Tuesday, September 3, 2013

ನಿತ್ಯಾನ್ನಪೂರ್ಣೇಶ್ವರಿ...

ಸಾವಿತ್ರಮ್ಮನ ಕೈ ರುಚಿ
ನಾಲಿಗೆ ತುದಿಯಲೇ ಇದೆ,
ಆ ಮಜ್ಜಿಗೆ ಹುಳಿ, ಹುಳಿಯನ್ನ
ಮತ್ತೆ ಸವಿಯಲು ತಾನು
ಕಾಯಬೇಕಲ್ಲ ಒಂದಿಡೀ ವಾರ

ವಾರನ್ನದ ಹುಡುಗನಿಗದೇ
ನಿಜವಾದ ಚಿಂತೆ!

ನಾಳೆ ಬುಧವಾರ ವರ್ತನೆಯ
ಮಲ್ಲಕ್ಕನ ಮನೆಯಲಿರಲಿ
ಎಂತದಾದರೂ ಹಬ್ಬದ ಅಡುಗೆ,
ತಿಥಿ ಊಟವಾದರೂ ಮೇಲು
ತಪ್ಪಿದರೆ ಅದೇ ಗೊಡ್ಡು ಸಾರು

ಅಕ್ಕ ನಕ್ಕಿದ್ದೇ ಗೊತ್ತಿಲ್ಲ
ರಾಯರ ಗತಿ ಏನೋ ಪಾಪ?

ಮನೆಯಾಳದಲಿ ಅದೆಲ್ಲೋ
ಅಡುಗೆ ಮನೆ ಅಡಗಿರಲಿ
ಒಗ್ಗರಣೆ ಘಮಲು ಆಹಾ,
ಇದ್ದಿರಬಹುದು ಅಜಮಾಸು
ಹಿತ್ತಲಿನ ಎಳೆ ನುಗ್ಗೇ ಕೂಟು

ಕಾದವನ ತಾಟಿಗೆ ಬಿದ್ದದ್ದು
ಮುಲ್ಕಿ ಬೇಳೆ ತಾಟು

ಅಲ್ಲಿ ಮುದ್ದೆಯ ಮುರಿದು
ಇಲ್ಲಿ ತಂಗಳ ನುಂಗಿ
ನಾಳೆ ಮತ್ತೊಂದು ಮನೆ ಕಡೆಗೆ,
ಓದುವ ಆಸೆಯ ಬಡವನಿಗೆ
ಅನ್ನ ಸಾಲೆ ತಲುಪುವ ಮುನ್ನ

ನಿತ್ಯಾನ್ನಪೂರ್ಣೇಶ್ವರಿಯರು
ಅವನ ಪಾಲಿಗೆ ಊರ ತುಂಬಾ


(ಚಿತ್ರ ಕೃಪೆ: ಅಂತರ್ಜಾಲ)

32 comments:

 1. ವಾರಾನ್ನವೆಂಬ ಕಾನ್ಸೆಪ್ಟ್ ಅರಿಯದ ನಮಗೆ ಇದೊಂದು ಮಾಹಿತಿ ಕವಿತೆ.
  ರುಚಿಕಟ್ಟಾಗಿ ಅಡುಗೆ ಮಾಡುವರ ಮನೆಯ ವಾರಕ್ಕಾಗಿ ಕಾಯುತ್ತಿದ್ದರೆನೋ ಹುಡುಗರು ?

  ReplyDelete
 2. ವಾರಕ್ಕೊಮ್ಮೆ ಅವರಿವರ ಮನೆಗಳಲ್ಲಿ ವಾರನ್ನಕ್ಕೆ ಹೋದಾಗ, ಒಬ್ಬೊಬ್ಬರದು ಒಂದೊಂದು ರೀತಿಯ ಉಪಚಾರ. ಕೆಲವರು ತಾಯಂತೆ ಬಡಿಸಿದರೆ, ಮತ್ತೆ ಕೆಲವರು ಗೊಣಗುಟ್ಟುತ ಪಡಿಸುವ ಪರಿಗೆ ಅನ್ನ ಗಂಟಲಲಿ ಇಳಿಯದು. ಗೊಡ್ಡು ಸಾರೊ ಹುಳಿಯೊ ಯಾವುದೋ ಒಂದು ತಿಂದು ಹಸಿವು ನೀಗಿಸಿಕೊಳ್ಳಬೇಕು. ಮನ ತಾಕುವ ಸಾಲುಗಳು.

