Wednesday, June 4, 2014

ಮೂಲತಃ...

ಇಕ್ಕಟ್ಟು ಗರ್ಭ ಗುಡಿ ಅರೆ ಕತ್ತಲಿಗೆ
ಒಗ್ಗಿ ಹೋಗಿದೆ ಪ್ರಭಾ ಮೂಲನ ಕಣ್ಣು,
ಎಲ್ಲೋ ಗವಾಕ್ಷಿಯದು ಇಂತಿಷ್ಟು
ಕೃಪೆ ತೋರಿ ಬೀರಿದರಷ್ಟೇ ಬೆಳಕು

ಹೊರಗೆ ಗರುಡ ಕಂಭಕೆ ಮಾತ್ರ
ಅದಕದರದೇ ಚಿಂತೆ
ಅಸ್ಥಿರವೇಕದು ತನ್ನದೇ ನೆರಳು?

ಪವಿತ್ರ ಪರಮಾತ್ಮನಿಗೂ ಬಿಡದು
ಸೂತಕವು ಶುದ್ಧೀಕರಣದ ರಗಳೆ,
ಪರಮ ಪಾವನೆ ತೊಳೆಯುತ್ತಾಳೆ
ದಿವಿಜ ಮನುಜನ ಪಾಪದ ಕೊಳೆ

ಸ್ಥಾಪಿತ ದೇವರಿಗೂ ಇದೆ ಕಣ್ಗಾವಲು
ಒಳಗೂ ಹೊರ ಕಬ್ಜಾ ಬಟಾ ಬಯಲಿಗೂ,
ಸರ್ವಭಕ್ಷಕರು ಇದ್ದಾರಿಲ್ಲೇ ಆವರಣದಲಿ
ಉಲ್ಟಾ ರಸ ವಿದ್ಯಾ ಪಾರಂಗತರು

ತೊಟ್ಟ ಒಡವೆಯೇ ಇದ್ದೀತು ನಕಲಿ
ಹೇಳಿಕೊಳ್ಳನು ಬಕುತನ ಮುಂದೆ ತಾನೂ,
ಈಡುಗಾಯಿ, ಎಂಟಾಣೆ ಕರ್ಪೂರಕೆಲ್ಲ
ಕೇಳಿದ್ದೆಲ್ಲ ಇನ್ನೆಲ್ಲಿ ಕೊಡಬಲ್ಲ ಅವನೂ

ಯಃಕಶ್ಚಿತ್ ಭಕ್ತನ ಪರಧ್ಯಾನಗಳನೇಕ
ಚಿಂತೆಗಳು ನೂರು ಸರತಿ ಸಾಲು ,
ಹೋದ ಸರ್ತಿ ದೊಪ್ಪೆ ದದ್ಧೋಜನ
ಇಂದಿಗಾದರು ಸಿಕ್ಕೀತೆ ಪೊಂಗಲನ್ನ?
(ಚಿತ್ರ ಕೃಪೆ : ಅಂತರ್ಜಾಲ)

20 comments:

 1. wah! super badari sir..
  ಹೋದ ಸರ್ತಿ ದೊಪ್ಪೆ ದದ್ಧೋಜನ
  ಇಂದಿಗಾದರು ಸಿಕ್ಕೀತೆ ಪೊಂಗಲನ್ನ? punching lins..

  ReplyDelete
 2. ಅವರವರ ಚಿಂತೆ ಅವರವರಿಗೆ. ದೇವನಿಗೂ ಬಿಡದು. ಅಪೇಕ್ಷಿತನಿಗೂ ಕೂಡ.
  "ದೊಪ್ಪೆ ದದ್ಧೋಜನ" ದ ಪ್ರಯೋಗ ಕವಿತೆಗೆ ಬಹಳ ಒತ್ತಾಗಿ ಒಪ್ಪುತ್ತದೆ ... ಚೆನ್ನಾಗಿದೆ

