Saturday, March 22, 2014

ವಧಾಕರ್ಷಣೆ...

ಕಂಡದ್ದೆಲ್ಲ ಬಡಿದು ಬಾಯಿಗೆ
ಹಾಕಿಕೊಳ್ಳುವ ಅಮಿತ ಹಸಿವು
ರುಂಡ ಸಿಕ್ಕೊಡೆ ಪಾತಾಳದಿಳಿ
ತುಳಿದು ಮೆಟ್ಟಿನಿಲ್ಲುವ ಜಾಣ್ಮೆ

ತೆಗ್ಗುಗಳನೇ ಹುಡುಕುಡುಕಿ
ಹಾರಿಕೊಂಡಾದರೂ ಸರಿಯೇ
ಮೂಲವನು ತಲುಪಿಕೊಳ್ಳೋ
ಗಮ್ಯೋತ್ಕಟ ಸುಲಭೋಪಾಯ

ಕಂಡುಕೊಂಡವರಿವರು ಮಾರ್ಗ
ಪೀಕೋಪಾಯದ ಧುರ್ಮಾರ್ಗ
ವಧಾ ಸ್ಥಾನಕೆ ಅದೇ ಕೀವು ದಾಹ
ಪಿಗ್ಗಿ ಬೀಳಲು ತಯಾರು ಮಿಕ

ಒಣ ಕೆಮ್ಮಿಗಿಂತಿಷ್ಟು ರಂಗುಡಿಸಿ
ಮಾತುಗಳಲೇ ಎವರೆಸ್ಟನೇರಿಸಿ
ತುಟ್ಟ ತುದಿ ಚಪ್ಪಾಳೆಯ ಇಕ್ಕಿಸಿ
ವಿಕಟಹಾಸ ಗೈಯುವರು ಬೀಳಿಸಿ

ಸ್ವಯಂಭು ಕೀಟಾಕರ್ಷಕರ ಬುದ್ದಿ
ಹಿಂಡುವುದೇ ಸಕಲ ಇಕ್ಕಳದಿ ಸಿಕ್ಕಿಸಿ
ಹುಳುಗಳಿಗೋ ಮೆದುಳೇ ಅಲ್ಲಿ ಲದ್ಧಿ
ಬಲೆ ಮೋಜಿಗೆ ಬಿದ್ದವು ಲಗಾಯಿಸಿ

20 comments:

 1. ಬದುಕು ಎನ್ನುವ ತವಕ ಬಂದಾಗ.. ಮಿಕ್ಕಿದ್ದು ಎಲ್ಲವೂ ಗೌಣ,.. ಓದಿದ್ದು ನೆನಪು.. ತನ್ನ ರಕ್ಷಣೆ ಬಂದಾಗ.. ಮನುಜ ತನ್ನವರನ್ನು ಕೆಳಗೆ ಹಾಕಿ ಏಣಿ ಮಾಡಿಕೊಂಡು ಹತ್ತುವ..

  ಉತ್ಕಟ ಮನಸ್ಥಿತಿಯನ್ನು ಪದಗಳಲ್ಲಿ ಹರಡಿ ಪ್ರತಿ ಸಾಲಿಗೂ ಅನನ್ಯ ಭಾವ ತುಂಬುವ ನಿಮ್ಮ ಕವಿ ಮನಕ್ಕೆ ಒಂದು ನಮನ.. ಎಲ್ಲಿಗೆ ಹೋಗುತ್ತಿದೆ ಏನು ಆಗುತ್ತಿದೆ ಎನ್ನುವ ಕುತೂಹಲ ಕ್ಷಣ ಕ್ಷಣಕ್ಕೂ ಕಾಡುತ್ತದೆ..

