Wednesday, May 14, 2014

ಪಲ್ಲಂಗ ಚಟ್ಟ...

ಅಪರಾತ್ರಿ ನಿದ್ರೆ ಕೊಡವಿಕೊಂಡು
ನಾನೂ ಆಗಾಗ ಏಳುತ್ತಿರುತ್ತೇನೆ,
ಕಡೆಯ ಜಾವದವರೆಗೂ ಬಿಡದೆ
ಪ್ರಾಣಾಯಾಮದ ಪಟ್ಟುಗಳನೆಲ್ಲ
ಪ್ರಯೋಗಿಸಿ ನೋಡುತ್ತೇನೆ

ನನ್ನ ತಡರಾತ್ರಿ ಸಿದ್ಧಾರ್ಥತತೆಗೆ
ಮಡದಿಹೊಣೆಗಾರಳಲ್ಲವಲ್ಲ,
ಅದಕೆ ಮಿಸುಕಾಡದೆ ಸುಳಿವೀಯದೆ
ಕಳ್ಳನಂತೆ ಎದ್ದು ಬರುತ್ತೇನೆ
ಪಡಖಾನೆಯಿಂದೆದ್ದು ಪಡಸಾಲೆಗೆ

ಹೊರಗೂ ದುಡಿಯುವ ಇವಳು
ವೃತ್ತಿ ನಿರತೆ ಎನ್ನ ಮನದೆನ್ನೆ,
ಹೊರಗೂ ಬೆಂಡೆದ್ದು ಮನೆಯೊಳಗೂ
ಪಟ್ಟಿಗು ನಿಲುಕದಷ್ಟು ಬಂಡಿ ಕೆಲಸ
ನಿದ್ರಿಸಲಿ ಪಾಪ ಎಬ್ಬಿಸಲಿ ಹೇಗೆ?

ಮೂಢನಿವ ಸಂತನೆಂತಾದ!
ಎಂದೇನು ಹುಬ್ಬೇರಿಸದಿರಿ ತಾವೂ
ಇದು ಸ್ವಂತಕ್ಕೆಂದು ಅಗೆದ ಗುಂಡಿ,
ಗುಂಡಿಗೆಯ ಭಯಕೆ ಮೈ ಭಾರ
ಧೂಮಾಸುರನ ಕಿಟ್ಟದ ಕೊಡುಗೆ

ಗುಳಿಗೆ, ದ್ರವ ಸಿಂಚನವೂ ಮತ್ತೆ
ಮೂಗಿಗೆ ಹನಿ ಔಷದೋಪಚಾರ
ಪುಪ್ಪಸಕೆ ಮುತವರ್ಜಿ ಉಪಚಾರ,
ತಟ್ಟನೆ ಸುಳಿಯುತ್ತದೇ ಪಾಪ ಪ್ರಜ್ಞೆ
ಬರಿಗೈ ದಾಸನಾದವಗೆ ಕೊರಗು

ಪ್ರತಿ ರಾತ್ರಿ ನನ್ನೊಳಗೇ ತಾಕಲಾಟ
ಸ್ವಭಯೋತ್ಪಾದನೆಯ ಪೀಕಲಾಟ
ಮತ್ತದೇ ಕಾಡೋ ಜೀವನ್ಮರಣ ಪ್ರಶ್ನೆ,
ಸರಾಗವೇ ಉಸಿರಾಟ ಇಂದೆನಗೆ
ಅಥವಾ ಕಡೆಯ ಇರುಳಿದೇ ಇಹಕೆ?


(ಚಿತ್ರಕೃಪೆ: ಅಂತರ್ಜಾಲ)

39 comments:

 1. ಕವಿತೆ ತುಂಬಾ ಚೆನ್ನಾಗಿ ಮೂಡಿ ಬಂದಿದೆ, ಈ ಕೆಳಗಿನ ಸಾಲುಗಳು ಯಾಕೋ ತುಂಬಾ ಇಷ್ಟವಾಯಿತು,

  ನನ್ನ ತಡರಾತ್ರಿ ಸಿದ್ಧಾರ್ಥತತೆಗೆ
  ಮಡದಿಹೊಣೆಗಾರಳಲ್ಲವಲ್ಲ,
  ಅದಕೆ ಮಿಸುಕಾಡದೆ ಸುಳಿವೀಯದೆ
  ಕಳ್ಳನಂತೆ ಎದ್ದು ಬರುತ್ತೇನೆ
  ಪಡಖಾನೆಯಿಂದೆದ್ದು ಪಡಸಾಲೆಗೆ.....