  ReplyDelete
 3. ಅಸಲಿಯೋ... ನಕಲಿಯೋ... ದೇವರಿಗೂ, ಹುಲುಮಾನವರಿಗೂ... ಗೊತ್ತಾಗದಂತೆ ದೇವಸ್ಥಾನದ ದೇವರ ಒಡವೆಗಳಿಗೂ... ಕೈಚಳಕ ತೋರಿಸಿ ಕದಿಯುವ ಅರ್ಚರಿಗೆ ಒಂಚೂರು ಭಯಭಕ್ತಿಯಿಲ್ಲ, ಹೊಟ್ಟೆ ಸವರಿ, ದೇಶಾವರಿ ನಗೆ ಬೀರಿ ಒಂದಿಷ್ಟು ಮಂತ್ರ ಪಠಿಸಿ ಕಳ್ಳಗಂಟು ಕಟ್ಟುವ ಇಂಥಹ ಜನರ ನೋಡಿ ಕಲ್ಲಾಗಿಹ ಆ ದೇವರು.

  ReplyDelete
 4. ದೇವರ, ದೇವಾಲಯದ, ಭಕ್ತರ ಹಾಗು ದೇವಾಲಯದ ಆವರಣದಲ್ಲಿ ನಡೆಯುವ ಪ್ರಸಂಗಗಳ ಮೇಲೆ ಕಟಾಕ್ಷ ವ್ಯಂಗ,
  ಸ್ಥಾಪಿತ ದೇವರಿಗೂ ಇದೆ ಕಣ್ಗಾವಲು
  ಒಳಗೂ ಹೊರ ಕಬ್ಜಾ ಬಟಾ ಬಯಲಿಗೂ,
  ಸರ್ವಭಕ್ಷಕರು ಇದ್ದಾರಿಲ್ಲೇ ಆವರಣದಲಿ
  ಉಲ್ಟಾ ರಸ ವಿದ್ಯಾ ಪಾರಂಗತರು

  ದೇವರ ಒಡವೆ ಹಾಗು ದೇವರ ಮೂರ್ತಿಯನ್ನೇ ಕದ್ದು ಹೋಗುವವರ ಸಂಖ್ಯೆ ಕಡಿಮೆ ಏನಿಲ್ಲ :)

  ಚೆನ್ನಾಗಿದೆ ಬದರಿ ಸರ್.

  ReplyDelete
 5. ನಿಮ್ಮದೇ ಸಾಲುಗಳಲ್ಲಿ ಉತ್ತರ ಅಡಗಿದೆ.. ...'ಸರ್ವಭಕ್ಷಕರು ಇದ್ದಾರಿಲ್ಲೇ ಆವರಣದಲಿ' ಹಾಗಾಗಿಯೇ ಪರಮಾತ್ಮನ ಚಿಂತೆಗಿಂತ 'ಯಃಕಶ್ಚಿತ್ ದದ್ಧೋದನ ಪೊಂಗಲಿನ ಚಿಂತೆ' ......ಕಟುವಾದರೂ ವಾಸ್ತವ ಅದೇ. .....ಪರಧ್ಯಾನದಲಿ ಮುಳುಗಿದವರಿಗೆ ಪರಮಾತ್ಮನ ಧ್ಯಾನ ಸಾಧ್ಯವೇ

  ReplyDelete
 6. ಹೇಳಿಕೊಳ್ಳನು ಬಕುತನ ಮುಂದೆ ತಾನೂ,
  very nice sir...

  ReplyDelete
 7. ಎಲ್ಲರೂ ದೇವರಬಳಿ ತಮ್ಮ ಚಿಂತೆ ವ್ಯಸನ ಹೇಳಿಕೊಳ್ಳುವವರೇ.. ಪಾಪ ಅವನ ಅಳಲನ್ನು ಕೇಳುವವರಾರು..? ಮನುಜರ ಸ್ವಾರ್ಥಕ್ಕಾಗಿ ತಾನೇ ನಕಲಿ ಒಡವೆಯಿಂದ ಅಲಂಕೃತ ಇನ್ನು ಅವರ ಅಮಿಷಗಳಿಗೆ ಸೋಲುವನೇ..? ದರುಶನವಾಗದಿದ್ದರೂ ಪರವಾಗಿಲ್ಲ ನನ್ನ ಮೊರೆ ಭಗವಂತನಿಗೆ ಕೇಳಿದೆ, ಸಧ್ಯ ಒಳ್ಳೆ ರುಚಿಯಾದ ಪ್ರಸಾದ ದೊರೆತರೆ ಸಾಕೆಂಬ ಅಲ್ಪತೃಪ್ತ... ತನ್ನ ಅಹವಾಲನ್ನು ದೇವರ ಬಳಿ ಕೇಳುವುದೇ ಮರೆತ...!!