  ನಿಮ್ಮ ಕವನಗಳ ತಾಕತ್ ಏನು ಅಂದರೆ ಊಹೆಗೆ ನಮ್ಮ ಕಲ್ಪನೆ ಎಟುಕುವುದಿಲ್ಲ.. ಆ ಸಾಲನ್ನು ಓದಿದಾಗ ಮಾತ್ರ ನಮ್ಮ ಅನುಭವದ ಮೂಸೆಗೆ ತಾಕುತ್ತದೆ..

  ಸೂಪರ್ ಬದರಿ ಸರ್

  ReplyDelete
 2. ಅಂಗೈಯ್ಯಲ್ಲಿಯ ಆಕಾಶಕ್ಕೆ ಮಾರು ಹೋಗುವ ಮಂದಿಯ ಅಮಾಯಕ ಮನಸ್ಥಿತಿಗಳ ಗ್ರಹಿಸಿ, ಸದಾ ಬೆನ್ನನು ಗೀರುತ್ತ ಒಮ್ಮೆಲೆಗೆ ಚೂರಿ ಹಾಕುವ ನಿರ್ದ್ಯಾಯಕ ಸಮಾಜದಲ್ಲಿಯ ಬದುಕು ದಂಗಾಗಿಸುವುದು ಅಚ್ಚರಿಗಳ ಮೂಡಿಸಿ !!

  ReplyDelete
 3. ಮತದಾರ ಮಿಕಗಳನ್ನು ಮಾತುಗಳ ಮುಖೇನ ಮೇಲೆತ್ತಿ ಮತ್ತೆ ಪಿಗ್ಗಿಬೀಳಿಸಿ ಕೊನೆಗೆ ಸೀದಾ ಪಾತಾಳಕ್ಕೆ ತಳ್ಳಿ ತಲೆ ಮೇಲೆ ನಿಲ್ಲುವ ಲದ್ದಿಹುಳಗಳ ಕುರಿತ ಚಿಂತನಾರ್ಹ ಕವಿತೆ ಅನಿಸಿತು ಬದರಿ ಸರ್.. "ಒಣಕೆಮ್ಮಿಗಿಂತಿಷ್ಟು ರಂಗುಡಿಸಿ", "ಹುಳುಗಳಿಗೊ ಮೆದುಳೇ ಅಲ್ಲಿ ಲದ್ದಿ" ಮುಂತಾದ ಸಾಲುಗಳು ಬಹಳ ಹಿಡಿಸಿದವು.. ಸಕಾಲಿಕ ಸುಂದರ ಕವಿತೆ..

  ReplyDelete
 4. ತಾನು ಬದುಕುಳಿಯಲು ಮತ್ತೊಬ್ಬರ ತುಳಿದು ಮೇಲೇರುವ ಇಂತಹ ಮಂದಿಗೆ ಧಿಕ್ಕಾರವಿರಲಿ, ವಾಸ್ತವತೆಗೆ ಬೆಳಕು ಚೆಲ್ಲುವ ಬರಹ ತುಂಬಾ ಹಿಡಿಸಿತು.

  ReplyDelete
 5. kavithe vaasthavada pratheekavaagide BP avre! padaprayoga kavi bhaavaneyannu innashtu bhigigoLiside..... ishtavaaythu !

  ReplyDelete
 6. ಒಣ ಕೆಮ್ಮಿಗಿಂತಿಷ್ಟು ರಂಗುಡಿಸಿ
  ಮಾತುಗಳಲೇ ಎವರೆಸ್ಟನೇರಿಸಿ
  :-)

  ReplyDelete
 7. ಸರಿಯಾದ ಸಮಯದಲ್ಲಿ ಮೂಡಿ ಬಂದ ಕವನ ವಾಸ್ತವದ ಚಿತ್ರಣ ನೀಡುತ್ತದೆ.......! ತುಳಿತಕ್ಕೆ ಸಿಕ್ಕಿಕೊಳ್ಳುವವರು ಪಾತಾಳ ಮುಟ್ಟಿದ್ದಾರೆ ಆದರೂ ಅವರ ತುಳಿತ ಮುಗಿದಿಲ್ಲಾ, ಮುಗಿಯುವುದಿಲ್ಲ. ! ನೈಜ್ಯ ಚಿತ್ರಣ.! :)