  ReplyDelete
 3. ವಾರಕ್ಕೊಮ್ಮೆ ಅವರಿವರ ಮನೆಗಳಲ್ಲಿ ವಾರನ್ನಕ್ಕೆ ಹೋದಾಗ, ಒಬ್ಬೊಬ್ಬರದು ಒಂದೊಂದು ರೀತಿಯ ಉಪಚಾರ. ಕೆಲವರು ತಾಯಂತೆ ಬಡಿಸಿದರೆ, ಮತ್ತೆ ಕೆಲವರು ಗೊಣಗುಟ್ಟುತ ಪಡಿಸುವ ಪರಿಗೆ ಅನ್ನ ಗಂಟಲಲಿ ಇಳಿಯದು. ಗೊಡ್ಡು ಸಾರೊ ಹುಳಿಯೊ ಯಾವುದೋ ಒಂದು ತಿಂದು ಹಸಿವು ನೀಗಿಸಿಕೊಳ್ಳಬೇಕು. ಮನ ತಾಕುವ ಸಾಲುಗಳು.

  ReplyDelete
 4. ಊಟದ ರುಚಿಯೊಟ್ಟಿಗೆ ಬಡಿಸುವ ಮುಖದ ಭಾವದ ಜೊತೆಗೂ ತಮ್ಮ ಇಷ್ಟಾನಿಷ್ಟಗಳ ಗುದ್ದಾಟದಲ್ಲಿ ಸೋತು ಸುಣ್ಣವಾಗುತಾ ದಿನ ದೂಡುತ್ತಿದ್ದ ವಾರಾನ್ನದ ಕತೆಯನ್ನು ನಮ್ಮ ದೊಡ್ಡಪ್ಪನೂ ಹೇಳುತ್ತಿದ್ದರು. ಸೊಗಸಾದ ಕಥನ.

  ReplyDelete
 5. ಬದರಿ ಸರ್... ವಾರನ್ನಕ್ಕೆ ಇರ್ತೀವಿ ಎಂದು ಎಷ್ಟೋ ಜನ ನಮ್ಮ ಅಪ್ಪಾಜಿ ಮನೆಗೆ ಬಂದರೆ ಅಪ್ಪಾ ಅಮ್ಮಾ ಇಬ್ಬರೂ ಎಲ್ಲಿಗೂ ವಾರನ್ನಕ್ಕೆ ಹೋಗಬೇಡಪ್ಪ ನಮ್ಮ ಮನೆಯಲ್ಲೇ ದಿನವೂ ಊಟಮಾಡಿಕೊಂಡಿರು ಓದುವ ಕಡೆ ಗಮನಕೊಡು ಎಂದು ಸುಮಾರು ಮಕ್ಕಳನ್ನು ನೋಡಿಕೊಳ್ಳುತ್ತಿದ್ದರು.... ನಿಮ್ಮ ಈ ಕವನ ನನಗೆ ಹಳೆಯ ನೆನಪು ತರಿಸಿತು...
  ಸುಂದರ ಕವನ... ಹಸಿದಾಗ ಎಲ್ಲವೂ ಪರಮಾನ್ನವೇ

  ReplyDelete
 6. ನಿತ್ಯಾನ್ನಪೂರ್ಣೇಶ್ವರಿಯರ ಔತಣ ಮತ್ತು ಅಲೆಮಾರಿ ಬದುಕಿನ ಚಿತ್ರಣ ಸುಂದರವಾಗಿದೆ.

  ReplyDelete
 7. Vaaraannada baDa huDugana manasthiti chennagi moodi bandide....

  ReplyDelete
 8. ವಾರನ್ನದ ಹುಡುಗನ ಅನುಭವ ಚೆನ್ನಾಗಿದೆ. ಈಗ ಆ ಪದ್ದತಿ ಇನ್ನು ಇದೆಯಾ? ಅಥವ ಇಲ್ಲವಾ? ತಿಳಿದಿಲ್ಲ.

