚೆನ್ನಾಗಿದೆ ಬದರಿ ಸರ್. ನಿಮ್ಮ ಕವನ ಅಂದರೆ ಹಲವು ಹೊಸ ಪದಗಳ ಬಂಡಾರ.

  ReplyDelete
 13. ಬದರಿ ಸರ್...ಅಹ್ ಕವನದ ಹುಟ್ಟುವಿಕೆ,ನೈಜತೆ ಅರ್ಥವಾಯಿತು ಅದರ ನಿರೂಪಣೆಯಲ್ಲಿ..ಎಲ್ಲಿ ಪ್ರಾಂಜಲವಾದ ಭಾವವಿರತ್ತೋ ಅದನ್ನು ಬರವಣೆಗೆಯ ಅಚ್ಚಿಗೆ ಹೊಯ್ದಾಗ ಒಪ್ಪವೇ ಅಗಿರುತ್ತದೆ ಅನಿಸ್ತು..ವಸ್ತು ಅದರ ನಿರೂಪಣೆ ತುಂಬಾ ಅರ್ಥಗರ್ಭಿತ ಅನಿಸ್ತು...ಭಾವುಕನನ್ನಾಗಿಸ್ತು...ಧನ್ಯವಾದಗಳು ..
  ಮತ್ತೆ ಕೊನೆಯ ಸಾಲು "ಕ್ರೂರ ನಾಳೆಗಳು ಕಾದಿವೆಯೇನೋ ಇವರ ಪಾಲಿಗೆ"
  ತುಂಬಾ ಇಷ್ಟವಾಯಿತು...ನಾಳೆ ಕಷ್ಟವಿದೆ ಅಂದ್ಕೊಂಡ್ರೆ ಇವತ್ತಿನದು ಸುಖ ಅನ್ನಿಸಬಹುದೇನೋ ಅಲ್ವಾ ?? ಛಂದದ ಸಾಲು...

  ಇನ್ನು ಕವನದ ಆಕೃತಿಯ ಬಗ್ಗೆ ನಂಗೊಂಚೂರು ಬೇರೆ ಥರ ಇರ್ಬೋದಿತ್ತೇನೋ ಅನಿಸ್ತಾ ಇದೆ,ಇನ್ನೂ ಚೂರು ಮಟ್ಟಸವಾಗಿರಬಹುದಿತ್ತೇನೋ,ನೋಡಿ ..ಪ್ರಾಸ ಸಾಲುಗಳು ನನ್ನ ಹುಚ್ಚುತನ ಬಿಡಿ :D :D..
  ಒಟ್ಟಿನಲ್ಲಿ ಧನ್ಯವಾದಗಳು :) :)
  ಬರೀತಾ ಇರಿ :)
  ಧನ್ಯವಾದಗಳು..
  ನಮಸ್ತೆ :)

  ReplyDelete
 14. ಬಸ್ತಿ ಸರ್...
  ಮಕ್ಕಳು ಬೇಕು ಅನ್ನುವುದು ತಾಯಿ - ತಂದೆತನ ದ ಆತ್ಮ ಸುಖ ಅನುಭವಿಸುವ ಉತ್ಕಟತೆ ಇದ್ದರೆ ಅದು ಸ್ವಾರ್ಥ ವಲ್ಲ.... ಆದರೆ ನಮಗೇ ಪುತ್ರನೇ ಬೇಕೆಂಬುದು ಅದಕ್ಕಾಗಿ ಅನಾವಶ್ಯಕ ತಪ್ಪೆಸಗುವವರು ಅಂತ್ಯ ಕಾಲದಲಿ ಕ್ರೂರ ನಾಳೆಗಳ ವಾಸ್ತವದಲ್ಲಿ ಬದುಕದೇ ವಿಧಿಯಿಲ್ಲ ...

  ತುಂಬ ಚಿಂತನೆಗೀಡುವ ಕವನ

  ಚೆನ್ನಾಗಿದೆ

  ReplyDelete
 15. ಕವನ ಬಹಳ ಚೆನ್ನಾಗಿದೆ. ಹೃದಯದಲ್ಲಿ ಎಲ್ಲೋ ಒಂದು ಸೆಲೆ ಚುಚ್ಚಿದಂತೆ ನೋಯುತ್ತದೆ. ಆ ನೋವು ಬ್ರಹ್ಮರಂದ್ರಕ್ಕೇರಿ ಕಣ್ಣುಗಳು ತೇವವಾಗುತ್ತವೆ. ಅನಾಥ ಭಾವ ಜಾಗೃತವಾಗುತ್ತದೆ. ವಯಸ್ಸಾದವರಿಗೆ ಮಾತ್ರ ಅರ್ಥವಾಗುವ ಭಾವ.

  ReplyDelete
 16. ವಾಸ್ತವಕ್ಕೆ ಕನ್ನಡಿ ಹಿಡಿದಿವೆ ನಿಮ್ಮ ಪದಗಳು. ಕವನ ಚೆನ್ನಾಗಿದೆ.

  ReplyDelete
 17. ಕೊಡೆ ಬೇಕೇ ಬೇಕು.. ಮಳೆಗಾಲ ಇರಲಿ ಬೇಸಿಗೆ ಇರಲಿ.. ಶಿರಸ್ಸಿಗೆ ರಕ್ಷಣೆ.
  ಕಾರಣಾಂತರಗಳಿಂದ ಕೊಡೆ ಕೈ ಕೊಟ್ಟಿತು ಎಂದಾಗ.. ಕಡ ತಂದ ಕೊಡೆ.. ಇಲ್ಲವೇ ಕೊಡೆಗೆ ಸಮಾನಾವಾದ ವಸ್ತು
  ಹೀಗೆ ಮನುಜ ಎಂದಿಗೂ ನನ್ನ ಪ್ರಯತ್ನ ಇಲ್ಲಿಗೆ ಮುಗಿಯಿತು ಎಂದು ತಿಳಿಯುವುದಿಲ್ಲ.. ತಿಳಿಯಬಾರದು
  ಇದು ಕೃಷ್ಣ ಹೇಳಿದ ಸಂದೇಶ ಕೂಡ..
  ಇಡಿ ಫಲ ಬಿಡದ ಮರದ ಇಡಿ ತಿರುಳನ್ನು ಅಮೋಘ ಸಂದೇಶವನ್ನು ಕೊಟ್ಟು ಬರೆದ ರೀತಿ ಸೂಪರ್ ಸರ್ಜಿ
  ಕಾಲ ಮಿಂಚೊಲ್ಲ.. ಆದರೆ ಮಿಂಚುವ ಮೊದಲು ಕೊಡೆಯನ್ನು ನಮ್ಮ ವಶ ಮಾಡಿಕೊಳ್ಳಬೇಕು ಎನ್ನುವ ಆಶಯ ನನ್ನದು

  ReplyDelete