  ReplyDelete
 8. ನಿಮ್ಮ ಕವನದಲ್ಲಿರುವ ಮೊನಚು, ವ್ಯಂಗ್ಯಗಳು ತಕ್ಷಣವೇ ತಟ್ಟುತ್ತವೆ......!!! Very nice........!!

  ReplyDelete
 9. ಪರಮಾತ್ಮ ನಡುಗಿಹನು ,,,,,

  ReplyDelete
 10. ಬದರಿನಾಥರೆ,
  ಭಕ್ತರಿಗೆ ಪೊಂಗಲ್ಲಿನ ಚಿಂತೆ, ಪೂಜಾರಿಗೆ ದಕ್ಷಿಣೆಯ ಚಿಂತೆ, ದೇವರಿಗೆ ಶುದ್ಧೀಕರಣದ ಚಿಂತೆ! ನೂರು ಚಿಂತೆಗಳನ್ನು ಮಾರು ಕವನದಲ್ಲಿ ಕಟ್ಟಿ ಹಾಕಿದ್ದೀರಿ. ನಿಮಗೆ ಸಲಾಮ್!

  ReplyDelete
 11. ಅವರವರಿಗವರವರದೇ ಚಿಂತೆ... :)

  ReplyDelete
 12. ದೇವರ ಒಡವೆಗಳಿಗೇ ಕುತ್ತು ಬಂದಿರುವ ಈ ಕಾಲದಲ್ಲಿ ದೇವರು ಇನ್ನೇನು ಮಾಡಿಯಾನು..?! ನಮ್ಮಂತೆ ನಕಲಿ ಒದವೆಗಳನ್ನೇ ಹಾಕಿಕೊಳ್ಳಬೇಕಲ್ಲವೇ ....!!

  ReplyDelete
 13. ಇಂದಿಗಾದರೂ ಸಿಕ್ಕೀತೆ ಪೊಂಗಲನ್ನ? (Y)

  ReplyDelete
 14. ಎಲ್ಲ ಸಾಲುಗಳು ತುಂಬಾ ಹಿಡಿಸಿದವು ಸರ್...

  ReplyDelete
 15. ಗರುಡಗಂಬ ಗರ್ಭಗುಡಿಯ ಕತ್ತಲಲ್ಲಿ ನಗುವ ಮೂರುತಿ ಎಲ್ಲವೂ ನಮ್ಮೊಳಗೆ
  ಕವಿಗೆ ಶರಣು

  ReplyDelete
 16. ತೊಟ್ಟ ಒಡವೆಯೇ ಇದ್ದೀತು ನಕಲಿ
  ಹೇಳಿಕೊಳ್ಳನು ಬಕುತನ ಮುಂದೆ ತಾನೂ,
  ಈಡುಗಾಯಿ, ಎಂಟಾಣೆ ಕರ್ಪೂರಕೆಲ್ಲ
  ಕೇಳಿದ್ದೆಲ್ಲ ಇನ್ನೆಲ್ಲಿ ಕೊಡಬಲ್ಲ ಅವನೂ

  ....
  ಇದ್ದೀತು ಶುದ್ದ ಒಡವೆಯ ಕದ್ದು, ಗಿಲೀಟಿನ ಒಡವೆಯ ಮಾಡಿಸಿ ದೇವರಿಗೆ ಹಾಕಿದರೆ,
  ಯಾರು ತಿಳಿಯರು, ದೇವನು ಕೇಳನು, ಹಾಗೆ ಮಾಡಿದವನು
  ಬದುಕಿನ ಕೊನೆಯಲ್ಲಿ ಅವನಿಗೆ ಅವನೇ ಉತ್ತರಿಸಲಾರದ ಪ್ರಶ್ನೆಯಾಗಿಬಿಡುವ.