  ReplyDelete
 2. ಬದರಿ ಸರ್...ದುಗುಡವೇತಕೆ..ಬೊಂಬೆ ಆಡ್ಸೋನು ಮ್ಯಾಲೆ ಕುಂತವ್ನೆ...
  ಸ್ವಭಯೋತ್ಪಾದನೆ
  ಸಿದ್ಧಾರ್ಥತತೆ
  ಪಡಖಾನೆಯಿಂದೆದ್ದು ಪಡಸಾಲೆಗೆ
  ಇಲ್ಲಿನ ಪದಮುತ್ತುಗಳು..
  ಧನ್ಯವಾದ ;)

  ReplyDelete
 3. ದುಶ್ಚಟಗಳ ದಾಸನಾದವನಿಗೆ ಹಗಲಿರುಳೆನ್ನದೆ, ಬೆಂಬಿಡದ ಬೇತಾಳನಂತೆ ಕಾಡುವ ಖಾಯಂ ಖಾಯಿಲೆಗಳಿಂದ ನಿರುಮ್ಮಳವಾಗಿ ಉಸಿರಾಡಲಾಗದೆ ನಿಟ್ಟುಸಿರಿನ ಜಂಜಾಟದಲ್ಲಿ ಸಿಲುಕಿ ; ಅತ್ತ ಸಾಯಲಾಗದೆ ಬದುಕಿರಲಾಗದೆ ಜೀವಂತ ಶವವಾಗಿ ಬದುಕಿನುದ್ದಕ್ಕೂ... ನರಕ ಯಾತನೆಯ ಅನುಭವಿಸುತ, ಸ್ವಯಂಕೃತ ಅಪರಾದಕ್ಕೆ ತಾನೇ... ಬೆಲೆಯ ತೆರಬೇಕಾದ್ದು ಎಂಥಹ ವಿಪರ್ಯಾಸ ...!!! ಚಂದದ ಕವಿತೆ ಕಟ್ಟುವಲ್ಲಿ ನಿಮಗೆ ನೀವೇ ಸರಿ ಸಾಟಿ.

  ReplyDelete
 4. ಇಷ್ಟಪಟ್ಟು ಮೆಲ್ಲುವಾಗ ಇಲ್ಲದಸಿದ್ಧಾ ಸಿದ್ಧತೆ ನಂತರ ಯಾಕೆ

  ಕೆಲೊರಿ ಲೆಕ್ಕಾಚಾರ ಇರಲಿ ತಿನ್ನುವ ಅರಿವಿನಲಿ

  ತುಂಬಾನೇ ಹಿಡಿಸಿತು ಸಿದ್ಧ -ನ ಈ ಕವನ

  ReplyDelete
 5. ಚೆಂದದ ಕವನ ಸಾರ್.. ಚಿನ್ಮಯ್ ಹೇಳಿದಂತೆ ಸ್ವಭಯೋತ್ಪಾದನೆ, ಸಿದ್ಧಾರ್ಥತತೆ, ಪದಗಳು ಮನಸೆಳೆದವು. ದುಶ್ಚಟಗಳಿಂದುಂಟಾದ ಖಾಯಿಲೆಗೆ ನರಳುತ್ತಾ ಇರುಳಿನಲ್ಲಿ ಸಿದ್ಧಾರ್ಥನಾದವನ ಬಗ್ಗೆ ಕವನ ತುಂಬಾ ಚೆನ್ನಾಗಿದೆ ಚಿತ್ರಿಸಿದೆ

  ReplyDelete
 6. ಅನುಭವಗಳ ಉಸಿರಾಟ- ಚೆನ್ನಾಗಿದೆ sir "ಮೂಢನಿವ ಸಂತನೆಂತಾದ" ಏಕೋ ನನ್ನನ್ನು ಚುಚ್ಚುವಂತಿತ್ತು ಆದರೂ ಸೊಗಸಾಗಿದೆ