  ReplyDelete
 9. ಬದರಿನಾಥರೆ,
  ಈ ಕವನ ತುಂಬ ವಿಶಿಷ್ಟವಾಗಿದೆ. ನಿಮ್ಮ ಮೊದಲಿನ ಕವನಗಳ format ಇಲ್ಲಿ ಬದಲಾಗಿದೆ. ವಾರದ ಹುಡುಗನ ಬದುಕು ಹಾಗು ಭಾವನೆಗಳ ಸಂಕೀರ್ಣತೆಯನ್ನು ತೆಳು ವಿನೋದದ ಶೈಲಿಯಲ್ಲಿ ಚಿತ್ರಿಸಿದ್ದೀರಿ.ಅಭಿನಂದನೆಗಳು.

  ReplyDelete
 10. ರುಚಿ ರುಚಿ ಅಡುಗೆ, ಬಡಸುವರ ಭಾವಗಳು,ನಿತ್ಯಾನ್ನಪೂರ್ಣೇಶ್ವರಿ..ಚೆನ್ನಾಗಿದೆ ಕಥನ. :)

  ReplyDelete
 11. ನಿತ್ಯಾನ್ನಪೂರ್ಣೇಶ್ವರಿ.............ಕೆಲವರು ತಾಯಂತೆ :) ಸಾವಿತ್ರಮ್ಮನ ಕೈ ರುಚಿ ನಾಲಿಗೆ ತುದಿಯಲೇ ಇದೆ ....... ನಿಮ್ಮ ಕವನಗಳ ಶೈಲಿ superb ; awesome badari bro :)

  ReplyDelete
 12. ನಿತ್ಯಾನ್ನಪೂರ್ಣೇಶ್ವರಿ......title ge pic suit agta illa bro !!!! plz change the pic South Indian Taali pic Haaki plz........ಅನ್ನಪೂರ್ಣೇಶ್ವರಿ....anda mele ಅನ್ನ da chitra irali endu Nanna Abhipraaya plz dont mistake bro

  ReplyDelete
 13. ಸರ್,
  ಫೋಟೋ ನೋಡಿ ನೀವು ಎಲ್ಲೊ ಫುಡ್ ಬ್ಲಾಗ್ ಶುರು ಮಾಡಿ ಬಿಟ್ರೆನೋ ಅಂತ ಹೆದರಿದೆ(ಕಾಂಪಿಟಿಷನ್ ನೋಡಿ) :-)
  ಆ ಮುದ್ದೆ ಫೋಟೋ ನೋಡಿ ತಿನ್ನೋ ಆಸೆ ತುಂಬಾ ಆಯಿತು, ಸಾವಿತ್ರಮ್ಮನವರ ಮನೆ ವಿಳಾಸ ಕೊಡಿ ಸರ್
  ಆದರೆ .....
  ಕವಿತೆಯಲ್ಲಿನ ಆ ವಾರಾನ್ನದ ಹುಡುಗನ ನೋವು ಕಣ್ಣಲ್ಲಿ ನೀರು ತರಿಸಿತು. ಆ ನೋವನ್ನ ನಾನು ಪೂರ್ತಿಯಾಗಿ ಅನುಭವಿಸಿಲ್ಲ ಆದರೂ ಆ ನೋವಿನ ಅರಿವಿದೆ ನನಗೆ.
  ಹೊಟ್ಟೆಗಾಗಿ, ಓದೋ ಆಸೆಗಾಗಿ ಏನೆಲ್ಲ ಕಷ್ಟ ಪಟ್ಟು ಜೀವನದಲ್ಲಿ ಮುಂದೆ ಬಂದ ಎಲ್ಲರಿಗೂ ನನ್ನ ಸಾವಿರ ನಮಸ್ಕಾರಗಳು. ಆ ಹೊಟ್ಟೆ ತುಂಬಿದ ನಿತ್ಯ ಅನ್ನಪೂರ್ಣೆಶ್ವರಿಯರಿಗೂ ನನ್ನ ನಮಸ್ಕಾರಗಳು.