  ReplyDelete
 8. ಪ್ರಸ್ತುತ ರಾಜಕೀಯ ಮತ್ತು ಇತರ ಎಲ್ಲಾ ರಂಗಗಳಲ್ಲೂ ಇರುವ ಮಾನವನ ಇನ್ನೊಂದು ಮುಖಕ್ಕೆ ಹಿಡಿದ ಕೈಗನ್ನಡಿಯಂತಿದೆ ಈ ನಿಮ್ಮ ಕವನ. ಅಮಾಯಕರು ಮೂರ್ಖರಾಗುವ ಮುನ್ನ ನಿಮ್ಮೀ ಕವಿತೆ ಎಚ್ಚೆತ್ತುಕೊಳ್ಳಲು ದಾರಿದೀಪ.

  ReplyDelete
 9. ಚನ್ನಾಗಿದೆ ಸರ್ ನಿಮ್ಮ ಕವನ...

  ReplyDelete
 10. ವಾವ್! ನಿಮ್ಮ ಕವನಗಳಲ್ಲಿರುವ ವಿಡಂಬನೆಯ ಬಗೆಯೇ ಆಕರ್ಷಕ!

  ReplyDelete
 11. ಪ್ರಸ್ತುತ ರಾಜಕೀಯಕ್ಕೆ ಕನ್ನಡಿ ಹಿಡಿದ ನಿಮ್ಮ ಕವಿತೆ ಬಹಳ ಸೊಗಸಾಗಿದೆ.....

  ReplyDelete
 12. ಒಣ ಕೆಮ್ಮಿಗೆ ರಂಗುಡಿಸಿದವರು ಯಾರು ? :)
  ವಧೆಯೇ ಆಕರ್ಷಣೆ ನಮ್ಮನಾಳುವವರಿಗೆ
  ಕವಿ ಅದನ್ನು ಸಾರಿದ ಬಗೆ ಸೊಗಸಾಗಿದೆ

  ReplyDelete
 13. ಬೇಕುಗಳ ದಾಹ ತೀರಿಸಲು ಮಾನವ ಏನುಮಾಡಲೂ ಹೆಸುವುದಿಲ್ಲ. ಬರಹ ಚೆನ್ನಾಗಿದೆ.

  ReplyDelete
 14. ಆತ್ಮೀಯ ಬದರೀನಾಥರೇ, ಇತರರ ಬರಹಗಳನ್ನೂ ಓದುತ್ತಾ ಜೊತೆಗೆ ಇಂತಹ ರಚನೆಗಳನ್ನೂ ಮಾಡುತ್ತಾ ಇರುವ ನಿಮ್ಮ ಅದಮ್ಯ ಚಟುವಟಿಕೆಗೆ ಹ್ಯಾಟ್ಸಾಫ್!
  ಒಣಕೆಮ್ಮು, ರಂಗಿನ ಮಾತುಗಳ ಮೂಲಕ AK-49 ನೆನಪಿಸಿರುವ ರೀತಿ ಖುಷಿಯಾಯಿತು.

  ReplyDelete
 15. ವಾಹ್, ಬದರಿ...
  ಪದಗಳ ಬಳಕೆ ಬಹುಪಾಲು ಕಲಿಯಬೇಕಿದೆ ನಿಮ್ಮಿಂದ...ವಾಹ್..
  ಕಂಡುಕೊಂಡವರಿವರು ಮಾರ್ಗ
  ಪೀಕೋಪಾಯದ ಧುರ್ಮಾರ್ಗ
  ವಧಾ ಸ್ಥಾನಕೆ ಅದೇ ಕೀವು ದಾಹ
  ಪಿಗ್ಗಿ ಬೀಳಲು ತಯಾರು ಮಿಕ
  (ಪೀಕೋಪಾಯ ಅಂದರೆ ಕಿತ್ತುಕೊಳ್ಳುವ ಉಪಾಯವೇ...?? ಪಿಗ್ಗಿ ಬೀಳಲು ಅಂದರೆ ಬಲಿಯಾಗಲು ಎಂದೇ...?? ತಿಳಿಸಿ ಗುರುವೇ..??_)