  ReplyDelete
 7. ಸ್ವಭಯೋತ್ಪಾದನೆಯಲ್ಲಿ ಗೆದ್ದು ಬೀಗಿದರೂ, ಸೋತು ಸೊರಗಿದರೂ ಅಂಥದ್ದೇನೂ ಹೆಗ್ಗಳಿಕೆ ಸಲ್ಲ.
  ಇಲ್ಲಿ ಪಲ್ಲಂಗದ ಪ್ರಸಂಗಗಳು ಪ್ಯಾರ ಪ್ಯಾರದಲ್ಲೂ ಪ್ಯಾರ ಪ್ಯಾರಸ ಮೂಡಿಬಂದಿವೆ :)

  ReplyDelete
 8. Nasal congession ಬಗ್ಗೆ ನಿಜವಾಗಲೂ ತುಂಬ ಚೆನ್ನಾಗಿ ಬಂದಿದೆ... ಒಳ್ಳೆಯ ಪದಪ್ರಯೋಗ ಸರ್... ಪರಿಸರ ಮಾಲಿನ್ಯದ ಪ್ರಭಾವ ಇದೆಲ್ಲಾ..

  ReplyDelete
 9. ಜೀವನ್ಮರಣ ಪ್ರಶ್ನೆ,
  ಸರಾಗವೇ ಉಸಿರಾಟ ಇಂದೆನಗೆ
  ಅಥವಾ ಕಡೆಯ ಇರುಳಿದೇ ಇಹಕೆ?
  ಈ ಸಾಲುಗಳು ಇಡೀ ಕವಿತೆಯ ಸಾರಂಶವನ್ನ ಸಾರಿದೆ... ಉಸಿರಾಟವನ್ನ ಅನುಭವಿಸುವ ಕಲ್ಪನೆ ಅಮೋಘವಾಗಿದೆ ತುಂಬಾ ಚೆನ್ನಾಗಿದೆ ಸರ್

  ReplyDelete
 10. ಓದುತ್ತಾ ಹೋದಂತೆ ಒಂದು ಕಥಾನಕವೇ ಬಿಚ್ಚಿಕೊಳ್ಳುತ್ತದೆ. ಕವಿತೆಯ ಹೆಣಿಗೆ ಅದ್ಭುತವಾಗಿದೆ!

  ReplyDelete
 11. ಚಂದ ಇದೆ ಬದರಿ.. ನಿಮ್ಮ ಬರಹದ ಬಗ್ಗೆ ಹೇಳುವುದಕ್ಕೆನಿದೆ ? ಪ್ರತಿ ಪದ ಸಾಲಿನಲ್ಲಿ ಜೀವಂತಿಕೆ ಇರುತ್ತದೆ..

  G.V.Jayashree

  ReplyDelete
 12. ಆತ್ಮೀಯ ಬದರೀನಾಥರೇ, ಆತ್ಮಾವಲೋಕನದ ಪರಿ ಇಷ್ಟವಾಯಿತು. ಬಿಟ್ಟರೂ ಬಿಡದೀ ನಂಟು! ಬಿಡಬೇಕೇಕೆ? ಜೊತೆಯಲ್ಲೇ ಸಾಗಲಿ ಉನ್ನತಿಯ ಹಾದಿಯಲಿ ಪಯಣ!!

  ReplyDelete
 13. ದುಶ್ಚಟಗಳ ಪರಿಣಾಮಗಳನ್ನು ತಿಳಿದಿದ್ದರೂ ಬಿಡಲಾಗದ ಸನ್ನಿವೇಶ.., ಪರಿಣಾಮವ ಅರಿತು ಭಯ. ಎಲ್ಲವೂ ತಿಳಿದವರು ಮನಸ್ಸು ಗಟ್ಟಿ ಮಾಡಲೇಬೇಕು ತಮ್ಮ ಒಳಿತಿಗಾಗಿ ಹಾಗು ಆಪ್ತರ ಒಳಿತಿಗಾಗಿ. ಹೊಸ ವಿಷಯ ವಿಭಿನ್ನ ಪ್ರಯತ್ನ, ಎಲ್ಲವೂ ಚೆನ್ನಾಗಿದೆ.