  ReplyDelete
 14. ವಾರಾನ್ನ ಮತ್ತು ಪರರ ಮನೆಯಲ್ಲಿ ಊಟಕ್ಕೆ ಇದ್ದುಕೊಂಡಾದರೂ ಓದಿಕೊಂಡ ಎಷ್ಟೋ ಮಕ್ಕಳಿಗೆ ವಿದ್ಯೆ ಒಂದು ತಪಸ್ಸಾಗಿದ್ದಿತು. ಅದಕ್ಕಾಗಿ ಎಷ್ಟೆಲ್ಲ ಕಷ್ಟಪಡುತ್ತಿದ್ದರು. ಇಂದು ಎಲ್ಲ ವ್ಯವಸ್ಥೆಗಳಿದ್ದರೂ ಓದಿನ ಮಹತ್ವವೇ ಬಹಳ ಮಕ್ಕಳಿಗೆ ತಿಳಿಯುತ್ತಿಲ್ಲ. ಎಂತಹ ವಿಪರ್ಯಾಸ! ಕವಿತೆ ತುಂಬಾ ಮನಮುಟ್ಟುವಂತದ್ದು.ಬದರಿ ಸರ್. ನಿತ್ಯಅನ್ನಪೂರ್ಣೇಶ್ವರಿಯರು ಇಂದು ಕಡಿಮೆಯಾಗಿದ್ದಾರೆ ಅನ್ನಿಸುತ್ತೆ.

  ReplyDelete
 15. ವಾರಾನ್ನದ ವ್ಯವಸ್ಥೆ ಈಗ ಇಲ್ಲವಾದರೂ, ನಮ್ಮ ತಂದೆಯವರೆಲ್ಲಾ ಹಾಗೆಯೇ ಓದಿ ಬೆಳೆದಿದ್ದು. ಅವರ ಕಥೆಗಳನ್ನು ಈಗಲೂ ಹೇಳುತ್ತಿರುತ್ತಾರೆ..
  ದಿನವೂ ಹೊಸ ಬಗೆಯ ಊಟ ಏನೋ ಇರಬಹುದು, ಆದರೆ ಹಾಗೆ ಪರರ ಮನೆಗೆ ಹೋದಾಗ ಆಗುವ ಸಂಕೋಚ ಇದೆಯಲ, ಅದು ಎಲ್ಲವನ್ನೂ ಹಿಂದೆಹಾಕಿಬಿಡುತ್ತದೆ..

  ಒಳ್ಳೆಯ ನಿರೂಪಣೆಯ ಕವನ ಸರ್..:)

  ReplyDelete
 16. ನಾನು ಮಧ್ಯಾಹ್ನದ ಹೊತ್ತು ನಿಮ್ಮ ಕವನ ಓದಿದ್ದರಿಂದ, ನಿಮ್ಮ ಕವನ ಓದಿ ನನ್ನ ಹಸಿವು ಇನ್ನೂ ಜಾಸ್ತಿಯಾಯಿತು. ನಿಮ್ಮ ರುಚಿಯಾದ ಅಡುಗೆಯ ಕವನ ಓದಿ ಹಬ್ಬದ ಊಟ ಮಾಡಿದಷ್ಟೇ ಸಂತೋಷವಾಯಿತು.

  ReplyDelete
 17. ಆಹಾ! ಬದರಿಯಣ್ಣ ಸೊಗಸಾದ ಕಲ್ಪನೆ ನೈಜ ಚಿತ್ರಣದೊಳು

  ReplyDelete
 18. ಹಸಿವು ಎನ್ನುವುದಕ್ಕೆ ಎಲ್ಲಾ ಕಾರ್ಯಗಳಲ್ಲೂ ಒಂದು ಸ್ಥಾನವಿರುತ್ತೆ ಅಲ್ವೆ !! ಊಟದ ಹಸಿವು, ಪ್ರೀತಿಯ ಹಸಿವು, ವಿಧ್ಯೆಯ ಹಸಿವು.... ಹಸಿವು ನೀಗಿಸುವ ಕೈಗಳು ಹೇಗೆ ಇದ್ದರು ಅದನ್ನು ನಾವು ಸ್ವೀಕರಿಸುತ್ತೇವೆ .... ಬಹಳ ಚೆನ್ನಾಗಿ, ಸರಳವಾಗಿ ಚಿತ್ರಿಸಿದ್ದೀರಿ.. :)