  ದೇವರನ್ನು ನೋಡಲು ನಿಂತ ಸಾಲಿನಲ್ಲಿ ಒಡವೆ, ಹಣ,ನೆಲದ, ಸುಖದ ಚಿಂತೆಗಳು,
  ಕೆಲವರಿಗಾದರು ಪೊಂಗಲಾನ್ನದ ಚಿಂತೆ !!

  ReplyDelete
 17. ಒಳಗೆ ಕೂತವನಿಗೂ ಅವನದೇ ಕಟ್ಟುಪಾಡು, ಅವನದೇ ಚಿಂತೆ! ಕಿಂಡಿಯಲಿ ಇಣುಕುವ ಕಿಂಚಿತ್ ಕಿರಣದಲೂ ಅವನಿಗೂ ಇವರಿಗೂ ಎಲ್ಲವನೂ 'ಕಾಣುವ' ಆಸೆ, ಚಿಂತೆ!

  ಮೂಲತಃವಾಗಿ ನಿಮ್ಮ ಈ ಕವನದಲಿ ನಾನು ಕಂಡುಕೊಂಡಿದಿಷ್ಟು!

  ReplyDelete
 18. ಒಳಗೆ ಕೂತವನಿಗೂ ಅವನದೇ ಕಟ್ಟುಪಾಡು, ಅವನದೇ ಚಿಂತೆ! ಕಿಂಡಿಯಲಿ ಇಣುಕುವ ಕಿಂಚಿತ್ ಕಿರಣದಲೂ ಅವನಿಗೂ ಇವರಿಗೂ ಎಲ್ಲವನೂ 'ಕಾಣುವ' ಆಸೆ, ಚಿಂತೆ!

  ಮೂಲತಃವಾಗಿ ನಿಮ್ಮ ಈ ಕವನದಲಿ ನಾನು ಕಂಡುಕೊಂಡಿದಿಷ್ಟು!

  ReplyDelete
 19. ಮೂಲ ದೇವರೇ ಮಣ್ಣು ತಿನ್ನುವಾಗ ಮೂಲೆ ದೇವರು ತಂಬಿಟ್ಟು ಕೇಳಿದಂತೆ ಎನ್ನುವ ಗಾದೆಯಂತೆ ದೇವನ ಹೆಸರು ಹೇಳಿ ಅವನ ಮುಂದೆ ನಡೆವುದು ಮಿಕ್ಕೆಲ್ಲಾ.. ಪ್ರತಿ ಘಟನೆಯ ತಿರುಳನ್ನು ಛಂದೋಬದ್ಧವಾಗಿ ಕೂರಿಸಿ ಅದಕ್ಕೆ ಒಂದು ಭಾವದ ಸೂತ್ರ ಕೊಡಿಸಿ.. ನೂರಾರು ಪತ್ರಿಕೆಗಳನ್ನು ಕಾಣುವಂತೆ ಮಾಡುವ ನಿಮ್ಮ ಕವಿ ಮನಸ್ಸಿಗೆ ಒಂದು ಜೈ..

  ನೂರಾರು ವಿಷಯಗಳನ್ನು ಒಡಲಲ್ಲಿ ಸಿಕ್ಕಿಸಿಕೊಂಡು ನಗುತ್ತಾ ಇರುವ ಭಗವಂತನಿಗೆ ನಾಮ ಬಳಿಯುವ ಈ ಹುಲುಮಾನವರ ಹುಚ್ಚಾಟಕ್ಕೆ ಪಗಳಲ್ಲೇ ಚಾಟಿ ಏಟು ಕೊಡುವ ಕಾಯಕ ಇಷ್ಟವಾಯಿತು

  ಸೂಪರ್ ಬದರಿ ಸರ್

  ReplyDelete
 20. ಹನುಮಪ್ಪ ಹಗ್ಗ ಕಡಿಯುತ್ತಿದ್ದರೆ ಪೂಜಾರಿ ಶಾವಿಗೆ ಮೆಲ್ಲುತ್ತಿದ್ದನಂತೆ! ಉತ್ತಮ ವಿಡಂಬನೆ ಬದರೀನಾಥರೇ. ಧನ್ಯವಾದಗಳು.

  ReplyDelete