  ReplyDelete
 14. ಪ್ರತಿ ರಾತ್ರಿ ನನ್ನೊಳಗೇ ತಾಕಲಾಟ
  ಸ್ವಭಯೋತ್ಪಾದನೆಯ ಪೀಕಲಾಟ -- ಈ ಸಾಲುಗಳು ಚೆನ್ನಾಗಿ ಮೂಡಿಬಂದಿವೆ... ಸ್ವಭಯೋತ್ಪಾದನೆ ಕಡಿಮಿಯಾಗಿ ಕಡೆಗೆ ಇಲ್ಲವಾಗಲಿ ಅಂತ ಕೇಳೋಣವಾ? :)

  ReplyDelete
 15. Endinanthe, Badariyavara adbhuta saalugaLu........
  HeLikonda reeti, prastuta padisida bhaavagaLu mana muttuvantide......
  Ishtavaaythu BP avre :) Jai ho

  ReplyDelete
 16. ಕಳ್ಳನಂತೆ ಎದ್ದು ಬರುತ್ತೇನೆ
  ಪಡಖಾನೆಯಿಂದೆದ್ದು ಪಡಸಾಲೆಗೆ
  .....ಕವನ ತುಂಬಾ ಚೆನ್ನಾಗಿದೆ....

  ReplyDelete
 17. ಕವಿತೆ ಚನ್ನಾಗಿದೆ ಬದರಿ ಸರ್, ದುಶ್ಚಟಕ್ಕೆ ಒಳಗೊಂಡು ವಿವಿದ ರೋಗಗಳನ್ನು ಆಹ್ವಾನಿಸಿ ಬುದ್ಧಿ ಬಂದ ನಂತರ ಮನುಜನಿಗೆ ಆಗುವ ಪಶ್ಚಾತಾಪ, ವೇದನೆಯನ್ನು ಈ ಕವಿತೆಯಲ್ಲಿ ಚೆನ್ನಾಗಿ ಬಿಂಬಿಸಲಾಗಿದೆ.

  ReplyDelete
 18. ಸೊಗಸಾದ ಕವಿತೆ ಬದರಿ ಅಣ್ಣ. ವಿಷಯ ಪ್ರಸ್ತುತಿ ತುಂಬಾ ಹಿಡಿಸಿತು.

  ReplyDelete
 19. ಕೊನೆಗೂ ಈ ಬುದ್ಧನಿಗೆ ಜ್ಞಾನೋದಯ ಆಯಿತೋ ..? ಆಸೆಯೇ ದುಃಖಕ್ಕೆ ಮೂಲ ಎಂಬುದು ತಿಳಿದರೆ ಸುಖ ನಿದ್ರೆ ಬಂದೀತೇನೋ :)

  ಅನಿತಾ ನರೇಶ್ ಮಂಚಿ

  ReplyDelete
 20. ತುಂಬಾ ಚನ್ನಾಗಿದೆ ಕವನ...ಮನಸಿನ ದುಗಡವೆಲ್ಲಾ ಒಂದಷ್ಟು ಹೊತ್ತು ಆಟಆಡಿಸುತ್ತೆ...ಗೊಂದಲದಿ ಯೋಚಿಸುವಂತೆಮಾಡುತ್ತದೆ..ಎಲ್ಲವನ್ನೂ ಸರಿಸಿದಾಗ ಮತ್ತದೇ ಮುಗ್ಧಮನಸಿನ ಚಿತ್ರ...

  ReplyDelete
 21. ಒಮ್ಮೆ ಆತ್ಮಾವಲೋಕನ ಮಾಡಿಕೊಂಡ ರೀತಿ , ಸಮಂಜಸವಾದ ಪದಗಳ ಬಳಕೆ ಕವನದ ತೂಕವನ್ನು ಹೆಚ್ಚಿಸಿದೆ.....!

  ReplyDelete
 22. ಬದರಿನಾಥರೆ,
  ಸ್ವಾತ್ಮಾವಲೋಕನದ ಅತಿ ಸುಂದರ ಕವನ. ಈ ಕವನದ ಭಾವವು ಬಹುಶಃ ಎಲ್ಲ ಗಂಡಂದಿರಿಗೂ ಆಗಿರುವಂಥಾದ್ದೇ!