  ReplyDelete
 19. ಬದರಿ ಸರ್,
  ಆಗಿನ ಕಾಲದಲ್ಲಿ ವಾರನ್ನ ಊಟ ಮಾಡಿ ಓದಿ ಮುಂದೆ ಬಂದವರು ಬಹಳ ಮಂದಿ. ಈಗಿನ ಕಾಲದಲ್ಲಿ ಅದರ ಕುರುವೇ ಇಲ್ಲದಿರುವ ಸಮಯದಲ್ಲಿ ಈಗ ಅದರ ಬಗ್ಗೆ ಬಡತನ ಮತ್ತು ವಾರನ್ನದ ವಿಚಾರವನ್ನು ನೆನಪಿಸಿತು. ಉತ್ತಮ ನಿರೂಪಣೆಯಲ್ಲಿ ನಿಮ್ಮದೇ ಎಂದಿನ ಶೈಲಿಯಲ್ಲಿ ಕವನ ಓದುತ್ತಾ ಇಷ್ಟವಾಗುತ್ತದೆ..

  ReplyDelete
 20. ವಾರನ್ನ ಆಧಾರಿತ ವಿದ್ಯಾಭ್ಯಾಸದಲ್ಲೇ ಅತಿ ಎತ್ತರಕ್ಕೆ ಬೆಳೆದವರು ಬಹಳ ಮಂದಿ.
  ಅಲ್ಲಿ ಮುದ್ದೆಯ ಮುರಿದು
  ಇಲ್ಲಿ ತಂಗಳ ನುಂಗಿ
  ನಾಳೆ ಮತ್ತೊಂದು ಮನೆ ಕಡೆಗೆ,
  ಓದುವ ಆಸೆಯ ಬಡವನಿಗೆ
  ಅನ್ನ ಸಾಲೆ ತಲುಪುವ ಮುನ್ನ
  ಬಹಳ ಚನ್ನಾಗಿದೆ ಕವನ ಜೊತೆಗೆ ಒಪ್ಪುವ ಮುದ್ದೆಸಾರು ತಟ್ಟೆ ಚಿತ್ರ..ವಾವ್..ಬಾಯ್ಲ್ಲಿ ನೀರು...!!!

  ReplyDelete
 21. badari sir :-)...
  vaw vaw...tumba chennagide...modaleradu salu galalle nammannu eledukondu bidatte kavana...bhaala ista aytu. ...

  haan mattond vishya...naandu blog lokadalli onthara vaarannave.. ondondu dina obbobbar u diggajaru tamma blg maneyalli badisida sahityada oota...nimmane ootavantoo bharjari ne...!!!

  ReplyDelete
 22. houdu...
  tumbaa janara nitya geete idu..
  sogasaagi barediddiraa sir....

  ReplyDelete
 23. ವಾರಾನ್ನದ ಬಗ್ಗೆ ಲೇಖನ ಬರೆಯ ಬೇಕೆಂಬ ನನ್ನ ಆಸೆ ಇತ್ತು, ನಿಮ್ಮ ಕವಿತೆ ಓದಿ ಕಣ್ಣಲ್ಲಿ ನೀರು ಬಂತು . ಮೈಸೂರಿನ ಹಳೆಯ ಮೋಹಲ್ಲಗಳಲ್ಲಿ ವಾರಾನ್ನ ಉಂಡು ವಿಧ್ಯೆ ಕಲಿತವರ ಮುಖ ಮುಂದೆ ಬರುತ್ತದೆ . ಒಳ್ಳೆಯ ಕವಿತೆ ಬದರೀ ಸರ್

  ReplyDelete
 24. ಹೊತ್ತಿಗೆ ಓದುವ ಚಿಂತೆ ಒಂದು ಕಡೆಯಾದರೆ ತುತ್ತಿನ ಚೀಲ ತುಂಬಿಕೊಳ್ಳುವ ಚಿಂತೆ ಇನ್ನೊಂದೆಡೆ
  ಇದರ ಮಧ್ಯೆ ತಲೆ-ಹೊಟ್ಟೆಯ ಮಧ್ಯೆ ಅಡಗಿರುವ ಸ್ವಾಭಿಮಾನವನ್ನು ಹಿಡಿ ಮಾಡಿಕೊಂಡು ನರಳುವ ಈ ಮಜಲನ್ನು ದಾಟಿ ಬರುವ ಸಾಹಸಮಯ ಜೀವನ ನಿಜಕ್ಕೂ ಒಂದು ಸವಾಲೇ ಸರಿ. ಛಲವಿದ್ದೊಡೆ ಎಲ್ಲ ಕಡೆಯೂ ಬಲ ಎನ್ನುವಂತೆ ನೀವು ಹೆಣೆದಿರುವ ಶಬ್ಧಗಳ ಗಾರುಡಿ ಸೂಪರ್ ಬದರಿ ಸರ್

