ಶುಕ್ರವಾರ, ಮಾರ್ಚ್ 30, 2012

ಸಂಧ್ಯಾ ರಾಗ...



ಹೊರಟು ನಿಂತಿರೇ ದೊರೆ..
ಇರುಳು ಕರಗಿತೇ ಇಷ್ಟು ಬೇಗ?
ಒಂದೂ ಮಾತಿರಲಿಲ್ಲ
ಬೆಸೆದ ಮನಗಳ ನಡುವೆ; ಹೆಪ್ಪುಗಟ್ಟಿತ್ತು ಮೌನ
ಮತ್ತೆ ಮೊದಲಂತಿರಲಿಲ್ಲೇಕೆ?
ಪ್ರೇಮ ಬಾಂದಳದಲ್ಲಿ ಪ್ರಣಯ ಹಕ್ಕಿ

ಸಾವಿರ ಬೇಸಿಗೆಗಳಲ್ಲಿ ತಂಪಾಗಿ ಇದ್ದೇನು
ನಿಮ್ಮಾಣೆ!
ಮಂಜಿಗಿಂತಲು ತಂಪು ನಿಮ್ಮ ನೆನಹು
ಹಾಸಿಟ್ಟ ಗರಿ ಗರಿ ಚಾದರಕ್ಕೇನು ಗೊತ್ತು
ಇನ್ನೆಷ್ಟು ಹೊತ್ತು ಈ ಬಿನ್ನಾಣ
ಮುಡಿದ ಮಲ್ಲಿಗೆಗೂ ಗೊತ್ತೇ ತನ್ನ ಅಂತ್ಯ?

ದೊರೆ!... ಮುಂಜಾವಿನ ಕಲರವದಷ್ಟೇ
ಗೋಧೂಳಿ ಸಮಯಕೂ ನನ್ನ ನಿಷ್ಠೆ
ಅದು ಎಂದೋ ಹಚ್ಚಿಟ್ಟ ನಂದಾದೀಪ

ಸಂತೃಪ್ತ ನನ್ನ ಕಣ್ಣಾಲಿಗಳಲ್ಲಿ,
ಚಕ್ರತೀರ್ಥ
ನಿಮಗೋ ಬರುವ ಮಾರ್ನವಮಿಗೆ ಪೂರಾ ಎಂಬತ್ತು
ಎಂಟು ಹೆತ್ತವಳು ನಾನು, ಅವಕ್ಕು ಮತ್ತೂ ಅವಕ್ಕೂ
ಎಣಿಸಿದರೆ ಹೋದ ಷಷ್ಟ್ಯಬ್ದಿಗೇ ನೂರ ಹನ್ನೊಂದು

ಮತ್ತವೇ ಚಿತ್ರಗಳು,
ನಾನು ಹಾರ್ಮೋನಿಯಂ ಮುಂದೆ
ನೀವು ಅವರೇ ಕಾಳು ಉಪ್ಪಿಟ್ಟಿನ ಮುಂದೆ
ತುಟಿಯಂಚಲೆಂತದೋ ತುಂಟ ನಗೆ
ತಿಂಗಳೊಪ್ಪತ್ತಿನಲ್ಲಿ
ನನ್ನ ಮನೆಯಂಗಳದಿ ಚಪ್ಪರ!



(ಚಿತ್ರ ಕೃಪೆ : ಅಂತರ್ಜಾಲ)

(ಹಾಯ್ ಬೆಂಗಳೂರ್!
ವಾರ ಪತ್ರಿಕೆಯ ಜೂನ್ ೧, ೨೦೦೧ನೇ
ಸಂಚಿಕೆಯಲ್ಲಿ ಪ್ರಕಟಿತ)

10 ಕಾಮೆಂಟ್‌ಗಳು:

  1. ತಪಸ್ಸಿಗೆ ಹೋದ ಬುದ್ಧ ಮರಳಿ ಮನೆಗೆ ಬಂದಾಗ ಅವಳ ಮನಸ್ಸು ನೋಡಬೇಕು. ಹೇಗಿತ್ತು ಅಂತ ಅವಳನ್ನೇ ಕೇಳಬೇಕು. ಕೇಳದೆಯೂ ಬರೆಯುಅವ ಕವಿ ಬುದ್ಧ ಮತ್ತು ಅವನ ಸಂಸಾರವಾಗುತ್ತಾನೆ. ಇಲ್ಲಿ ಹೊರಟು ಹೋದವನ ಶುನ್ಯಕ್ಕೊ೦ದು ಬಿದ್ದ ಗೈರು ಹಾಜರಿಯನ್ನು ಪ್ರಶ್ನಿಸಿದ್ದ ಉತ್ತರಗಳ ಮೂಟೆಗೆ ನಿಧಾನವಾಗಿ ಗಂಟು ಬಿಚ್ಚುತ್ತೇನೆ. ಚೆನ್ನಾಗಿದೆ ಕವಿತೆ.

    ಪ್ರತ್ಯುತ್ತರಅಳಿಸಿ
  2. ಚನ್ನಾಗಿದೆ...ಬದರಿ..
    ಮಂಜಿಗಿಂತಲು ತಂಪು ನಿಮ್ಮ ನೆನಹು
    ಹಾಸಿಟ್ಟ ಗರಿ ಗರಿ ಚಾದರಕ್ಕೇನು ಗೊತ್ತು
    ಇನ್ನೆಷ್ಟು ಹೊತ್ತು ಈ ಬಿನ್ನಾಣ
    ಮುಡಿದ ಮಲ್ಲಿಗೆಗೂ ಗೊತ್ತೇ ತನ್ನ ಅಂತ್ಯ?

    ಈ ಸಾಲುಗಳು ಇಷ್ಟವಾದವು....

    ಪ್ರತ್ಯುತ್ತರಅಳಿಸಿ
  3. ಬದರಿನಾಥರೆ,
    ಇದು ನಿಮ್ಮ ಅತ್ಯುತ್ತಮ ಕವನಗಳಲ್ಲೊಂದು ಎಂದು ಹೇಳಬಹುದು.

    ಪ್ರತ್ಯುತ್ತರಅಳಿಸಿ
  4. ತು೦ಬಾ ಇಷ್ಟವಾಯಿತು ಬದ್ರಿ.. ಸ೦ತೃಪ್ತ ನನ್ನ ಕಣ್ಣಾಲಿಗಳಲಿ..ಭಾವಪೂರ್ಣ ಕವನ. ಅಭಿನ೦ದನೆಗಳು.

    ಅನ೦ತ್

    ಪ್ರತ್ಯುತ್ತರಅಳಿಸಿ
  5. ತುಂಬ ಚೆನ್ನಾಗಿ ಮೂಡಿ ಬಂದಿದೆ ಬದ್ರಿ 'ಸಂಧ್ಯಾ ರಾಗ..."

    ಪ್ರತ್ಯುತ್ತರಅಳಿಸಿ
  6. ಎಂಟು ಹೆತ್ತವಳು ನಾನು, ಅವಕ್ಕೆ ಮತ್ತೂ ಅವಕ್ಕೆ
    ಎಣಿಸಿದರೆ ಹೋದ ಷಷ್ಟ್ಯಬ್ದಿಗೇ ನೋರ ಹನ್ನೊಂದು
    nice sir ishtavaaytu ...

    ಪ್ರತ್ಯುತ್ತರಅಳಿಸಿ