  ReplyDelete
 23. ಬದರಿ ಸರ್; ಎಲ್ಲೂ ಅಡೆತಡೆ ಇಲ್ಲದೇ ಪದಗಳ ಸರಾಗ ಹರಿಯುವಿಕೆ ನಿಮ್ಮ ಕವಿತೆಯ ವಿಶೇಷ .ಮನುಷ್ಯ ಸಹಜವಾದ ದೌರ್ಬಲ್ಯ,ಮತ್ತೆ ರಾತ್ರಿಯಲ್ಲಿ ಉಸಿರಾಡುವುದೇ ಕಷ್ಟವಾದಾಗ ಮಾಡಿಕೊಳ್ಳುವ ಆತ್ಮಾವಲೋಕನ.ಅದಕ್ಕೆ ನಿಮ್ಮದೇ ವಿಶಿಷ್ಟ ಕವನ ಶೈಲಿಯ ಮೆರಗು !!!! ನಿಮ್ಮ ಕವನ ಕಟ್ಟುವ ಜಾದುವಿಗೆ ಮಾರು ಹೋದವರು ನಾವು.ಸೊಗಸಾದ ಶೈಲಿಯ ಮತ್ತೊಂದು ಅದ್ಭುತ ಕವನ !!! ಅಭಿನಂದನೆಗಳು.

  ReplyDelete
 24. ದೂಮಪಾನದ೦ತಾ ದುಶ್ಚಟಗಳಿ೦ದ ಉ೦ಟಾಗುವ ಮಾನಸಿಕ ದ್ವ೦ದ್ವಗಳನ್ನು ಚೆನ್ನಾಗಿ ಬಿಡಿಸಿಟ್ಟಿದ್ದೀರಿ. ಸಣ್ಣದೊ೦ದು ಎಳೆಯಿ೦ದ ತಮ್ಮಲ್ಲಿ ಇಷ್ಟು ಉತ್ತಮ ಕವಿತೆ ಹುಟ್ಟುವುದನ್ನು ಕ೦ಡು ನನಗೆ ಖುಷಿಯೆನಿಸುತ್ತದೆ ಸರ್. ಸಿದ್ಧಾರ್ಥತೆ ಮತ್ತು ಸ್ವಭಯೋತ್ಪಾದನೆ ಪದಪ್ರಯೋಗ ಎಕ್ಸಲೆ೦ಟ್.

  ReplyDelete
 25. ಶಂಕರ್ ಗುರು ಚಿತ್ರದಲ್ಲಿ ಅಣ್ಣಾವ್ರು ಹೇಳುತ್ತಾರೆ.. ಕೆಲವೊಮ್ಮೆ ಈ ದೇಹಕ್ಕೆ ಈ ರೀತಿ ಶಿಕ್ಷೆ ಅನಿವಾರ್ಯ.. ದೇಹವನ್ನು ಶೋಷಿಸಿದಾಗ ದೇಹವು ನಮ್ಮನ್ನು ಕಾಡುತ್ತದೆ..

  ಆದರೆ ಶುಭ್ರ ಮನವನ್ನು ಇನ್ನಷ್ಟು ಶುಭ್ರಗೊಳಿಸಿ.. ಒಲಿದು ಬರುವ ಮಿತ್ರರ ಜೊತೆಯಲ್ಲಿ ನಲಿಯುತ್ತಾ ಕುಣಿಯುವ ಮನಕ್ಕೆ ದೇಹವೂ ಜೊತೆ ನೀಡುತ್ತದೆ.. ಮನಸ್ಸಿದ್ದರೆ ಮಹಾದೇವ ಎನ್ನುವಂತೆ..ಬಾಲೂ ಸರ್ ಹೇಳುವಂತೆ ಮನಸ್ಸು ಸುಂದರವಿದ್ದರೆ ಜಗವೇ ಸುಂದರ.. ಈ ಸಾಲುಗಳನ್ನು ಹೀಗೆ ಹೇಳಬಹುದು ಮನಸ್ಸು ಸುಂದರವಾಗಿಟ್ಟಾಗ ದೇಹದ ಜಗತ್ತು ಸುಂದರ..

  ಪ್ರತಿ ಸಾಲುಗಳಲ್ಲಿ ಅವಿತಿರುವ ಸಂದೇಶಗಳು ಮಾರ್ಮಿಕವಾಗಿ ತಟ್ಟಿ ಎಬ್ಬಿಸುವ ಮಮಕಾರ,, ಆ ಪ್ರೀತಿ ವಿಶ್ವಾಸ,, ಕಳಕಳಿ ಆಹಾ.. ಸೂಪರ್ ಬದರಿ ಸರ್.. ಸರಸ್ವತಿ ನಿಮ್ಮ ಜೊತೆ ನೆರಳಾಗಿ ನಿಂತಿದ್ದಾಳೆ..