  ReplyDelete
 25. ವಾರನ್ನದ ಅನುಭವ ಇರದಿದ್ರೂ ಆ ಹುಡುಗರು ಸವಿಯುವ ರುಚಿ ರುಚಿ ಅಡುಗೆ
  ಮತ್ತು ವೈವಿಧ್ಯತೆ ಸ್ವಲ್ಪ ಹೊಟ್ಟೆಕಿಚ್ಚು ಉಂಟುಮಾಡಿತು ಬದ್ರಿ..

  ReplyDelete
 26. ಕೇಳುವ ಮೊದಲೇ ಬೇಕೊಪರಿಯಾದ ಸಕಲ ಸವಲತ್ತುಗಳು ಒದಗುವ ಈ ಕಾಲದ ಮಕ್ಕಳು , ವಿದ್ಯಾರ್ಥಿಗಳು ವಾರಾನ್ನ ವೆಂದರೆ ಏನೆಂದು ಕೇಳಬಹುದು , ಮನಮುಟ್ಟುವ ಬರಹ , ತುಂಬಾ ಚೆನ್ನಾಗಿದೆ ಸರ್

  ReplyDelete
 27. ಬದರಿ ಅಣ್ಣ ನೆನಪನ್ನ ಅದೆಷ್ಠು ಚೆನ್ನಾಗಿ ಅವಲೋಕಿಸಿದ್ದೀರಿ ಅಲ್ವಾ ನಂಗಂತೂ ಅಮ್ಮನ ಕೈ ತುತ್ತಿನ ನೆನಪಾಯ್ತು

  ReplyDelete
 28. ವಾರಾನ್ನದ ಬಣ್ಣನೆ ತುಂಬಾ ಚನ್ನಾಗಿದೆ. ಚಿತ್ರದಲ್ಲಿರುವ ಮುದ್ದೆ ಕೂಡ..

  ReplyDelete
 29. ವಾರಾನ್ನ ಅನ್ನುವ ಸರಕನ್ನು ಈ ಸಾಲುಗಳಲ್ಲಿ ಅದ್ಭುತವಾಗಿ ಬಿಚ್ಚಿಟ್ಟಿದ್ದೀರಿ. ವಾರಾನ್ನ ಎನ್ನುವ ಪದ್ಧತಿಯಲ್ಲಿ ಸಮಾಜಕ್ಕೆ ನಮಗೆ ಕೈಲಾದಷ್ಟು ಕೊಡುವ ಒಂದು ಉತ್ತಮ ತತ್ವ ಇತ್ತು. ಅದರಲ್ಲಿ ಬೆಳೆದವರು ಇಂದಿಗೂ ಆ ಋಣ ಜ್ಞಾಪಿಸಿಕೊಳ್ಳುವಾಗ, ಅನ್ನದ ಮಹತ್ವ ತಿಳಿಯುತ್ತೆ. ಹಲವು ವಿಚಾರಗಳನ್ನು ಕೆದಕಿದ ಕವನವಿದು. ಮೆಚ್ಚುಗೆಗಳು ...

  ReplyDelete
 30. ವಾರಾನ್ನದ ಚಿತ್ರಣ ತುಂಬಾ ಚೆನ್ನಾಗಿದೆ, ಸಾವಿತ್ರಮ್ಮನ ಕೈ ರುಚಿ
  ನಾಲಿಗೆ ತುದಿಯಲೇ ಇದೆ, ಇನ್ನು ಮುದ್ದೆ ಸಾರು ಚಿತ್ರ ಬಾಯಲ್ಲಿ ನೀರೂರಿಸುತ್ತದೆ! ಉತ್ತಮ ಶೈಲಿ ಸರ್ ನಿಮ್ಮದು!

  ReplyDelete
 31. ಚೆನ್ನಾಗಿದೆ ಗುರುಗಳೇ ಮುದ್ದೆಯ ... ವರ್ಣನೆ

  ReplyDelete
 32. ಬಾಯಲ್ಲಿ ನೀರೂರಿಸುತ್ತದೆ!!!!!! mattomme odide awesome (Y)

  ReplyDelete