  ReplyDelete

 16. "ಶಕ್ತಿಶಾಲಿಗಿಂತಲೂ ಚತುರವಾದಿ ಬಾಳಿಯಾನು" ಎಂಬುದಕ್ಕೆ ಈ ಕವಿತೆ ಸಾಕ್ಷಿ. ಸರಿ ತಾನೇ?
  ನಿಮ್ಮ ಕನ್ನಡ ಜ್ಞಾನಕ್ಕೆ ನನ್ನ ಶರಣು, ನಿಮ್ಮ ಮುಂದೆ ನಾವೆಲ್ಲ ಸೊನ್ನೆ ಗುರುಗಳೇ
  ಈ ಕವಿತೆಗೆ ವಿಮರ್ಶಿಸುವ ಶಕ್ತಿ ನನಗಿಲ್ಲ.

  "ಹುಳುಗಳಿಗೋ ಮೆದುಳೇ ಅಲ್ಲಿ ಲದ್ಧಿ
  ಬಲೆ ಮೋಜಿಗೆ ಬಿದ್ದವು ಲಗಾಯಿಸಿ"
  ಸುಪರ್ಬ್ ಸರ್

  ReplyDelete
 17. ಕವಿತೆ ಎಂದರೆ ಗೂಡಾರ್ಥ ಇರಬೇಕು.. ಓದಿದಂತೆಲ್ಲ ಇನ್ನೊಂದು ಅರ್ಥ ಕೊಡಬೇಕು.. ಇನ್ನೊಂದು ಸಲ ಓದಿದಾಗ ಮತ್ತೊಂದು ಅರ್ಥ ಕೊಡತ್ತೆ ನಿಮ್ಮ ಕವನ.. ಖುಶಿಯಾಗತ್ತೆ ಸರ್..

  ReplyDelete
 18. ಬದುಕಲು ಬೇಕಾದ್ದು ಮಾಡುತ್ತೇನೆ ಎನ್ನುವವರಿಗೆ, ವಂಚಿಸುವುದೂ ಒಂದು ಧರ್ಮವೇ! ಅದಕ್ಕೆ ನಮ್ಮ ಹುಶಾರಿನಲ್ಲಿ ನಾವಿರಬೇಕು. ಒಳ್ಳೆಯ ಕವನ ಸರ್, ಓದಿಸಿದ್ದಕ್ಕೆ ವಂದನೆಗಳು :-)

  - ಪ್ರಸಾದ್.ಡಿ.ವಿ.

  ReplyDelete
 19. superb sir.. ಮಾತೇ ಇವರ ಬಂಡವಾಳ... ಕಾಯಕವಲ್ಲ..

  ReplyDelete
 20. ಇತರರ ಭಾವನೆಗಳೊಂದಿಗೆ ಆಟವಾಡಿ, ಅವರ ದೌರ್ಬಲ್ಯಗಳನ್ನೇ ಬಂಡವಾಳವಾಗಿಸಿ ಇವರು ಉದ್ಧಾರವಾಗುವ ದಾರಿ ಕಾಣುವ ನಯವಂಚಕರು, ಬೆನ್ನಲ್ಲಿ ಚೂರಿಹಾಕುವ ಹಿತಶತ್ರುಗಳು.. ತಮ್ಮ ಏಳಿಗೆ ಬೇರೆಯವರನ್ನು ಏನೂ ಮಾಡಲು ಹೇಸದವರು... ಇವರ ಮಧ್ಯೆ ನಮ್ಮಂತಹ ನಾವುಗಳು... :(

  ReplyDelete