  ಸೂಪರ್ ಸೂಪರ್ ಅಂಡ್ ಸೂಪರ್

  ReplyDelete
 26. ಅನೇಕರ ಆತ್ಮಾವಲೋಕನಕ್ಕೊಂದು ಕನ್ನಡಿಯಂತಿದೆ ಈ ಕವನ. ಮದ್ದಿರುವ ಖಾಯಿಲೆಯು ನಮ್ಮ ಅರಿವಿಗೆ ಬಂದ ಮೇಲೆ ಗುಣಮುಖರಾಗಲು ಇನ್ನೊಂದೇ ಹೆಜ್ಜೆ ಎತ್ತಿಟ್ಟರಾಯಿತು, ಬದುಕು ಮತ್ತೆ ನಮ್ಮ ಅಂಗೈ ಮೇಲಾಡುವ ಬುಗುರಿ! ಚೆಂದದ ಕವನ.

  ReplyDelete
 27. ನಿದ್ದೆ ಹತ್ತಿರ ಸುಳಿಯದ ಅಥವಾ ಹಿಡಿದ ಕೈ ಬಿಡಿಸಿಕೊಂಡು ನಿದ್ದೆ ನಮ್ಮಿಂದ ದೂರ ಹೋಗುವ ರಾತ್ರಿಗಳು ಅತಿದೊಡ್ಡ ಸಂಕಟಗಳೆನಿಸಿದರೂ ಹೆಚ್ಚುಕಮ್ಮಿ ಒಂಟಿತನವೇ ಅಂತನಿಸುವ ಆ ಏಕಾಂತ ನಮಗೇ ಅಪರಿಚಿತವೆನಿಸುವ ನಮ್ಮದೇ ವ್ಯಕ್ತಿತ್ವದ ಕೆಲವು ಸಂಕೀರ್ಣತೆಗಳ, ಪ್ರಶ್ನೆಗಳ ಕೆಲವೊಮ್ಮೆ ಉತ್ತರಗಳ ಬಳಿಗೂ ಕೊಂಡೊಯ್ಯಬಲ್ಲುವು, ಇದು ನನ್ನ ಅನುಭವ. ಅಂಥ ಕ್ಷಣಗಳನ್ನ ಪದಗಳಲ್ಲಿ ಚಂದ ಹಿಡಿದಿಟ್ಟಿದ್ದೀರಿ ಬದರಿ ಸರ್.

  ReplyDelete
 28. ಮನದನ್ನೆಯನು ಅರಿತ ಪತಿಯ ಭಾವನೆಯನ್ನು ತುಂಬಾ ಚೆನ್ನಾಗಿ ಬಿಂಬಿಸಿರುವೆ ತಮ್ಮಾ..
  ಹೊರಗೂ ದುಡಿಯುವ ಇವಳು
  ವೃತ್ತಿ ನಿರತೆ ಎನ್ನ ಮನದೆನ್ನೆ,
  ಹೊರಗೂ ಬೆಂಡೆದ್ದು ಮನೆಯೊಳಗೂ
  ಪಟ್ಟಿಗು ನಿಲುಕದಷ್ಟು ಬಂಡಿ ಕೆಲಸ.

  ನಿದ್ರಿಸಲಿ ಪಾಪ ಎಬ್ಬಿಸಲಿ ಹೇಗೆ?.. ಇದು ನನಗೆ ಇಷ್ಟವಾದ ಸಾಲು..

  ReplyDelete
 29. Samyuktha PuligalMay 19, 2014 at 3:52 PM

  Bahala dinagala mele nimma padya odiddu. Tumba hidisitu Palavalli! :)

  ReplyDelete
 30. Raghava Dwarki :

  ನೀವು.. ಕವನ ಬರೆದೇ ಇಲ್ಲ!
  ಒಂದು ಸ್ಥಿತಿಯನ್ನು ಗಂಭೀರವಾಗಿ ಬರೆದು
  ಕ್ಯೆ ಗಿಟ್ಟಿದ್ದೀರಿ.. ಈ ಸಾಲುಗಳನ್ನು
  ವಿಮರ್ಶಿಸುವಷ್ಟು.. ಶಕ್ತಿಯಿದೆ ಎಂದು ನನಗನ್ನಿಸುತ್ತಿಲ್ಲ
  ನಾನೂ ಇನ್ನು ಬರಹದಲ್ಲಿ ಆಳವಾಗಿ ಇಳಿಯಬೇಕಿದೆ..
  ಎಂಬುದನ್ನು ನಿಮ್ಮ ಬರಹ ತೋರಿಸಿ ಕೊಟ್ಟಿದೆ..ಹ್ಯಾಟ್ಸ್ ಆಫ್... ಕೊನೆಯ ಮಾತು

  ಡಿವಿಜಿ ಯವರಂತೆ ಇನ್ನೊಂದು ಕಗ್ಗ ಸೃಶ್ಠಿಸುವ ಶಕ್ತಿ
  ನಿಮಗಿದೆ.. ಎಂಬುದು ನಾನ ಪ್ರಾಮಾಣಿಕವಾದ ನಂಬಿಕೆ.. ಒಳ್ಳೆಯದಾಗಲಿ...

  ReplyDelete
 31. ಸುಪರ್ ತುಂಬಾ ಇಷ್ಟ ಆಯಿತು

  ReplyDelete
 32. ಕೊನೆಯ ಸಾಲು ಧೂಮ್ರಪಾನಿಗೆ ಭಯಹುಟ್ಟಿಸುವಲ್ಲಿ ಪರಿಣಾಮಕಾರಿ. ಉತ್ತಮ ರಚನೆ.

  ReplyDelete
 33. ಅಂಟಿಸಿಕೊಂಡ ದುಶ್ಚಟದಿಂದಾದ ಒದ್ದಾಟ ಭಾವನೆ ಮೂಡಿ ಬಂದಿದೆ.
  ಗುಳಿಗೆ, ದ್ರವ ಸಿಂಚನವೂ ಮತ್ತೆ
  ಮೂಗಿಗೆ ಹನಿ ಔಷದೋಪಚಾರ
  ಪುಪ್ಪಸಕೆ ಮುತವರ್ಜಿ ಉಪಚಾರ,
  ತಟ್ಟನೆ ಸುಳಿಯುತ್ತದೇ ಪಾಪ ಪ್ರಜ್ಞೆ
  ಬರಿಗೈ ದಾಸನಾದವಗೆ ಕೊರಗು - ಇಷ್ಟವಾದ ಸಾಲುಗಳು
  ಜೊತೆಗೆ 2 ಮತ್ತು 3 ನೇ ಪ್ಯಾರಗಳೂ ಕೂಡ .... :)

  ReplyDelete
 34. ಹ ಹ ಎಷ್ಟು ಸೊಗಸಾಗಿ ಬರೆದಿದ್ದೀರಿ ಸರ್! ಇಷ್ಟವಾಯಿತು.

  ReplyDelete
 35. ಸಾವಿನ ಭಯದಿಂದ ನರಳಿ ನಿದ್ದೆಕೆಡುತ್ತಿದ್ದರೂ, ಇಂದೇ ಕೊನೆಯ ದಿನವೇ ಎಂಬಾತಂಕ ಮನದಿ ಮೂಡಿ ಕಂಗೆಡಿಸುತ್ತಿದ್ದರೂ .. ಹೆಂಡತಿಯ ಮೇಲೆ ಅತಿಯಾದ ಪ್ರೀತಿ ಕಾಳಜಿಯಿದ್ದರೂ ದುರಭ್ಯಾಸ ಬಿಡಲಾರದ ಸ್ಥಿತಿ.

  ReplyDelete
 36. ಅರ್ಥಪೂರ್ಣ ಕವಿತೆ . ಇಷ್ಟವಾಯಿತೆನಗೆ

  ReplyDelete
 37. ಪೀಕಲಾಟ ತಾಕಲಾಟದ ಉದ್ವೇಗಕೆ ಸ್ವಭಯೋತ್ಪಾದನೆಯೇ ಕಾರಣ. ಸ್ವಯಂ ಚಿಂತನೆಯ ಹೊಣೆಗಾರಿಕೆ ಅರ್ಧಾಂಗಿಯ ವಿಶ್ರಾಂತಿಯನ್ನು ಒಳಗೊಂಡಿದೆ ಎಂದು ಸುದರವಾಗಿ ಬಿಡಿಸಿ ಹೇಳಿದ್ದೀರಿ.

  ಎಂದಿನಂತೆ ಅದೇ ಮೇಲು ಸ್ತರದ ಪದಪುಂಜದ ಆರೋಹಣ ಚನ್ನಾಗಿದೆ.

  ReplyDelete